ಮೈಸೂರು

ಟಿಕೆಟ್ ರಹಿತ ಪ್ರಯಾಣ: 98 ಪ್ರಕರಣ

Published On :

ಕ.ಪ್ರ.ವಾರ್ತೆ    ಮೈಸೂರು    ಮೇ 13
ನೈಋತ್ಯ ರೇಲ್ವೆ ಮೈಸೂರು ವಿಭಾಗದ ಅಧಿಕಾರಿಗಳು ಮತ್ತು ಸಿಬ್ಬಂದಿ ಮಂಗಳವಾರ ಮೈಸೂರು ರೈಲು ನಿಲ್ದಾಣದಲ್ಲಿ ಟಿಕೆಟ್ ರಹಿತ ಪ್ರಯಾಣಿಕರ ತಪಾಸಣೆ ಹಮ್ಮಿಕೊಂಡಿದ್ದರು.
ನೈಋತ್ಯ ರೇಲ್ವೆ ವಿಭಾಗೀಯ ವ್ಯವಸ್ಥಾಪಕ ರಾಜಕುಮಾರ್ ಲಾಲ್ ನೇತೃತ್ವದಲ್ಲಿ ನಡೆದ ತಪಾಸಣೆಯಲ್ಲಿ 25 ಸಿಬ್ಬಂದಿ, ಮಹಿಳೆ ಸಿಬ್ಬಂದಿ ಸೇರಿದಂತೆ 5 ಮಂದಿ ಆರ್ಪಿಐ ಪೊಲೀಸರು ಪಾಲ್ಗೊಂಡಿದ್ದರು. ರೈಲು ನಿಲ್ದಾಣದ ಒಳ ಮತ್ತು ಹೊರ ಪ್ರವೇಶ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಸಿಬ್ಬಂದಿ ನಿಯೋಜಿಸಲಾಗಿತ್ತು.
ಬೆಳಗ್ಗೆ 10.30 ರಿಂದ ಮಧ್ಯಾಹ್ನ 3 ರವರೆಗೆ ನಡೆದ ತಪಾಸಣೆಯಲ್ಲಿ 98 ಪ್ರಕರಣಗಳನ್ನು ದಾಖಲಿಸಲಾಗಿದೆ. ಇದರಲ್ಲಿ ಟಿಕೆಟ್ ರಹಿತ ಪ್ರಯಾಣ ಮತ್ತು ಇತರೆ ನಿಯಮಗಳ ಉಲ್ಲಂಘನೆಯೂ ಸೇರಿದೆ. ಒಟ್ಟು 26,275 ದಂಡ ವಸೂಲಿ ಮಾಡಲಾಗಿದ್ದು, ದಂಡ ಪಾವತಿಸಲು ಆಗದ 7 ಜನರ ವಿರುದ್ಧ ಕಾನೂನು ಕ್ರಮ ಜರುಗಿಸಲು ಆರ್ಪಿಎಫ್ ಸಿಬ್ಬಂದಿಗೆ ಒಪ್ಪಿಸಲಾಯಿತು.
4.12 ಕೋಟಿ ದಂಡ ವಸೂಲಿ: ಈ ವೇಳೆ ನೈಋತ್ಯ ರೇಲ್ವೆ ವಿಭಾಗೀಯ ವ್ಯವಸ್ಥಾಪಕ ರಾಜಕುಮಾರ್ ಲಾಲ್ ಸುದ್ದಿಗಾರರೊಂದಿಗೆ ಮಾತನಾಡಿ, 2013-14ನೇ ಸಾಲಿನಲ್ಲಿ ಮೈಸೂರು ವಿಭಾಗದಲ್ಲಿ ಟಿಕೆಟ್ ರಹಿತ ಪ್ರಯಾಣ ಮತ್ತು ಇತರೆ ನಿಯಮ ಉಲ್ಲಂಘನೆ ಸಂಬಂಧ ಒಟ್ಟು 1,65,913 ಪ್ರಕರಣಗಳನ್ನು ದಾಖಲಿಸಿ, 4,12,76,791 ದಂಡ ವಸೂಲಿ ಮಾಡಲಾಗಿದೆ. ಕಳೆದ ವರ್ಷಕ್ಕಿಂತ ಈ ಬಾರಿ ದಂಡದ ಮೊತ್ತವು ಶೇ.20.17 ಹೆಚ್ಚಳವಾಗಿದೆ. ಕಳೆದ ಏಪ್ರಿಲ್ನಲ್ಲಿ 15,317 ಪ್ರಕರಣಗಳನ್ನು ದಾಖಲಿಸಿ, 43,48,448 ದಂಡ ವಸೂಲಿ ಮಾಡಲಾಗಿದೆ ಎಂದು ತಿಳಿಸಿದರು.
ಪ್ರಯಾಣಿಕರು ಸೂಕ್ತ ದಾಖಲೆ ಮತ್ತು ಟಿಕೆಟ್ ಜೊತೆಗೆ ಪ್ರಯಾಣಿಸಿದರೇ ದಂಡ ಮತ್ತು ಶಿಕ್ಷೆಗೆ ಗುರಿಯಾಗುವುದರಿಂದ ತಪ್ಪಬಹುದು. ಟಿಕೆಟ್ ಇಲ್ಲದೆ ಪ್ರಯಾಣಿಸುವುದು ಸಾಮಾಜಿಕ ಕೆಡಕು. ರೈಲು ನಿಲ್ದಾಣ ಆವರಣದಲ್ಲಿ ಧೂಮಪಾನ ಮಾಡುವುದು, ಮಲಮೂತ್ರ ವಿಸರ್ಜನೆ ಮಾಡುವುದು ಸೇರಿದಂತೆ ಇತರೆ ನಿಯಮ ಉಲ್ಲಂಘಿಸುವವರಿಗೆ ಕಾನೂನು ಪ್ರಕಾರ ಹೆಚ್ಚಿನ ದಂಡ ವಿಧಿಸಲಾಗುವುದು ಎಂದು ಎಚ್ಚರಿಸಿದರು. ಟಿಕೆಟ್ ಕೌಂಟರ್ಗಳಲ್ಲಿ ಟಿಕೆಟ್ ಖರೀದಿಸಲು ಸಾಧ್ಯವಾಗದಿದ್ದರೆ ಪ್ರಯಾಣಿಕರು ಭಯ ಪಡಬೇಕಿಲ್ಲ. ರೈಲು ನಿಲ್ದಾಣಗಳಲ್ಲಿ ಟಿಕೆಟ್ ವಿತರಣೆ ವ್ಯವಸ್ಥೆ ಮತ್ತಷ್ಟು ಸುಲಭ ಮಾಡಲಾಗುತ್ತಿದೆ ಎಂದ ಅವರು, ಮೈಸೂರು ವಿಭಾಗದ ಎಲ್ಲ ರೈಲು ನಿಲ್ದಾಣಗಳಲ್ಲಿ ಟಿಕೆಟ್ ರಹಿತ ಪ್ರಯಾಣಿಕರ ತಪಾಸಣೆ ಮುಂದುವರಿಸಲಾಗುವುದು. ಅಲ್ಲದೆ, ಟಿಕೆಟ್ ರಹಿತ ಪ್ರಯಾಣದಿಂದ ಆಗುವ ತೊಂದರೆಗಳ ಬಗ್ಗೆ ಕರಪತ್ರ, ಜಾಹೀರಾತು, ಪೋಸ್ಟರ್ಗಳ ಮೂಲಕ ಪ್ರಯಾಣಿಕರಿಗೆ ಅರಿವು ಮೂಡಿಸಲಾಗುವುದು ಎಂದರು.
ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಅನಿಲ್ಕುಮಾರ್, ವಾಣಿಜ್ಯ ವ್ಯವಸ್ಥಾಪಕ ಡಿ.ಪಿ. ಹಾಲಪ್ಪ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.