ಮಹದೇವ ದೇಸಾಯಿಯವರು ಇಪ್ಪತೈದು ವರ್ಷಗಳ ಕಾಲ ಮಹಾತ್ಮ ಗಾಂಧಿಯವರ ಆಪ್ತ ಕಾರ್ಯದರ್ಶಿಯಾಗಿ ಕೆಲಸ ನಿರ್ವಹಿಸಿದರು. ಪ್ರತಿದಿನ ಅವರು ಗಾಂಧೀಜಿಯವರಿಗಿಂತ ಮೊದಲೇ ಎದ್ದು ಅವರ ದೈನಂದಿನ ಕಾರ್ಯಕ್ರಮಗಳಿಗೆ ನೆರವಾಗುತ್ತಿದ್ದರು. ಗಾಂಧೀಜಿಯವರು ಮಲಗಿದ ಮೇಲೆ ತಮ್ಮ ದಿನಚರಿಯನ್ನು ಬರೆದು ನಿದ್ರಿಸುತ್ತಿದ್ದರು. ಗುಜರಾತಿ, ಬೆಂಗಾಲಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಅವರು ಅನೇಕ ಕೃತಿಗಳನ್ನು ಸಹ ಪ್ರಕಟಿಸಿ ಉತ್ತಮ ಬರಹಗಾರರು ಎಂಬ ಹೆಸರು ಗಳಿಸಿದ್ದರು. ಸಂತ ಫ್ರಾನ್ಸಿಸ್, ವೀರ ವಲ್ಲಭಭಾಯ್ ಮತ್ತು ಖಾನ್ ಅಬ್ದುಲ್ ಗಫಾರ್ ಖಾನ್ ಅವರ ಜೀವನಚರಿತ್ರೆಯನ್ನು ಬರೆದಿದ್ದಾರೆ.
ಗಾಂಧೀಜಿಯವರು 1927 ರಲ್ಲಿ ಕರ್ನಾಟಕಕ್ಕೆ ಬಂದಿದ್ದಾಗ ಅವರು ಮತ್ತವರ ಸಂಗಡಿಗರ ಬಟ್ಟೆಗಳನ್ನು ಶುಚಿಗೊಳಿಸಲು ಅಗಸನಿಗೆ ನೀಡಲಾಗುತ್ತಿತ್ತು. ಹೀಗೆ ಹಣವನ್ನು ವೆಚ್ಚಮಾಡುವುದು ಗಾಂಧೀಜಿಗೆ ತಿಳಿದು ಮಹಾದೇವ ದೇಸಾಯಿಯವರನ್ನು ಕರೆದು, 'ನೋಡು ಇಷ್ಟೊಂದು ಬಟ್ಟೆಗಳನ್ನು ಅಗಸನಿಗೆ ನೀಡಿ ಸಾರ್ವಜನಿಕರ ಹಣವನ್ನು ಬೇಕಾಬಿಟ್ಟಿ ಖರ್ಚುಮಾಡುತ್ತಿದ್ದೇವೆ. ನಾವು ಜನತೆಯ ಸೇವಕರು, ರಾಜರಲ್ಲ. ಹೀಗಾಗಿ ಇನ್ನು ಮುಂದೆ ನೀನೇ ಏಕೆ ಬಟ್ಟೆಗಳನ್ನು ಒಗೆಯಬಾರದು?' ಎಂದು ಕೇಳಿದರು. ಅದಕ್ಕೆ ದೇಸಾಯಿಯವರು ತಾವು ಬಿಡುವಿಲ್ಲದ ಕಾರ್ಯಕ್ರಮಗಳಿಂದಾಗಿ ಈಗಲೇ ಪ್ರತಿನಿತ್ಯ ಬೆಳಗಿನ ಜಾವ ಮೂರುಗಂಟೆಗೇ ಏಳುತ್ತಿರುವುದಾಗಿಯೂ, ಆದ್ದರಿಂದ ಬಟ್ಟೆ ಒಗೆಯಲು ಸಮಯ ಸಿಗುವುದಿಲ್ಲವೆಂದು ಹೇಳಿದರು. ಅದಕ್ಕೆ ಗಾಂಧೀಜಿ ಪರಿಹಾರವನ್ನೂ ಸೂಚಿಸಿದರು. ಅದೆಂದರೆ ಮರುದಿನದಿಂದ ಒಂದು ಗಂಟೆ ಮುಂಚಿತವಾಗಿಯೇ ಎದ್ದು ಬಟ್ಟೆ ಒಗೆಯುವ ಕೆಲಸ ಮಾಡುವುದು! ಅಂದಿನಿಂದ ಮಹಾದೇವ ದೇಸಾಯಿಯವರು ಬೆಳಿಗಿನ ಜಾವ ಎರಡು ಗಂಟೆಗೇ ಎದ್ದು ಗಾಂಧಿ ಸಂಗಡಿಗರ ಬಟ್ಟೆ ಒಗೆಯುತ್ತಿದ್ದರು. ಗಾಂಧೀಜಿಯವರ ಪಂಚೆ ಮತ್ತು ಚಾದರವನ್ನು ಕಸ್ತೂರ್ ಬಾ ಒಗೆಯುತ್ತಿದ್ದರು. ಯಾವತ್ತಿನಿಂದ ಮಹಾದೇವ ದೇಸಾಯವರಿಗೆ ಎರಡು ಗಂಟೆಗೇ ಏಳಬೇಕೆಂದು ಆದೇಶ ನೀಡಿದರೋ ಅಂದಿನಿಂದ ಗಾಂಧೀಜಿ ತಮ್ಮ ಟವೆಲನ್ನು ತಾವೇ ಒಗೆಯಲು ಉಪಕ್ರಮಿಸಿದರು. ಇದರಿಂದ ಮಹಾದೇವರಿಗೆ ತಮ್ಮ ಪಾಲಿನ ಹೊರೆಯನ್ನು ಕಡಿಮೆ ಮಾಡಿದರು. ಇದು ಗಾಂಧೀಜಿ ಬದುಕಿದ ರೀತಿ ಮತ್ತು ತಮ್ಮ ಸಹಚರರೊಡನೆ ಇಟ್ಟಿದ್ದ ಪ್ರೀತಿಯ ತೋರಿಸುತ್ತದೆ.
-ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ