ಮೈಸೂರು

ಹುಣಸೂರು ತಾಲೂಕಿನಲ್ಲಿ ಹಾನಿ

Published On :

ಹುಣಸೂರು: ತಾಲೂಕಿನ ಧರ್ಮಾಪುರ ಜಿಪಂ ಕ್ಷೇತ್ರದ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಭಾನುವಾರ ರಾತ್ರಿ ಭಾರಿ ಬಿರುಗಾಳಿ ಸಹಿತ ಸುರಿದ ಮಳೆಗೆ ಬಾಳೆ, ತೆಂಗು, ಅಡಕೆ, ವಿವಿಧ ತಳಿಯ ಮರಗಳು ಮತ್ತು ವಿದ್ಯುತ್ ಕಂಬಗಳು ಹಾಗೂ ಮನೆಗಳ ಮೇಲ್ಛಾವಣಿ ಧರೆಗುರುಳಿದ್ದು, ಸೋಮವಾರ ಮಧ್ಯಾಹ್ನದವರೆಗೆ ರಸ್ತೆ ಸಂಚಾರ ಬಂದ್ ಆಗಿದ್ದರಿಂದ ಜನಜೀವನ ಅಸ್ತವ್ಯಸ್ತವಾಗಿತ್ತು.
ಬಿರುಗಾಳಿ ಮಳೆಯಿಂದಾಗಿ ನೂರಾರು ಎಕರೆ ಬಾಳೆ ಧರೆಗುರುಳಿದ್ದರೆ, ಇನ್ನೂರಕ್ಕೂ ಹೆಚ್ಚು ವಿದ್ಯುತ್ ಕಂಬಗಳು, ಟ್ರಾನ್ಸ್‌ಫಾರ್ಮರ್, ಗಿಡ-ಮರಗಳು ನೆಲಕ್ಕುರುಳಿವೆ. 200ಕ್ಕೂ ಹೆಚ್ಚಿನ ಮನೆಯ ಕಲ್ನಾರ್ ಶೀಟ್ ಮಾಳಿಗೆಯನ್ನು ಹೊತ್ತೊಯ್ದಿದೆ. ಮನೆಯಲ್ಲಿದ್ದ ದಿನಸಿ ಪದಾರ್ಥಗಳು ಹಾನಿಯಾಗಿದೆ. ಇಟ್ಟಿಗೆ ಫ್ಯಾಕ್ಟರಿಯ ಮೇಲ್ಛಾವಣಿ ಹಾರಿದೆ. ನೂರಾರು ಎಕರೆಯಲ್ಲಿ ಬೆಳೆಯಲಾಗಿದ್ದ ಫಲಕ್ಕೆ ಬಂದಿದ್ದ ಬಾಳೆ ಗಿಡಗಳು ನಾಶವಾಗಿದೆ.
ತೆಂಗು, ಅಡಕೆ ಮರಗಳು ಬಿದ್ದು ಹೋಗಿದೆ. ಹಲವಾರು ಮನೆಗಳಿಗೆ ಸಿಡಿಲು ಬಡಿದು ಗೋಡೆಗಳು ಬಿರುಕು ಬಿಟ್ಟಿದೆ. ಮರಗಳು ನೆಲಕ್ಕುರುಳಿದ್ದರಿಂದ ಹಲವೆಡೆ ರಸ್ತೆ ಸಂಚಾರ ಬಂದ್ ಆಗಿತ್ತು. ರಾತ್ರಿ ವಿದ್ಯುತ್ ಸಂಪರ್ಕ ಕಡಿದು ಹೋಗಿತ್ತು. ಐದು ಜಾನುವಾರುಗಳಿಗೆ ತೀವ್ರ ಪೆಟ್ಟು ಬಿದ್ದು ಮೃತಪಟ್ಟಿವೆ. ಬೆಳೆಯ ಫಸಲು ಸೇರಿದಂತೆ ಕೋಟ್ಯಂತರ ರು. ನಷ್ಟ ಉಂಟಾಗಿದೆ.
ತರೀಕಲ್ ಶಾಲಾ ಆವರಣದ ಪಕ್ಕದಲ್ಲಿದ್ದ ಹಳ್ಳಿ ಮರವೊಂದು ಮುರಿದು ವಿದ್ಯುತ್ ತಂತಿಯ ಮೇಲೆ ಬಿದ್ದು, ಕಂಬ ಮುರಿದು ಸಂಪೂರ್ಣ ಜಖಂಗೊಂಡಿದೆ. ಧರ್ಮಾಪುರ, ದೈತನಕೆರೆ ಕಾವಲ್ ಮತ್ತು ನಾಡಪ್ಪನಹಳ್ಳಿ, ತರೀಕಲ್, ಶಿವಾಜಿನಗರ, ಕುಡಿರುಮುದ್ದನಹಳ್ಳಿ, ದಾಸನಪುರ, ಹಳ್ಳದಕೊಪ್ಪಲು ಸೇರಿ ಹಲವು ಗ್ರಾಮಗಳಲ್ಲಿ ನೂರಕ್ಕೂ ಹೆಚ್ಚು ಕಂಬ ಮುರಿದು ರಾತ್ರಿಯಿಂದ ವಿದ್ಯುತ್ ಸ್ಥಗಿತಗೊಂಡಿದೆ.
ಧರೆಗುರುಳಿದ ಬೆಳೆ: ಫಲಕ್ಕೆ ಬಂದಿದ್ದ ತರೀಕಲ್ ಗ್ರಾಮದ ಗ್ರಾಪಂ ಮಾಜಿ ಅಧ್ಯಕ್ಷ ಸುರೇಂದ್ರ, ಗ್ರಾಪಂ ಸದಸ್ಯ ಸಾದಶಿವನ್, ಮುಖಂಡ ರವಿ, ದೇವರಾಜು, ವಿ. ಚಂದ್ರಸೇನಾ, ಶಿವಾಜಿನಗರದ ಚಿಕ್ಕಸುಬ್ಬಯ್ಯ, ಹಳ್ಳದಕೊಪ್ಪಲಿನ ಕಾಯಿನಾಗಣ್ಣನಿಗೆ ಸೇರಿದ್ದ ಸಿಲ್ವರ್ ತೋಟ, ದೊಡ್ಡಸ್ವಾಮಿ, ಕೆಂಡಗಣ್ಣಪ್ಪರವರ ಬಾಳೆ ತೋಟ ಸೇರಿದಂತೆ ಸುತ್ತ ಮುತ್ತಲ ಗ್ರಾಮಗಳಲ್ಲಿ ಬಾಳೆ, ತೆಂಗು, ಮಾವು, ಸಪೋಟ, ಅಡಿಕೆ ಬೆಳೆ ಸಂಪೂರ್ಣ ನೆಲ ಕಚ್ಚಿದೆ. ಒಬ್ಬೊಬ್ಬರದು 3ರಿಂದ 4 ಲಕ್ಷ ನಷ್ಟ ಸಂಭವಿಸಿದೆ.
ಗಾಳಿಗೆ ತೂರಿದ ಹೆಂಚು: ಧರ್ಮಾಪುರ ಗ್ರಾಮದ ಮಾಜಿ ಜಿಪಂ ಸದಸ್ಯ ಡಿ.ಕೆ. ಕುನ್ನೇಗೌಡರಿಗೆ ಸೇರಿದ್ದ ಇಟ್ಟಿಗೆ ಪ್ಯಾಕ್ಟರಿಯ ಮೇಲ್ಛಾವಣಿಯ ಶೀಟ್‌ಗಳು ಅರ್ಧ ಕಿ.ಮೀ. ವರೆಗೆ ಹಾರಿ ಹೋಗಿದ್ದರೆ, ಹದ ಮಾಡುವ ಹಂತದಲ್ಲಿದ್ದ ಇಟ್ಟಿಗೆ, ಹಲವಾರು ಮನೆಗಳಲ್ಲಿ ಟಿವಿ ಸೇರಿದಂತೆ ಎಲೆಕ್ಟ್ರಾನಿಕ್ ವಸ್ತುಗಳು ಹಾನಿಯಾಗಿದೆ. ಹಲವಾರು ಮನೆಗಳು ಸಿಡಿಲಿಗೆ ಸಿಲುಕಿ ಮನೆಗಳು ಜಖಂಗೊಂಡಿದೆ, ಜನರು ಪ್ರಾಣಪಾಯದಿಂದ ಪಾರಾಗಿದ್ದಾರೆ.
ಬರಡಾಗಿದ್ದ ಕೆರೆಯಲ್ಲಿ ಉಕ್ಕಿದ ನೀರು: ಕಳೆದ 17 ವರ್ಷದಿಂದ ಬಿಳಿಕೆರೆ ಕೆರೆಯಲ್ಲಿ ನೀರು ಬರಡಾಗಿತ್ತು. ಭಾನುವಾರ ರಾತ್ರಿ ಸುರಿದ ಮಳೆಯಿಂದ ಸೋಮವಾರ ಬೆಳಗ್ಗೆ ಬಿಳಿಕೆರೆ ಕೆರೆಯೊಳಗೆ ಭೂಮಿಯಿಂದ ನೀರು ಉಕ್ಕಿ ಬರುತ್ತಿರುವ ವಿಷಯ ತಿಳಿದು, ಗ್ರಾಮಸ್ಥರು  ವೀಕ್ಷಿಸಿದರು.
ಅಧಿಕಾರಿಗಳ ಭೇಟಿ
ಸ್ಥಳಕ್ಕೆ ತಹಸೀಲ್ದಾರ್ ವೆಂಕಟಾಚಲಪ್ಪ, ಆರ್‌ಐ ನಿಸಾರ್ ಆಹ್ಮದ್, ಗ್ರಾಮಲೆಕ್ಕಿಗ ಮೋಹನ್‌ರಾಜ್, ದೇವರಾಜ್, ಸೆಸ್ಕ್ ಎಇಇ ಕಲೀಂ, ಚೆನ್ನಕೇಶವ, ಬೋರೇಗೌಡ ಭೇಟಿ ನೀಡಿ ಪರಿಶೀಲಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಎಚ್.ಪಿ. ಮಂಜುನಾಥ್, ಧರ್ಮಾಪುರ ಜಿಪಂ ಕ್ಷೇತ್ರದ ವ್ಯಾಪ್ತಿಯಲ್ಲಿ ಕೋಟ್ಯಂತರ ರು. ನಷ್ಟ  ಉಂಟಾಗಿದೆ, ಹಾನಿಯಾಗಿರುವ ಅಂದಾಜನ್ನು ಸಂಬಂಧಿಸಿದ ಅಧಿಕಾರಿಗಳು ತಯಾರಿಸಿ, ಪರಿಹಾರ ಕೊಡಿಸಲು ಸೂಚಿಸಿದ್ದೇನೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.