ಸಂಪಾದಕೀಯ

ತಪ್ಪಾಯ್ತು ತಿದ್ಕೋತೀವಿ

Published On :

ಬೆಂಗಳೂರಿನ ವಿದ್ಯಾಪೀಠದಿಂದ ರಘುರಾಮ ಭಟ್ ಅವರು ಬರೆಯುತ್ತಾರೆ- 'ಜ.30ರಂದು ಮುಖಪುಟದಲ್ಲಿ 'ಪೆರೋಲ್ ಮೇಲೆ ಪೆರೋಲ್- ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ', ಸ್ವಾಮಿ ನೀವು ಮಾಡಿದ್ದೂ ಅದೇ. ವರದಿಯಲ್ಲಿ ಚಂದ್ರುವಿಗೆ ಏಕವಚನ. ಶುಭಾಗೆ ಬಹುವಚನ. ಈ ತಾರತಮ್ಯ ಯಾಕೆ? ಕೊಲೆಗಾರ್ತಿ ಶುಭಾ ಪ್ರಭಾವಿ ವ್ಯಕ್ತಿಯ ಮಗಳೆಂಬುದಕ್ಕೆ ಗೌರವ ನೀಡಿದಿರಾ ಹೇಗೆ?' ಎಂದು ಪ್ರಶ್ನಿಸಿದ್ದಾರೆ.
ವರದಿಗಾರರು ಬರೆಯುವಾಗ ಮಾಡಿರುವ ತಪ್ಪಿದು. ಸುದ್ದಿ ಬರೆಯುವಾಗ ಸಾಮಾನ್ಯವಾಗಿ ಯಾರೂ ಬರೆಯುತ್ತಿರುವ ವ್ಯಕ್ತಿ ಪ್ರಭಾವಿಯೇ? ಅವರ ತಂದೆ ಪ್ರಭಾವಿಯೇ? ಅವರ ಜಾತಿ ಯಾವುದು? ಮುಂತಾದವನ್ನೆಲ್ಲ ವಿಚಾರ ಮಾಡುವುದಿಲ್ಲ. ದಿನವೂ ಸುದ್ದಿ ಬರೆಯುವ ಪತ್ರಕರ್ತರಿಗೆ ಎಲ್ಲವೂ ಕೇವಲ ಸುದ್ದಿಯಷ್ಟೇ.
ಬೆಂಗಳೂರಿನಿಂದ ವಿ. ಹೇಮಂತಕುಮಾರ ಅವರು ಬರೆಯುತ್ತಾರೆ- 'ಫೆ.6ರಂದು ಮುಖಪುಟದಲ್ಲಿ 'ಕಾವೇರಿ ಆವದಾರಿ?' ಶೀರ್ಷಿಕೆಯ ಲೇಖನದಲ್ಲಿ ರಾಜ್ಯ ಸರ್ಕಾರ ತನ್ನ ನಿಲುವಿನ ಕುರಿತು ಎಂದು ಅದೇ ಲೇಖನ ಮುಂದುವರಿದು 'ಬುಧವಾರ ಸಂಜೆ ಸರ್ಕಾರ ತನ್ನ ನಿಲವು ಪ್ರಕಟಿಸಲಿದೆ' ಎಂದು ಪ್ರಕಟವಾಗಿದೆ. ಅದು 'ನಿಲುವು' ಎಂದಿರಬೇಕಿತ್ತು.'
'ಅದೇ ಪುಟದ ಎಡಭಾಗದಲ್ಲಿ 'ತಿಮ್ಮೇಗೌಡ ಕುಲಪತಿ' ಲೇಖನದಲ್ಲಿ ವಿಶ್ವವಿದ್ಯಾಲಯದ 'ರಸಾಯನಾಸ್ತ್ರ ವಿಭಾಗದ ಪ್ರೊಫೆಸರ್‌' ಎಂದು ಪ್ರಕಟವಾಗಿದೆ. ಅದು 'ರಾಸಾಯನಶಾಸ್ತ್ರ' ಎಂದಿರಬೇಕಿತ್ತು. ಅದೇ ಸುದ್ದಿಯಲ್ಲಿ 'ಬುಧವಾರ (ಫೆ.5) ಅಧಿಕಾರ ವಹಿಸಿಕೊಳ್ಳುತ್ತೇನೆ ಎಂದರು' ಎಂದಿದೆ. ಆದರೆ ಬುಧವಾರ ಫೆ.6 ಅಲ್ಲವೇ?' ಎಂದಿದ್ದಾರೆ.
ಉಳಿದ ತಪ್ಪುಗಳನ್ನು ಒಪ್ಪೋಣ. ಆದರೆ 'ರಸಾಯನಶಾಸ್ತ್ರ' ಎಂದು ತಿದ್ದಿರುವುದನ್ನು ಒಪ್ಪಲು ಸಾಧ್ಯವಿಲ್ಲ. 'ರಾಸಾಯನಶಾಸ್ತ್ರ' ಎಂಬುದು ಸರಿಯಾದ ಬಳಕೆ. ಯಾಕೆಂದರೆ ಹಲವು ಪ್ರದೇಶಗಳಲ್ಲಿ 'ರಸಾಯನ' ಅಂದರೆ, ಬಾಳೆಹಣ್ಣು, ಮಾವಿನಹಣ್ಣು ಮುಂತಾದವನ್ನು ಬಳಸಿ ಮಾಡುವ ಪಾಯಸ ಎಂಬ ಅರ್ಥವಿದೆ. ಇಂಗ್ಲಿಷ್‌ನ 'ಕೆಮಿಕಲ್‌' ಎಂಬುದಕ್ಕೆ 'ರಾಸಾಯನಿಕ' ಎಂಬ ಪದವಿದೆ. ಆದ್ದರಿಂದ 'ರಾಸಾಯನಶಾಸ್ತ್ರ' ಎಂಬುದು ಸರಿಯಾದ ಬಳಕೆ.
ಬೆಂಗಳೂರಿನ ರಾಜಾಜಿನಗರದಿಂದ ಜೆ.ಆರ್. ಆದಿನಾರಾಯಣ ಅವರು ಬರೆಯುತ್ತಾರೆ- 'ಫೆ.5ರಂದು ಮುಖಪುಟದ ಕೆಳಭಾಗದಲ್ಲಿ ಬಾಕ್ಸ್‌ನಲ್ಲಿ ಪ್ರಕಟಸಿದ 'ಆ್ಯಕ್ಸಿಡೆಂಟ್ ಹಿಂದಿನ ಗುಟ್ಟು, ಕನ್ನಡಿ ಮಾಡಿತು ರಟ್ಟು' ಎಂಬ ಶೀರ್ಷಿಕೆಯಲ್ಲಿನ ಮುಂದು ವರಿದ ವರದಿಯಲ್ಲಿ (ಪುಟ 15) 'ಕನ್ನಡಿಯೊಳಗಿನ ಕಥೆ ಹೀಗಿತ್ತು...' ಎಂಬುದರ 2ನೇ ಕಾಲಂನ 4ನೇ ಸಾಲಿನಲ್ಲಿ 2013ರ ಜ.5ರ ರಾತ್ರಿ 10 ಗಂಟೆ ಸುಮಾರಿಗೆ ಅವರು ಕೆಲಸ ಮುಗಿಸಿಕೊಂಡು ತಮ್ಮ ಮನೆಗೆ ನಡೆದುಹೋಗುತ್ತಿದ್ದರು. ಫೆ.5ರ ಪತ್ರಿಕೆಯು ಫೆ.4ರ ರಾತ್ರಿ ಮುದ್ರಣವಾಗುವುದು ಸರಿಯಷ್ಟೇ? ಹೀಗಿರುವಾಗ ಫೆ.5ರ ಪತ್ರಿಕೆಯಲ್ಲಿ ಫೆ.5ರ ರಾತ್ರಿ ಸಂಭವಿಸಿದ ಸುದ್ದಿ ಹೇಗೆ ಬಂತು?' ಎಂದು ಪ್ರಶ್ನಿಸಿದ್ದಾರೆ.
ಇಲ್ಲಿ ತಪ್ಪಾಗಿರುವುದು ಆದಿನಾರಾಯಣ ಅವರಿಂದ ಹೊರತು ಪತ್ರಿಕೆಯಲ್ಲಲ್ಲ. ಅಪಘಾತ ಸಂಭವಿಸಿದ್ದು ಜ.5ರಂದು ಎಂಬುದನ್ನು ವರದಿಯಲ್ಲಿ ಸ್ಪಷ್ಟವಾಗಿ ನಮೂದಿಸಲಾಗಿದೆ. ಈ ವರದಿ ಪ್ರಕಟವಾಗಿರುವುದು ಫೆ.5ರಂದು. ಅಲ್ಲಿಗೆ ಅಪಘಾತ ನಡೆದು ಒಂದು ತಿಂಗಳಾಗಿದೆ.

-ವಿಶ್ವೇಶ್ವರಭಟ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.