ಸಂಪಾದಕೀಯ

ಕೆರೆಗಳು ಮತ್ತು ನಾಡಿನ ಪುಣ್ಯ

Published On :

"ಕೆರೆಗಳ ಪುನಶ್ಚೇತನಕ್ಕೆ ಕಂಕಣಬದ್ಧ" ಎಂಬ ಶೀರ್ಷಿಕೆಯ ಅಡಿಯಲ್ಲಿ ವರದಿಯಾಗಿರುವುದನ್ನು ಓದಿದಾಗ (ಕ.ಪ್ರ. ಆಗಸ್ಟ್9) ಹಲವು ವಿಚಾರಗಳು ಮುಂದೆ ನಿಲ್ಲುತ್ತವೆ. ಮುಖ್ಯಮಂತ್ರಿಗಳೇನೋ ತಮ್ಮ ಸರ್ಕಾರ ಕೆರೆಗಳ ಪುನಶ್ಚೇತನಕ್ಕೆ ಬದ್ಧವಾಗಿದೆ ಎಂದು ಆಶ್ವಾಸನೆ ನೀಡಿದ್ದಾರೆ. ಹಂತ ಹಂತವಾಗಿ ಈ ಕಾರ್ಯಕ್ರಮವನ್ನು ಕೈಗೆತ್ತಿಕೊಳ್ಳುವುದಾಗಿಯೂ, ಮೊದಲ ಹಂತದಲ್ಲಿ 12000 ಕೆರೆಗಳನ್ನು ಪುನಶ್ಚೇತನಗೊಳಿಸಲಾಗುವುದೆಂದೂ ಅವರು ಹೇಳಿದ್ದಾರೆ. ಹಿಂದಿನ ಸರ್ಕಾರಗಳು ಮತ್ತು ಅಧಿಕಾರಿಗಳ ಬೇಜವಾಬ್ದಾರಿತನದಿಂದ ಕೆರೆಗಳು ಹಾಳಾಗಿವೆ ಎನ್ನುವುದು ಮುಖ್ಯಮಂತ್ರಿಗಳ ನಿಲುವು. ಪೂರ್ವಿಕರು ನಿರ್ಮಿಸಿದ ಕೆರೆಗಳನ್ನು ನಾವು ಒತ್ತುವರಿ ಮಾಡಿಕೊಂಡು ಅವುಗಳನ್ನು ನಾಶ ಮಾಡಿರುವುವೆಂದು ಮುಖ್ಯಮಂತ್ರಿ ಹೇಳಿದ್ದಾರೆ. 1958ರಲ್ಲಿ ಪಂಚವಾರ್ಷಿಕ ಯೋಜನೆಗಳ ಸಮಿತಿಯ ವರದಿಯ ಪ್ರಕಾರ ಕರ್ನಾಟಕದಲ್ಲಿ ಸಣ್ಣ ಕೆರೆಗಳು ಮತ್ತು ದೊಡ್ಡ ಕೆರೆಗಳು ಸೇರಿದಂತೆ ಒಟ್ಟು 36848 ಕೆರೆಗಳಿದ್ದವು. ಇವುಗಳ ಅಚ್ಚುಕಟ್ಟು ಪ್ರದೇಶದ ವಿಸ್ತೀರ್ಣ 10,15,844 ಎಕರೆಗಳಷ್ಟು. ಜಿಲ್ಲಾವಾರು ಕೆರೆಗಳ ಸಂಖ್ಯೆ ಮತ್ತು ಕೆರೆಗಳ ಅಚ್ಚುಕಟ್ಟು ಪ್ರದೇಶದ ವಿಸ್ತೀರ್ಣದ ಮಾಹಿತಿಯೂ ಲಭ್ಯವಿದೆ. ಬೆಂಗಳೂರು ಜಿಲ್ಲೆಯಲ್ಲಿ ಸಣ್ಣ ಮತ್ತು ದೊಡ್ಡ ಕೆರೆಗಳು ಒಟ್ಟು 1787 ಇದ್ದವು; ಇವುಗಳ ಅಚ್ಚುಕಟ್ಟು ಪ್ರದೇಶದ ವಿಸ್ತೀರ್ಣ 79,227 ಎಕರೆಗಳಷ್ಟು. (ಈಗಿನ ಸ್ಥಿತಿ ಏನೋ!). ಕೆರೆ ಗಳ ಒತ್ತುವರಿಯಾಗುತ್ತ ಬಂದಿರುವುದು ಈಚಿನ ವಿದ್ಯಮಾನವೇನಲ್ಲ. ಭೂದಾಹ ಧನದಾಹಗಳು ಒಡ್ಡುವ ಪ್ರಲೋಭನೆಗಳಿಗೆ ಪಕ್ಕಾಗಿ ಆಡಳಿತ ನಡೆಸಿದ ಸರ್ಕಾರಗಳು ಮತ್ತು ಅಧಿಕಾರಿಗಳು ಕೆರೆಗಳ ನಾಶಕ್ಕೆ ಕಾರಣರಾದರು. ಇದನ್ನೇ ಮುಖ್ಯಮಂತ್ರಿಗಳು ಹೇಳಿರುವುದು. ಹೀಗೆ ಕೆರೆಗಳು ಇಂಗಿ ಅಕ್ರಮಗೊಂಡುದನ್ನು ನೋಡುತ್ತ ಕಾಲಯಾಪನೆ ಮಾಡಿದ ಜನತೆಯ ಪ್ರತಿನಿಧಿಗಳೆನಿಸಿಕೊಂಡವರೂ, ಪ್ರತಿನಿಧಿಗಳೆಂದು ಕೊಂಡವರೂ, ಒತ್ತುವರಿಯ ದುಷ್ಕೃತ್ಯದಲ್ಲಿ ಪರೋಕ್ಷವಾಗಿಯಾದರೂ ಫಲಾನುಭವಿಗಳಾಗಿರಲೂ ಸಾಕು! ಸುಮಾರು 37000 ಕೆರೆಗಳಲ್ಲಿ ಇಂದು ಸುಸ್ಥಿತಿಯಲ್ಲಿರುವುದು ಎಷ್ಟು? ದುರವಸ್ಥೆಯಲ್ಲಿದ್ದರೂ ಉಳಿದುಕೊಂಡಿರುವುವು ಅಷ್ಟೆ ನಿಖರ ಮಾಹಿತಿಯಾದರೂ ಇದೆಯೇ? ಕೆರೆಗಳ ದುರಸ್ತಿ, ಪುನಶ್ಚೇತನ ಎಂದೆಲ್ಲ ಹೇಳಿ ಆಯವ್ಯಯ ಪತ್ರದಲ್ಲಿ ಇದುವರೆಗೂ ಮೀಸಲಾಗಿರಿಸಿದ ಹಣ ಎಷ್ಟು? ಒತ್ತುವರಿಯನ್ನು ತೆರವುಗೊಳಿಸುತ್ತೇವೆಂದು ಬಡಾಯಿ ಕೊಚ್ಚಿದವರು ಅದೆಷ್ಟೋ. ಕೆರೆ ಅಭಿವೃದ್ಧಿ ಪ್ರಾಧಿಕಾರ ಎಂಬ ವ್ಯವಸ್ಥೆ ಇದ್ದಂತಿದೆ. ಇದು ಸ್ಥಾಪನೆಯಾದಾಗಿನಿಂದ ಇಲ್ಲಿಯವರೆಗೂ ಇದು ಸಾಧಿಸಿದ್ದಾರೂ ಏನು ಎಂಬ ಮಾಹಿತಿ ಇದೆಯೇ ತಿಳಿಯದು, ಅಥವಾ ಪ್ರಾಧಿಕಾರದ ನಿಷ್ಕ್ರಿಯತೆಗೆ ಕಾರಣ ಸಾಕಷ್ಟು ಹಣ ಒದಗಿಸದಿದ್ದುದೂ ಇರಬಹುದು. ಬಾಯಿ ಮಾತಿನಲ್ಲಿ ಏನಾದರೂ ಪುನಶ್ಚೇತನವಾಗಿದ್ದರೆ ಅದಷ್ಟೆ ಲಾಭ! ಶಾಲಾ-ಕಾಲೇಜುಗಳು, ವಿಶ್ವವಿದ್ಯಾಲಯಗಳು ಪುನಶ್ಚೇತನ ಜಾಗೃತಿ ಕಾರ್ಯಕ್ರಮದ ಯಾತ್ರೆ ಕೈಗೊಳ್ಳಬೇಕಂತೆ. ಇದೊಂದು ಇದುವರೆಗೂ ಆಗಿರಲಿಲ್ಲ. ಈಗ ನುರಿತ ಸಂಸ್ಥೆಯಿಂದ ಸಮೀಕ್ಷೆ ನಡೆಸಿ  ಒತ್ತುವರಿಯಾದ 4500 ಕೆರೆಗಳನ್ನು ಪುನಶ್ಚೇತನಗೊಳಿಸಲಾಗುತ್ತದಂತೆ, ತೆರವುಗೊಳಿಸಿದ ನಂತರ. ಅಂದರೆ, ಸಮಾಧಾನಕರ ಸಂಗತಿ ಎಂದರೆ 4500 ಕೆರೆಗಳ ಪ್ರದೇಶ ಮಾತ್ರ ಒತ್ತುವರಿಯಾಗಿರುವುದು ಎಂದಾದರೆ- ಇನ್ನೂ 3500 ಕೆರೆಗಳು ಇವೆ; ಇವುಗಳಲ್ಲಿ ಸುಸ್ಥಿತಿಯಲ್ಲಿರುವುವೂ ಇವೆ ಮತ್ತು ಅಂತೂ ಇವೆ ಎನ್ನುವಂಥವೂ ಇದೆ ಎಂದಂತಾಯಿತು; ನಾಡಿನ ಪುಣ್ಯ!
-ಸಾಮಗ ದತ್ತಾತ್ರಿ, ಬೆಂಗಳೂರು.

ವಿದ್ಯಾರ್ಥಿಗಳಿಗೆ ಅನುಕೂಲವಾಗದ ಬಸ್ಸುಗಳು

ಶಾಲಾ-ಕಾಲೇಜುಗಳು ಪ್ರಾರಂಭವಾದ ತಕ್ಷಣವೇ ಬಿಎಂಟಿಸಿ ಬಸ್‌ಗಳು ವಿದ್ಯಾರ್ಥಿಗಳಿಗೆ ತೊಂದರೆಯನ್ನುಂಟು ಮಾಡುತ್ತವೆ. ಬಸ್ ನಿಲ್ದಾಣದಲ್ಲಿ ಕಾಯುತ್ತಿರುವ ವಿದ್ಯಾರ್ಥಿಗಳಿಗೆ ಬಸ್‌ಗಳನ್ನು ನಿಲ್ಲಿಸದೆ ಹಾಗೆಯೇ ಹೊರಟು ಹೋಗುತ್ತಾರೆ. ಬಸ್ ಪಾಸ್‌ಗಳು ಬಿಎಂಟಿಸಿ ಸಂಸ್ಥೆಯು ವಿದ್ಯಾರ್ಥಿಗಳಿಗೆ ಪಾಸುಗಳು ಅನುಕೂಲವಾಗಲಿ ಎಂದು ವಿತರಿಸಿದ್ದೇನೋ ನಿಜ. ಆದರೆ ನಿಲ್ದಾಣಗಳಲ್ಲಿ ವಿದ್ಯಾರ್ಥಿಗಳನ್ನು ಕಂಡಲ್ಲಿ ಚಾಲಕರು ಮತ್ತು ನಿರ್ವಾಹಕರು ಬಸ್ಸನ್ನು ನಿಲ್ಲಿಸದೆ ಹೊರಟು ಹೋಗುತ್ತಾರೆ. ವಿದ್ಯಾರ್ಥಿಗಳಿಗೆ ಬಸ್ಸುಗಳು ಅನುಕೂಲವಾಗಲೇ ಹೊರತು ಸರ್ಕಾರಕ್ಕೆ ಆದಾಯ ತರುವ ವಿನೂತನ ಯೋಜನೆ ಅಲ್ಲ. ಬಿಎಂಟಿಸಿ ಸಂಸ್ಥೆಯು ಸರಿಯಾದ ಕ್ರಮಗಳನ್ನು ಕೈಗೊಂಡು ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕು.
-ಸಂತೋಷ್. ಡಿ.,ಬಿ. ಮಾರೇನಹಳ್ಳಿ

ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.