ಸಂಪಾದಕೀಯ

ತಪ್ಪಾಯ್ತು ತಿದ್ಕೋತೀವಿ

Published On :

ಭದ್ರಾವತಿಯಿಂದ ಓಂ ಚನ್ನೇಶ್ ಅವರು ಪತ್ರ ಬರೆದಿದ್ದಾರೆ. 'ಸಾರ್ ತಪ್ಪು ಮಾಡುವುದು ಒಂದು ದಿವಸ.... ಎರಡು ದಿವಸ.... ಮೂರು.... ಆದರೆ ದಿನವೂ ತಪ್ಪು ಮಾಡುವುದೆಂದರೆ ಸ್ವಲ್ಪ ಮಟ್ಟಿಗೆ ಬೇಜಾರಾಗಿದೆ. ನನಗೆ ಒಂದು ವಿಷಯ ಸರಿಯಾಗಿ ಗೊತ್ತಾಗುತ್ತಿಲ್ಲ. ಉದಾಸೀನದಿಂದ ತಪ್ಪುಗಳನ್ನು ಮಾಡಿ, ಆ ತಪ್ಪುಗಳನ್ನು ತಿದ್ಕೋತಿವಿ ಅಂತ ಈ ಅಂಕಣಕ್ಕಾಗಿಯೇ ತಪ್ಪುಗಳನ್ನು ಮಾಡುತ್ತಿರುವುದೆಂದು ನಾವು ತಿಳಿದುಕೊಳ್ಳಬೇಕಾಗುತ್ತದೆ. ನಿಮ್ಮ ಪ್ರಕಾರ ಕಣ್ತಪ್ಪಿನಿಂದ ತಪ್ಪಾಗುವುದು ಸಹಜ. ಆದರೆ ಪ್ರತಿಯೊಂದು ಪುಟ ಪುಟದಲ್ಲೂ ನಾಲ್ಕೈದು ತಪ್ಪುಗಳೆಂದರೆ ಪತ್ರಿಕೆ ಓದುವಾಗ ಸ್ವಲ್ಪ ಕಿರಿಕಿರಿಯಂತಾಗುತ್ತದೆ. ವಿಷಯ ಸರಿಯಾಗಿ ಅರ್ಥವಾಗದೆ ತಪ್ಪಾಗಿ ತಿಳಿದುಕೊಳ್ಳಬೇಕಾಗುತ್ತದೆ. ಈ ಪತ್ರದಿಂದ ಏನಾದರೂ ತಪ್ಪಾಗಿದ್ದರೆ ತಿದ್ಕೋತಿನಿ ದಯವಿಟ್ಟು ಕ್ಷಮಿಸಿ' ಎಂದಿದ್ದಾರೆ.
ದಿನ ಪತ್ರಿಕೆಗಳನ್ನು ಅವಸರದ ಸಾಹಿತ್ಯ ಎಂದೇ ಕರೆಯಲಾಗುತ್ತದೆ. ಆದರೆ ಪತ್ರಿಕೆಯಲ್ಲಿ ತಪ್ಪುಗಳಾಗಬಾರದು, ಸಿಬ್ಬಂದಿಗಳಲ್ಲಿ ಎಚ್ಚರಿಕೆ ಮೂಡಬೇಕು ಎನ್ನುವುದು ಈ ಅಂಕಣದ ಉದ್ದೇಶದಲ್ಲೊಂದು. ಈ ಅಂಕಣಕ್ಕಾಗಿಯೇ ತಪ್ಪುಗಳನ್ನು ಪ್ರಕಟಿಸುವ ಕುಚೋದ್ಯವನ್ನು ಪತ್ರಿಕೆ ಎಂದಿಗೂ ಮಾಡುವುದಿಲ್ಲ. ಓಂ ಚನ್ನೇಶ್ ಅವರು ತಪ್ಪುಗಳ ಬಗ್ಗೆ ಬೇಸರ ಪಡುತ್ತಲೇ ಉದಾಸೀನ, ತಿದ್ಕೋತೀವಿ, ತಿದ್ಕೋತೀನಿ ಪದಗಳನ್ನು ತಪ್ಪಾಗಿ ಬರೆದಂತೆ ಪತ್ರಿಕೆಗಳಲ್ಲೂ ತಪ್ಪಾಗುತ್ತವೆ. ಈ ಅಂಕಣ ಬರೆಯಲು ಅವಕಾಶವಿರದಂತೆ ಪತ್ರಿಕೆ ಮೂಡಿಬರಲಿ ಎನ್ನುವುದು ನಮ್ಮ ಆಶಯ.
ಬಾಗಲಕೋಟೆಯಿಂದ ಸಂಗಪ್ಪ ಗಾಣಿಗೇರ ಅವರು ಪತ್ರ ಕಳುಹಿಸಿದ್ದಾರೆ. 'ಡಿ.6 ಪುಟ 9ರಲ್ಲಿ 'ಅಡಕೆ ನಿಷೇಧಕ್ಕೆ ಸುಪ್ರೀಂಗೆ ಕೇಂದ್ರ ಅಪೀಲು' ಎಂಬಲ್ಲಿ 'ಅಡಕೆ'ಗೆ 'ಅಡಿಕೆ' ಎಂದು ಬರೆದಿದ್ರೆ ಸರಿಯಾಗುವುದಿಲ್ಲವೇ? ಉತ್ತರ ಕರ್ನಾಟಕದಲ್ಲಿ ಅಡಕೆ ಬದಲು ಅಡಿಕೆ ಎಂದು ಪ್ರಯೋಗಿಸುತ್ತಾರೆ. ಆತ್ಮಭೂಷಣ್ ಅವರ ವರದಿಯಲ್ಲಿ ಅಡಕೆ ಪ್ರಯೋಗ ಏಳೆಂಟು ಸಲ ಬಳಕೆಯಾಗಿದೆ. ಅಡಿಕೆ ಎಂದು ತಪ್ಪಿಯೂ ಬಳಸಿಲ್ಲ. ಅದರಂತೆ ಸುಪ್ರೀಂಗೆ ಎನ್ನುವುದು 'ಸುಪ್ರೀಮ್‌ಗೆ' ಎಂದು ಬರೆಯಬೇಕಾಗಿತ್ತಲ್ಲವೇ? ಏಕೆಂದರೆ ನನಗೆ ಎನ್ನುವುದನ್ನು ನಂಗೆ ಎಂದು ಬರೆದಂತಾಗುತ್ತದೆ. ಪೂಜಿಯ ಬದಲು ಇಂಥಾ ಪ್ರಸಂಗದಲ್ಲಿ 'ಮ್‌' ಪ್ರಯೋಗ ಸರಿ ಎಂದು ನನಗನಿಸುತ್ತದೆ' ಎಂದಿದ್ದಾರೆ.
ಪ್ರತಿ ಪತ್ರಿಕೆಗೂ ಅದರದೇ ಆದ ಸ್ಟೈಲ್‌ಶೀಟ್ ಇರುತ್ತದೆ. ನಮ್ಮ ಪತ್ರಿಕೆಯಲ್ಲಿ ಅಡಕೆ ಹಾಗೂ ಸುಪ್ರೀಂ ಎಂದೇ ಬಳಸುತ್ತೇವೆ. ಇವೆರಡು ಬಳಕೆ ಸಮರ್ಪಕವಾಗಿದೆ.

-ವಿಶ್ವೇಶ್ವರಭಟ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.