ತಮಟೆ ಹೊಡೆದರಷ್ಟೇ ಸಾಕೆ?
ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವವರ ವಿರುದ್ಧ ತೆರಿಗೆ ವಸೂಲಿ ಕ್ರಮವಾಗಿ ತಮಟೆ ಸದ್ದು ಮಾಡುವ ಮೂಲಕ ವಸೂಲಿ ಮಾಡುವುದನ್ನು ಈಚಿನ ದಿನಗಳಲ್ಲಿ ಬಿಬಿಎಂಪಿ ಶುರು ಮಾಡಿದೆ. ಈ ತಮಟೆ ಬಡಿದು ತೆರಿಗೆ ಉಳಿಸಿಕೊಂಡಿರುವವರ ಬಗ್ಗೆ ಸಾರ್ವಜನಿಕರ ಗಮನ ಸೆಳೆದು ತೆರಿಗೆ ತಪ್ಪಿತಸ್ಥರಿಗೆ ಮುಜುಗರವುಂಟುಮಾಡುವ ಇರಾದೆ ಪಾಲಿಕೆಯದ್ದಿರಬಹುದು. ಇದು ಹೌದು ಎಂದಾದರೆ ಪಾಲಿಕೆಯದ್ದು ಬರೀ ಭ್ರಮೆ ಮಾತ್ರ. ಕಾಯ್ದೆ ಪ್ರಕಾರ ನಾಲ್ಕು ವಿಧದಲ್ಲಿ ತೆರಿಗೆ ಬಾಕಿ ವಸೂಲಿಗೆ ಮುಂದಾಗಬಹುದು. ಚರಾಸ್ಥಿಗಳ ಜಫ್ತಿ ಮತ್ತು ಹರಾಜು, ಸ್ಥಿರಾಸ್ತಿಗಳ ಜಫ್ತಿ ಮತ್ತು ಹರಾಜು, ರಿಸೀವರ್ನನ್ನು ನೇಮಿಸಿ ವಸೂಲಿ ಮತ್ತು ತಪ್ಪಿತಸ್ಥನನ್ನು ಬಂಧಿಸಿ ಬಂಧನದೊಳಗಿಡುವುದು. ಜಫ್ತಿ ಮಾಡುವ ಸಮಯದಲ್ಲಿ ತೆರಿಗೆ ಬಾಕಿಯ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ಕೊಡುವುದಲ್ಲದೆ ಅದನ್ನು ಸ್ಥಳೀಯ ಭಾಷೆಯಲ್ಲಿ ಘೋಷಿಸಬೇಕು ಮತ್ತು ಜಫ್ತಿಯನ್ನು ತಮಟೆ ಬಾರಿಸುವುದಷ್ಟೆ ಮಾಡಿದರೆ ಏನು ಪ್ರಯೋಜನ? ಇಷ್ಟು ಮಾಡಿಬಿಟ್ಟರೆ ಸಾಕೆಂಬ ಕೃತಾರ್ಥಭಾವ ಪಾಲಿಕೆಯದ್ದಾದರೆ ಅಧಿಕಾರವಿದ್ದೂ ಅದನ್ನು ಬಳಸಲಾರದ ಅದರ ದಯನೀಯ ಸ್ಥಿತಿಗೆ ತೆರಿಗೆದಾರರು ಹಣೆ ಹಣೆ ಬಡಿದುಕೊಳ್ಳಬೇಕು. ನಗರದಲ್ಲಿ ಲಕ್ಷಾಂತರ ಕಟ್ಟಡಗಳು ತೆರಿಗೆಯ ವ್ಯಾಪ್ತಿಗೊಳಪಟ್ಟೇ ಇಲ್ಲ ಎಂಬ ವರದಿ ಮಾಧ್ಯಮಗಳಲ್ಲಿ ಬಂದಿದೆ. ಹೀಗಿರುವಾಗ ಕಠಿಣ ಕ್ರಮಗಳನ್ನು ಕೈಗೊಳ್ಳದೆ ಬರೀ ಸದ್ದು ಮಾಡಿ ನಂತರ ನಿದ್ದೆ ಹೋದರೆ ಲಾಭ ಇಲ್ಲ. ಇಂತಹ ಸ್ಥಿತಿ ಏನನ್ನು ಸೂಚಿಸುತ್ತದೆ? ನಗರಪಾಲಿಕೆಯ ನಿಷ್ಕ್ರಿಯತೆ, ನಿರಾಸಕ್ತಿ, ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲು ಅಂಜಿಕೆ ಅಥವಾ ಇನ್ಯಾರದೊ ದಾಕ್ಷಿಣ್ಯಕ್ಕೊಳಪಟ್ಟಿರುವ ಸಂದರ್ಭ. ಇಂಥವನ್ನೆ ತಾನೆ. ತೆರಿಗೆ ತಪ್ಪಿತಸ್ಥರು ನಿರಾಂತಕವಾಗಿ ಅಡ್ಡಾಡಿಕೊಂಡಿರುವುದಕ್ಕೆ ನಮ್ಮನ್ನು ಪ್ರತಿನಿಧಿಸುವ(?) ನಗರಪಾಲಿಕೆ ಸದಸ್ಯರೂ ಕಾರಣ. ಇವರದು ಕುಂಭಕರ್ಣನನ್ನು ಮೀರಿಸುವ ನಿದ್ರಾವಸ್ಥೆ. ತೆರಿಗೆಗಳ್ಳನೆನಿಸಿಕೊಳ್ಳುವುದು ಈಗ ಪ್ರತಿಷ್ಠೆ ಪ್ರಭಾವಗಳ ದ್ಯೋತಕವಾಗಿದೆ. ಊರಿಗೇ ದೊಡ್ಡವರು ಇವರು!
-ಸಾಮಗ ದತ್ತಾತ್ರಿ, ಬೆಂಗಳೂರು
ಕ್ಷಮಾದಾನ ಅರ್ಜಿ ತ್ವರಿತ ಇತ್ಯರ್ಥ
ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅಧಿಕಾರ ವಹಿಸಿಕೊಂಡ ನಂತರ ಅದಾಗಲೇ ಇಬ್ಬರಿಗೆ ಮರಣದಂಡನೆ ಶಿಕ್ಷೆ ಜಾರಿಯಾಗಿದೆ. ನಾಲ್ವರು ವೀರಪ್ಪನ್ ಬಂಟರ ಕ್ಷಮಾದಾನ ಅರ್ಜಿಯನ್ನು ತಿರಸ್ಕರಿಸಿ ಅವರಿಗೆ ಗಲ್ಲು ಶಿಕ್ಷೆ ಕಾಯಂ ಆಗಿದೆ. ಇವರ ಘೋರ ಅಪರಾಧಕ್ಕೆ ಕೋರ್ಟ್ ಮೊದಲು ಜೀವಾವಧಿ ಶಿಕ್ಷೆ ನೀಡಿತ್ತು. ಶಿಕ್ಷೆ ಕಡಿಮೆ ಮಾಡಿ ಎಂದು ಕೋರ್ಟಿಗೆ ಹೋದ ಕಾರಣ ದೊರಕಿದ್ದು ಮರಣದಂಡನೆ! ಬಾಣಲೆಯಿಂದ ಒಲೆಗೆ ಬಿದ್ದ ಅನುಭವ. ನೇಣಿಗೆ ಕುಣಿಕೆ ತಯಾರಾಗುತ್ತಿರುವಾಗಲೇ ಸುಪ್ರಿಂ ಕೋರ್ಟ್ನಿಂದ ತಡೆ. ಈವಾಗಲೇ 20 ವರ್ಷ ಕಾರಾಗೃಹ ಶಿಕ್ಷೆ ಅನುಭವಿಸಿದ ಕಾರಣ ಮರಣದಂಡನೆ ಬದಲು ಜೀವಾವಧಿ ಶಿಕ್ಷೆ ಕೊಡಬೇಕು, ಮಾನವೀಯ ದೃಷ್ಟಿಯಿಂದ ಗಲ್ಲು ಶಿಕ್ಷೆ ಕೂಡದು, ಮರಣದಂಡನೆ ಕೊನೆಗಾಣಿಸಬೇಕು ಎಂಬುದು ಹಲವರ ಅಭಿಪ್ರಾಯ. ಹೀಗೆ ಮಾಡಲಿಕ್ಕೂ ಮೊದಲು ಮರಣದಂಡನೆ ಶಿಕ್ಷೆ ಕಾನೂನಿಗೆ ತಿದ್ದುಪಡಿ ತರಲಿಕ್ಕಿಲ್ಲವೇ? ತಿದ್ದುಪಡಿ ತಾರದೆ ಇದು ಹೇಗೆ ಸಾಧ್ಯ? ಬಾಂಬ್ ಸಿಡಿಸಿ 22 ಜನರನ್ನು ಸಾಯಿಸಿ, ಅವರ ಹೆಂಡತಿ ಮಕ್ಕಳನ್ನು ಬೀದಿಗೆ ಹಾಕಿದ ಇಂಥಹ ಕ್ರೂರಿಗಳ ಮೇಲೆ ಯಾಕೆ ಇವರಿಗೆಲ್ಲಾ ಕರುಣೆ? ತಮ್ಮ ಕುಟುಂಬದವರು ಹೀಗೆಯೇ ಸತ್ತಿದ್ದರೆ ಏನು ಮಾಡುತ್ತಿದ್ದರು? ಆದಾಗ್ಯೂ ಕ್ಷಮಾದಾನ ಅರ್ಜಿ ತಿರಸ್ಕರಿಸಲು ಅಥವ ಶಿಕ್ಷೆ ಕಡಿಮೆಗೊಳಿಸಲು ಇಷ್ಟೊಂದು ಕಾಲಾವಕಾಶ ಬೇಕೇ? ಈಗ ಬಂದವರಿಗೆ ಹೊರೆ. ಕ್ಷಮಾದಾನ ಅರ್ಜಿಗಳು ಬಂದ ಒಂದೆರಡು ವರ್ಷಗಳೊಳಗೆ ಇವುಗಳನ್ನೆಲ್ಲಾ ಇತ್ಯರ್ಥಗೊಳಿಸಿದ್ದಲ್ಲಿ ಈ ಎಲ್ಲಾ ಅವಾಂತರಗಳು ನಡೆಯುತ್ತಿದ್ದವೋ? ಈಗ ಸುಪ್ರಿಂ ಕೋರ್ಟಿಗೆ ಸಹ ಸಂಕಷ್ಟ. ಆದ್ದರಿಂದ ಮರಣದಂಡನೆ ಕ್ಷಮಾದಾನ ಅರ್ಜಿಗಳನ್ನು ಆಗಿಂದ್ದಾಗ್ಯೆ ಇತ್ಯರ್ಥಗೊಳಿಸಿದರೆ ಒಳಿತು.
-ಜೆ.ಎಫ್. ಡಿಸೋಜ ಅತ್ತಾವರ
ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

