ನಕಲಿ ಎನ್ಕೌಂಟರ್ ಎಂಬ ಹುಸಿ ವಾದ
ದೇಶದ ಜನತೆಗೆ ಏಕೈಕ ಆಸರೆಯಾದ ನ್ಯಾಯಾಲಯ ಕೊನೆಗೂ ಬಾಟ್ಲಾ ಶೂಟೌಟ್ ಪ್ರಕರಣದ ಬಗ್ಗೆ ಸ್ಪಷ್ಟ ಬೆಳಕು ಚೆಲ್ಲಿದೆ. ಐದು ವರ್ಷಗಳ ನಂತರ ಡೋಂಗಿ ನಾಯಕರ ಮೊಸಳೆ ಕಣ್ಣೀರಿಗೆ ಮುಕ್ತಿ ಸಿಕ್ಕಿದೆ. ಭಯೋತ್ಪಾದಕರೊಂದಿಗೆ ಹೋರಾಡುತ್ತಲೇ ಮಡಿದ ಇನ್ಸ್ಪೆಕ್ಟರ್ ಮೋಹನ್ ಚಂದ್ರ ಬಲಿದಾನ ಸಾರ್ಥಕವಾಗಿದೆ. ಎನ್ಕೌಂಟರನ್ನು ನಕಲಿ ಎಂದು ಸಿಕ್ಕ ಸಿಕ್ಕಲ್ಲಿ ಪ್ರಲಾಪಿಸುತ್ತಿದ್ದ ನಾಯಕರೇ ನಕಲಿ ಎಂಬಂತಾಗಿದೆ. ಅಲ್ಪಸಂಖ್ಯಾತರ ಮತ ಬ್ಯಾಂಕ್ ರಾಜಕೀಯದಿಂದ ಈ ನಕಲಿ ಚದುರಂಗದಾಟದಲ್ಲಿ ಇನ್ನೂ ಅದೆಷ್ಟು ನಾಟಕೀಯ ವಿದ್ಯಮಾನಗಳಿವೆಯೋ ಗೊತ್ತಿಲ್ಲ. ಮುಂದಿನ ದಿನಗಳಲ್ಲಿ ಇಷ್ರತ್ ಜಹಾನಳಂತಹ ಭಯೋತ್ಪಾದಕಳ ಘಟನೆಯ ಬಗ್ಗೆಯೂ ಸತ್ಯಸಂಗತಿ ಬಯಲಾಗಲಿದ್ದು, ಮಾನವಹಕ್ಕುಗಳ ಹುಸಿ ವಾರಸುದಾರರ ಅಸಲಿ ಬಣ್ಣ ಬಯಲಾಗಲಿದೆ. ತಮ್ಮ ರಾಜಕೀಯ ಬದುಕಿಗೋಸ್ಕರ ದಕ್ಷ ಪೊಲೀಸರನ್ನು ಹಾಗೂ ಯೋಧರನ್ನು ಪಗಡೆಗಳಂತೆ ಉಪಯೋಗಿಸುವ ದೇಶದ್ರೋಹಿ ನಡವಳಿಕೆಯನ್ನು ರಾಜಕೀಯ ನಾಯಕರು ನಿಲ್ಲಿಸಲಿ. ಹಿಂದುವಾಗಲಿ, ಮುಸ್ಲಿಮನಾಗಲಿ ತಪ್ಪಿತಸ್ಥ ಯಾರೇ ಇದ್ದರೂ ಅದನ್ನು ಖಂಡಿಸುವ ಎದೆಗಾರಿಕೆ ತೋರಲಿ. ಸದಾ ಅಲ್ಪಸಂಖ್ಯಾತರ ಪರ ವಹಿಸುವ ದಿಗ್ವಿಜಯಸಿಂಗರಾಗಲಿ, ಸಲ್ಮಾನ್ ಖುರ್ಷಿದ್ರಾಗಲಿ ಈ ಬಗ್ಗೆ ಹೇಳಿಕೆ ನೀಡಿದರೆ ಅದು ಅವರ ಆಜನ್ಮಸಿದ್ಧ ಹಕ್ಕೆಂದು ಬಿಟ್ಟುಬಿಡಬಹುದು. ಆದರೆ ಭ್ರಷ್ಟಾಚಾರದ ವಿರುದ್ಧ ಹೋರಾಡುವುದಾಗಿ ಮುಂದೆ ಬಂದಿರುವ ಅರವಿಂದ ಕೇಜ್ರಿವಾಲ್ರಂತಹವರೂ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಇದೇ ಜಪ ಮಾಡುತ್ತಿರುವುದು ತುಂಬಾ ಬೇಸರದ ಸಂಗತಿ. ಇವರ ಇಂತಹ ಹೇಳಿಕೆಗಳು ಹಗಲಿರುಳು ದೇಶ ಸೇವೆಗೆ ಟೊಂಕ ಕಟ್ಟಿ ನಿಂತಿರುವ ಪೊಲೀಸ್ ಪಡೆ ಹಾಗೂ ನಮ್ಮ ರಕ್ಷಣಾಪಡೆಯ ಆತ್ಮಸ್ಥೈರ್ಯವನ್ನು ಕುಗ್ಗಿಸಲಿದೆಯೆಂಬುದು ಬಹಳ ಆತಂಕದ ವಿಷಯ. ಆದರೆ ಒಂದಂತೂ ಸತ್ಯ. ಈ ರಾಜಕಾರಣಿಗಳ ದೊಂಬರಾಟವನ್ನು ನೋಡುತ್ತಿರುವ ಸಾಮಾನ್ಯ ಜನತೆಗೆ ಇವರ ಪರಿಸ್ಥಿತಿ ತುಂಬಾ ಅಸಹ್ಯಕರವಾಗಿ ಕಾಣುತ್ತಿದೆ.
- ಎಸ್.ಎನ್. ವಾಸುದೇವ, ಶ್ರೀರಂಗಪಟ್ಟಣ
ದೇಶ ಮಾನ ಕಳೆದುಕೊಂಡಂತಾಗಿದೆ
ಕೆಲವು ಸಂಸದೀಯರು ಮೋದಿಗೆ ವೀಸಾ ನೀಡಬಾರದೆಂದು ಆಗ್ರಹಿಸಿ ಅಮೆರಿಕದ ಅಧ್ಯಕ್ಷರಿಗೆ ಪತ್ರ ಬರೆದಿರುವ ಸಂಗತಿ ಅವಿವೇಕದ ಹಾಗೂ ನಾಚಿಕೆಯ ವಿಚಾರ. ಭಾರತವು ಸ್ವತಂತ್ರ ರಾಷ್ಟ್ರವಾದರೂ ಸಂಸದೀಯರ ಆರೋಪಗಳು ಇದ್ದಿದ್ದೇ ಆದಲ್ಲಿ ದೇಶದ ನ್ಯಾಯಾಲಯದಲ್ಲಿ ಪರಿಶೀಲನೆ ನಡೆಸದೇ ಇದ್ದದ್ದೂ ವಿಷಾದನೀಯ. ಅಷ್ಟಕ್ಕೂ ಎಷ್ಟೋ ಸಂಸದರು ಅಪರಾಧವೆಸಗಿ ವಿದೇಶಕ್ಕೆ ಹೋಗಿ ಬರುತ್ತಿರುವುದು ದಿನನಿತ್ಯದ ವಿಚಾರ. ಈ ಸಂಸದೀಯರ ಅವಿವೇಕದಿಂದ ದೇಶದ ಮಾನ ಹರಾಜಾದಂತಾಗಿದೆ.
- ಸುಷ್ಮಾ ಕ್ರಾಸ್ತಾ, ಪುತ್ತೂರು. ದ.ಕ.
ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

