ಸಂಪಾದಕೀಯ

ಕಾದಿದೆ ಸಂಸತ್ತಿನ ಅವಾಂತರ

Published On :

ಗುರುವಾರ ಆರಂಭವಾಗಲಿರುವ ಸಂಸತ್ತಿನ ಅಧಿವೇಶನ ಹಲವು ಕಾರಣಗಳಿಂದಾಗಿ ಮಹತ್ವವಾದದ್ದು. ಮುಂದಿನ ವರ್ಷದ ಸಾರ್ವತ್ರಿಕ ಚುನಾವಣೆಯ ಮುನ್ನ ಈ ಅಧಿವೇಶನ ನಡೆಯುತ್ತಿದೆ. ಆಳುವ ಕೂಟ ಸರ್ಕಾರದ ಕಟ್ಟಕಡೆಯ ಬಜೆಟ್ ಅಂಗೀಕಾರ ಅದರ ಮುಖ್ಯ ಉದ್ದೇಶ.
  ಚುನಾವಣೆಯಲ್ಲಿ ಸಾಮೂಹಿಕವಾಗಿ ಮತಗಳನ್ನು ತಂದುಕೊಡುವಂತಹ ಪ್ರಮುಖ ಜನಪ್ರಿಯ ಕಾರ್ಯಕ್ರಮವನ್ನು ಈಗಾಗಲೇ ಪ್ರಚುರಪಡಿಸಲಾಗಿದೆ. ಅದಕ್ಕೆ ಸಂಬಂಧಿಸಿದಂತೆ ವಿಧೇಯಕಗಳು ಅಂಗೀಕಾರವಾಗಬೇಕಾಗಿರುವುದು ಈಗಲೇ. ಸರ್ಕಾರ ಕನಿಷ್ಠವೆಂದರೂ ಸುಮಾರು ಇಪ್ಪತ್ತು ಹೊಸ ಕಾಯಿದೆಗಳ ರಚನೆಗೆ ಮಾನಸಿಕವಾಗಿ ಬದ್ಧವಾಗಿದೆ. 2009ರ ಚುನಾವಣೆಯಲ್ಲಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಹಾಗೂ ಸಾಲ ಮನ್ನಾ ನೀತಿಗಳೇ ಕಾಂಗ್ರೆಸ್ಸನ್ನು ಗೆಲ್ಲಿಸಿದ್ದು ಎನ್ನುವ ಭಾವನೆ ಅನೇಕರಲ್ಲಿದೆ.
 ಆದರೆ ಈಗ ಆ ಕ್ರಮಗಳು ಹಳತಾಗಿವೆ. ಭ್ರಷ್ಟಾಚಾರಕ್ಕೆ ಸಿಕ್ಕ ಈ ಎರಡೂ ಯೋಜನೆಗಳು ಹೆಸರು ಕೆಡಿಸಿಕೊಂಡಿವೆ. ಆ ಕಾರ್ಯಕ್ರಮದ ಸ್ಥಾನವನ್ನು ಆಹಾರ ಭದ್ರತೆ ನೀತಿ ಹಾಗೂ ಬಡವರಿಗೆ ನೇರ ನಗದು ರೂಪದ ಸಬ್ಸಿಡಿ ಪಾವತಿಯ ಯೋಜನೆಗಳು ಈಗ ತುಂಬ ಬೇಕಾಗಿದೆ. ಆ ವಿಧೇಯಕಗಳಿಗೇ ಆಳುವ ಕೂಟ ಆದ್ಯತೆ ನೀಡುವುದು ಖಚಿತ.   ಸರ್ಕಾರದ ಈ ನಿಲವು ಅರ್ಥವಾಗುವಂತಹದ್ದೇ. ಆದರೆ ಅದು ಪ್ರತಿಪಕ್ಷಗಳಿಗೆ ಪಥ್ಯವಾಗಬೇಕಲ್ಲ! ಸಂಸತ್ತಿನ ಅಧಿವೇಶನವನ್ನು ಹಿಂದಿನಷ್ಟು ಸುಗಮವಾಗಿ ನಡೆಯಲು ಬಿಡುವುದಿಲ್ಲ ಎಂದು ಪ್ರತಿ ಪಕ್ಷಗಳು ಈಗಾಗಲೇ ಸಾರಿದ್ದಾಗಿದೆ. ಅದಕ್ಕೆ ಅಗತ್ಯವಾದ ವಿವಾದಾಸ್ಪದವಾದ ವಿಷಯಗಳಿಗೇನೂ ಕೊರತೆ ಇಲ್ಲ.
  ಈಗ ಸರ್ಕಾರವನ್ನು ಬರಸಿಡಿಲಿನಂತೆಯೇ ಬಡಿದಿರುವ ಹಿಂದಿನ ಹಗರಣ ಎಂದರೆ ಇಟಲಿಯ ಕಂಪೆನಿಯೊಂದರಿಂದ, ಪ್ರತಿಷ್ಠಿತ - ಅತಿಪ್ರತಿಷ್ಠಿತರ ಬಳಕೆಗೆಂದೇ 3600 ಕೋಟಿ ರುಪಾಯಿಗಳ ವೆಚ್ಚದಲ್ಲಿ ವಿಶೇಷ ಹೆಲಿಕಾಪ್ಟರ್‌ಗಳನ್ನು ಕೊಂಡ ವ್ಯವಹಾರದಲ್ಲಿನ ಭ್ರಷ್ಟಾಚಾರದ ಆರೋಪಗಳು.
  ಪ್ರಧಾನಿ ಮನಮೋಹನ ಸಿಂಗ್ ಈ ವಿಚಾರದಲ್ಲಿ ಯಾವ ರೀತಿಯ ತನಿಖೆಗಾದರೂ ಸಿದ್ಧ ಎಂದಿದ್ದಾರೆ. ಸಂಸದೀಯ ಸಮಿತಿಯ ರಚನೆಗೂ ಸಿದ್ಧವಂತೆ. ಆದರೆ ಅದನ್ನು ಅಷ್ಟು ಸುಲಭವಾಗಿ ಮುಗಿಸುವುದಕ್ಕೆ ಪ್ರತಿಪಕ್ಷಗಳು ಸಿದ್ಧವಿಲ್ಲ. 2-ಜಿ ತರಂಗಾಂತರ ಹಂಚಿಕೆಯ ಹಗರಣದ ಮೊಕದ್ದಮೆಗಳು ನ್ಯಾಯಾಲಯದಲ್ಲಿ ವಿಚಾರಣೆಯ ಹಂತವನ್ನು ಮುಟ್ಟಿದಾಗಲೇ, ಹಗರಣದ ಆರೋಪಿಗಳು, ಸರ್ಕಾರಿ (ಸಿಬಿಐ) ಪ್ರಾಸಿಕ್ಯೂಟರ್ ಜತೆ ಷಾಮಿಲಾಗುವ ಆರೋಪವೂ ಮತ್ತೊಂದು ಹಗರಣವಾಗಿ ಕೂತಿದೆ. ಅದರಲ್ಲಿ ಪ್ರತಿಷ್ಠಿತರ ಹೆಸರುಗಳು ಕೇಳಿಬಂದಿವೆ. ಪ್ರತಿಪಕ್ಷದ ಪಾಲಿಗೆ ಇದು ಧಂರೋಟ್ ಸಿಕ್ಕಿದಂತೆ.  ಇವೆಲ್ಲಕ್ಕಿಂತ ಮುಂಚೆ, ಗೃಹಮಂತ್ರಿ ಸುಶೀಲ ಕುಮಾರ ಶಿಂದೆ ಅವರು ಮಾಡಿರುವ ಹಿಂದೂ (ಕೇಸರಿ) ಭಯೋತ್ಪಾದಕರಿಗೆ ಆರೆಸ್ಸೆಸ್ - ಬಿಜೆಪಿ ಶಿಬಿರಗಳಲ್ಲಿ ತರಬೇತಿ, ಅರುಣ್ ಜೈಟ್ಲಿ ಹಾಗೂ ಪತ್ರಿಕಾ ಮಂಡಳಿಯ ಅಧ್ಯಕ್ಷ ನಿವೃತ್ತ ಸುಪ್ರೀಮ್ ಕೋರ್ಟಿನ ನ್ಯಾಯಮೂರ್ತಿ ಮಾರ್ಕಂಡೇಯ ಕಾಟ್ಜು ಅವರ ನಡುವಣ ವಾಕ್ ಸಮರದಲ್ಲಿ ಕಾಂಗ್ರೆಸ್ ಕಾಟ್ಜೂ ಪರವಾಗಿ ನಿಂತಿದ್ದು ನಿಜಕ್ಕೂ ಒಂದು ದೊಡ್ಡ ವಿಚಾರವೇ. ಅದೊಂದೇ ವಿಷಯ ಸಂಸತ್ತಿನ ಉಭಯ ಸದನಗಳನ್ನೂ ಗೊಂದಲದಲ್ಲಿ ಮುಳುಗಿಸಲಿಕ್ಕೆ.  ಇವೆಲ್ಲದರ ನಡುವೆಯೇ ವಿತ್ತಮಂತ್ರಿ ಚಿದಂಬರಮ್ ಸಿದ್ಧಪಡಿಸುತ್ತಿರುವ ಪರ್ವಕಾಲದ ಕನಸಿನ ಬಜೆಟ್‌ನ ಅಂಗೀಕಾರದ ವಿಧಿ-ನಿಯಮಗಳೂ ಮುಗಿಯಬೇಕು.
  2-ಜಿ ತರಂಗಾಂತರ ಹಂಚಿಕೆಯ ಹಗರಣದ ತನಿಖೆ ಮಾಡುತ್ತಿರುವ ಸಂಸದೀಯ ಸಮಿತಿಯ ವರದಿಯೂ ಅಧಿವೇಶನದ ಕಾಲದಲ್ಲೇ ಮಂಡನೆಯಾಗಬೇಕಾಗಿದೆ. ಸಾಲದ್ದಕ್ಕೆ ಕೆಲವು ವರದಿಗಳನ್ನು ನೀಡಿರುವ ಆಡಿಟರ್ ಜನರಲ್ ಅವರ ವರ್ತನೆ ಅನೇಕ ಕಾಂಗ್ರೆಸ್ ಹಿರಿಯರನ್ನು ಕೆರಳಿಸಿದೆ. ಅವರೂ ಸುಮ್ಮನೆ ಕೂಡುವವರಲ್ಲ. ಆ ವಿಚಾರದಲ್ಲೂ ಗೊಂದಲ ಕಾದಿದೆ.  ಒಂದು ಕಡೆ ದೇಶದ ವಿಖ್ಯಾತ ನಿರಶನ ಸತ್ಯಾಗ್ರಹಿ ಅಣ್ಣಾ ಹಜಾರೆ ಹೊಸ ರೂಪದಲ್ಲಿ ಭ್ರಷ್ಟಾಚಾರದ ವಿರುದ್ಧ ತಮ್ಮ ಹೋರಾಟವನ್ನು ಮತ್ತೆ ಆರಂಭಿಸುವ ನೋಟಿಸ್ ನೀಡಿದ್ದಾರೆ. ಭ್ರಷ್ಟಾಚಾರದ ವಿರುದ್ಧದ ಹೋರಾಟವನ್ನೇ ಮುಖ್ಯ ವೇದಿಕೆಯನ್ನಾಗಿ ಮಾಡಿಕೊಂಡಿರುವ ಆಮ್ ಆದ್ಮಿಯ ನಾಯಕರಾದ ಅರವಿಂದ ಕೇಜ್ರಿವಾಲ - ಪ್ರಶಾಂತ ಭೂಷಣ ಅವರ ಬತ್ತಳಿಕೆಯೂ ಬಗೆಬಗೆಯ ಅಸ್ತ್ರಗಳಿಂದ ತುಂಬಿದೆ.
  ಇವೆಲ್ಲದರ ಮಧ್ಯೆ ತೆಲಂಗಾಣ ರಾಜ್ಯ ನಿರ್ಮಾಣದ ಸಮಸ್ಯೆ ಕೇಂದ್ರ ಸರ್ಕಾರದ ಕುತ್ತಿಗೆಗೆ ಉರುಳಾಗಿ ಪರಿವರ್ತನೆಯಾದರೂ ಆಗಬಹುದು. ಈಗ ಆ ವಿಚಾರದಲ್ಲಿ ಕಂಡುಬಂದಿರುವ ಶಾಂತಿ ತೀರ ಕೃತಕವಾದದ್ದು.  ಆರ್ಥಿಕ ವಲಯದಲ್ಲಿ ನಿಜವಾಗಲೂ ಸರ್ಕಾರದ ನೀತಿ ಎಡವಿದಂತಿದೆ. ಹಣದ ಅತಿಪ್ರಸರಣದ ಹೆಚ್ಚಳದ ವೇಗ (ಇನ್‌ಫ್ಲೇಷನ್) ನಿಯಂತ್ರಣಕ್ಕೆ ಸಿಗುತ್ತಿಲ್ಲ. ಜನಸಾಮಾನ್ಯರ ನಿತ್ಯ ಜೀವನದ ಅಗತ್ಯ ವಸ್ತುಗಳ ಬೆಲೆ ಮಧ್ಯಮ ವರ್ಗಕ್ಕೂ ಎಟುಕದಂತಾಗಿದೆ. ಉದ್ಯಮಗಳಲ್ಲಿ ಬಂಡವಾಳ ಹೂಡಿಕೆಯೂ ನಿರೀಕ್ಷೆಯ ಮಟ್ಟದಲ್ಲಿಲ್ಲ, ಕೆಲವು ವಲಯಗಳಲ್ಲಿ, ಪ್ರಧಾನವಾಗಿ ಸೇವಾ ಸೌಲಭ್ಯಗಳ ವಲಯದಲ್ಲಿ ಪ್ರಗತಿ ಕಂಡು ಬಂದರೂ ಅದು ಒಂದು ರೀತಿಯಲ್ಲಿ ದುಡಿಯುವ ಕೈಗಳಿಗೆ ಉದ್ಯೋಗ ಒದಗಿಸುವುದರಲ್ಲಿ ವಿಫಲವಾಗಿದೆ. ಉದ್ಯೋಗ ರಹಿತ ಅಭಿವೃದ್ಧಿ ಯುವ ಜನಾಂಗದ ಪಾಲಿಗೆ ಮಾರಕ.
  ಇಂತಹ ಸನ್ನಿವೇಶದಲ್ಲಿ ಲೋಕಪಾಲ ವ್ಯವಸ್ಥೆಯ ವಿಧೇಯಕವನ್ನು ಮತ್ತೆ ಮಂಡಿಸುವುದು ಕಷ್ಟ. ಕೇಂದ್ರ ಸಚಿವ ಸಂಪುಟದ ನಿರ್ಧಾರ, ರಾಜ್ಯಸಭೆಯ ಸಮಿತಿ ಲೋಕಪಾಲ ವಿಧೇಯಕ್ಕೆ ಸೂಚಿಸಿದ್ದ ಬದಲಾವಣೆಗಳನ್ನು ತಿರುಚಿದೆ ಎನ್ನುವ ಆರೋಪ ಈಗಾಗಲೇ ಕೇಳಿ ಬಂದಿರುವುದೂ ನಿಜ.
  ಮಹಿಳೆಯರ ಮೇಲಿನ ಅತ್ಯಾಚಾರದ ಪ್ರಕರಣಗಳಲ್ಲಿ ಸರ್ಕಾರದ ನಿಲವನ್ನು ಕುರಿತಂತೆ ನ್ಯಾಯಮೂರ್ತಿ ವರ್ಮಾ ಆಯೋಗದ ಶಿಫಾರ್ಸುಗಳಲ್ಲಿ, ಪ್ರಕಟಿತ ಸುಗ್ರೀವಾಜ್ಞೆಯಲ್ಲಿ ತಿರುಚಲಾಗಿದೆ ಎನ್ನುವ ಟೀಕೆ ಇದೆ. ಆ ಸುಗ್ರೀವಾಜ್ಞೆಯ ಕೆಲವು ವಿಧಿಗಳಿಗೆ ಕಾಂಗ್ರೆಸ್ಸಿನಲ್ಲೂ ವಿರೋಧ ಕಂಡು ಬಂದಿದೆ.  ಸಂಸತ್ತಿನ ಬಹುಮುಖ್ಯವಾದ ಅಧಿವೇಶನ ನಡೆಯುತ್ತಿರುವುದು ಈ ಹಿನ್ನೆಲೆಯಲ್ಲಿ. ಇನ್ನು ಮಮತಾ ಬ್ಯಾನರ್ಜಿ, ಮಾಯಾವತಿ, ಮುಲಾಯಂ ಸಿಂಗ್ ಯಾದವ್ ಏನೇನು ತಯಾರಿ ನಡೆಸಿದ್ದಾರೋ ಗೊತ್ತಿಲ್ಲ. ಮಹಿಳೆಯರಿಗೆ ರಾಜಕೀಯ ಪ್ರಾತಿನಿಧ್ಯವನ್ನು ನೀಡುವ ವಿಚಾರವೂ ನೆನೆಗುದಿಗೆ ಬಿದ್ದಿದೆ. ಒಂದು ರೀತಿಯಲ್ಲಿ ಅದು ಸರ್ಕಾರದ ವಚನ ಭ್ರಷ್ಟತೆ.
  ಆದರೂ ಅಧಿವೇಶನ ನಡೆಯಲೇಬೇಕು. ಬಜೆಟ್ ಅಂಗೀಕಾರವಾಗಲೇಬೇಕು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.