ತಪ್ಪಾಯ್ತು ತಿದ್ಕೋತೀವಿ
ರಾಮನಗರ ಜಿಲ್ಲೆಯ ಬಾಳೆಕಟ್ಟೆಯಿಂದ ಮಾಗಡಿ ಶ್ರೀನಿವಾಸ್ ಬರೆಯುತ್ತಾರೆ. 'ತಮ್ಮ ಪತ್ರಿಕೆಯ 'ತಪ್ಪಾಯ್ತು ತಿದ್ಕೋತೀವಿ' ಅಂಕಣದ ಬಗ್ಗೆ ಪ್ರಾರಂಭದಲ್ಲಿ ಮೂಗು ಮುರಿದಿದ್ದು ನಿಜ. ಆದರೆ ನಿಜಕ್ಕೂ ಇದರಿಂದ ನಮ್ಮ ತಪ್ಪುಗಳನ್ನು ತಿದ್ದಿಕೊಳ್ಳಲು ಸಹಾಯವಾಗಿದೆ ಎಂಬುದು ಅತಿಶಯೋಕ್ತಿಯಲ್ಲ. ಎಷ್ಟೋ ಬಾರಿ ನಾವು ದಿನನಿತ್ಯದಲ್ಲಿ ಬಳಸುತ್ತಿರುವ ಭಾಷಾ ಬಳಕೆಯೇ ಸರಿಯಾದ ಕ್ರಮ ಎಂಬ ಭಾವನೆ ಇರುತ್ತದೆ. ಆದರೆ ಶಿಷ್ಟರೂಪವೇ ಬೇರೆ ಎಂಬುದು ಈ ಅಂಕಣದಿಂದ ಅರ್ಥವಾಗುತ್ತಿದೆ. ಆ ಎಲ್ಲ ಮಾಹಿತಿಗಳನ್ನು ಹೆಕ್ಕಿ ತೆಗೆದು ನಮಗೆ ನೀಡುತ್ತಿರುವ ತಮಗೆ ಧನ್ಯವಾದಗಳು.'
'ನನ್ನ ಕೆಲವು ಗೊಂದಲಗಳಿವೆ. ಅವುಗಳಿಗೆ ದಯಮಾಡಿ ಭಾಷಾ ತಜ್ಞರೋ ಅಥವಾ ತಾವೋ ಉತ್ತರ ನೀಡಬೇಕು. ಆಗಸ್ಟ್ 1ರ ಪತ್ರಿಕೆ ಓದಿದಾಗ ನಾನು ಗುರುತಿಸಿದ ಕೆಲವು ಪದಗಳ ಗೊಂದಲಗಳಿವು.'
1.'ಪಾವಿತ್ರ್ಯತೆ'- ಇದನ್ನು 'ಪವಿತ್ರತೆ' ಅಥವಾ 'ಪಾವಿತ್ರ್ಯ' ಎಂದು ಓದಬೇಕೆಂಬುದು ನಾನು ಬೇರೆ ಮೂಲಗಳಿಂದ ತಿಳಿದುಕೊಂಡಿರುವುದು. ಹಾಗೆಯೇ ಐಕ್ಯತೆ- ಐಕ್ಯ ಅಥವಾ ಏಕತೆ
2. 'ಮೆರವಣಿಗೆ'- ಇದನ್ನು 'ಮೆರೆವಣಿಗೆ' ಎನ್ನಬೇಕಲ್ಲವೇ?
3. 'ವಿಶ್ವವಿದ್ಯಾನಿಲಯ'- 'ವಿಶ್ವವಿದ್ಯಾಲಯ' ಹಾಗೂ 'ವಿಶ್ವವಿದ್ಯಾನಿಲಯ'ಗಳಲ್ಲಿ ಯಾವುದು ಸರಿ?
4. 'ಬರವಣಿಗೆ'- 'ಬರೆವಣಿಗೆ' ಶಬ್ದವೇ ಸರಿ ಎಂಬುದು ನನ್ನ ಭಾವನೆ
"ಬೈಕ್ನಿಂದ ಬಿದ್ದು ಯುವಕ ಸಾವು' ಎಂಬ ವರದಿ ಪುಟ 2 ಮತ್ತು ಪುಟ 4ರಲ್ಲಿ ಪ್ರಕಟಗೊಂಡಿದೆ. ಹಾಗೆಯೇ ವರದಿಯಲ್ಲಿ ವಾಕ್ಯ-ಪದಗಳಲ್ಲಿಯೂ ಸಾಕಷ್ಟು ತಪ್ಪುಗಳಿವೆ. 4ನೇ ಪುಟದ 'ಅಮಾಯಕರ ಹಣ ಗುಳುಂ......' ವರದಿಯ ಎರಡನೇ ಪ್ಯಾರಾದಲ್ಲಿ ಕಚೇರಿ ಬದಲು 'ಕ:ಕೇರಿ'ಯಾಗಿದೆ. 'ಪ್ರಾಮಾಣಿಕತೆ, ಸೇವಾಮನೋಭಾವದಿಂದ ಕೀರ್ತಿ' ಶೀರ್ಷಿಕೆಯ(4ನೇ ಪುಟ) 3ನೇ ಪ್ಯಾರಾದ 6ನೇ ಸಾಲಿನಲ್ಲಿ 'ಅಂತಾರರಾಷ್ಟ್ರೀಯ' ಎಂದು ತಪ್ಪಾಗಿ ಮುದ್ರಣಗೊಂಡಿದೆ' ಎಂದು ಹೇಳಿದ್ದಾರೆ.
ಬೆಂಗಳೂರಿನಿಂದ ವಿ.ಹೇಮಂತಕುಮಾರ್ ಅವರು ಪತ್ರ ಬರೆದಿದ್ದಾರೆ. 'ಆ.8ರ 'ಬೈಟು ಕಾಫಿ'ಯ ಯುರೇಕಾ ಪುಟದಲ್ಲಿ 'ಕ್ಯೂರಿಯಾಸಿಟಿಗೆ ಒಂದು ವರ್ಷ' ಶೀರ್ಷಿಕೆಯ ಲೇಖನ ಪ್ರಕಟವಾಗಿದೆ. ಲೇಖನದಲ್ಲಿ '06-08-2012: ಚಂದ್ರನ ಮೇಲೆ ಕ್ಯೂರಿಯಾಸಿಟಿ ನೌಕೆ ಕಾಲಿಟ್ಟ ದಿನ. ಚಂದಿರನಲ್ಲಿ ಜೀವ ಜಗತ್ತು ಇದೆಯೇ.......' ಎಂದು ಬರೆಯಲಾಗಿದೆ. ಕ್ಯೂರಿಯಾಸಿಟಿ ನೌಕೆ ಪ್ರಯಾಣಿಸಿದ್ದು ಮಂಗಳ ಗ್ರಹಕ್ಕಲ್ಲವೇ?'
'ಆ.6ರ ಸಂಚಿಕೆಯ ಪುಟ 14ರಲ್ಲಿ 'ಮಾಹಿತಿ ಪ್ರಭ'ದಲ್ಲಿ ಮಂಗಳನಂಗಳದಲ್ಲಿ ವರ್ಷ ಪೂರೈಸಿದ ಕ್ಯೂರಿಯಾಸಿಟಿ' ಲೇಖನ ಪ್ರಕಟವಾಗಿದೆ. ಕ್ಯೂರಿಯಾಸಿಟಿ ನೌಕೆ ಪ್ರಯಾಣಿಸಿದ್ದು ಮಂಗಳ ಗ್ರಹಕ್ಕೋ, ಚಂದ್ರ ಗ್ರಹಕ್ಕೋ ತಿಳಿಯುವ ಕ್ಯೂರಿಯಾಸಿಟಿಯಿದೆ!'
-ವಿಶ್ವೇಶ್ವರ ಭಟ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

