ಜಮೀನು ಹೋದ್ರು ಸಿಗದ ಕಾಸು
ಕ.ಪ್ರ.ವಾರ್ತೆ ಹೊಸೂರು ಮೇ 12
ನಾಲೆ ಬಂದರೆ ತಮ್ಮ ಬದುಕು ಹಸನಾಗುತ್ತದೆ ಎಂದು ನಂಬಿದ ನೂರಾರು ರೈತರು, ನಾಲೆ ನಿರ್ಮಾಣಕ್ಕಾಗಿ ತಮ್ಮ ಲಕ್ಷಾಂತರ ರು. ಬೆಲೆ ಬಾಳುವ ಜಮೀನನ್ನು ಸರ್ಕಾರದ ವಶಕ್ಕೆ ನೀಡಿ, ಸುಮಾರು 35 ವರ್ಷಗಳು ಕಳೆಯುತ್ತಿದ್ದರೂ ನೀರಾವರಿ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸೂಕ್ತ ಪರಿಹಾರದ ಹಣ ದೊರೆಯದೇ ಜಮೀನು ಕೊಟ್ಟ ಚುಂಚನಕಟ್ಟೆ ಹೋಬಳಿಯ ರೈತರು ಪರಿತಪಿಸುವಂತಾಗಿದೆ.
ಹೋಬಳಿಯ ಸಾವಿರಾರು ಎಕರೆ ಜಮೀನಿಗೆ ನೀರನ್ನು ಒದಗಿಸುತ್ತಿರುವ ಹಾರಂಗಿ ಬಲದಂಡೆ ನಾಲೆಯ ಕೃಷ್ಣರಾಜನಗರ ಉಪನಾಲೆ ನಿರ್ಮಾಣಕ್ಕೆ ನಾಲ್ಕು ದಶಕಗಳ ಹಿಂದೆ ಜಮೀನನ್ನು ನೀಡಿದ ಸೋಮನಹಳ್ಳಿ, ಬೆಣಗನಹಳ್ಳಿ, ವಡ್ಡರಕೊಪ್ಪಲು, ಕುಪ್ಪೆ, ಮುದ್ದನಹಳ್ಳಿ, ಚಿಕ್ಕಕೊಪ್ಪಲು, ದೊಡ್ಡಕೊಪ್ಪಲು, ಸಾಲೆಕೊಪ್ಪಲು, ಹೊಸೂರು ಸೇರಿದಂತೆ ಇನ್ನಿತರ ಗ್ರಾಮಗಳ ನೂರಾರು ರೈತರಿಗೆ ನೀಡಬೇಕಾದ ಕೋಟ್ಯಂತರ ರು.ಗಳ ಹಣ ಕೈಸೇರದೇ ಕೊಟ್ಟವನು ಕೋಡಂಗಿ ಈಸುಕೊಂಡವನು ಈರಭದ್ರ ಎನ್ನುವಂತಹ ಸಂದಿಗ್ದ ಸ್ಥಿತಿ ರೈತರದಾಗಿದೆ.
ಸುಮ್ಮನಿರುವ ಅಧಿಕಾರಿಗಳು: ನಾಲೆ ನಿರ್ಮಾಣಕ್ಕೆ ನಾಲ್ಕು ಗುಂಟೆಯಿಂದ ಹಿಡಿದು ಎರಡು ಎಕರೆವರೆಗೆ ಜಮೀನನ್ನು ನೀಡಿದ ರೈತರಿಗೆ ಅಂದಿನ ಮಾರುಕಟ್ಟೆ ದರದಂತೆಯೇ ಸೂಕ್ತ ಪರಿಹಾರದ ಧನವನ್ನು ನೀಡುವುದಾಗಿ ಹೇಳಿ, ಭೂಮಿಯನ್ನು ಪಡೆದ ಹಾರಂಗಿ ಇಲಾಖೆಯ ಅಧಿಕಾರಿಗಳು ಇದುವರೆಗೂ ಪರಿಹಾರದ ಹಣ ಕೊಡಿಸಲು ಸೂಕ್ತ ಕ್ರಮಕೈಗೊಂಡಿಲ್ಲ. ಇದರಿಂದ ಭೂಮಿ ಕಳೆದುಕೊಂಡ ರೈತರು ಪರಿಹಾರದ ಹಣಕ್ಕಾಗಿ ಅಧಿಕಾರಿಗಳ ಕಚೇರಿಯನ್ನು ಅಲೆದು ಚಪ್ಪಲಿಯನ್ನು ಸವೆಸಿದರೇ ವಿನಃ ಇಲಾಖೆಯಿಂದ ಪರಿಹಾರದ ಹಣ ಪಡೆಯಲಾಗದೇ ಅತಂತ್ರರಾಗಿದ್ದಾರೆ. ಕೇಂದ್ರ ಸರ್ಕಾರ ಇತ್ತೀಚೆಗೆ ಸರ್ಕಾರದ ಉದ್ದೇಶಿತ ಕಾರ್ಯಕ್ರಮಗಳಿಗೆ ಜಮೀನು ನೀಡುವ ರೈತರಿಗೆ ಮಾರುಕಟ್ಟೆ ದರಕ್ಕಿಂತ ನಾಲ್ಕು ಪಟ್ಟು ಅಧಿಕ ಹಣ ನೀಡುವಂತೆ ಅದೇಶ ಮಾಡಿದೆ. ಆದರೆ ನಾಲ್ಕು ದಶಕಗಳಿಂದ ಪರಿಹಾರದ ಹಣಕ್ಕಾಗಿ ಜಾತಕ ಪಕ್ಷಿಗಳಂತೆ ಕಾಯುತ್ತಿರುವ ರೈತರಿಗೆ ನಾಲ್ಕು ಪಟ್ಟು ಹೆಚ್ಚಿನ ಹಣಕ್ಕಿಂತ ಹಳೆಯ ಮಾರುಕಟ್ಟೆ ಮೌಲ್ಯ ದೊರೆತರೆ ಸಾಕು ಎನ್ನುವಂತಹ ಪರಿಸ್ಥಿತಿಗೆ ಬಂದಿದ್ದು, ಇದುವರೆಗೂ ಕೆ.ಆರ್. ನಗರ ತಾಲೂಕನ್ನು ಪ್ರತಿನಿಧಿಸಿದ ಶಾಸಕರು ಮತ್ತು ಸಂಸದರು ಇದರ ಬಗ್ಗೆ ಚಕಾರವೆತ್ತದೆ ಕಾಲಕಳೆದಿದ್ದು, ಪರಿಹಾರದ ಹಣ ಸಿಗದಂತಾಗಲು ಪ್ರಮುಖ ಕಾರಣವಾಗಿದೆ.
ತಲುಪದ ವರದಿ: ಈ ಕುರಿತು ಕೆ.ಆರ್. ನಗರ ತಹಸೀಲ್ದಾರ್ ಅವರು ನಾಲೆಗಾಗಿ ಜಮೀನು ಕಳೆದುಕೊಂಡಿರುವ ಬಗ್ಗೆ ಸರ್ವೆ ಮಾಡಿಸಿ, ರೈತರಿಗೆ ಪರಿಹಾರ ನೀಡುವ ಕುರಿತು ತಮ್ಮಿಂದಾಗಬೇಕಾದ ಸಮಗ್ರ ವರದಿಯ ಕಡತಗಳನ್ನು ಮೈಸೂರಿನ ವಿಶೇಷ ಭೂಸ್ವಾಧೀನಾಧಿಕಾರಿಗಳಿಗೆ ರವಾನೆ ಮಾಡಿದ್ದು, ಆದರೆ ಇದನ್ನು ಪರಿಶೀಲಿಸಿ ಸರ್ಕಾರಕ್ಕೆ ವರದಿ ನೀಡಬೇಕಾದ ಭೂ ಸ್ವಾಧೀನಾಧಿಕಾರಿಗಳು ಇದರ ಬಗ್ಗೆ ಕಾಳಜಿ ವಹಿಸದೆ ಕಡತದಲ್ಲಿಯೇ ಕೊಳೆಯುತ್ತಿದ್ದು ಈ ವರದಿ ಸರ್ಕಾರಕ್ಕೆ ತಲುಪಿದರೆ ರೈತರ ಹಣ ಲಭ್ಯವಾಗಲಿದೆ ಎನ್ನುತ್ತಾರೆ ಈ ಕುರಿತು ಹೋರಾಟ ಮಾಡಿಕೊಂಡು ಬಂದಿರುವ ಕುಪ್ಪೆ ಗ್ರಾಪಂ ಮಾಜಿ ಅಧ್ಯಕ್ಷ ಮುದ್ದನಹಳ್ಳಿ ತಿಮ್ಮೇಗೌಡ.
ಒಟ್ಟಿನಲ್ಲಿ 1978 ರಲ್ಲಿ ನಾಲೆ ಬಂದರೆ ತಮ್ಮ ಬದುಕು ಹಸನಾಗುತ್ತದೆ ಎಂಬ ರೈತರ ಕನಸು ಪರಿಹಾರದ ಹಣ ಸಿಗದೆ ಇಲ್ಲಿಯ ತನಕ ನನಸಾಗದಂತಾಗಿದ್ದು, ಈ ಕುರಿತು ಶಾಸಕ ಸಾ.ರಾ. ಮಹೇಶ್ ಅವರು ವಿಧಾನಸಭೆಯಲ್ಲಿ ದೊಡ್ಡಮಟ್ಟದಲ್ಲಿಯೇ ಹೋರಾಟ ಮಾಡಿ ಜಮೀನುಕೊಟ್ಟ ನೂರಾರು ರೈತರಿಗೆ ಸರ್ಕಾರದಿಂದ ಪರಿಹಾರದ ಹಣ ಕೊಡಿಸುವ ಮೂಲಕ ತಮ್ಮ ನೆರವಿಗೆ ಬರುವಂತೆ ರೈತರು ಮನವಿ ಮಾಡುತ್ತಿದ್ದು, ಇದಕ್ಕೆ ಶಾಸಕರು ಯಾವ ರೀತಿ ಸ್ಪಂದಿಸುತ್ತಾರೆಂಬುದನ್ನು ರೈತರು ಕಾದು ನೋಡುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

