ನಾಚಿಕೆಗೇಡಿನ ವರ್ತನೆ
ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪಾಲುಗೊಳ್ಳುವ ಸರ್ಕಾರಿ ನೌಕರರಿಗೆ, ಐದು ದಿನಗಳ ವಿಶೇಷ ರಜದ ಸೌಲಭ್ಯವನ್ನು ಒದಗಿಸುವ ನಿರ್ಧಾರ ಯಾರದ್ದೋ ಗೊತ್ತಿಲ್ಲ. ಆದರೆ ಇದು ಈಚಿನ ದಿನಗಳಲ್ಲಿ ನಡೆದು ಬಂದಿರುವ ಸಂಪ್ರದಾಯ.
ಇಲ್ಲಿ ಸರ್ಕಾರಿ ನೌಕರರಿಗೆ ಯಾರೂ ವಿಶೇಷ ಆಹ್ವಾನವನ್ನೇನೂ ಕೊಟ್ಟಿರುವುದಿಲ್ಲ. ಅವರೂ ಎಲ್ಲರಂತೆ, ಪ್ರತಿನಿಧಿಗಳಾಗಿ ನೋಂದಣಿ ಮಾಡಿಸಿಕೊಂಡೇ ಸಮ್ಮೇಳನಕ್ಕೆ ಬರಬೇಕು. ಇಲ್ಲಿ ಹಣದ ಲಾಭವೇನೂ ಇಲ್ಲ. ಇರುವುದೆಲ್ಲ ವೇತನ ಸಹಿತ ರಜೆಯ ಸೌಲಭ್ಯ. ಬಿಜಾಪುರದ ಕನ್ನಡ ಸಾಹಿತ್ಯ ಸಮ್ಮೇಳನದ ಕಾರ್ಯಕಲಾಪವನ್ನು ಗಮನಿಸಿದಾಗ, ಸಮ್ಮೇಳನಕ್ಕೆ ಬಂದಿದ್ದ ಸರ್ಕಾರಿ ನೌಕರರು ಓಒಡಿ (ಅಂದರೆ ಹಾಜರಿ ಖಾತ್ರಿ ದಾಖಲೆ) ಪಡೆಯಲು ನೂಕುನುಗ್ಗಲನ್ನು ನಿರ್ಮಿಸಿದ್ದು ಪ್ರಧಾನವಾಗಿ ಕಂಡುಬರುತ್ತಿದೆ. ಪ್ರಕಟಿತ ವರದಿಗಳಂತೆ, ಸಮ್ಮೇಳನದ ಸ್ವಾಗತ ಸಮಿತಿ ಮೊದಲು ಸಿದ್ಧಪಡಿಸಿದ್ದ 25000 ದಾಖಲೆ ಪತ್ರಗಳು ಸಾಲದೇ ಬಂದು ಇನ್ನೂ 25000 ಪತ್ರಗಳನ್ನು ಜೆರಾಕ್ಸ್ ಪ್ರತಿಗಳ ರೂಪದಲ್ಲಿ ಕೊಡಬೇಕಾಗಿ ಬಂದಿತ್ತು.
ಅಂದರೆ, ಆ ದಾಖಲು ಪತ್ರಗಳ ಸಂಖ್ಯೆಯನ್ನೇ ಗಮನಿಸಿದರೆ, ಸುಮಾರು 50,000 ಸರ್ಕಾರಿ ನೌಕರರು ಅದರಲ್ಲಿ ಪಾಲುಗೊಂಡಿರಬೇಕು. ಆದರೆ ಸಮ್ಮೇಳನದ ಪ್ರತಿನಿಧಿಗಳಾಗಿ ನೋಂದಣಿ ಮಾಡಿಸಿದ್ದ ಸರ್ಕಾರಿ ನೌಕರರ ಸಂಖ್ಯೆ 3500 ಮಾತ್ರ, ಎಂದು ಗೊತ್ತಾಗಿದೆ. ಹಾಗಿದ್ರೆ 50,000 ಹಾಜರಿ ಪತ್ರಗಳನ್ನು ಪಡೆದವರು ಯಾರು? ಯಾಕೆ? ಸರ್ಕಾರಿ ನೌಕರರಲ್ಲದೇ ಬೇರೆ ಯಾರಿಗೂ ಓಒಡಿ ಸೌಲಭ್ಯವಿರಲಿಲ್ಲವಲ್ಲ.
ಸರ್ಕಾರಿ ನೌಕರರಿಗೆ ಜನಮಾನಸದಲ್ಲಿ ಪ್ರತಿಷ್ಠೆಯ ಸ್ಥಾನವಿದೆ. ಅವರಿಗೆ ಈಗ ಸಿಗುತ್ತಿರುವ ವೇತನ- ಭತ್ಯ ಕಡಿಮೆ ಏನೂ ಅಲ್ಲ. ಸಾಹಿತ್ಯ ಸಮ್ಮೇಳನದಲ್ಲಿ ನಡೆದಂತಹ ಘಟನೆಗಳಲ್ಲಿ ಪಾಲುಗೊಂಡು ಆ ವರ್ಗ ತನ್ನ ಗೌರವವನ್ನು ಕಳೆದುಕೊಳ್ಳಬಾರದು. ಮುಂದೆ ಹೀಗಾಗಬಾರದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

