ಸಂಪಾದಕೀಯ

ತಪ್ಪಾಯ್ತು ತಿದ್ಕೋತೀವಿ

Published On :

ಬೆಂಗಳೂರಿನ ನಂದಿನಿ ಬಡಾವಣೆಯಿಂದ ಸೀತಾರಾಮ ಶಾಸ್ತ್ರಿ ಅವರು ಬರೆಯುತ್ತಾರೆ- 'ಸಂಪಾದಕರೇ, 'ಕುಪ್ಪಳಿ' ಎಂಬುದು ಕರ್ನಾಟಕದ ನಕಾಶೆಯಲ್ಲಿ ಎಲ್ಲಿದೆ ಎಂದು ತಿಳಿಸುತ್ತೀರಾ? ಯಾಕೆಂದರೆ ಫೆ,26-27ರಂದು ಆ ಊರಿನಲ್ಲಿ ಒಂದು ಕಮ್ಮಟ ನಡೆಯಲಿದೆ ಎಂದು ನಿಮ್ಮ ಪತ್ರಿಕೆಯಲ್ಲೇ ಸುದ್ದಿ ಪ್ರಕಟಿಸಿದ್ದೀರಿ. ಆದರೆ ಎಷ್ಟು ಹುಡುಕಿದರೂ 'ಕುಪ್ಪಳಿ' ಸಿಗಲಿಲ್ಲ. ನನಗೆ ತಿಳಿದಂತೆ 'ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ' ಎಂಬುದು ರಾಷ್ಟ್ರಕವಿ ಕುವೆಂಪು ಅವರ ಹೆಸರು. ನೀವು ಅದನ್ನು ಕುಪ್ಪಳಿ ಎಂದು ಹೇಗೆ ಪ್ರಕಟಿಸಿದಿರಿ? ಅಷ್ಟೂ ಗೊತ್ತಿಲ್ಲವೇ?' ಎಂದಿದ್ದಾರೆ.
ಸಾಮಾನ್ಯ ಜ್ಞಾನದ ಪ್ರಕಾರ ಮತ್ತು ನಾವೆಲ್ಲ ಓದಿಕೊಂಡು ಬಂದಿದ್ದು ಕುವೆಂಪು ಅಂದರೆ 'ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ' ಎಂದು. ಸಾಹಿತ್ಯ ಪರಿಷತ್ ವೆಬ್‌ಸೈಟ್‌ನಲ್ಲಿಯೂ 'ಕುಪ್ಪಳ್ಳಿ' ಎಂದೇ ಇದೆ. ಆದರೆ ಇದು ನಾವಂದುಕೊಂಡಷ್ಟು ಸರಳವಿಲ್ಲ. ಯಾಕೆಂದರೆ ಸಾಕಷ್ಟು ಕಡೆ 'ಕುಪ್ಪಳಿ' ಎಂಬ ಬಳಕೆಯೂ ಇದೆ. ಕುವೆಂಪು.ಕಾಮ್‌ನಲ್ಲಿ ಎಲ್ಲ ಕಡೆಯಲ್ಲಿಯೂ 'ಕುಪ್ಪಳಿ' ಎಂದೇ ಬಳಸಲಾಗಿದೆ.
ಸರ್ಕಾರದ ಕಂದಾಯ ದಾಖಲೆ, ರಸ್ತೆಗಳ ಪಕ್ಕದಲ್ಲಿ ಹಾಕಿರುವ ಮೈಲಿಗಲ್ಲುಗಳಲ್ಲೆಲ್ಲ 'ಕುಪ್ಪಳಿ' ಎಂದೇ ಇದೆ. ನಮ್ಮ ಸರ್ಕಾರದ ದಾಖಲೆಗಳೆಲ್ಲ ಬ್ರಿಟಿಷರ ಕಾಲದಲ್ಲಿ ಸೃಷ್ಟಿಯಾದವು. ಆದ್ದರಿಂದ ಇಂಗ್ಲಿಷ್ ಭಾಷೆ ಉಚ್ಛಾರದಲ್ಲಿ ಅದು 'ಕುಪ್ಪಳಿ'ಯಾಗಿದೆ ಎಂಬ ವಾದವೂ ಇದೆ. ಈ ವಾದಕ್ಕೆ ಪುಷ್ಟಿ ನೀಡುವಂತೆ ಕಲ್ಕತ್ತಾ ಇಂದು ಕೋಲ್ಕತಾ ಆಗಿದೆ. ಬಾಂಬೆ-ಮುಂಬಯಿ, ಬ್ಯಾಂಗಲೋರ್- ಬೆಂಗಳೂರು, ಮೆಡ್ರಾಸ್-ಚೆನ್ನೈ, ಬೆಳಗಾಂ- ಬೆಳಗಾವಿ ಹೀಗೆ ಸಾಕಷ್ಟು ಉದಾಹರಣೆಗಳನ್ನು ನೀಡಬಹುದು. ಈ ರೀತಿ ಬ್ರಿಟಿಷರ ನಾಲಿಗೆಗೆ ಸಿಕ್ಕು ಬದಲಾದ ಉರುಗಳು ಹೆಸರುಗಳ ಪಟ್ಟಿಯಲ್ಲಿ 'ಕುಪ್ಪಳಿ'ಯೂ ಸೇರಿದೆ ಎಂಬ ವಾದವೂ ಇದೆ.
ಸಾಮಾನ್ಯವಾಗಿ ಕನ್ನಡದಲ್ಲಿ ಗ್ರಾಮ, ಕೇರಿ, ಊರು, ಪುರ, ಹಳ್ಳಿ ಎಂಬ ಬಳಕೆಗಳಿವೆ. ಹೀಗಾಗಿಯೇ ಕನಕಪುರ, ವಿಜಾಪುರ, ಸಕಲೇಶಪುರ, ಊರುಕೇರಿ, ಸಂಕಳ್ಳಿ, ಬ್ಯಾಡ್ರಳ್ಳಿ, ಸಂತೇಮರಹಳ್ಳಿ, ಮೈಸೂರು, ಮೂರೂರು ಈ ರೀತಿ ಹೆಸರುಗಳೇ ಹೆಚ್ಚಿರುತ್ತವೆ. ಇದೇ ರೀತಿಯಲ್ಲಿ 'ಕುಪ್ಪಳ್ಳಿ' ಎಂದಿರಬೇಕು. ಕೊಪ್ಪ ಎಂಬ ಊರಿಗೆ ಹತ್ತಿರವಿರುವ ಹಳ್ಳಿಯಾಗಿರುವುದರಿಂದ ಕೊಪ್ಪದ ಹತ್ತಿರದ ಹಳ್ಳಿ ಎಂಬರ್ಥದಲ್ಲಿ 'ಕೊಪ್ಪಳ್ಳಿ' ಆಗಿರಬಹುದು. ಕಾಲಾಂತರದಲ್ಲಿ 'ಕುಪ್ಪಳ್ಳಿ' ಆಗಿರಬಹುದು ಎಂಬ ವಾದವೂ ಇದೆ.
ಒಂದೊಮ್ಮೆ ಅದು 'ಕುಪ್ಪಳ್ಳಿ' ಅಲ್ಲವೆಂದಾದರೆ ಇಷ್ಟು ವರ್ಷಗಳ ಕಾಲ ಪಠ್ಯಗಳಲ್ಲಿ 'ಕುಪ್ಪಳ್ಳಿ' ಎಂದೇ ಏಕೆ ಪ್ರಕಟಿಸಲಾಗುತ್ತಿದೆ? ಕನ್ನಡ ಸಾಹಿತ್ಯ ಪರಿಷತ್ ವೆಬ್‌ಸೈಟ್‌ನಲ್ಲೂ ಯಾಕೆ ಕುಪ್ಪಳ್ಳಿ ಎಂದೇ ಪ್ರಕಟಿಸಲಾಗಿದೆ? ಅದರ ಬಗ್ಗೆ ಯಾರೂ ಏಕೆ ತಕರಾರು ಎತ್ತಿಲ್ಲ? ಎಂಬೆಲ್ಲ ಪ್ರಶ್ನೆಗಳು ಏಳುತ್ತವೆ. 'ಕುಪ್ಪಳ್ಳಿ'ಯೂ ತಪ್ಪಲ್ಲ, 'ಕುಪ್ಪಳಿ'ಯೂ ತಪ್ಪಲ್ಲ ಎಂದು ಹೇಳುವುದು ತರವಲ್ಲ. ಆದ್ದರಿಂದ ಇದು ಚರ್ಚೆಗೆ ಅರ್ಹವಾದ ಸಂಗತಿ ಎಂದು ಭಾವಿಸುತ್ತೇನೆ. ಈ ಬಗ್ಗೆ ತಿಳಿದವರು ಸೂಕ್ತವಾಗಿ ಅವರ ಅಭಿಪ್ರಾಯ ಮಂಡಿಸಲು ಮತ್ತು ಚರ್ಚೆಗೆ ಅವಕಾಶವಿದೆ.

-ವಿಶ್ವೇಶ್ವರಭಟ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.