ಪಂಚಕರ್ಮ ಶಿಬಿರ
ಮೈಸೂರು: ವೇದಾಂತ ಆಯುರ್ವೇದಿಕ್ ಕೇಂದ್ರವು ವಸಂತ ಋತುವಿನ ಪಂಚಕರ್ಮ ಶಿಬಿರವನ್ನು ಏ.15ರವರೆಗೆ ಏರ್ಪಡಿಸಿದೆ. ಮಾಹಿತಿಗೆ ಮೊ. 9036123425 ಸಂಪರ್ಕಿಸಿರಿ.
'ಸಬ್ಸಿಡಿಗೆ ಆಧಾರ್ ಕಡ್ಡಾಯವಲ್ಲ'
ಅಡುಗೆ ಅನಿಲ ಸಬ್ಸಿಡಿಗೆ ಆಧಾರ್ ಕಾರ್ಡ್ ಕಡ್ಡಾಯ ಆದೇಶವನ್ನು ಕೇಂದ್ರ ಸರ್ಕಾರ ಸ್ಥಗಿತಗೊಳಿಸಿದ್ದು, ಇನ್ನು ಮುಂದೆ ಆಧಾರ್ ಇಲ್ಲದವರು ಗ್ಯಾಸ್ ಸಂಪರ್ಕ ಪಡೆಯಬಹುದಾಗಿದೆ ಎಂದು ಅಮರ್ದೀಪ್ ಸಿಂಗ್ ಗ್ಯಾಸ್ ಏಜೆನ್ಸಿ ಮಾಲೀಕ ಮೆಹುಲ್ ಜೆ. ಪಟೇಲ್ ತಿಳಿಸಿದ್ದಾರೆ. ಅಡುಗೆ ಅನಿಲ ಸಬ್ಸಿಡಿ ಪಡೆಯಲು ಆಧಾರ್ ಕಾರ್ಡ್ ಇಲ್ಲದೆ ಪರಿತಪಿಸುತ್ತಿದ್ದ ಗ್ರಾಹಕರಿಗೆ ಇದರಿಂದ ಅನುಕೂಲವಾಗಲಿದೆ. ಎಲ್ಲರಿಗೂ ಸಬ್ಸಿಡಿಗೆ ಪರದಾಡಬೇಕಿಲ್ಲ. ಪ್ರತಿಯೊಬ್ಬರಿಗೂ 425 ಸಬ್ಸಿಡಿ ಬೆಲೆಗೆ ಸಿಲಿಂಡರ್ ವಿತರಿಸಲಾಗುವುದು. ಡಿಬಿಟಿ ಪದ್ಧತಿ ಮತ್ತು ಆಧಾರ್ ಸಂಖ್ಯೆ ಜೋಡಣೆ ಹೊರತುಪಡಿಸಿ, ಎಲ್ಪಿಜಿ ಸಿಲಿಂಡರ್ಗಳನ್ನು ವಿತರಿಸಲಾಗುವುದು. ಗ್ರಾಹಕರು ಏಜೆನ್ಸಿಗಳ ಮೂಲಕ ಮೊದಲಿನಂತೆ 425ಗೆ ಸಿಲಿಂಡರ್ ಪಡೆಯಬಹುದು ಎಂದಿದ್ದಾರೆ.
ಶುಭಂ ಸಮುಚ್ಚಯ ಉದ್ಘಾಟನೆ
ನಗರದ ಲಕ್ಷ್ಮೀಪುರಂನಲ್ಲಿ ಶುಭಂ ಸಪ್ಪಿಯರ್ ವಸತಿ ಸಮುಚ್ಚಯದ ಉದ್ಘಾಟನೆಯು ಭಾನುವಾರ ನಡೆಯಿತು. ಶುಭಂ ಸಮೃದ್ಧಿ ಬಿಲ್ಡರ್ಸ್ ನಿರ್ಮಿಸಿರುವ ಈ ಕಟ್ಟಡವನ್ನು ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರೀನಿವಾಸಪ್ರಸಾದ್ ಉದ್ಘಾಟಿಸಿ, ಸಮುಚ್ಚಯದಲ್ಲಿ ಮನೆ ಖರೀದಿಸಿರುವ ಸಂದೀಪ್ ಅವರಿಗೆ ಕೀ ಹಸ್ತಾಂತರಿಸಿದರು. ಮತ್ತೋರ್ವ ಗ್ರಾಹಕ ಮಾಧವರಾವ್ ಅವರಿಗೆ ಕೃಷ್ಣರಾಜ ಕ್ಷೇತ್ರದ ಶಾಸಕ ಎಂ.ಕೆ. ಸೋಮಶೇಖರ್ ಕೀ ವಿತರಿಸಿದರು. ನಿರ್ಮಾಣ ಸಂಸ್ಥೆಯ ಅಧ್ಯಕ್ಷ ಸಂಪತ್ ಕೋಠಾರಿ ಇದ್ದರು.ಈ ಸಂದರ್ಭದಲ್ಲಿ ಮಾತನಾಡಿದ ಸಂಪತ್ ಕೊಠಾರಿ, ಅರಮನೆ ನಗರದಲ್ಲಿ ಬಹುಮಹಡಿ ಕಟ್ಟಡದಲ್ಲಿ ಸಂಸ್ಥೆಯ ವತಿಯಿಂದ 80 ಮನೆಗಳನ್ನು ನಿರ್ಮಿಸಲಾಗಿದೆ. ರೈಲು ನಿಲ್ದಾಣ, ಅರಮನೆ, ಮಾರುಕಟ್ಟೆ ಹಾಗೂ ವಿಮಾನ ನಿಲ್ದಾಣಕ್ಕೆ ಅತೀ ಸಮೀಪದಲ್ಲಿ ಇಂತಹ ಮನೆಗಳನ್ನು ಮೈಸೂರು ಜನತೆಗೆ ನೀಡಬೇಕೆಂಬ ಕನಸು ನಮ್ಮದಾಗಿತ್ತು. ಅದು ಈಗ ಈಡೇರಿದೆ ಎಂದರು.
'ನೌಕರನ ಸಾವಿಗೆ ಕಿರುಕುಳ ಕಾರಣ'
ಅಧಿಕಾರಿಗಳು ಸಾರ್ವಜನಿಕರ ಎದುರಲ್ಲಿ ಅವಮಾನಿಸಿದ್ದರಿಂದ ಮನನೊಂದ ನೌಕರರೊಬ್ಬರು ಮೃತಪಟ್ಟಿದ್ದಾರೆ ಎಂದು ಮೈಸೂರು ಮಹಾನಗರಪಾಲಿಕೆ ಪರಿಶಿಷ್ಟ ನೌಕರರ ಸಂಘದವರು ಆರೋಪಿಸಿದ್ದಾರೆ. ಪಾಲಿಕೆಯ ವಲಯ ಕಚೇರಿ- 9ರ ಸಹಾಯಕ ಕಂದಾಯಾಧಿಕಾರಿಯಾದ ಪಾರ್ವತಮ್ಮ ಮತ್ತು ಕಂದಾಯಾಧಿಕಾರಿ ಜಗದೀಶ್ ಎಂಬವರು ನೌಕರ ಸೋಮು ಅವರಿಗೆ ಫೆ.21ರಂದು ಸಾರ್ವಜನಿಕರ ಎದುರಲ್ಲಿ ಅವಮಾನಿಸಿದ್ದಾರೆ. ಈ ಸಂಬಂಧ ಸೋಮು ಅವರು ನಾಗರಿಕ ಹಕ್ಕು ಮತ್ತು ಜಾರಿ ನಿರ್ದೇಶನಾಲಯ ಹಾಗೂ ಇತರೆ ಇಲಾಖೆಯವರಿಗೆ ದೂರು ಸಲ್ಲಿಸಿದ್ದಾರೆ. ನಂತರ ಅದೇ ಯೋಚನೆಯಲ್ಲಿ ಅನಾರೋಗ್ಯ ಪೀಡಿತರಾದ ಸೋಮು ಖಾಸಗಿ ಆಸ್ಪತ್ರೆ ದಾಖಲಾಗಿ, ಫೆ.26ರಂದು ಮೃತಪಟ್ಟಿದ್ದಾರೆ. ಈ ಸಂಬಂಧ ಮೇಯರ್ ಮತ್ತು ಪೊಲೀಸ್ ಆಯುಕ್ತರು ಸಮಗ್ರ ತನಿಖೆ ನಡೆಸಿ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಸಭೆಯಲ್ಲಿ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ, ಪ್ರಧಾನ ಕಾರ್ಯದರ್ಶಿ ಸುರೇಂದ್ರಕುಮಾರ್, ಉಪಾಧ್ಯಕ್ಷ ಉಮೇಶ್, ಸಂಘಟನಾ ಕಾರ್ಯದರ್ಶಿಗಳಾದ ಬಸವರಾಜು, ಶ್ರೀನಿವಾಸು ಇದ್ದರು.
ಕಾರ್ಮಿಕ ನಾಪತ್ತೆ
ನಗರ ಪಾಲಿಕೆಯ 11ನೇ ವಾರ್ಡ್ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಕಾಯಂ ಪೌರಕಾರ್ಮಿಕ ರಂಗ(55) ಎಂಬವರು ಮಾ.2 ರಿಂದ ನಾಪತ್ತೆಯಾಗಿದ್ದಾರೆ. ಎಂದಿನಂತೆ ಸ್ಟರ್ಲಿಂಗ್ ಥಿಯೇಟರ್ ಬಳಿ ಕೆಲಸಕ್ಕೆ ಹೋಗುವುದಾಗಿ ಹೇಳಿದ ಹೋದ ಪತಿ ರಂಗ ಅವರು ನಾಪತ್ತೆಯಾಗಿದ್ದಾರೆ. ಕಾಣೆಯಾಗಿರುವ ಪತಿಯನ್ನು ಪತ್ತೆ ಮಾಡಿಕೊಡುವಂತೆ ರಂಗ ಪತ್ನಿ ಬನ್ನಮ್ಮ ದೂರು ನೀಡಿದ್ದಾರೆ. ಮಾಹಿತಿ ಸಿಕ್ಕಲ್ಲಿ ದೂ. 0821- 2418322, 522 ಸಂಪರ್ಕಿಸಲು ಎಎಸ್ಐ ಜಯಪ್ರಕಾಶ್ ಕೋರಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

