ಮನೆ ಮಗನಾಗಿ ಕೆಲಸ ಮಾಡುವೆ
ಮೈಸೂರು: ನಾನು ಸಂಸದನಾಗಿ ಕೆಲಸ ಮಾಡುವುದಿಲ್ಲ. ನಿಮ್ಮ ಮನೆಯ ಮಗನಾಗಿ ಕೆಲಸ ಮಾಡುತ್ತೇನೆ ಎಂದು ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ನೂತನ ಸಂಸದ ಪ್ರತಾಪ್ ಸಿಂಹ ತಿಳಿಸಿದರು.
ನಗರದ ಎಸ್ಜೆಸಿಇ ಮತ ಎಣಿಕೆ ಕೇಂದ್ರದ ಬಳಿ ಶುಕ್ರವಾರ ತಮ್ಮ ಗೆಲವು ಖಚಿತವಾಗುತ್ತಿದ್ದಂತೆಯೇ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣಾ ಪ್ರಚಾರಕ್ಕೆ ಬಂದಾಗಲೂ ಇದೇ ಮಾತು ಹೇಳಿದ್ದೆ. ಈಗಲೂ ಅದೇ ಮಾತು ಹೇಳುತ್ತೇನೆ. ನಾನು ಸಂಸದನಾಗಿ ಕೆಲಸ ಮಾಡುವುದಿಲ್ಲ. ನಿಮ್ಮ ಮನೆಯ ಮಗನಾಗಿ ಕೆಲಸ ಮಾಡುತ್ತೇನೆ. ತಾಯಿ ಚಾಮುಂಡೇಶ್ವರಿ ಮತ್ತು ಕಾವೇರಿ ಮಾತೆಯ ಆಶೀರ್ವಾದದಿಂದ ಜಯಗಳಿಸಿದ್ದೇನೆ. ಕಾಣದ ಕೈಗಳು, ಪಕ್ಷದ ಪ್ರಮುಖರು, ಕಾರ್ಯಕರ್ತರು, ಆರ್ಎಸ್ಎಸ್ ಪ್ರಮುಖರು, ನಮೋ ಬ್ರಿಗೇಡ್ ಕಾರ್ಯಕರ್ತರ ಪರಿಶ್ರಮದಿಂದ, ಮೈಸೂರು ಮತ್ತು ಕೊಡಗು ಕ್ಷೇತ್ರದ ಜನತೆಯ ಆಶೀರ್ವಾದದಿಂದ ಜಯಗಳಿಸಿದ್ದೇನೆ ಎಂದರು.
ನನ್ನ ಗುರುಗಳಾದ ವಿಶ್ವೇಶ್ವರ ಭಟ್ ಅವರಿಗೂ ನನ್ನ ಹೃದಯ ತುಂಬಿದ ಧನ್ಯವಾದಗಳು ಎಂದರು.
ತಾಯಿ ಚಾಮುಂಡೇಶ್ವರಿ ತನ್ನ ಸಿಂಹವನ್ನು ಹರಸಿದಂತೆ ನನ್ನನ್ನೂ ಹರಸಿದ್ದಾಳೆ. ಮುಂದಿನ ಐದು ವರ್ಷದಲ್ಲಿ ಮತದಾರರ ಋಣ ತೀರಿಸುತ್ತೇನೆ. ಕ್ಷೇತ್ರದ ಅಭಿವೃದ್ಧಿಗೆ ಶಕ್ತಿ ಮೀರಿ ಶ್ರಮಿಸುತ್ತೇನೆ. ನನ್ನ ಗೆಲವಿನಲ್ಲಿ ಎಲ್ಲರ ಪರಿಶ್ರಮ ಇದೆ. ನನ್ನ ಗೆಲವಿಗೆ ಶ್ರಮಿಸಿದವರ ಪರ ಮುಂದಿನ ಚುನಾವಣೆಗಳಲ್ಲಿ ನಾನು ಕೆಲಸ ಮಾಡುತ್ತೇನೆ. ನಮ್ಮ ಸಂಕಲ್ಪ, ಯಜ್ಞ ನೆರವೇರಿದೆ. ಮೋದಿ ಪ್ರಧಾನಿ ಆಗಬೇಕು ಎಂಬುದೆ ನಮ್ಮ ಗುರಿ. ಅದು ಈಡೇರಿದೆ. ನನ್ನ ಗೆಲವಿಗಿಂತ ಮೋದಿ ಗೆಲವು ಹೆಚ್ಚು ಸಂತೋಷ ಕೊಟ್ಟಿದೆ ಎಂದು ಹೇಳಿದರು. ಈಗ ಚುನಾವಣೆ ಪ್ರಕ್ರಿಯೆ ಮುಗಿದಿದೆ. ಇಲ್ಲಿ ಯಾರೂ ಎದುರಾಳಿ, ಶತ್ರು, ವೈರಿಗಳಿಲ್ಲ. ಮೈಸೂರು ರಾಜರಿಂದ ಪ್ರಗತಿ ಸಾಧಿಸಿದಂತೆ, ಮುಂದಿನ ದಿನಗಳಲ್ಲಿ ಸಕಾರಾತ್ಮಕ ಕಾರಣಕ್ಕೆ ಮೈಸೂರು ಸುದ್ದಿ ಆಗಬೇಕು ಎಂಬುದು ನನ್ನ ಬಯಕೆ. ಫಲಿತಾಂಶಕ್ಕೆ, ಜನಾದೇಶಕ್ಕೆ ಎಲ್ಲರೂ ತಲೆ ಬಾಗಬೇಕು.
ಕ್ಷೇತ್ರದ ಅಭಿವೃದ್ಧಿಯಲ್ಲಿ ಮಾಧ್ಯಮಗಳೂ ಕೈ ಜೋಡಿಸಬೇಕು. ನಾನು ಮೋದಿ ಅವರ ಸರ್ಕಾರದಲ್ಲಿ ಏನೂ ನಿರೀಕ್ಷಿಸುವುದಿಲ್ಲ. ಬದಲಿಗೆ ನಾನು ತೆಗೆದುಕೊಂಡು ಹೋದ ಯೋಜನೆಗಳಿಗೆ ಅನುಮೋದನೆ ನೀಡಿದರೆ ಸಾಕು ಎಂದರು.
ಏನು ಆದ್ಯತೆ?: ಕ್ಷೇತ್ರದಲ್ಲಿ ಸಣ್ಣ ಕೈಗಾರಿಕೆಗಳ ಪುನಶ್ಚೇತನ ಆಗಬೇಕಿದೆ. ಮೈಸೂರು- ಬೆಂಗಳೂರು ಜೋಡಿ ರೈಲು ಮಾರ್ಗ ಪೂರ್ಣಗೊಳ್ಳುವ ಜೊತೆಗೆ ಕುಶಾಲನಗರದವರೆಗೂ ಮಾರ್ಗ ವಿಸ್ತರಿಸಬೇಕು. ಚಾಮುಂಡೇಶ್ವರಿ, ಹುಣಸೂರು ಮತ್ತು ಪಿರಿಯಾಪಟ್ಟಣ ಭಾಗದಲ್ಲಿ ಕುಡಿಯುವ ನೀರು ಪೂರೈಕೆಗೆ ಮೊದಲ ಆದ್ಯತೆ ನೀಡುವುದಾಗಿ ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

