ಮೈಸೂರು

ಸೌಲಭ್ಯವಿಲ್ಲದ ಜೋಗಿ ಕಾಲೊನಿ

Published On :

ಭೇರ್ಯ ಮಹೇಶ್
ಭೇರ್ಯ: ಸಾಲಿಗ್ರಾಮ ಹೋಬಳಿ ಜೋಗಿ ಕಾಲೋನಿ ನಿವಾಸಿಗಳು ಕನಿಷ್ಠ ಮೂಲಸೌಲಭ್ಯಗಳಿಂದ ವಂಚಿತರಾಗಿದ್ದು, ನಿತ್ಯ ಕಿರಿಕಿರಿ ಅನುಭವಿಸುವಂತಾಗಿದೆ.
ಚರಂಡಿ ಅವ್ಯವಸ್ಥೆ, ಕೊಳಚೆ ದುರ್ನಾತ ಹಾಗೂ ಕಿರಿದಾದ ರಸ್ತೆಗಳು, ಇಲ್ಲಿನ ನಿವಾಸಿಗಳ ನೆಮ್ಮದಿಗೆ ಭಂಗತಂದಿದ್ದು, ಅವ್ಯವಸ್ಥೆ ನಡುವೆ ಜೀವನ ಸಾಗಿಸುವಂತಾಗಿದೆ. ಕರ್ಪೂರವಳ್ಳಿ ಗ್ರಾಪಂ ವ್ಯಾಪ್ತಿಯ ಈ ಕಾಲೋನಿಯಲ್ಲಿ ಸುಮಾರು 40 ಕುಟುಂಬಗಳು ವಾಸವಿದ್ದು, 200ಕ್ಕೂ ಹೆಚ್ಚು ಜನಸಂಖ್ಯೆ ಇದೆ. ಸಂಬಂಧಪಟ್ಟವರ ನಿರ್ಲಕ್ಷ್ಯದಿಂದಾಗಿ ಇಲ್ಲಿನ ಜನತೆ ಸಮಸ್ಯೆಗೆ ಸಿಲುಕಿದ್ದಾರೆ.
ಹಕ್ಕುಪತ್ರ ಕೊಟ್ಟಿಲ್ಲ: ಹಂದಿ ಸಾಕಣೆ ಇಲ್ಲಿನ ಜನರ ಪ್ರಮುಖ ಕಸುಬು ಆಗಿದ್ದು, ಹಂದಿ ಇಲ್ಲದಿದ್ದವರು ಕೂಲಿ ಮಾಡಿ ಜೀವನ ಸಾಗಿಸಬೇಕು. ಸರ್ಕಾರಿ ಜಾಗದಲ್ಲಿ ಗುಡಿಸಲು ನಿರ್ಮಿಸಿಕೊಂಡು ವಾಸವಿದ್ದ ಜೋಗಿಗಳಿಗೆ 35 ವರ್ಷಗಳ ಹಿಂದೆ ಸರ್ಕಾರವೇನೋ ಮನೆ ನಿರ್ಮಿಸಿಕೊಟ್ಟಿತು. ಆದರೆ ಇದುವರೆಗೂ ನಿವಾಸಿಗಳಿಗೆ ಹಕ್ಕುಪತ್ರ ನೀಡಿಲ್ಲ. ಇದರಿಂದ ಅತಂತ್ರ ಸ್ಥಿತಿ ಎದುರಾಗಿದೆ.
ಚರಂಡಿ ಅವ್ಯವಸ್ಥೆ ಇಲ್ಲಿನ ದೊಡ್ಡ ಸಮಸ್ಯೆಯಾಗಿದ್ದು, ಇಡೀ ಕಾಲೋನಿ ಗಬ್ಬು ನಾರುತ್ತಿದೆ. ಕೆಲವೆಡೆ ಚರಂಡಿಯೇ ಇಲ್ಲ. ಇರುವ ಚರಂಡಿ ಕೆಸರು, ಕಸಕಡ್ಡಿಯಿಂದ ಮುಚ್ಚಿದೆ. ಕೊಳಚೆ ನೀರು ಅಲ್ಲಲ್ಲಿ ಒಂದೆಡೆ ಸಂಗ್ರಹಗೊಂಡು ದುರ್ವಾಸನೆ ಬೀರುತ್ತಿದ್ದು, ರಸ್ತೆ ಮೇಲೂ ಹರಿಯುತ್ತಿದೆ. ಇದರಿಂದಾಗಿ ನಿವಾಸಿಗಳು ಪದೇಪದೇ ಸಾಂಕ್ರಾಮಿಕ ರೋಗದಿಂದ ಬಳಲುವಂತಾಗಿದೆ. ಮಳೆಗಾಲದಲ್ಲಂತೂ ಸಂಪೂರ್ಣ ರಾಡಿಯಾಗುವ ರಸ್ತೆಗೆ ಕೊಳಚೆ ಸೇರ್ಪಡೆಯಾಗಿ ಇಲ್ಲಿನ ನೈರ್ಮಲ್ಯ ಸಂಪೂರ್ಣ ಹದಗೆಡಲಿದೆ. ಅಲ್ಲದೆ, ತಗ್ಗುಪ್ರದೇಶದಲ್ಲಿ ಮನೆಗಳಿರುವುದರಿಂದ ಮಳೆ ನೀರು ನುಗ್ಗಿ ನಿವಾಸಿಗಳು ತೀವ್ರ ತೊಂದರೆಗೀಡಾಗುತ್ತಾರೆ.
ಈ ಕಾಲೋನಿಯ ಬಹುತೇಕ ಮನೆಗಳು ಶಿಥಿಲಗೊಂಡಿವೆ. ಕಿರಿದಾದ ಮನೆಗಳಲ್ಲಿ ಎರಡು-ಮೂರು ಕುಟುಂಬಗಳು ವಾಸವಿದ್ದರೆ, ಐದಾರು ಕುಟುಂಬಗಳು ಮನೆ ಇಲ್ಲದ ಕಾರಣ ಗುಡಿಸಲಿನಲ್ಲಿ ವಾಸವಿದ್ದಾರೆ. ಇಲ್ಲಿನ ನಿವಾಸಿ ಮಂಜುಳಾ ಎಂಬವರು ವರ್ಷದ ಹಿಂದೆ ಅಪಘಾತದಲ್ಲಿ ಕಾಲು ಕಳೆದುಕೊಂಡಿದ್ದು, ಮನೆ ಇಲ್ಲದೆ ಪುಟ್ಟದೊಂದು ಗುಡಿಸಲಲ್ಲಿ ಗಂಡ, ಮಕ್ಕಳೊಂದಿಗೆ ಕಷ್ಟದ ಜೀವನ ಸಾಗಿಸುತ್ತಿದ್ದಾರೆ. ಹಲವು ಬಾರಿ ಮನೆಗಾಗಿ ಅರ್ಜಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಕಣ್ಣೀರಿಡುತ್ತಾರೆ ಈಕೆ.
ಕೆಲವರು ರಸ್ತೆಗೆ ಸ್ನಾನದ ಮನೆ ನಿರ್ಮಿಸಿಕೊಂಡಿರುವುದರಿಂದ ನಿವಾಸಿಗಳು ತಿರುಗಾಡಲು ತೊಂದರೆಯಾಗಿದೆ. ಮೂರ್ನಾಲ್ಕು ದಿನಗಳಿಗೊಮ್ಮೆ ಸರಬರಾಜು ಮಾಡುವುದರಿಂದ ಕುಡಿಯುವ ನೀರಿಗೆ ಅಭಾವ ತಲೆದೋರಿದೆ. ಹತ್ತು-ಹಲವು ಸಮಸ್ಯೆಗಳು ತಾಂಡವವಾಡುತ್ತಿದ್ದರೂ ಜನಪ್ರತಿನಿಧಿಗಳು ಈ ಕುರಿತು ಕ್ರಮ ಕೈಗೊಂಡಿಲ್ಲ ಎಂದು ದೂರುತ್ತಾರೆ ಇಲ್ಲಿನ ಜನತೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.