ಮೈಸೂರು

ಮಹಿಳಾ ದಿನ; ವಿಚಾರ ಸಂಕಿರಣ

Published On :

ಮೈಸೂರು: ಕರ್ನಾಟಕ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ವತಿಯಿಂದ ಮಾ.7, 8ರಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಮ್ಮಿಕೊಳ್ಳಲಾಗಿದೆ ಎಂದು ವಕೀಲೆ ಸುಮನಾ ತಿಳಿಸಿದರು. ಮಾ.7ರ ಬೆಳಗ್ಗೆ 10ಕ್ಕೆ ಮಾನಸಗಂಗೋತ್ರಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ವಿಚಾರಸಂಕಿರಣ ಆಯೋಜಿಸಲಾಗಿದ್ದು, ಮೈಸೂರು ವಿವಿ ಕುಲಸಚಿವ ಪ್ರೊ.ಸಿ. ಬಸವರಾಜು ಉದ್ಘಾಟಿಸುವರು ಎಂದು ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ನಂತರ ನಡೆಯುವ ಎರಡು ಗೋಷ್ಠಿಯಲ್ಲಿ ತಜ್ಞರು ವಿಚಾರ ಮಂಡಿಸುವರು. ಅದೇ ದಿನ ಸಂಜೆ 5.30ಕ್ಕೆ ಗಾಂಧಿ ಚೌಕದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ವಿರೋಧಿಸಿ ಸಾಂಕೇತಿಕವಾಗಿ ಮಹಿಳೆಯರು ಕಪ್ಪು ಬಟ್ಟೆ ಧರಿಸುವ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಮಾ.8ರ ಬೆಳಗ್ಗೆ 10ಕ್ಕೆ ರಾಮಸ್ವಾಮಿ ವೃತ್ತದಿಂದ ಹಕ್ಕೊತ್ತಾಯ ಜಾಥಾ, ಮಧ್ಯಾಹ್ನ 12ಕ್ಕೆ ದಸರಾ ವಸ್ತುಪ್ರದರ್ಶನ ಪ್ರಾಧಿಕಾರ ಆವರಣದಲ್ಲಿರುವ ಬಿ.ವಿ.ಕಾರಂತ ರಂಗಮಂದಿರದಲ್ಲಿ ಬಹಿರಂಗ ಸಮಾವೇಶ ಏರ್ಪಡಿಸಲಾಗಿದೆ. ಮಣಿಪುರದ ಮೂವರು ಹೋರಾಟಗಾರ ಮಹಿಳೆಯರು ಮುಖ್ಯಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ಸಮತಾ ವೇದಿಕೆಯ ಮೀರಾ ನಾಯಕ್, ಲೇಖಕಿ ಡಾ.ಎಚ್.ಎಸ್. ಅನುಪಮ, ಆಶೋದಯ ಸಮಿತಿಯ ಭಾಗ್ಯ, ಒಡಿಪಿಯ ಸುನಿತಾ, ಮುಖಂಡರಾದ ಸವಿತಾ, ಶೋಭಾ ಇದ್ದರು.
ಪುರುಷ ನಾಪತ್ತೆ
ಮೈಸೂರು: ಈ ಹಿಂದೆ 2-3 ಬಾರಿ ನಾಪತ್ತೆಯಾಗಿದ್ದ ವ್ಯಕ್ತಿಯೊಬ್ಬರು, ಅತ್ತೆ ಮನೆಗೆ (ಪತ್ನಿಯ ತಾಯಿ) ಬಂದಿದ್ದ ವೇಳೆ ಮತ್ತೆ ನಾಪತ್ತೆಯಾಗಿರುವ ಘಟನೆ ಉದಯಗಿರಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಜವರಯ್ಯ ಎಂಬವರ ಪುತ್ರ ವೀರಭದ್ರ (35) ನಾಪತ್ತೆಯಾದವರು. ಇವರು ಮತ್ತು ಪತ್ನಿ ಶಾಂತಾ ಫೆ.15ರಂದು  ರಾಜೀವ್ ನಗರದಲ್ಲಿರುವ ತಾಯಿ ಮನೆಗೆ ಬಂದಿದ್ದರು. ಹೊರಗೆ ಹೋಗಿ ಬರುವುದಾಗಿ ಹೇಳಿ ಹೋದವರು ವಾಪಸ್ ಬಂದಿಲ್ಲ. ಕಾಣೆಯಾಗಿರುವ ಪತಿಯನ್ನು ಪತ್ತೆ ಮಾಡಿಕೊಡುವಂತೆ ಪತ್ನಿ ಶಾಂತಾ ಪೊಲೀಸರಿಗೆ ದೂರು ನೀಡಿದ್ದಾರೆ. ಚಹರೆ- 5.3 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ದುಂಡು ಮುಖ, ಸಾಧಾರಣ ಮೈಕಟ್ಟು, ಗಡ್ಡ, ಮೀಸೆ ಬಿಟ್ಟಿದ್ದಾರೆ. ಕನ್ನಡ ಮಾತನಾಡುತ್ತಾರೆ. ಮಾಹಿತಿ ಸಿಕ್ಕಲ್ಲಿ ದೂ. 0821- 2418309, 509 ಸಂಪರ್ಕಿಸಲು ಉದಯಗಿರಿ ಠಾಣೆ ಪೊಲೀಸರು ಕೋರಿದ್ದಾರೆ.
ಪದವೀಧರರ ದಿನ; ನಾಳೆ ಆಟೋಟ ಸ್ಪರ್ಧೆ
ಮೈಸೂರು: ನಗರದ ಬೃಂದಾವನ ಬಡಾವಣೆಯಲ್ಲಿರುವ ಡಾ.ಎಂ. ದೇಜಮ್ಮ ಮಹಾವೀರ ವಿದ್ಯಾಸಂಸ್ಥೆಯಲ್ಲಿ ಮಾ. 13ರಂದು ಡಾ.ಎಂ. ದೇಜಮ್ಮ ಮಹಾವೀರ ಪೂರ್ವ ಪ್ರಾಥಮಿಕ ಶಾಲಾ ಮಕ್ಕಳಿಗೆ ಪದವೀಧರರ ದಿನ ಹಮ್ಮಿಕೊಂಡಿದೆ. ಇದೇ ವೇಳೆ ಮಾ. 7ರಂದು ನಗರ ವಿವಿಧ ಶಿಶು ಪಾಲನ ಕೇಂದ್ರದ ಶಿಕ್ಷಕಿಯರಿಗೆ ಆಟೋಟ ಸ್ಪರ್ಧೆಯನ್ನು ಹಾಗೂ ಮಕ್ಕಳಿಗಾಗಿ ಆರೋಗ್ಯ ಪೂರ್ಣ ಶಿಶು ಸ್ಪರ್ಧೆ ನಡೆಯಲಿದೆ. ಸ್ಪರ್ಧೆಗೆ ಯಾವುದೆ ಪ್ರವೇಶ ಶುಲ್ಕವಿರುವುದಿಲ್ಲ. ವಿಜೇತರಾದವರಿಗೆ ವಿಶೇಷ ಬಹುಮಾನಗಳು ಹಾಗೂ ಮಕ್ಕಳ ತಜ್ಞರಿಂದ ಆರೋಗ್ಯ ಪೂರ್ಣ ಶಿಶುವಿನ ಆಯ್ಕೆಯ ಪ್ರಕ್ರಿಯೆ ನಡೆಯುತ್ತದೆ. ವಿವರಗಳಿಗೆ ದೂ. 2512923 ಸಂಪರ್ಕಿಸಬಹುದು.
ಆರ್‌ಬಿಐ ನಗರಕ್ಕೆ ನೂತನ ಬಸ್ ಮಾರ್ಗ
ಮೈಸೂರು: ನಗರ ಬಸ್ ನಿಲ್ದಾಣದಿಂದ ಆರ್‌ಬಿಐ ನೋಟು ಮುದ್ರಣ ಘಟಕ ಮತ್ತು ಆರ್‌ಬಿಐ ನಗರಕ್ಕೆ ತೆರಳುವ ನೂತನ ಬಸ್ ಮಾರ್ಗಕ್ಕೆ ಶಾಸಕ ವಾಸು ಬುಧವಾರ ಬೆಳಗ್ಗೆ ಚಾಲನೆ ನೀಡಿದರು.
ಆರ್‌ಬಿಐ ನೋಟು ಮುದ್ರಣ ಘಟಕದ ಬಳಿ ನಡೆದ ಸರಳ ಸಮಾರಂಭದಲ್ಲಿ ಶಾಸಕ ವಾಸು ನಗರ ಬಸ್ ನಿಲ್ದಾಣದಿಂದ ಆರ್‌ಬಿಐ ನೋಟು ಮುದ್ರಣ ಘಟಕ ಮತ್ತು ಆರ್‌ಬಿಐ ನಗರಕ್ಕೆ ತೆರಳುವ ನೂತನ ಮಾರ್ಗಕ್ಕೆ ಹಸಿರು ನಿಶಾನೆ ತೋರಿದರು. ಲೋಕಸಭಾ ಚುನಾವಣೆ ಅಧಿಸೂಚನೆ ಹೊರಡಿಸುವ ಮುನ್ನ ಬಸ್ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಈ ನೂತನ ಮಾರ್ಗ ಉದ್ಘಾಟಿಸಿದರು.
ನಗರದ ವಿವಿಧ ಬಡಾವಣೆಗಳಿಂದ ನೋಟು ಮುದ್ರಣ ಘಟಕಕ್ಕೆ ಅನೇಕ ನೌಕರರು ತೆರಳುವುದರಿಂದ ಬಸ್ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ನಗರ ಬಸ್ ನಿಲ್ದಾಣದಿಂದ ಆರ್‌ಬಿಐ ನಗರಕ್ಕೆ ಮೂರು ಬಸ್‌ಗಳು ಪ್ರತಿದಿನ ಸಂಚರಿಸಲಿವೆ. ನಗರ ಸಾರಿಗೆ ವಿಭಾಗದ ನಿಯಂತ್ರಣಾಧಿಕಾರಿ ರಮೇಶ್, ಆರ್‌ಬಿಐ ನಿರ್ದೇಶಕ ಎಸ್. ಮಾಧವರಾವ್, ಡಿಜಿಎಂಗಳಾದ ಎಚ್.ಎಸ್. ಠ್ಯಾಕೂರ್ ದೇಸಾಯಿ, ಆರ್.ಎನ್. ವಾಲ್ಮೀಕಿ, ನೌಕರರ ಸಂಘದ ಮುಖಂಡರಾದ ರಮೇಶ್, ಮಹದೇಶ್, ಕಾಂಗ್ರೆಸ್ ಮುಖಂಡರಾದ ಎಚ್.ಎ. ವೆಂಕಟೇಶ್, ರಾಜೇಂದ್ರ ಇದ್ದರು.

ಮಹಿಳಾ ದಿನಾಚರಣೆ
ಮೈಸೂರು: ಮೈಸೂರು ವಿವಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಮತ್ತು ಕರ್ನಾಟಕ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ಸಹಯೋಗದಲ್ಲಿ 104ನೇ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಮಹಿಳಾ ದೌರ್ಜನ್ಯ ಲಿಂಗತ್ವ- ಕಾನೂನು- ಪ್ರತಿರೋಧದ ನೆಲೆಗಳು ಕುರಿತು ಸಂಸ್ಥೆಯ ನೂತನ ಸಭಾಂಗಣದಲ್ಲಿ ಮಾ. 7ರ ಬೆಳಗ್ಗೆ 10.30ಕ್ಕೆ ವಿಚಾರ ಸಂಕಿರಣ ಆಯೋಜಿಸಲಾಗಿದೆ. ಮೈಸೂರು ವಿವಿ ಕುಲಸಚಿವ ಪ್ರೊ.ಸಿ. ಬಸವರಾಜು ಕಾರ್ಯಕ್ರಮ ಉದ್ಘಾಟಿಸಲಿದ್ದು, ರೈತ ನಾಯಕಿ ಸುನಂದ ಜಯರಾಂ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ವಿಮೋಚನ ಸಂಸ್ಥೆಯ ಡಾ. ಕಾರಿನ್ ಕುಮಾರ್ ಶಿಖರೋಪನ್ಯಾಸ ನೀಡುವರು.
ಹೊಟೇಲ್ ಕ್ರಿಸ್ಟಲ್ ಪಾರ್ಕ್ ಇನ್: ಕಲಾ ಪ್ರಪಂಚ ಸಂಸ್ಥೆಯು ಮಾ. 8ರಂದು ನಗರದ ಹೊಟೇಲ್ ಕ್ರಿಸ್ಟಲ್ ಪಾರ್ಕ್ ಇನ್‌ನಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಏರ್ಪಡಿಸಿದ್ದು, ಮೈಸೂರು ಮಹಿಳಾ ಮಾಣಿಕ್ಯ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಮೊ. 92420 49921 ಸಂಪರ್ಕಿಸಬಹುದು.
ಐಎಎಸ್ ತರಬೇತಿ
ಕರ್ನಾಟಕ ರಾಜ್ಯ ಮುಕ್ತ ವಿವಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರವು ಮಾ. 7ರ ಮಧ್ಯಾಹ್ನ 2.30ಕ್ಕೆ ಕಾವೇರಿ ಸಭಾಂಗಣದಲ್ಲಿ 2014ರ ಐಎಎಸ್, ಕೆಎಎಸ್ ಮತ್ತು ಇತರ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಶಿಬಿರ ಆಯೋಜಿಸಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ. ಅಮಿತಾ ಪ್ರಸಾದ್ ಅಧ್ಯಯನ ಪುಸ್ತಕ ಬಿಡುಗಡೆಗೊಳಿಸಿ, ಶುಭ ಹಾರೈಸುವರು ಎಂದು ಸಂಯೋಜನಾಧಿಕಾರಿ ಜೈನಹಳ್ಳಿ ಸತ್ಯನಾರಾಯಣಗೌಡ ತಿಳಿಸಿದ್ದಾರೆ.
ನಾಳೆ ಪದವಿ ಪ್ರದಾನ
ಸರ್ಕಾರಿ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಕಿರಿಯ ವೈದ್ಯರ ಸಂಘದಿಂದ ಮಾ. 7ರ ಬೆಳಗ್ಗೆ 10.30ಕ್ಕೆ ನಗರದ ಜಗನ್ಮೋಹನ ಅರಮನೆಯಲ್ಲಿ ವಿಶಿಖಾನುಪ್ರವೇಶಂ ಪದವಿ ಪ್ರದಾನ ಸಮಾರಂಭ ಏರ್ಪಡಿಸಿದ್ದು, ಮುಕ್ತ ವಿವಿ ಕುಲಪತಿ ಪ್ರೊ.ಎಂ.ಜಿ. ಕೃಷ್ಣನ್, ಆಯುಷ್ ಇಲಾಖೆ ನಿರ್ದೇಶಕ ವಿಜಯ ಕುಮಾರ್ ಗೋಗಿ, ಡಾ.ಡಿ.ಎಸ್. ಲೂಕಾಸ್, ಡಾ. ಸತ್ಯನಾರಾಯಣ ಭಟ್ ಭಾಗವಹಿಸುವರು.
ಸಿಇಟಿ ತರಬೇತಿ
ಚಾಮರಾಜ ಮೊಹಲ್ಲಾದಲ್ಲಿರುವ ನವೋದಯ ಫೌಂಡೇಷನ್‌ನಲ್ಲಿ ಪಿಯುಸಿ ಸಿಇಟಿ- ಕ್ರ್ಯಾಷ್ ಕೋರ್ಸ್‌ಗೆ 30 ದಿನಗಳ ತರಬೇತಿ ನೀಡಲಿದ್ದು, ಆಸಕ್ತರು ಮಾ. 8ರೊಳಗೆ ಹೆಸರು ನೋಂದಾಯಿಸಿಕೊಳ್ಳಬಹುದು. ಮೊ. 96110 12411 ಸಂಪರ್ಕಿಸಬಹುದು. ರಾಮಸ್ವಾಮಿ ವೃತ್ತದಲ್ಲಿರುವ ಮೈಸೂರ ಸ್ಕೂಲ್ ಆಫ್ ಬ್ಯಾಂಕಿಂಗ್‌ನಲ್ಲಿ ಐಬಿಪಿಎಸ್ ಮತ್ತು ಪೋಸ್ಟಲ್ ಅಸಿಸ್ಟೆಂಟ್ ಹುದ್ದೆಗೆ ತರಬೇತಿ ನೀಡಲಿದ್ದು, ಆಸಕ್ತರು ಮಾ. 8ರೊಳಗೆ ಹೆಸರು ನೋಂದಾಯಿಸಿಕೊಳ್ಳಬಹುದು. ಮೊ. 81231 83649 ಸಂಪರ್ಕಿಸಬಹುದು.
ಸರ್ವ ಸದಸ್ಯರ ಸಭೆ
ಕರ್ನಾಟಕ ಬ್ರಾಹ್ಮಣ ಹಿರಿಯ ನಾಗರಿಕರ ವೇದಿಕೆಯ ಸರ್ವ ಸದಸ್ಯರ ಸಭೆಯನ್ನು ಮಾ.8ರ ಸಂಜೆ 4ಕ್ಕೆ ಸಂಘದ ಕಚೇರಿಯಲ್ಲಿ ಕರೆಯಲಾಗಿದ್ದು, ಸದಸ್ಯರು ಭಾಗವಹಿಸುವಂತೆ ಕಾರ್ಯಾಧ್ಯಕ್ಷ ಬಿ.ಆರ್. ನಟರಾಜ ಜೋಯಿಸ್ ತಿಳಿಸಿದ್ದಾರೆ.
ದತ್ತಿ ಉಪನ್ಯಾಸ
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನಿಂದ ಮಾ. 8ರ ಸಂಜೆ 5ಕ್ಕೆ ಜೆಎಸ್‌ಎಸ್ ಆಸ್ಪತ್ರೆಯ ರಾಜೇಂದ್ರ ಭವನದಲ್ಲಿ ದತ್ತಿ ಉಪನ್ಯಾಸ ಏರ್ಪಡಿಸಿದ್ದು, ಡಾ.ಕೆ. ಅನಂತರಾಮು ಅವರು ವಚನ ಸಾಹಿತ್ಯದಲ್ಲಿ ಜೀವನ ಮೌಲ್ಯಗಳು ಕುರಿತು ಮಾತನಾಡುವರು.
ಯುವರಾಜಗೆ ಜಯ
ಕೇವಲ ಒಂದು ರನ್ ಅಂತರದಲ್ಲಿ ಯುವರಾಜ ಕಾಲೇಜು ತಂಡವು ಜಿಎಫ್‌ಜಿಸಿ ತಂಡವನ್ನು ಮಣಿಸಿದೆ. ಗಂಗೋತ್ರಿ ಗ್ಲೇಡ್ಸ್‌ನಲ್ಲಿ ಕೆಎಸ್‌ಸಿಎ ಆಯೋಜಿಸಿರುವ ಅಂತರ ಕಾಲೇಜು ಕ್ರಿಕೆಟ್ ಪಂದ್ಯಾವಳಿಯಲ್ಲಿ ಸಿದ್ಧಾರ್ಥನಗರದ ಜಿಎಫ್‌ಜಿಸಿ ತಂಡವು 22.4 ಓವರ್‌ಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡು 78 ರನ್ ಕಲೆ ಹಾಕಿತು. ಇದಕ್ಕೆ ಪ್ರತಿಯಾಗಿ ಯುವರಾಜ ಕಾಲೇಜು ತಂಡ 20.2 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 76 ರನ್ ಪಡೆದು ಜಯ ಗಳಿಸಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.