ಜಾಫರ್ ಷರೀಫ್ ಸ್ಪರ್ಧೆ ಖಚಿತ
ಮೈಸೂರು: ಕೇಂದ್ರದ ಮಾಜಿ ಸಚಿವ ಹಾಗೂ ಕಾಂಗ್ರೆಸ್ ಮುಖಂಡ ಸಿ.ಕೆ. ಜಾಫರ್ ಷರೀಫ್ ಅವರು ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸುವುದು ಖಚಿತ ಎಂದು ಶಾಸಕ ಜಿ.ಟಿ. ದೇವೇಗೌಡ ವಿಶ್ವಾಸ ವ್ಯಕ್ತಪಡಿಸಿದರು.
ಮೈಸೂರಿನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾಫರ್ ಷರೀಫ್ ಅವರು ಮೆಕ್ಕಾ ಯಾತ್ರೆ ಮುಗಿಸಿ ಬಂದ ಬಳಿಕ ಜೆಡಿಎಸ್ ಪಕ್ಷಕ್ಕೆ ಸೇರಲಿದ್ದಾರೆ. ವರಿಷ್ಠರ ಅಪೇಕ್ಷೆಯಂತೆ ಮೈಸೂರಿನ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ ಎಂದರು.
ಜೆಡಿಎಸ್ ಒಕ್ಕಲಿಗರ ಪಕ್ಷ ಎಂದು ಆರೋಪಿಸುತ್ತಿರುವುದು ಸರಿಯಲ್ಲ. ಅದು ಸತ್ಯಕ್ಕೆ ದೂರವಾದ ಸಂಗತಿ. ಈ ಚುನಾವಣೆ ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ ಅಲ್ಪಸಂಖ್ಯಾತರು ಅಥವಾ ವೀರಶೈವ ಸಮುದಾಯಕ್ಕೆ ಅವಕಾಶ ನೀಡಲು ನಿರ್ಧರಿಸಲಾಗಿದೆ. ಜಾಫರ್ ಷರೀಫ್ ಅವರು ಅಭ್ಯರ್ಥಿಯಾಗುವುದು ಶೇ.99 ಖಚಿತ. ಒಂದು ವೇಳೆ ಅವರು ಬರದಿದ್ದರೇ, ಶಾಸಕ ಸಾ.ರಾ. ಮಹೇಶ್ ಅಭ್ಯರ್ಥಿಯಾಗಲಿದ್ದಾರೆ ಎಂದು ತಿಳಿಸಿದರು.
ಬಿಜೆಪಿಯಲ್ಲಿ ಒಡಕು ಮೂಡಿದ್ದು, ಮತದಾನದಿಂದ ತಟಸ್ಥವಾಗಿ ಉಳಿಯಲು ಪಕ್ಷದ ಮುಖಂಡರೇ ನಿರ್ಧರಿಸಿದ್ದಾರೆ. ಇನ್ನು ಕಾಂಗ್ರೆಸ್ನಲ್ಲಿ ಅಸಮಾಧಾನವಿದ್ದು, ಯಾವಾಗ ಬೇಕಾದರೂ ಸ್ಫೋಟಗೊಳ್ಳಬಹುದು. ನರೇಂದ್ರ ಮೋದಿ ಅವರ ಅಲೆ ಇಳಿಮುಖವಾಗಿದ್ದು, ದೇಶದಲ್ಲಿ ತೃತೀಯ ರಂಗ ಅಧಿಕಾರಕ್ಕೆ ಬರಲಿದೆ ಎಂದರು. ವೀರಶೈವ ಸಮುದಾಯಕ್ಕೆ ಆದ್ಯತೆ ಕಲ್ಪಿಸುವ ಸಲುವಾಗಿ ಬಿಜೆಪಿ ಮುಖಂಡ ಪ್ರೊ.ಕೆ.ಆರ್. ಮಲ್ಲಿಕಾರ್ಜುನಪ್ಪ ಅವರೊಂದಿಗೆ ಸಂಪರ್ಕದಲ್ಲಿದ್ದೇವೆ. ಆದರೆ, ಅವರು ಟಿಕೆಟ್ ಖಚಿತವಾದರೆ ಮಾತ್ರ ಪಕ್ಷಕ್ಕೆ ಬರುವುದಾಗಿ ಹೇಳಿದ್ದಾರೆ. ಈ ಬಗ್ಗೆ ಪಕ್ಷದ ವರಿಷ್ಠರು ನಿರ್ಧಾರ ಕೈಗೊಳ್ಳುವರು ಎಂದು ಅವರು ಹೇಳಿದರು.
ವಿಶ್ವನಾಥ್ ವಿರುದ್ಧ ಕಿಡಿ: ಶಾಸಕ ಸಾ.ರಾ.ಮಹೇಶ್ ಮಾತನಾಡಿ, ವಿಧಾನಸಭಾ ಚುನಾವಣೆಯಲ್ಲಿ ನನ್ನ ಎದುರು ಸೋತಿದ್ದ ಎಚ್.ವಿಶ್ವನಾಥ್ ಅವರು ನಂತರ ಲೋಕಸಭಾ ಚುನಾವಣೆಯಲ್ಲಿ ಗೆದ್ದಿದ್ದಾರೆ. ಈಗ 2ನೇ ಬಾರಿಯೂ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ. 5 ವರ್ಷದಲ್ಲಿ ವಿಶ್ವನಾಥ್ ಅವರು ಏನು ಸಾಧನೆ ಮಾಡಿದ್ದಾರೆ ಎಂಬುದು ಜನತೆ ಮುಂದೆ ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದರು.
ಸಂಸದ ಎಚ್. ವಿಶ್ವನಾಥ್ ಅವರು ನಾನು ಹುಲಿ, ಅವರು ಸಿಂಹ ಎಂದು ಹೇಳುತ್ತಿದ್ದಾರೆ. ಅವರು ಗುಳ್ಳೆನರಿ ಆಗದಿದ್ದರೆ ಸರಿ ಎಂದು ವ್ಯಂಗ್ಯವಾಡಿದರು. ಹುಲಿ, ಸಿಂಹದ ಬಗ್ಗೆ ಜನರಿಗೆ ಭಯ ಇದೆ. ಹೀಗಾಗಿ ನಾವು ಮನುಷ್ಯರನ್ನು ಕಣಕ್ಕಿಳಿಸುತ್ತಿದ್ದೇವೆ. ಜಯ ನಮ್ಮದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ವಿಶ್ವನಾಥ್ ಅವರು ಜಾಫರ್ ಷರೀಫ್ ಅಪ್ಪ, ಪ್ರತಾಪ್ ಸಿಂಹ ಮಗ ಇದ್ದಂತೆ ಎಂದಿದ್ದಾರೆ. ಅವರಿಗೆ ಅಪ್ಪ ಹಾಗೂ ಮಗನ ಮೇಲೆ ವ್ಯಾಮೋಹವಿದ್ದಲ್ಲಿ ಯಾರಿಗಾದರೂ ಸ್ಥಾನ ಬಿಟ್ಟುಕೊಡಲಿ ನೋಡೋಣ ಎಂದು ಸವಾಲು ಹಾಕಿದರು.
ಶಾಸಕ ಎಸ್. ಚಿಕ್ಕಮಾದು ಮಾತನಾಡಿ, ಹಿಂದಿನ ಚುನಾವಣೆಯಲ್ಲಿ ಜೆಡಿಎಸ್ ತೀರ ಹತ್ತಿರದಲ್ಲಿ ಬಂದು ಸೋತಿದೆ. ಈ ಬಾರಿ ಜೆಡಿಎಸ್ ಅಭ್ಯರ್ಥಿಯನ್ನು ಗೆಲ್ಲಿಸಲು ಎಲ್ಲ ರೀತಿಯ ಪ್ರಯತ್ನ ಮಾಡುವುದಾಗಿ ಅವರು ಹೇಳಿದರು. ಜೆಡಿಎಸ್ ನಗರಾಧ್ಯಕ್ಷ ರಾಜಣ್ಣ, ಮಾಜಿ ಮೇಯರ್ ಸಂದೇಶ್ ಸ್ವಾಮಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

