ಆದಿವಾಸಿ ಮುಖಂಡನ ಸ್ಪರ್ಧೆ
ಮೈಸೂರು: ವಿವಿಧ ಪಕ್ಷಗಳು ಗೆಲವು ಸಾಧಿಸಲೇಬೇಕೆಂಬ ಹಟದೊಂದಿಗೆ ಪ್ರಬಲ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುತ್ತಿವೆ. ಇಂಥ ಪ್ರಬಲ ಅಭ್ಯರ್ಥಿಗಳ ನಡುವೆ ಆದಿವಾಸಿ ಮುಖಂಡ ಜೆ.ಕೆ. ಗೋಪಾಲ ಪೂಜಾರಿ ಎಂಬವರು ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪರಿಶಿಷ್ಟ ವರ್ಗಕ್ಕೆ ಮೀಸಲಾಗಿದ್ದ ಎಚ್.ಡಿ. ಕೋಟೆ ಕ್ಷೇತ್ರದಲ್ಲಿ ಬಿಎಸ್ಪಿಯಿಂದ ಸ್ಪರ್ಧಿಸಿದ್ದ ಪೂಜಾರಿ 18,269 ಮತಗಳನ್ನು ಪಡೆದಿದ್ದರು. ಅಲ್ಲದೆ ಬಿಎಸ್ಪಿಗೆ ನೆಲೆಯೇ ಇಲ್ಲದಿದ್ದ ಕ್ಷೇತ್ರದಲ್ಲಿ ನಿಂತು ಇಷ್ಟು ಮತಗಳನ್ನು ಪಡೆಯುವ ಮೂಲಕ ಬೆರಗು ಮೂಡಿಸಿದ್ದರು. ಅದನ್ನು ಮಾನದಂಡವಾಗಿಟ್ಟುಕೊಂಡು, ಮೂಲ ನಿವಾಸಿಗಳ ಪರ ಸಂಸತ್ತಿನಲ್ಲಿ ದನಿ ಎತ್ತಬೇಕೆಂಬ ಆಶಯದಿಂದ ಈ ಚುನಾವಣೆಯಲ್ಲಿ ಸ್ಪರ್ಧಿಸಲು ಉತ್ಸುಕರಾಗಿದ್ದಾರೆ.
ಮೈಸೂರು- ಕೊಡಗು ಜಿಲ್ಲೆಗಳಲ್ಲಿ 2 ಲಕ್ಷಕ್ಕೂ ಹೆಚ್ಚು ಮಂದಿ ಬುಡಕಟ್ಟು ಜನರು ವಾಸಿಸುತ್ತಿದ್ದಾರೆ. ಅವರಲ್ಲಿ ಜೇನುಕುರುಬ, ಕಾಡು (ಬೆಟ್ಟ)ಕುರುಬ, ಸಿದ್ಧಿ, ಸೋಲಿಗ ಇತ್ಯಾದಿ ಅಲೆಮಾರಿ ಜನಾಂಗದವರು ವಾಸಿಸುತ್ತಿದ್ದಾರೆ. ಕನಿಷ್ಠ ಮೂಲ ಸೌಕರ್ಯದಿಂದ ವಂಚಿತರಾಗಿರುವ ಇವರ ಪರ ಹೋರಾಟ ನಡೆಸಲು ರಾಜಕೀಯ ಶಕ್ತಿ ಬೇಕಾಗಿದೆ. ಈ ನಿಟ್ಟಿನಲ್ಲಿ ವಿರಾಜಪೇಟೆ, ಸೋಮವಾರಪೇಟೆ, ಮಡಿಕೇರಿ, ಎಚ್.ಡಿ. ಕೋಟೆ, ಪಿರಿಯಾಪಟ್ಟಣ, ಹುಣಸೂರುಗಳಲ್ಲಿ ಆದಿವಾಸಿಗಳ ಸಭೆ ನಡೆಸಿದ್ದೇನೆ. ಎಲ್ಲರೂ ನನಗೆ ಮತ ನೀಡುವುದಾಗಿ ಭರವಸೆ ನೀಡಿದ್ದಾರೆ. ಆದ್ದರಿಂದ ಯಾವುದಾದರೂ ರಾಷ್ಟ್ರೀಯ ಪಕ್ಷ ನನ್ನನ್ನು ಗುರುತಿಸಿ ಟಿಕೆಟ್ ನೀಡಿದಲ್ಲಿ ಗೆಲ್ಲುತ್ತೇನೆ. ಇಲ್ಲವಾದಲ್ಲಿ ಪಕ್ಷೇತರವಾಗಿ ನಿಲ್ಲುತ್ತೇನೆ ಎಂದು ಜೆ.ಕೆ. ಗೋಪಾಲ್ ಪೂಜಾರಿ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕರ್ನಾಟಕ ರಾಜ್ಯ ಮೂಲ ಅರಣ್ಯ ಆದಿವಾಸಿ ಜೇನು ಕುರುಬರ ಸಂಘದ ರಾಜ್ಯ ಸಂಚಾಲಕ ವಿ. ಗಣೇಶ ಮಾತನಾಡಿ, ಮೈಸೂರು- ಕೊಡಗು ಕ್ಷೇತ್ರದಲ್ಲಿ ಆದಿವಾಸಿಗಳು ಗಣನೀಯ ಪ್ರಮಾಣದಲ್ಲಿರುವುದರಿಂದ ನಮಗೆ ಸ್ಪರ್ಧಿಸಲು ಒಂದೇ ಒಂದು ಬಾರಿ ಅವಕಾಶ ಮಾಡಿಕೊಡಬೇಕು. ಈ ಸಂಬಂಧ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳಲ್ಲಿ ಮನವಿ ಮಾಡಿದ್ದೇವೆ. ಒಂದು ವೇಳೆ ಯಾವುದೇ ಪಕ್ಷ ಟಿಕೆಟ್ ನೀಡಿದಲ್ಲಿ ಆದಿವಾಸಿಗಳ ಮತಗಳನ್ನು ಕ್ರೋಢೀಕರಿಸುವುದರ ಜತೆಗೆ ಪಕ್ಷದ ಕಡೆಯಿಂದ ಬರುವ ಮತಗಳಿಂದ ಸುಲಭ ಜಯ ಸಾಧಿಸಬಹುದು ಎಂದರು.
ಆದಿವಾಸಿ ಮುಖಂಡರಾದ ಮಧುಕುಮಾರ್, ಶಿವಣ್ಣ, ರಾಮಚಂದ್ರ ಇದ್ದರು.
ಇದೇ ಮೊದಲಲ್ಲ
ಮೈಸೂರು- ಕೊಡಗು ಜಿಲ್ಲೆಗಳಲ್ಲಿ ಅತಿ ಹೆಚ್ಚು ಆದಿವಾಸಿಗಳು ಇರುವುದರಿಂದ ಈ ಹಿಂದೆಯೇ ಹಲವು ಮಂದಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ವಿರಾಜಪೇಟೆಯಿಂದ ಜೆ.ಕೆ. ಸುಬ್ಬಯ್ಯ, ಬಸವರಾಜು ಎಂಬವರು ಸ್ಪರ್ಧಿಸಿದ್ದರು. ಇದೀಗ ಜೇನು ಕುರುಬ ಜನಾಂಗಕ್ಕೆ ಸೇರಿದ ಜೆ.ಕೆ. ಗೋಪಾಲ ಪೂಜಾರಿ ಸ್ಪರ್ಧಿಸಲು ಮುಂದೆ ಬಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

