ಸಂಪಾದಕೀಯ

ತಪ್ಪಾಯ್ತು ತಿದ್ಕೋತೀವಿ

Published On :

ಓದುಗರು ಎಷ್ಟರ ಮಟ್ಟಿಗೆ ಜಾಗೃತರಾಗಿರುತ್ತಾರೆ ಮತ್ತು ನೆನಪಿನ ಶಕ್ತಿ ಹೊಂದಿರುತ್ತಾರೆ ಎಂಬುದಕ್ಕೆ ಈ ಪತ್ರ ಒಂದು ಉದಾಹರಣೆ. ಸುದ್ದಿ ಬರೆಯುವಾಗ ಇಂತಹ ಓದುಗರೂ ಇರುತ್ತಾರೆ ಎಂಬುದನ್ನು ಪತ್ರಕರ್ತರು ಅರ್ಥಮಾಡಿಕೊಳ್ಳುವುದು ಅತ್ಯಂತ ಮುಖ್ಯ.
ಬೆಂಗಳೂರಿನಿಂದ ರಾಜೀವ ಪಟವರ್ಧನ್ ಅವರು ಬರೆಯುತ್ತಾರೆ- '2012ರ ನ.11ರಂದು 'ಕನ್ನಡಪ್ರಭ' ಪತ್ರಿಕೆಯ ಮುಖಪುಟದಲ್ಲಿ ಮೇಲ್ಭಾಗದಲ್ಲಿ 'ಇನ್ನು ಪ್ರತಿವರ್ಷ ನ.10 ಮಲಾಲ ದಿನ, ಮಕ್ಕಳ ಹಕ್ಕಿನ ಹೋರಾಟಗಾರ್ತಿಗೆ ವಿಶ್ವಸಂಸ್ಥೆ ಗೌರವ' ಎಂಬ ಶೀರ್ಷಿಕೆ ಪ್ರಕಟಿಸಲಾಗಿದೆ. ಅದೇ ಪತ್ರಿಕೆಯ ಪುಟ 14ರಲ್ಲಿ ಅದರ ವಿವರಣೆ ನೀಡಲಾಗಿದೆ.'
'ಜು.13ರಂದು ಪತ್ರಿಕೆಯಲ್ಲಿ (ಪುಟ 12) 'ಬಂದೂಕಿನ ಗುಂಡು ನನ್ನನ್ನು ಸುಮ್ಮನಾಗಿಸಲಿಲ್ಲ' ಎಂಬ ವರದಿಯಲ್ಲಿ 'ಇದೇ ಸಂದರ್ಭದಲ್ಲಿ ವಿಶ್ವಸಂಸ್ಥೆ ಜು.12 ಅನ್ನು ಮಲಾಲ ದಿನವೆಂದು ಕರೆದು ಆಕೆಗೆ ಗೌರವ ಸೂಚಿಸಿತು' ಎಂದಿದೆ. ಯಾವುದು ಸರಿಯಾದ ದಿನಾಂಕ?'
'ಆ.20ರಂದು ಪುಟ 5ರಲ್ಲಿ 'ಗುಂಡಿ ರಸ್ತೇಲಿ ಬಂಡಿ ಸಾಗೋದ ಹ್ಯಾಂಗ' ವರದಿಯ 5ನೇ ಪ್ಯಾರಾದಲ್ಲಿ 'ರಸ್ತೆಗಳೋನ್ನು ನೀರು ನಿಲ್ಲದಂತೆ ಮಧ್ಯದಲ್ಲಿ ಉಬ್ಬಿಕೊಂಡ (ಸೆಂಬೋರ್) ಮಾದರಿಯಲ್ಲಿ ನಿರ್ಮಿಸಬೇಕು' ಎಂದಿದೆ. ಆದರೆ ಅದು 'ಸೆಂಬೋರ್‌' ಅಲ್ಲ. ಅದು 'ಕೆಂಬರ್‌'. ಎರಡನೆಯದು 'ರಸ್ತೆಗಳನ್ನು' ಎಂದಿದೆ. ಆದರೆ ಅದು ರಸ್ತೆಗಳಲ್ಲಿ ಎಂದಾಗಬೇಕು.'
'ಅದೇ ದಿನದ ಮುಖಪುಟದಲ್ಲಿ 'ಪ್ರಚಾರಕ್ಕೆ ಬಿತ್ತು ತೆರೆ' ವರದಿಯಲ್ಲಿ 'ಆ.25ರಂದು ಮತ ಎಣಿಕೆ ನಡೆಯಲಿದೆ' ಎಂದು ಪ್ರಕಟಿಸಿದ್ದೀರಿ. ಆದರೆ ಮತದಾನ ಎಣಿಕೆ ಇದ್ದಿದ್ದು ಆ.24ರಂದಲ್ಲವೇ?' ಎಂದಿದ್ದಾರೆ.
ಮಲಾಲ ದಿನದ ಕುರಿತು ರಾಜೀವ ಪಟವರ್ಧನ್ ಅವರು ಪ್ರಸ್ತಾಪಿಸಿರುವ ಅಂಶಗಳು ಅತ್ಯಂತ ಪ್ರಸ್ತುತವಾಗಿವೆ. ಬಹುಶಃ ಈ ಗೊಂದಲ ವಿಶ್ವಸಂಸ್ಥೆಯಿಂದಲೇ ಸೃಷ್ಟಿಯಾಗಿದೆ. 2012ರಲ್ಲಿ ನಮ್ಮ ಪತ್ರಿಕೆಯೊಂದೇ ಅಲ್ಲ ಬಹುತೇಕ ಪತ್ರಿಕೆಗಳು ನ.10ನ್ನು 'ಮಲಾಲ ದಿನ' ಎಂದು ಘೋಷಿಸಲಾಗಿದೆ ಎಂದೇ ಸುದ್ದಿ ಪ್ರಕಟಿಸಿದ್ದವು. ವಿಶ್ವಸಂಸ್ಥೆ ಈ ರೀತಿಯ ಅಭಿಪ್ರಾಯ ವ್ಯಕ್ತಪಡಿಸದೇ ಇದ್ದಲ್ಲಿ ಸುದ್ದಿ ಪ್ರಕಟವಾಗಲು ಸಾಧ್ಯವಿಲ್ಲ. ಆದರೆ ಆಮೇಲೆ ಈ ನಿರ್ಧಾರವನ್ನು ವಿಶ್ವಸಂಸ್ಥೆ ಬದಲಿಸಿದಂತಿದೆ.
ಯಾಕೆಂದರೆ ಆಕೆಯ ತಲೆಗೆ ಉಗ್ರರು ಗುಂಡು ಹಾರಿಸಿದ್ದು ನ.10ರಂದಲ್ಲ. ಆಕೆ ಹುಟ್ಟಿದ ದಿನವೂ ಅಲ್ಲ. ಆದ್ದರಿಂದ ಆಕೆಯ ಜನ್ಮದಿನವಾದ ಜು.12ನ್ನೇ ಮಲಾಲ ದಿನವೆಂದು ಆಚರಿಸಲು ವಿಶ್ವಸಂಸ್ಥೆ ನಂತರ ನಿರ್ಧರಿಸಿದಂತಿದೆ. ಆದ್ದರಿಂದ ಈ ಗೊಂದಲವಾಗಿದೆ. ಯಾರೋ ಸೃಷ್ಟಿಸಿದ ಗೊಂದಲಕ್ಕೆ ನಾವು ಹೊಣೆ ಹೊರುವುದು ಕಷ್ಟ.

-ವಿಶ್ವೇಶ್ವರ ಭಟ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.