ಮೈಸೂರು

ನಮ್ಮೂರಲ್ಲಿ ನಮೋ ನಮಃ

Published On :

ಕ.ಪ್ರ.ವಾರ್ತೆ ್ಣ ಮೈಸೂರು ್ಣ ಮೇ 26
ಪ್ರಧಾನ ಮಂತ್ರಿಯಾಗಿ ನರೇಂದ್ರ ಮೋದಿ ಅವರು ಪ್ರಮಾಣ ವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ನಗರ ಬಿಜೆಪಿ ಕೆ.ಆರ್. ಕ್ಷೇತ್ರ ವತಿಯಿಂದ ಸೋಮವಾರ ರಕ್ತದಾನ ಶಿಬಿರ, ಎಚ್‌ಐವಿ ಪೀಡಿತ ಮಕ್ಕಳ ದತ್ತು ಸ್ವೀಕಾರ, ಜನಸಂಘದ ಪ್ರಮುಖರಿಗೆ ಸನ್ಮಾನ ಸಮಾರಂಭ ಆಯೋಜಿಸಲಾಗಿತ್ತು.
ವಿದ್ಯಾರಣ್ಯಪುರಂನ ಶ್ರೀ ರಾಮಲಿಂಗೇಶ್ವರ ದೇವಸ್ಥಾನ ಬಳಿಯ ಮಾಜಿ ಸಚಿವ ಎಸ್.ಎ. ರಾಮದಾಸ್ ಅವರ ನಿವಾಸದ ಎದುರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜನಸಂಘದಲ್ಲಿ ಸೇವೆ ಸಲ್ಲಿಸಿದ ಹನ್ನೊಂದು ಮಂದಿಯನ್ನು ಸನ್ಮಾನಿಸಲಾಯಿತು. ಪಾಸಿಟಿವ್ ಇಂಡಿಯಾ ಕಾರ್ಯಕ್ರಮದಡಿ ಎಚ್‌ಐವಿ ಪೀಡಿತ ಮತ್ತು ಪೋಷಕರಿಲ್ಲದ 67 ಮಂದಿ ಮಕ್ಕಳನ್ನು ದತ್ತು ಪಡೆದು ಅವರ ಊಟ, ವಸತಿ, ವಿದ್ಯಾಭ್ಯಾಸದ ಜವಾಬ್ದಾರಿಯನ್ನು ವಹಿಸಿಕೊಳ್ಳಲಾಯಿತು.
ಮಹಿಳೆಯರ ರಕ್ಷಣೆ, ಸಬಲೀಕರಣ ಮತ್ತು ಸಾರ್ಕ್ ರಾಷ್ಟ್ರಗಳ ಬಾಂಧ್ಯವದ ದ್ಯುತಕವಾಗಿ 67 ಪಾರಿವಾಳದ ಕಾಲಿಗೆ ಭಾರತದ ಬಾವುಟ ಕಟ್ಟಿ ಅವುಗಳನ್ನು ಹಾರಿ ಬಿಡಲಾಯಿತು. ಅಂತೆಯೆ 67 ಮಂದಿ ಯುವಕರು ರಕ್ತದಾನ ಮಾಡುವ ಮೂಲಕ ದೇಶಕ್ಕಾಗಿ ಬದುಕೋಣ ಎಂಬ ಸಂದೇಶ ಸಾರಿದರು.
ಮಾನವ ಸಂಪನ್ಮೂಲ ಮತ್ತು ದೇಶದ ಸದೃಢತೆಗಾಗಿ 67 ಮಂದಿ ನಿರುದ್ಯೋಗಿ ಯುವಕ- ಯುವತಿಯರಿಗೆ ಎನ್.ಜಿ. ಸ್ಟಾಫಿಂಗ್ ವತಿಯಿಂದ ವಿವಿಧ ಕಂಪನಿಗಳಲ್ಲಿ ಉದ್ಯೋಗ ನೇಮಕಾತಿ ಪತ್ರ ನೀಡಲಾಯಿತು. ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿದ ಮೊದಲ ಹತ್ತು ಮಂದಿ ವಿದ್ಯಾರ್ಥಿಗಳನ್ನು ಗುರುತಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಸಚಿವ ಎಸ್.ಎ. ರಾಮದಾಸ್, ಭಾರತಕ್ಕೆ ಸ್ವಾತಂತ್ರ್ಯ ಬಂದು 67 ವರ್ಷ ಆಗಿದೆ. ಈಗ ನರೇಂದ್ರ ಮೋದಿ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿರುವುದು ಮತ್ತೊಮ್ಮೆ ಸ್ವಾತಂತ್ರ್ಯ ಸಿಕ್ಕಂತೆ. ಆದ್ದರಿಂದ 67 ಮಂದಿಯನ್ನು ಪರಿಗಣಿಸುತ್ತಿದ್ದೇವೆ ಎಂದರು. ಮೋದಿ ಅವರ ಕಾರ್ಯಕ್ರಮವನ್ನು ಸ್ಮರಣೀಯವಾಗಿಸುವ ಅಂಗವಾಗಿ ಈ ಎಲ್ಲಾ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಹೇಳಿದರು.
ನಗರ ಬಿಜೆಪಿ ಅಧ್ಯಕ್ಷ ಮಾರುತಿರಾವ್ ಪವಾರ್, ಪ್ರಧಾನ ಕಾರ್ಯದರ್ಶಿ ಸೋಮಸುಂದರ್ ಇದ್ದರು.
ಹಣ್ಣು ವಿತರಣೆ: ನರೇಂದ್ರ ಮೋದಿ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲಿರುವ ಹಿನ್ನೆಲೆಯಲ್ಲಿ ವಿಧಾನ ಪರಿಷತ್ ಸದಸ್ಯ ಗೋ. ಮಧುಸೂದನ್ ಅವರು ಕುಕ್ಕರಹಳ್ಳಿ ಕೆರೆಯ ಬಳಿ ವಿಜಯೋತ್ಸವ ಆಚರಿಸಿ, ಸಿಹಿ ಹಂಚಲಾಯಿತು. ಈ ವೇಳೆ ಎಂಡಿಎ ಮಾಜಿ ಅಧ್ಯಕ್ಷ ಎಲ್. ನಾಗೇಂದ್ರ, ಬಿಜೆಪಿ ಹಿಂದುಳಿದ ವರ್ಗ ಮೋರ್ಚಾ ಮುಖಂಡ ಪುರುಷೋತ್ತಮ್, ಸತ್ಯಾನಂದ ವಿಟ್ಟು ಇದ್ದರು.
ಕೆ.ಎಂ. ಪ್ರವೀಣ್‌ಕುಮಾರ್ ಚಾರಿಟೆಬಲ್ ಟ್ರಸ್ಟ್: ಪಾಕ್ ಮತ್ತು ಶ್ರೀಲಂಕಾ ದೇಶದ ಸೆರೆಯಾಗಿದ್ದ ಭಾರತೀಯ ಮೀನುಗಾರರನ್ನು ಬಿಡುಗಡೆ ಮಾಡಿರುವ ಹಿನ್ನೆಲೆಯಲ್ಲಿ ಕೆ.ಎಂ. ಪ್ರವೀಣ್‌ಕುಮಾರ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಸರ್ವ ಧರ್ಮೀಯರೂ ಸೇರಿ ಪಾರಿವಾಳ ಹಾರಿ ಬಿಡುವ ಮತ್ತು ಪರಸ್ಪರ ಸಿಹಿ ತಿನಿಸುವ ಮೂಲಕ ಸಂಭ್ರಮ ಆಚರಿಸಿದರು. ನರೇಂದ್ರ ಮೋದಿ ಅವರು ಸಾರ್ಕ್ ರಾಷ್ಟ್ರಗಳ ನಾಯಕರ ಆಹ್ವಾನವನ್ನು ನಮ್ಮ ನಾಯಕರೆ ವಿರೋಧಿಸಿದ್ದರು. ಆದರೆ ಸ್ನೇಹ- ವಿಶ್ವಾಸ- ವ್ಯಾಪಾರದ ದೃಷ್ಟಿಯಿಂದ ತಮ್ಮ ದೇಶಗಳಲ್ಲಿ ಬಂಧಿತರಾಗಿದ್ದ ಭಾರತೀಯ ಮೀನುಗಾರರನ್ನು ಬಿಡುಗಡೆಗೊಳಿಸುವ ಮೂಲಕ ಉತ್ತಮ ಸಂದೇಶ ರವಾನಿಸಿದ್ದಾರೆ. ಇದನ್ನು ಸ್ವಾಗತಿಸಿ ಟ್ರಸ್ಟ್ ವತಿಯಿಂದ ಬನುಮಯ್ಯ ವೃತ್ತದಲ್ಲಿ ಹಿಂದೂ, ಮುಸ್ಲೀಂ ಮತ್ತು ಕ್ರೈಸ್ತ ಧರ್ಮೀಯರು ಒಟ್ಟು ಸೇರಿ ಸಂಭ್ರಮಿಸಿದರು. ಈ ವೇಳೆ ಟ್ರಸ್ಟ್‌ನ ಅಧ್ಯಕ್ಷ ವಿಕ್ರಮ್, ಕಾರ್ಯದರ್ಶಿ ರಾಕೇಶ್ ಭಟ್, ನಗರಪಾಲಿಕೆ ಮಾಜಿ ಸದಸ್ಯ ಎಂ.ಡಿ. ಪಾರ್ಥಸಾರಥಿ, ಗುರುಮೂರ್ತಿ, ದೀಪಕ್, ಚಂದ್ರು, ಕೆಎಸ್‌ಆರ್‌ಟಿಸಿ ರಾಜೇಶ್, ದುರ್ಗಾಪ್ರಸಾದ್, ಬೈರರವಿ, ಚಂದ್ರು, ನಾಸಿರ್, ಮೊಹಮ್ಮದ್ ಇರ್ಫಾನ್, ಹಿಲರಿ, ರೊಡ್ರಿಗಸ್, ಪ್ರಶಾಂತ್ ಲೋಬೊ ಇದ್ದರು.
ಲಾಡು ವಿತರಣೆ: ಗಾಣಿಗರ ಸಂಘದ ಪದಾಧಿಕಾರಿಗಳು ಅಗ್ರಹಾರ ಸಮೀಪದ ನೂರೊಂದು ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ಸಾರ್ವಜನಿಕರಿಗೆ ಲಾಡು ವಿತರಿಸಿ ಸಂಭ್ರಮಿಸಿದರು. ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಎಚ್.ವಿ. ರಾಜೀವ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಹಣ್ಣು ಹಂಪಲು ವಿತರಣೆ: ನಗರ ಬಿಜೆಪಿ ವತಿಯಿಂದ ಕೆ.ಆರ್. ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಯಿತು. ವಿಧಾನ ಪರಿಷತ್ ಸದಸ್ಯ ಗೋ. ಮಧುಸೂದನ್ ಆಸ್ಪತ್ರೆಯ ಒಳ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಿದರು. ವಸ್ತು ಪ್ರದರ್ಶನ ಪ್ರಾಧಿಕಾರಿದ ಮಾಜಿ ಅಧ್ಯಕ್ಷ ಬಿ.ಪಿ. ಮಂಜುನಾಥ್, ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಎಚ್.ವಿ. ರಾಜೀವ್ ಇದ್ದರು.
ಪ್ರಾಣಿಗಳಿಗೆ ಆಹಾರ: ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ಉರಗ ತಜ್ಞ ಮತ್ತು ಪಾಲಿಕೆ ಸದಸ್ಯ ಸ್ನೇಕ್ ಶ್ಯಾಂ ಅವರು ಪೀಪಲ್ ಫಾರ್ ಅನಿಮಲ್ ಸಂಸ್ಥೆಯಲ್ಲಿ ಸೋಮವಾರ ಪ್ರಾಣಿಗಳಿಗೆ ಬ್ರೆಡ್‌ಡು, ಬಾಲು ಮತ್ತು ಬಿಸ್ಕೆಟ್ ನೀಡಿದರು. ಅನ್ನದಾನ: ಕೆ.ಆರ್. ವೃತ್ತದಲ್ಲಿ ಬಿಜೆಪಿ ಮುಖಂಡ ಪರಮೇಶ್ವರ್‌ಗೌಡ ನೇತೃತ್ವದಲ್ಲಿ 150 ಮಂದಿ ಮಹಿಳೆಯರಿಗೆ ಸೀರೆ ವಿತರಿಸಲಾಯಿತು. ಬಳಿಕ ಸಾರ್ವಜನಿಕರಿಗೆ ಲಘು ಉಪಾಹರ ನೀಡಲಾಯಿತು. ಅಲ್ಲದೆ ಗಾಂಧಿಚೌಕದ ಬಳಿ ಎಂಡಿಎ ಮಾಜಿ ಅಧ್ಯಕ್ಷ ಎಲ್. ನಾಗೇಂದ್ರ ಮತ್ತು ತಂಡದವರು ಸಿಹಿ ಹಂಚಿ ಸಂಭ್ರಮಿಸಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.