ಭಾಷಾ ಮಂದಾಕಿನಿ ಮೌನರೋದನ!
ಕ.ಪ್ರ.ವಾರ್ತೆ , ಮೈಸೂರು , ಮೇ 4
ಪ್ರಾದೇಶಿಕ ಭಾಷೆಗಳ ಕಲಿಕೆಗೆ ಪೂರಕವಾಗಿ ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಸಚಿವಾಲಯ ಸಾಕಾರಗೊಳಿಸಿರುವ ಭಾಷಾ ಮಂದಾಕಿನಿ ಯೋಜನೆಯು ಸಮರ್ಪಕವಾಗಿ ಅನುಷ್ಠಾನವಾಗದೆ ನೆನೆಗುದಿಗೆ ಬಿದ್ದಿದೆ.
ಆಯಾ ರಾಜ್ಯಗಳ ಮಾತೃಭಾಷೆ, ಸಾಹಿತಿಗಳ ಕೃತಿಗಳು, ಮಹನೀಯರ ಜೀವನ ವೃತ್ತಾಂತ, ಭೌಗೋಳಿಕ ಹಿನ್ನೆಲೆ, ಇತಿಹಾಸದ ಮಹತ್ವವನ್ನು ಒಳಗೊಂಡಂತೆ ಚಿತ್ರೀಕರಿಸಿ, ಉಪಗ್ರಹದ ಮೂಲಕ ಭಿತ್ತರಿಸುವುದು ಇದರ ಮೂಲ ಉದ್ದೇಶ. ಇದರಿಂದ ಯಾವುದೇ ಭಾರತೀಯ ಭಾಷೆಯನ್ನು ಎರಡನೇ ಭಾಷೆಯಾಗಿ ಕಲಿಯಲು ಸಹಾಯಕವಾಗಲಿದೆ. ಅಲ್ಲದೆ ವಿದೇಶಗಳಲ್ಲಿದ್ದು ತಮ್ಮ ಮಾತೃಭಾಷೆಯನ್ನು ಮರೆತಿರುವವರೂ ಇದರ ಪ್ರಯೋಜನ ಪಡೆಯಲು ನೆರವಾಗಲಿದೆ.
ಕನ್ನಡ, ತಮಿಳು, ತೆಲುಗು, ಮಲೆಯಾಳ, ಮರಾಠಿ, ಒಡಿಶಾ, ಅಸ್ಸಾಮಿ, ಗುಜುರಾತಿ ಮುಂತಾದ ರಾಷ್ಟ್ರೀಯ ಮಾನ್ಯತೆ ಪಡೆದ ಪ್ರಾದೇಶಿಕ ಭಾಷೆಗಳು, ಲಿಪಿ ಇಲ್ಲದ ಹಾಗೂ ಬುಡಕಟ್ಟು ಜನರ ಆಡುಭಾಷೆಗಳನ್ನು ಸಹ ಹೇಗೆ ಮಾತನಾಡಬೇಕು, ಲಿಪಿ ಇದ್ದರೆ ಹೇಗೆ ಓದಬೇಕು ಹಾಗೂ ಯಾವ ರೀತಿ ಬರೆಯಬೇಕು ಎಂಬುದರ ಕುರಿತು ಶೈಕ್ಷಣಿಕ ಕಾರ್ಯಕ್ರಮ ಪ್ರಸಾರ ಮಾಡುವುದು ಯೋಜನೆಯ ಮೂಲ ಉದ್ದೇಶ.
5 ಕೋಟಿ ಖರ್ಚು: ಈ ಯೋಜನೆಯ ಫಲವಾಗಿ ಭಾಷಾ ಮಂದಾಕಿನಿಯ ನಿರ್ಮಾಣಕ್ಕೆ ಪ್ರತ್ಯೇಕ ಸ್ಟುಡಿಯೋ ನಿರ್ಮಾಣಕ್ಕೆ ಮೈಸೂರಿನ ಭಾರತೀಯ ಭಾಷಾ ಸಂಸ್ಥೆಗೆ ಕೇಂದ್ರ ಸರ್ಕಾರವು ಅನುಮತಿ ನೀಡಿದ್ದು, ಇದಕ್ಕಾಗಿ ಸುಮಾರು 4- 5 ಕೋಟಿ ಖರ್ಚು ಮಾಡಿ ಸುಸಜ್ಜಿತ ಹಾಗೂ ಬೃಹತ್ ರೆಕಾರ್ಡಿಂಗ್ ಹಾಗೂ ಎಡಿಟಿಂಗ್ ಸ್ಟುಡಿಯೋ ನಿರ್ಮಿಸಿದೆ. ಅಲ್ಲದೆ 20 ರಿಂದ 30 ಲಕ್ಷ ಮೌಲ್ಯದ ಕ್ಯಾಮೆರಾಗಳು ಇಲ್ಲಿವೆ.
ಹವಾನಿಯಂತ್ರಿತ ದೂರದರ್ಶನ ಕೇಂದ್ರವನ್ನು ಹೊಂದಿರುವ ಇಂತಹ ಸೌಲಭ್ಯವನ್ನು ಬಳಸಿಕೊಂಡು ಸಂಸ್ಥೆಯು ಯೋಜನೆಯನ್ನು ಜಾರಿ ಮಾಡದ ಕಾರಣ ಕೋಟ್ಯಂತರ ರು. ಖರ್ಚು ಮಾಡಿರುವ ಸ್ಟುಡಿಯೋ ಹಾಗೂ ಯಂತ್ರೋಪಕರಣಗಳು ನಿಷ್ಕ್ರಿಯವಾಗಿವೆ. ತಮ್ಮಲ್ಲಿ ಎಲ್ಲಾ ಸವಲತ್ತು ಇದ್ದರೂ ಭಾಷೆಯ ಕಲಿಕೆಗೆ ಪೂರಕವಾದ ಚಿತ್ರ ತಯಾರಿಕೆಗೆ ಹೊರಗುತ್ತಿಗೆ ನೀಡುವ ಮೂಲಕ ಜನರ ತೆರಿಗೆ ಹಣವನ್ನು ಅಧಿಕಾರಿಗಳು ಅಪವ್ಯಯ ಮಾಡುತ್ತಿದ್ದಾರೆ.
ತಾಂತ್ರಿಕ ಸಿಬ್ಬಂದಿ ಇಲ್ಲ
ಕೋಟ್ಯಂತರ ರು. ಮೌಲ್ಯದ ಸಾಧನಾ ಸಲಕರಣೆಗಳು ಹಾಗೂ ಸೌಲಭ್ಯವನ್ನು ಇಲ್ಲಿ ಕಲ್ಪಿಸಿದ್ದರೂ, ಅದರ ನಿರ್ವಹಣೆಗೆ ತಾಂತ್ರಿಕ ಸಿಬ್ಬಂದಿ ನೇಮಿಸಿಲ್ಲ. ಅನೇಕ ಯೋಜನೆಗಳನ್ನು ಕೇಂದ್ರ ಸರ್ಕಾರ ಮಂಜೂರು ಮಾಡಿದ್ದರೂ ಸಹ ಅಗತ್ಯ ಸಿಬ್ಬಂದಿ ಇಲ್ಲದೆ ಅದು ಕಾರ್ಯಗತವಾಗುವಲ್ಲಿ ವಿಳಂಬವಾಗುತ್ತಿದೆ.
-ಮಾ. ವೆಂಕಟೇಶ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

