ತಪ್ಪಾಯ್ತು ತಿದ್ಕೋತೀವಿ
ಮಂಡ್ಯದಿಂದ ಕೊಕ್ಕಡ ವೆಂಕಟ್ರಮಣ ಭಟ್ ಅವರು ಪತ್ರ ಬರೆದಿದ್ದಾರೆ. ಅವರ ಪತ್ರದ ಮೊದಲ ವಾಕ್ಯ ಓದಿಯೇ ನಗು ಬಂತು. ಬಹುಶಃ ನಿಮಗೂ ನಗು ಬರುತ್ತದೆ. ಅವರು ಬರೆಯುತ್ತಾರೆ- 'ಶವಾಸನ ಮಾಡಬೇಕಾದರೆ ನಿಧನವಾಗಬೇಕೆಂದು ಮಾಹಿತಿ ಕೊಡುತ್ತೀರಲ್ಲಾ ಸಂಪಾದಕರೇ? ಫೆ.11ರಂದು (ಪುಟ 8) 'ಯೋಗಕ್ಷೇವು' ಅಂಕಣದಲ್ಲಿ 'ಶವಾಸನದ ಮಾಹಿತಿ' ಲೇಖನವನ್ನು ಸ್ವಲ್ಪ ಕಣ್ಣಾಡಿಸಿ ನೋಡಿ ಭಟ್ರೇ.'
"ಅಕ್ಷರಶಃ ಶವದ ಸ್ಥಿತಿಯಲ್ಲಿ ಆಸನ ಮಾಡಬೇಕಾಗಿರುವುದರಿಂದ ಅತ್ಯಂತ ಕಠಿಣ ಆಸನವೂ ಹೌದು ಮೊಣಕಾಲುಗಳನ್ನು ಮಡಚಿ, ಪಾದಗಳನ್ನು ಜೋಡಿಸಿ ಹತ್ತಿರ ತಂದುಕೊಳ್ಳಿ. ನಂತರ ನಿಧಾನವಾಗಿ ಒಂದೊಂದೇ ಪಾದಗಳನ್ನು ನೇರವಾಗಿ ಮುಂದಕ್ಕೆ ಚಾಚಿ. ಅಂಗೈಗಳನ್ನು ಪೃಷ್ಠದ ಪಕ್ಕಕ್ಕೆ ಇಟ್ಟು ನಿಧಾನವಾಗಿ ಹಿಂದಕ್ಕೆ ಬಾಗಿ ನಿಧನವಾಗಿ ಬೆನ್ನನ್ನು ನೆಲಕ್ಕೆ ತಾಗಿಸುತ್ತಾ ಮಲಗಿ..' ಎಂದು ಬರೆಯಲಾಗಿದೆ.'
'ಸ್ವಾಮೀ, ನಿಧನವಾದ ಮೇಲೆ ನಿಧಾನವಾಗಿ ಹಿಂದಕ್ಕೆ ಬಾಗುವುದು ಹೇಗೆ? ಬಾಗಿದ ನಂತರ ಮತ್ತೊಮ್ಮೆ ನಿಧನವಾಗುವುದು ಹೇಗೆ? ಅದರಲ್ಲೇ ಮುಂದುವರಿದು 'ಮೇಲ್ತೋಳಿನ ಹಿಂಬದಿಯನ್ನು ಹಿಗ್ಗಿಸಲು' ಹೇಳಿದ್ದೀರಿ. ಅದರ ಬದಲು ಟಛಟಜ ತೋಳಿನ ಹಿಂಬದಿಯನ್ನು ಜಿಜಟಛಟಜ ಹಿಗ್ಗಿಸಬೇಕು ಎಂದಾದರೂ ಬರೆದಿದ್ದರೆ ಚೆನ್ನಾಗಿತ್ತು!'
'ಇಷ್ಟೇ ಅಲ್ಲ. ಸಮಾನಾಂತರ ಪದವನ್ನು 'ಸಮಾನಂತರ' ಎಂದು ತಪ್ಪು ತಪ್ಪಾಗಿ ಮತ್ತೆ ಮತ್ತೆ ಛಾಪಿಸಲಾಗಿದೆ. 'ಇಂದ್ರಿಯಗಳು' ಪದ, 'ಇಂದ್ರೀಯಗಳು' ಎಂದಾಗಿದೆ. ಒಟ್ಟಿನಲ್ಲಿ 'ಶವಾಸನ'ವನ್ನು ಹಿಂಡಿ ಹಿಪ್ಪೆಮಾಡಿ, ನುಂಗಿ ನೊಣದಂತೆ ಮಾಡಿದ್ದಾರೆ. ಸಂಬಂಧಿಸಿದ ಉಪಸಂಪಾದಕರು, ಕರಡಚ್ಚು ತಿದ್ದುವವರು ಈ ರೀತಿಯ ಬೇಜವಾಬ್ದಾರಿ ತೋರುವುದನ್ನು ಕಂಡು ತೀರಾ ಹತಾಶೆಯೆನಿಸುತ್ತದೆ. 'ನಿಧಾನ'ವಾಗಿ ತಿದ್ದಿಕೊಳ್ಳುವಿರಾ?' ಎಂದಿದ್ದಾರೆ.
ಕೇವಲ ಒಂದಕ್ಷರದ ತಪ್ಪು ಎಂತಹ ಅಪಾರ್ಥಕ್ಕೆ ಮತ್ತು ನಗೆಪಾಟಲಿಗೆ ಕಾರಣವಾಗುತ್ತದೆ ನೋಡಿ. ಪ್ರತಿ ಅಕ್ಷರಕ್ಕೂ ಗಮನ ನೀಡಬೇಕು ಎಂದು ಪತ್ರಕರ್ತರಿಗೆ ಹೇಳುವುದು ಇದೇ ಕಾರಣಕ್ಕೆ.
ರಾಮನಗರ ಜಿಲ್ಲೆಯ ಮತ್ತೀಕೆರೆಯಿಂದ ಮಾಗಡಿ ಶ್ರೀನಿವಾಸ್ ಅವರು ಬರೆಯುತ್ತಾರೆ- 'ಫೆ.11ರಂದು 'ಪತ್ರಪ್ರಭ' ವಿಭಾಗದಲ್ಲಿ 'ಇವು ಕೊಡುವ ಸಂದೇಶವೇನು?' ಅಂಕಣದ 2ನೇ ಪ್ಯಾರಾದ 8ನೇ ಸಾಲು 'ಸೂಕ್ಷ್ಮವಯಸ್ಸಿನವರಾದರೆ ಸಾಯಿರಿ...' ಎಂದಿದೆ. ಇದು 'ಸೂಕ್ಷ್ಮಮನಸ್ಸಿನವರಾದರೆ' ಎಂದಾಗಬೇಕಲ್ಲವೇ? ಹಾಗೆಯೇ 11ನೇ ಸಾಲಿನಲ್ಲಿ 'ಜಿಗುಪ್ಸೆ' ಎಂಬ ಪದ ಬಳಕೆಯಾಗಿದೆ. ಅದು 'ಜುಗುಪ್ಸೆ' ಎಂದಾಗಬೇಕು. ನಂತರ 7ನೇ ಪುಟದ 'ಅಂತಾರಾಷ್ಟ್ರೀಯ ವಲಯದಲ್ಲಿ...' ಎಂಬ ಶೀರ್ಷಿಕೆಯಲ್ಲಿನ ಸುದ್ದಿಯ ಉಪಶೀರ್ಷಿಕೆ 'ಅತಿಮುಖ್ಯ ಬೆಳವಣಿಗೆ' ಎಂದಿದೆ. ಇದು 'ಬೆಳವಣಿಗೆಯಲ್ಲ'- 'ಬೆಳೆವಣಿಗೆ' ಎಂದಾಗಬೇಕಿತ್ತು. ಇದು ಆಕ್ಷೇಪವಲ್ಲ ವಿನಮ್ರ ಸಲಹೆ. ನಮಗೆ ಗೊತ್ತಿರದ ಸಾಕಷ್ಟು ಭಾಷಾ ದೋಷಗಳಿವೆ. ಅದನ್ನು ಸರಿಪಡಿಸುವ ಕೆಲಸ ಪತ್ರಿಕೆಯಿಂದಾಗಲಿ ಎಂಬುದೇ ನನ್ನ ಆಶಯ' ಎಂದಿದ್ದಾರೆ.
'ಬೆಳೆವಣಿಗೆ' ಎಂಬ ಶಬ್ದವನ್ನು ಒಪ್ಪಲು ಕಷ್ಟ. 'ಬೆಳೆ' ಎಂಬುದಕ್ಕೆ 'ಕೃಷಿ ಉತ್ಪನ್ನ' ಎಂಬ ಅರ್ಥವಿದೆ. 'ಬೆಳವಣಿಗೆ' ಎಂಬುದಕ್ಕೆ ಮುಂದುವರಿಕೆ ಎಂಬರ್ಥವಿದೆ. ನಿಘಂಟುಗಳಲ್ಲಿ ಕೂಡ 'ಬೆಳವಣಿಗೆ' ಎಂಬ ಬಳಕೆಯೇ ಇದೆ.
-ವಿಶ್ವೇಶ್ವರಭಟ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

