ತಪ್ಪಾಯ್ತು ತಿದ್ಕೋತೀವಿ
ರಾಮನಗರ ಜಿಲ್ಲೆಯಿಂದ ಮಾಗಡಿ ಶ್ರೀನಿವಾಸ ಅವರು ಬರೆಯುತ್ತಾರೆ- 'ಆ.19ರ ಪತ್ರಿಕೆಯ 2ನೇ ಪುಟದ 'ಬಿಜೆಪಿ, ಕೆಜೆಪಿ ಜತೆ ಜೆಡಿಎಸ್ ಅಪವಿತ್ರ ಮೈತ್ರಿ' ಶೀರ್ಷಿಕೆಯ 4ನೇ ಪ್ಯಾರಾದಲ್ಲಿ ಮಾಜಿ ಸಂಸದ ಚಲುವರಾಯಸ್ವಾಮಿಯವರ ಹೆಸರನ್ನು ಚಲುವನಾರಾಯಣಸ್ವಾಮಿ ಎಂದು ಬರೆಯಲಾಗಿದೆ. ಬಹುಶಃ ಇದು ಮುದ್ರಾರಾಕ್ಷಸನ ಹಾವಳಿ ಎನ್ನಲಾಗದು, ವರದಿಗಾರರ ಲೋಪವೆನಿಸುತ್ತದೆ.'
'ಇದೇ ಪುಟದ 'ಪೊಲೀಸರ ಮೇಲೆ ಕಲ್ಲು ತೂರಾಟ: ಗಾಳಿಲಿ ಗುಂಡು' ಎಂಬ ಶೀರ್ಷಿಕೆಯಲ್ಲಿ ಗಾಳಿಯಲ್ಲಿ ಸರಿಯಾದ ಪದ. ಇಲ್ಲಿ ಗಾಳಿಅಲ್ಲಿ -'ಯ' ಕಾರಾಗಮ ಸಂಧಿ. ಆದರೆ 'ಗಾಳಿಲಿ' ಎಂಬ ಪದ ಹೇಗೆ ಸಂಧಿಯಾಯಿತು. ಪೂರ್ವಪದ ಹಾಗೂ ಉತ್ತರಪದಗಳನ್ನು ಬಿಡಿಸಿ ಬರೆದಾಗ ಅರ್ಥ ಕೆಡುತ್ತದೆ. ಇದು ಸಂಧಿಕಾರ್ಯದ ದೋಷವಾಗುತ್ತದೆ.'
'ಇದೇ ಶೀರ್ಷಿಕೆಯ 2ನೇ ಪ್ಯಾರಾದ 5ನೇ ಸಾಲಿನಲ್ಲಿ 'ದಾಖಲಾಗಿಸಲಾಗಿದೆ' ಎಂಬ ಪದ ಬಳಕೆಯ ಬದಲು ದಾಖಲಿಸಲಾಗಿದೆ ಎಂದು ಬರೆದಿದ್ದರೆ, ಅಕ್ಷರ ಬಳಕೆ ಕಡಿಮೆಯಾಗುತ್ತಿತ್ತಲ್ಲವೆ? ಹಾಗೆಯೇ 3ನೇ ಪ್ಯಾರಾದ 2ನೇ ಸಾಲಿನಲ್ಲಿ 'ಕಾರಣವಾಗುತ್ತು' ಎಂದು ಮುದ್ರಣಗೊಂಡಿದೆ. ಇದು 'ಕಾರಣವಾಗುತ್ತಿತ್ತು' ಎಂದಾಗಬೇಕಿತ್ತು. ಇದೇ ಪ್ಯಾರಾದ 5ನೇ ಸಾಲಿನಲ್ಲಿ 'ಮುಚ್ಚಿಳಿಕೆ' ಎಂಬ ಪದ ಬಳಕೆಯಾಗಿದೆ. ಇದು 'ಮುಚ್ಚಳಿಕೆ' ಎಂದಾಗಬೇಕಿತ್ತು.'
'ಪುಟ2ರಲ್ಲಿ 'ಸಿದ್ದುಗೆ ಮತ ಕೇಳುವ ನೈತಿಕ ಹಕ್ಕಿಲ್ಲ' ಶೀರ್ಷಿಕೆಯಲ್ಲೂ 9ನೇ ಪ್ಯಾರಾದ 'ಮಾಜಿ ಸಚಿವರ ಬಂಡೆಪ್ಪ ಕಾಶೆಂಪುರ್' ಎಂದಿದೆ. 'ಮಾಜಿ ಸಚಿವರಾದ'... ಎಂದಾಗಬೇಕಿತ್ತು.'
'5ನೇ ಪುಟದ 'ನಾನು ಸಿ.ಎಂ. ಆಗಿದ್ದಕ್ಕೆ....' ಎಂಬ ಶೀರ್ಷಿಕೆಯ ಉಪಶೀರ್ಷಿಕೆಯಾದ: 'ನೀರಿನಿಂದ ಮೇಲೆತ್ತಿದ ಮೀನಿನಂತೆ...' ಎಂಬಲ್ಲಿ 'ಮೇಲೆತ್ತಿದ' ಬದಲಾಗಿ 'ಮೇಲೇತ್ತಿದ' ಆಗಿದೆ. ಇದೇ ವರದಿಯ ಒಳ ಶೀರ್ಷಿಕೆ 'ಕೃಷ್ಣಾ ಮೇಲ್ದಂಡೆ ತುಂಡು ಗುತ್ತಿಗೆ ಹಗರಣ ಸಿ.ಬಿ.ಐ.ಗೆ ವಹಿಸುತ್ತಿದ್ದೆ...' ಎಂಬಲ್ಲಿ ಮೊದಲ ಸಾಲಿನಲ್ಲಿ 'ದ್ವೇಷ'ಕ್ಕೆ ಬದಲಾಗಿ 'ದ್ವೇಶ' ಬಳಕೆಯಾಗಿದೆ. ಇದೇ ಪದ 2ನೇ ಪ್ಯಾರಾದಲ್ಲೂ ಬಳಕೆಯಾಗಿದೆ.'
'ಬೈಟುಕಾಫಿ ಅನೇಕ ಪುಟದ 'ಜಗುಲಿ' ಅಂಕಣದ 'ಜೀವನವೇ ಕತ್ತಲ ಕೂಪ ಆದೀತು' ಶೀರ್ಷಿಕೆಯ ಕೊನೆಯ 2ನೇ ಸಾಲಿನಲ್ಲಿ 'ಇನ್ನು ಮುಂದೆ' ಬದಲಾಗಿ 'ಇನ್ನಿ ಮುಂದೆ' ಎಂದಾಗಿದೆ. ಬಹುಶಃ ಇದು ಮುದ್ರಾರಾಕ್ಷಸನ ಹಾವಳಿ. ಇದು ಅಷ್ಟು ಗಂಭೀರವಲ್ಲ ಬಿಡಿ.'
'3ನೇ ಪುಟದ 'ಪೇಟೆ ಮಾತು' (ಸತ್ಯ ಅವರ ಅಂಕಣ) ಮರಳಿಸುವ ಭರವಸೆ ತಲೆಬರಹದ ಕೊನೆಯ ಸಾಲಿನಲ್ಲಿ 'ಅದರಲ್ಲಿ ಅದರಲ್ಲಿ' ಎಂದು 2 ಬಾರಿ ಮುದ್ರಣಗೊಂಡಿದೆ. ಇಷ್ಟೆಲ್ಲಾ ತಪ್ಪುಗಳಿದ್ದರೂ ಬೇರೆ ಪತ್ರಿಕೆಯಲ್ಲಿನ ದೋಷಗಳಿಗೆ ಹೋಲಿಸಿದರೆ ತಪ್ಪುಗಳ ಸಂಖ್ಯೆ ಕಡಿಮೆಯೆಂದೇ ಹೇಳಬಹುದು. ಕಾರಣ 'ತಪ್ಪಾಯ್ತು ತಿದ್ಕೋತೀವಿ' ಅಂಕಣ ಪತ್ರಿಕೆಯಷ್ಟೇ ಅಲ್ಲದೇ ಓದುಗರು (ವಾಚಕರು) ತಮ್ಮ ತಪ್ಪುಗಳನ್ನು ತಿದ್ದಿಕೊಳ್ಳಲು ಸಹಕಾರಿಯಾಗಿದೆ. ಅಂತಹ ವಿಶಿಷ್ಟ ಅಂಕಣಗಳು ಮುಂದುವರಿಯಲಿ' ಎಂದಿದ್ದಾರೆ.
-ವಿಶ್ವೇಶ್ವರಭಟ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

