ಕುಡಿವ ನೀರು ಕೊಡಿ ಸಿಎಂ
ಕ.ಪ್ರ.ವಾರ್ತೆ , ಮೈಸೂರು , ಮೇ 6
ಮೈಸೂರು ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ತತ್ವಾರ ಉಂಟಾಗಿದ್ದರೂ ಮುಖ್ಯಮಂತ್ರಿಯಾಗಲಿ ಅಥವಾ ಇನ್ನಿಬ್ಬರು ಸಚಿವರಾಗಲಿ ಗಮನ ಹರಿಸದೆ ನಿರ್ಲಕ್ಷಿಸಿದ್ದಾರೆ ಎಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡ ಆರೋಪಿಸಿದ್ದಾರೆ.
ಮಂಗಳವಾರ ಮೈಸೂರು ತಾಪಂ ಸಭಾಂಗಣದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, 30 ವರ್ಷಗಳಿಂದ ರಾಜಕೀಯ ಮಾಡಿಕೊಂಡು ಬಂದು ಎರಡು ಬಾರಿ ಉಪಮುಖ್ಯಮಂತ್ರಿಯಾಗಿ, ಈಗ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯ ಅವರು ದುರ್ಬಲ ಆಡಳಿತ ನೀಡುತ್ತಿದ್ದಾರೆ. ಸರ್ಕಾರ ನಿದ್ದೆ ಮಾಡುತ್ತಿದೆ. ಕಳೆದ ವರ್ಷದ ಬಜೆಟ್ ಅಧಿವೇಶನದಲ್ಲಿ ಮೈಸೂರಿನಲ್ಲಿ ಉದ್ಭವಿಸಿರುವ ನೀರಿನ ಸಮಸ್ಯೆಯನ್ನು ಅವರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಕಂದಾಯ ಸಚಿವರು, ಲೋಕೋಪಯೋಗಿ ಸಚಿವರ ಸುಳಿವೆ ಇಲ್ಲ ಎಂದು ದೂರಿದರು. ನನ್ನ ಕ್ಷೇತ್ರದ ಜಟ್ಟಿಹುಂಡಿ ಗ್ರಾಮದಲ್ಲಿ ನೀರಿಲ್ಲದೆ 10 ಲಕ್ಷ ಖರ್ಚು ಮಾಡಿ ಬೋರ್ವೆಲ್ ಕೊರೆಸಿದೆವು. 8 ದಿನಗಳ ನಂತರ ಅದು ಬತ್ತಿ ಹೋಗಿದೆ. ಪರಿಸ್ಥಿತಿ ಹೀಗಿರುವಾಗ ಜನರು ನೀರಿಗಾಗಿ ಮೈಲಿಗಟ್ಟಲೆ ದೂರ ಹೋಗುತ್ತಿದ್ದಾರೆ. ಜಾನುವಾರುಗಳು ನೀರಿಲ್ಲದೆ ಹೈರಾಣಾಗಿವೆ. ಆದ್ದರಿಂದ ಮುಖ್ಯಮಂತ್ರಿಗಳು ತಕ್ಷಣ ಜಿಲ್ಲೆಯ ಕಡೆ ಗಮನಹರಿಸಿ ಅಧಿಕಾರಿಗಳಿಗೆ ಚುರುಕು ಮುಟ್ಟಿಸಬೇಕು. ಇಲ್ಲಿನ ಸ್ಥಳೀಯ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಯಾರಿಗೂ ಜವಾಬ್ದಾರಿ ಇಲ್ಲ. ಜನರ ಸಂಕಷ್ಟ ಹೇಳತೀರದಾಗಿದೆ ಎಂದು ಕಿಡಿಕಾರಿದರು. ಮುಖಂಡರಾದ ಬೀರಿಹುಂಡಿ ಬಸವಣ್ಣ, ಕಡಕೊಳ ನಾಗರಾಜ್ ಇದ್ದರು.
ಅಧಿಕಾರಿಗಳ ನೇಮಕಕ್ಕೆ ಸೂಚನೆ
ಮೈಸೂರು: ತಾಲೂಕಿನ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಒಳಪಡುವ ಬರಪೀಡಿತ ಗ್ರಾಮಗಳಲ್ಲಿ ಕುಡಿಯುವ ನೀರಿನ ನಿರ್ವಹಣೆಗೆ ಗ್ರಾಮಲೆಕ್ಕಿಗ, ರಾಜಸ್ವ ನಿರೀಕ್ಷಕ ಹಾಗೂ ಪಿಡಿಒಗಳನ್ನು ನೇಮಿಸುವಂತೆ ಶಾಸಕ ಜಿ.ಟಿ. ದೇವೇಗೌಡ ಅವರು ತಾಪಂ ಅಧಿಕಾರಿಗಳಿಗೆ ಸೂಚಿಸಿದರು.
ಮಂಗಳವಾರ ತಾಪಂ ಸಭಾಂಗಣದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಕ್ಷೇತ್ರದ 19 ಗ್ರಾಮಗಳನ್ನು ಬರಪೀಡಿತ ಗ್ರಾಮಗಳೆಂದು ಗುರುತಿಸಲಾಗಿದೆ. ಅಲ್ಲಿ ನೀರಿನ ಸಮಸ್ಯೆ ತೀವ್ರವಾಗಿದೆ. ಅದನ್ನು ಪರಿಹರಿಸಲು ಪ್ರತಿದಿನ ಟ್ಯಾಂಕರ್ನಲ್ಲಿ ನೀರು ಪೂರೈಸಬೇಕು. ಯಾವುದೇ ಫ್ಲೋರೈಡ್ ನೀರು ಬಳಸದೆ ಶುದ್ಧ ನೀರು ನೀಡಲು ಅಧಿಕಾರಿಗಳು ನಿಗಾವಹಿಸಬೇಕು. ಯಾವುದೇ ಭ್ರಷ್ಟಾಚಾರಕ್ಕೆ ಅವಕಾಶ ಮಾಡಿಕೊಡದೆ ಮಾನವೀಯತೆ ದೃಷ್ಟಿಯಿಂದ ಜನರಿಗೆ ನೀರು ಒದಗಿಸಬೇಕು ಎಂದರು.
ಪುಡಾರಿಗಳಿಗೆ ಬಗ್ಗಬೇಡಿ: ಗೋಪಾಲಪುರ ಪಿಡಿಒ ಮಾತನಾಡಿ ನಿಗದಿತ ಟ್ಯಾಂಕ್ ತರಿಸಿದರೂ ಕೆಲವರು ಒತ್ತಡ ಹೇರಿ ಮತ್ತಷ್ಟು ಟ್ಯಾಂಕ್ ತರಿಸುತ್ತಾರೆ. ಕಾರಣ ಕೇಳಿದರೆ ಸಿಎಂ ಹೆಸರೇಳುತ್ತಾರೆ ಎಂದಾಗ, ಸಿಎಂ ಹೇಸರೇಳಿಕೊಂಡುಬರುವ ಪುಡಾರಿಗಳಿಗೆ ಬಗ್ಗಬೇಡಿ. ಎಲ್ಲರನ್ನೂ ಸಮಾನವಾಗಿ ಕಾಣಿ ಎಂದು ಶಾಸಕರು ತಾಕೀತು ಮಾಡಿದರು.
ಹಣ ಬಿಡುಗಡೆಗೆ ಸೂಚನೆ: ಕಳೆದ ವರ್ಷದ ಅಂತ್ಯಕ್ಕೆ ಟ್ಯಾಂಕರ್ನಿಂದ ನೀರು ಪೂರೈಸಲು ಒಟ್ಟು 69 ಲಕ್ಷ ಖರ್ಚಾಗಿತ್ತು. ಈ ವರ್ಷದ ಒಂದನೆ ತಿಂಗಳಿಂದ ಈವರೆಗೆ ನೀರು ಪೂರೈಕೆಗೆ ಒಟ್ಟು 1.28 ಕೋಟಿ ಖರ್ಚಾಗಿದೆ. ಆದರೆ, ಜಿಲ್ಲಾಡಳಿತ ಹಣ ನೀಡದೆ ಬಾಕಿ ಉಳಿಸಿಕೊಂಡಿದೆ ಎಂಬ ಅಧಿಕಾರಿಗಳ ದೂರು ಆಲಿಸಿದ ಜಿಟಿಡಿ ತಕ್ಷಣ ಜಿಲ್ಲಾಧಿಕಾರಿಗೆ ದೂರವಾಣಿ ಮಾಡಿ ಹಣ ಬಿಡುಗಡೆ ಮಾಡುವಂತೆ ಸೂಚಿಸಿದರು. ಮೂರು ದಿನಗಳೊಳಗೆ ಬಿಲ್ ತಯಾರಿಸಿ ಜಿಲ್ಲಾಡಳಿತಕ್ಕೆ ಸಲ್ಲಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.
ಸಮಸ್ಯೆ ಉಂಟಾಗಿರುವ ಗ್ರಾಮಗಳು: ಕೆ. ಮಾದಹಳ್ಳಿ, ನುಗ್ಗಹಳ್ಳಿ, ಬಸವನಪುರ, ಉದ್ಬೂರು, ಹೊಸಹುಂಡಿ, ಬೀರಿಹುಂಡಿ, ನಗರ್ಥಹಳ್ಳಿ, ಜಯಪುರ, ಕೆಲ್ಲಹಳ್ಳಿ, ಧನಗಳ್ಳಿ, ಗೋಪಾಲಪುರ, ಜಟ್ಟಿಹುಂಡಿ, ಡಿ.ಸಾಲುಂಡಿ, ದೇವಗಳ್ಳಿ, ಬರಡನಪುರ, ಆನಗಳ್ಳಿ, ಶೆಟ್ಟಿನಾಯಕನಹಳ್ಳಿ, ಮೂಗನಹುಂಡಿ, ರಾಮನಹುಂಡಿ, ಕುಮಾರಬೀಡು, ಮರಿಟಿಕ್ಯಾತನಹಳ್ಳಿ, ದಾರಿಪುರ, ಮಾವಿನಹಳ್ಳಿ. ಜಿಪಂ ಯೋಜನಾ ನಿರ್ದೇಶಕ ಶಂಕರರಾಜ್, ತಾಪಂ ಇಒ ಅರುಳಕುಮಾರ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

