ಸಂಪಾದಕೀಯ

ತಪ್ಪಾಯ್ತು ತಿದ್ಕೋತೀವಿ

Published On :

ಬೆಂಗಳೂರಿನ ಕುಮಾರಸ್ವಾಮಿ ಬಡಾವಣೆಯಿಂದ ಪತ್ತಂಗಿ ಹೇಮಲತಾ ಮುರಳಿ ಅವರು ಬರೆಯುತ್ತಾರೆ- 'ಡಿ.14ರಂದು ಪುಟ 2ರಲ್ಲಿ (ಬೆಂಗಳೂರು ಆವೃತ್ತಿ) 'ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಸ್ವಾಗತ' ಎಂಬ ಶೀರ್ಷಿಕೆಯುಳ್ಳ ಸುದ್ದಿ ಪ್ರಕಟವಾಗಿದೆ. ಅದಕ್ಕೆ ಉಪಶೀರ್ಷಿಕೆಯಾಗಿ 'ಬಿಐಎಲ್‌ಗೆ ಇಂದು ನಾಮಕರಣ, ಸಿಎಂ ಸಿದ್ದರಾಮಯ್ಯ ಸೇರಿ ಹಲವು ಗಣ್ಯರ ಉಪಸ್ಥಿತಿ' ಎಂದು ಪ್ರಕಟಿಸಿದ್ದೀರಿ.'
'ಸ್ವಾಮಿ ಬಿಐಎಎಲ್ ಹೆಸರಿನ ಅಂತ್ಯಸಂಸ್ಕಾರದ ದಿನದಂದೇ ತಪ್ಪಾಗಿ ಪ್ರಕಟವಾಗಬೇಕೆ? ಅದು 'ಬಿಐಎಲ್‌' ಅಲ್ಲ 'ಬಿಐಎಎಲ್‌' ಎಂದಾಗಬೇಕಿತ್ತು.'ಬಿಐಎಎಲ್‌ಗೆ ನಾಮಕರಣ' ಎಂದಿರುವ ಬದಲು 'ಬಿಐಎಎಲ್‌ಗೆ ಮರುನಾಮಕರಣ' ಎಂದಿದ್ದರೆ ಸೂಕ್ತವಾಗುತ್ತಿತ್ತು.'
'ಡಿ.11ರಂದು '11-12-13ರ ಈ ವಿಶೇಷ ದಿನಕ್ಕೆ ನಗರದಲ್ಲಿ ಬಹುಬೇಡಿಕೆ' ಎಂಬ ಶೀರ್ಷಿಕೆಯಲ್ಲಿ ಪ್ರಕಟವಾದ ಸುದ್ದಿಯಲ್ಲಿ ದಪ್ಪಕ್ಷರಗಳಲ್ಲಿ 'ಕಲ್ಯಾಣ ಮಂಟಪದಲ್ಲಿ ಎಲ್ಲಿಲ್ಲದ ಬೇಡಿಕೆ' ತಿಂಗಳ ಹಿಂದೆಯೇ ಬಹುತೇಕ ಭರ್ತಿ' ಎಂದೂ, ವಿವರಣೆಯಲ್ಲೂ ತಿಂಗಳ ಹಿಂದೆಯೇ ಬಹುತೇಕ ಕಲ್ಯಾಣ ಮಂಟಪಗಳು ಬಹುತೇಕ ಭರ್ತಿಯಾಗಿವೆ' ಎಂದು ಪ್ರಕಟಿಸಿದ್ದೀರಿ. ಭರ್ತಿಯಾಗುವುದಕ್ಕೆ ಅದೇನು ಸಿನಿಮಾ ಮಂದಿರವೋ ಅಥವಾ ಹೋಟೆಲ್ಲೊ? ಅಥವಾ ಸಾರಿಗೆ ವಾಹನವೋ? ಭರ್ತಿಯಾಗಿದೆ ಎನ್ನುವುದರ ಬದಲಾಗಿ ಆ ಸುದ್ದಿಯಲ್ಲಿ 'ತಿಂಗಳ ಮೊದಲೇ ಕಾಯ್ದಿರಿಸಲಾಗಿತ್ತು' ಎಂದಿದ್ದರೆ ಹೆಚ್ಚು ಅರ್ಥಪೂರ್ಣವಾಗಿರುತ್ತಿತ್ತು' ಎಂದಿದ್ದಾರೆ.
ಸಂತೆಬೆನ್ನೂರು ಫೈಜ್ನಟ್ರಾಜ್ ಅವರು ಸಾಮಾನ್ಯವಾಗಿ 'ಕೇಳ್ರಪ್ಪೋ ಕೇಳಿ' ವಿಭಾಗಕ್ಕೆ ಬರೆಯುತ್ತಾರೆ. ಅಪರೂಪಕ್ಕೆಂಬಂತೆ ಅವರು ಈ ಅಂಕಣಕ್ಕೂ ಪತ್ರ ಬರೆದಿದ್ದಾರೆ. ಅವರು ಬರೆಯುತ್ತಾರೆ- 'ಡಿ.12ರಂದು ದಾವಣಗೆರೆ ಆವೃತ್ತಿಯ ಪುಟ 3ರಲ್ಲಿ '20ರಿಂದ ಮತ್ತು ಬಂದಿದೆ ಊರಿಗೆ' ಎಂಬ ಚಿಕ್ಕ ವರದಿಯಿದೆ. ಆದರೆ ಅದು ಮತ್ತು ಅಲ್ಲ 'ಮುತ್ತು ಬಂದಿದೆ ಊರಿಗೆ' ಎಂದಾಗಬೇಕಿತ್ತು' ಎಂದಿದ್ದಾರೆ.
ಹುಬ್ಬಳ್ಳಿ ಜೆ.ಪಿ. ನಗರದಿಂದ ಗುರುರಾಜ ಭಾದ್ರಿ ಅವರು ಬರೆಯುತ್ತಾರೆ- 'ಡಿ.19ರಂದು ಸಂಪಾದಕೀಯದ (ಆಮ್ ಆದ್ಮಿ ಪೊರಕೆ ಪವಾಡ) 3ನೇ ಕಂಡಿಕೆಯಲ್ಲಿ ಚುನಾವಣೆಯ ಪರಿಣಾಮವನ್ನು ವಿಶ್ಲೇಷಿಸುತ್ತಾ ಛತ್ತೀಸಗಡದಲ್ಲಿ ಕೂದಲೆಳೆಯ ಅಂತರದಲ್ಲಿ ಕಾಂಗ್ರೆಸ್- ಬಿಜೆಪಿಗಳ ನಡುವಿನ ಸೆಣಸಾಟ ನಡೆದಿದ್ದು, ಅತಂತ್ರ ವಿಧಾನಸಭೆ ರಚನೆಯಾಗುವ ಸಂಭವ ಕಂಡುಬಂದಿದೆ' ಎಂದು ಪ್ರಕಟಿಸಲಾಗಿದೆ.'
'ಆದರೆ ಛತ್ತೀಸಗಡದಲ್ಲಿ ಒಟ್ಟು 90 ಸ್ಥಾನಗಳ ಪೈಕಿ ಬಿಜೆಪಿಯು 49 ಸ್ಥಾನಗಳನ್ನು ಪಡೆದುಕೊಂಡು ಸರ್ಕಾರ ರಚಿಸಲು ಬಹುಮತ ಸಾಧಿಸಿದೆ. ಇದನ್ನು ಅದೇ ದಿನದ ಪತ್ರಿಕೆಯ ಮುಖಪುಟದಲ್ಲಿ ಕಂಡುಕೊಳ್ಳಬಹುದಾಗಿದೆ. (ಸಂಖ್ಯಾವಾರು ವಿವರಗಳನ್ನು ನೀಡುವ ಕಮಲದ ಚಿತ್ರ) ಸಂಪಾದಕೀಯದ ಅಂಶವು ಓದುಗರನ್ನು ಗೊಂದಲಕ್ಕೀಡುಮಾಡುವುದಿಲ್ಲವೇ?' ಎಂದಿದ್ದಾರೆ.
ಛತ್ತೀಸಗಡದಲ್ಲಿ ಇರುವುದು 90 ವಿಧಾನಸಭಾ ಕ್ಷೇತ್ರಗಳಾದರೂ, ಫಲಿತಾಂಶ ಅತ್ಯಂತ ವಿಳಂಬವಾಗಿದೆ. ಸಂಪಾದಕೀಯ ಬರೆಯುವ ಹೊತ್ತಿನವರೆಗೂ ಇದ್ದ ಅಂಕಿ-ಅಂಶಗಳನ್ನು ಇರಿಸಿಕೊಂಡು ಹಾಗೆ ಬರೆಯಲಾಗಿತ್ತು. ಆದರೆ ಮುಖಪುಟದಲ್ಲಿ ಕೊನೆಯ ಹಂತದವರೆಗೂ ಬದಲಾವಣೆಗೆ ಅವಕಾಶವಿದೆ. ಆದರೆ ಉಳಿದ ಪುಟಗಳು ಕೊಂಚ ಮೊದಲೇ ಮುದ್ರಣ ವಿಭಾಗಕ್ಕೆ ವರ್ಗಾವಣೆಗೊಳ್ಳುತ್ತವೆ. ಇದರಿಂದಾಗಿ ಈ ತಪ್ಪಾಗಿದೆ.

-ವಿಶ್ವೇಶ್ವರಭಟ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.