ಮೈಸೂರು

ಸಾಲದ ಹೊರೆಗೆ ರೈತ ಆತ್ಮಹತ್ಯೆ

Published On :

ಕ.ಪ್ರ.ವಾರ್ತೆ    ಕೆ.ಆರ್. ನಗರ    ಮೇ 12
ಸಾಲಬಾಧೆ ತಾಳಲಾರದೆ ರೈತನೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಗೌಡೇನಹಳ್ಳಿ ಗ್ರಾಮದಲ್ಲಿ ಸೋಮವಾರ ಜರುಗಿದೆ.
ಗ್ರಾಮದ ನಿವಾಸಿ ತಮ್ಮಣ್ಣೇಗೌಡ (66) ಆತ್ಮಹತ್ಯೆ ಮಾಡಿಕೊಂಡಿರುವ ದುರ್ದೈವಿಯಾಗಿದ್ದು, ಮೃತರಿಗೆ ಓರ್ವ ಪುತ್ರ, ಇಬ್ಬರು ಪುತ್ರಿಯರು ಇದ್ದಾರೆ. ಮೃತ ತಮ್ಮಣ್ಣೇಗೌಡ ಎರಡು ಲಕ್ಷಕ್ಕೂ ಅಧಿಕ ಕೈ ಸಾಲ ಮತ್ತು ಸಿದ್ದಾಪುರ ಕೃಷಿಪತ್ತಿನ ಸಹಕಾರ ಸಂಘದಲ್ಲಿ 50 ಸಾವಿರ ಸಾಲ ಪಡೆದಿದ್ದು, ಸಾಲ ಮರುಪಾವತಿಸುವಂತೆ ಸಂಘದಿಂದ ಇತ್ತೀಚೆಗೆ ನೋಟಿಸ್ ಜಾರಿಯಾಗಿತ್ತು.
ಜತೆಗೆ ಇತ್ತೀಚೆಗೆ ನಾಟಿ ಮಾಡಿದ್ದ ತಂಬಾಕು ಬೆಳೆ ಭಾರಿ ಮಳೆಯಿಂದ ಹಾನಿಗೆ ಒಳಗಾಗಿದ್ದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ತಹಸೀಲ್ದಾರ್ ಶಿವಶಂಕರಪ್ಪ, ಉಪ ತಹಸೀಲ್ದಾರ್ ಯಧುಗಿರೀಶ್ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿ, ಸರ್ಕಾರಕ್ಕೆ ವರದಿ ಸಲ್ಲಿಸುವುದಾಗಿ ತಿಳಿಸಿದರು.
ಮಳಲಿ ಆಸ್ಪತ್ರೆಯ ವೈದ್ಯಾಧಿಕಾರಿ ಮಹೇಂದ್ರಪ್ಪ, ಮೃತನ ಮರಣೋತ್ತರ ಪರೀಕ್ಷೆ ನಡೆಸಿದರು. ಈ ಸಂಬಂಧ ಕೆ.ಆರ್. ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.


ಸರ್ಕಾರಿ ಕಚೇರಿಗಳಲ್ಲಿ ಕಡತ ಯಜ್ಞ

ಹುಣಸೂರು: ಹುಣಸೂರು ಸೇರಿದಂತೆ ಕೆ.ಆರ್. ನಗರ, ಎಚ್.ಡಿ. ಕೋಟೆ, ಪಿರಿಯಾಪಟ್ಟಣ ತಾಲೂಕು ಕಚೇರಿಗಳಲ್ಲಿ ಎರಡು ದಿನ ಕಾಲ ನಡೆಯುತ್ತಿರುವ ಕಡತ ಯಜ್ಞವನ್ನು ಉಪವಿಭಾಗಾಧಿಕಾರಿ ಜಗದೀಶ್ ಭೇಟಿ ನೀಡಿ ಪರಿಶೀಲಿಸಿದರು.
ಪಟ್ಟಣದ ತಾಲೂಕು ಕಚೇರಿಯಲ್ಲಿ ಶನಿವಾರ ನಡೆದ ಕಡತ ಯಜ್ಞದಲ್ಲಿ ದರಖಾಸ್ತು ಭೂಮಿಗೆ ಸಂಬಂಧಿಸಿದಂತೆ ಪ್ರಥಮವಾಗಿ ಹೋಬಳಿವಾರು ಕಡತಗಳನ್ನು ವಿಂಗಡಿಸುವ ಮೂಲಕ ಚಾಲನೆ ನೀಡಲಾಯಿತು. ಕಚೇರಿಯಲ್ಲಿ ನಡೆದ ಕಡತ ಯಜ್ಞದಲ್ಲಿ ಹಲವಾರು ವರ್ಷಗಳಿಂದ ಸಂಗ್ರಹಿಸಿಡಲಾಗಿದ್ದ ದಾಖಲೆಗಳನ್ನು ಮೂರು ಮಂದಿ ಉಪತಹಸೀಲ್ದಾರ್, 4 ಆರ್ಐ, 25 ಮಂದಿ ಗ್ರಾಮಲೆಕ್ಕಾಧಿಕಾರಿಗಳು ಮತ್ತು ಸರ್ವೆ ಹಾಗೂ ಕಚೇರಿಯ 30ಕ್ಕೂ ಹೆಚ್ಚು ಸಿಬ್ಬಂದಿ ತಹಸೀಲ್ದಾರ್ ವೆಂಕಟಾಚಲಪ್ಪ ಮಾರ್ಗದರ್ಶನದಲ್ಲಿ  ತಪಾಸಣೆ ನಡೆಸಿ ದಾಖಲೆಗಳನ್ನು ಹೋಬಳಿವಾರು ವಿಂಗಡಿಸಿ ದಾಖಲಾತಿ ಕೊಠಡಿಯಲ್ಲಿ ಸಂಗ್ರಹಿಸಿಟ್ಟಿದ್ದಾರೆ.

 ಎಸ್ಸೆಸ್ಸೆಲ್ಸಿ, ಪಿಯುಸಿ ವಿದ್ಯಾರ್ಥಿಗಳ ಸಾಧನೆ


ರಾವಂದೂರು ಪಿಯುಸಿ ವಿದ್ಯಾರ್ಥಿಗಳು
ರಾವಂದೂರು: ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿಭಾಗದಲ್ಲಿ ಕಲಾ ವಿಭಾಗದಲ್ಲಿ ಶೇ. 69.56, ವಾಣಿಜ್ಯ ವಿಭಾಗದಲ್ಲಿ ಶೇ.72.41 ಫಲಿತಾಂಶ ಪಡೆದುಕೊಂಡಿದೆ ಎಂದು ಪ್ರಾಂಶುಪಾಲ ಜಗನ್ನಾಥ್ರಾವ್ ಜೋಷಿ ಹೇಳಿದ್ದಾರೆ. ಕಾಲೇಜಿನಲ್ಲಿ ಒಟ್ಟು 95 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಇದರಲ್ಲಿ 40 ಪ್ರಥಮ ದರ್ಜೆ, 20 ದ್ವಿತೀಯ ದರ್ಜೆ, 20 ತೃತೀಯ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.