ರಾಹುಲ್ ಗಾಂಧಿ ಹೇಳಿದ ಪಾಠ
ಮಾಧ್ಯಮ ಪ್ರಪಂಚದಲ್ಲಿ ಕಾಂಗ್ರೆಸ್ಸಿನ ಸಾಧನೆಗಳು ಸರಿಯಾಗಿ ಪ್ರತಿಬಿಂಬಿತವಾಗುತ್ತಿಲ್ಲವೆನ್ನುವ ಕೊರಗು ಆ ಪಕ್ಷದ ನಾಯಕರಲ್ಲಿದೆ. ಅದೇ ರೀತಿ ಪಕ್ಷದ ಸಣ್ಣ ಪುಟ್ಟ ದೋಷಗಳನ್ನು ಭೂತಗನ್ನಡಿ ಹಿಡಿದು ಜನರ ಮುಂದೆ ಇಡಲಾಗುತ್ತಿದೆ ಎನ್ನುವ ಅಸಮಾಧಾನವ್ನೂ ಈಗ ಪ್ರಕಟವಾಗುತ್ತಿದೆ.
ಈ ದೂರನ್ನು ಸಂಪೂರ್ಣವಾಗಿ ಸರಿ ಎಂದು ಒಪ್ಪುವುದು ಕಷ್ಟವಾದರೂ, ಅನುಕೂಲವಾಗುವ ರೀತಿಯಲ್ಲಿ ಪ್ರಚಾರ ಗಳಿಸುವ ಕಲೆಯಲ್ಲಿ ಕಾಂಗ್ರೆಸ್ ಹಿಂದೆ ಬಿದ್ದಿರುವುದು ನಿಜ. ಆ ಕೊರತೆಯನ್ನು ನೀಗಿಸಲು ದೇಶದ ಎಲ್ಲ ಭಾಗಗಳಿಂದ ಆರಿಸಿದ ಸುಮಾರು 150 ಪ್ರಚಾರಕರಿಗೆ ಒಂದು ರೀತಿಯ ತರಬೇತಿ ಶಿಬಿರವನ್ನು ದೆಹಲಿಯಲ್ಲಿ ಏರ್ಪಡಿಸಲಾಗಿತ್ತು.
ಅಲ್ಲಿ ಇತ್ತೀಚಿನ ಆವಿಷ್ಕಾರಗಳಾದ ಟಿ.ವಿ. ವಾಹಿನಿಗಳಲ್ಲಿ ನಡೆಯುವ ಚರ್ಚೆ, ಪತ್ರಿಕಾಗೋಷ್ಠಿಗಳು, ಬೇರೆ ಬೇರೆ ರೂಪದ ಸಂವಾದಗಳಲ್ಲಿ ಯಾವ ರೀತಿ ವರ್ತಿಸಿದರೆ ನೀತಿ-ಸಿದ್ಧಾಂತಗಳಿಗೆ ಸರಿಯಾದ ರೀತಿಯಲ್ಲಿ ಪ್ರಚಾರ ಪಡೆಯಬಹುದು, ಜನರಿಗೆ ಸೂಕ್ತ ಸಂದೇಶವನ್ನು ರವಾನಿಸಬಹುದು ಎನ್ನುವ ವಿಚಾರಗಳನ್ನು ಕುರಿತು ಅನುಭವಸ್ಥರಿಂದ ಉಪನ್ಯಾಸಮಾಲೆ ಹಾಗೂ ಶಿಕ್ಷಣ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಈ ಶಿಬಿರವನ್ನು ಉದ್ಘಾಟಿಸಿದ ಪಕ್ಷದ ಉಪಾಧ್ಯಕ್ಷ ರಾಹುಲ ಗಾಂಧಿ ಅವರು ಪ್ರಕಟಿಸಿದ ವಿಚಾರಗಳು, ಸಂವಹನದ ವಾಹಿನಿಗಳ ಸಂಪರ್ಕ ಪಡೆಯುವವರಿಗೆಲ್ಲ ಅನುಕೂಲವಾಗುವಂತಹದ್ದು. ನಿಜ. ಆ ಶಿಬಿರ ಪಕ್ಷದ ಕಾರ್ಯಕರ್ತರಿಗೆ ಮಾತ್ರ ನಡೆದಿದ್ದು. ರಾಹುಲ ಗಾಂಧಿ ಅವರು ಹೇಳಿದ್ದೆಲ್ಲ ಪ್ರಕಟವಾಗಿರುವುದು ಆ ಸಭೆಯಲ್ಲಿ ಹಾಜರಿದ್ದ ಕೆಲವರ ಮೂಲಕ. ಆದರೂ ಈ ಸಂದರ್ಭದಲ್ಲಿ ರಾಹುಲ ಗಾಂಧಿ ಆಡಿದ ಮಾತುಗಳಿಂದ, ಅವರೀಗ ನಿಜ ರಾಜಕೀಯದ ವೇದಿಕೆಗೆ ಸಂಪೂರ್ಣವಾಗಿ ಸಜ್ಜಾಗಿದ್ದಾರೆ ಎನಿಸುತ್ತಿದೆ. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ತನ್ನ ಪ್ರಧಾನಿ ಪೀಠದ ಅಭ್ಯರ್ಥಿಯನ್ನು ಗುರ್ತಿಸಿ ಪ್ರಚಾರ ಕೊಡಬೇಕಾದ ಅಗತ್ಯ ಈಗ ಇರುವಂತಿಲ್ಲ.
ರಾಹುಲ ಗಾಂಧಿ ಅವರ ಮೊದಲ ಮಾತೇ ಪಕ್ಷದ ವಕ್ತಾರರನ್ನು ಕುರಿತದ್ದು. ಪಕ್ಷದ ಪ್ರಕಟಿತ ನೀತಿಯ ಆಚೆಗೆ ಹೋಗುವಂತಿಲ್ಲ. ಸ್ವಂತ ಪ್ರತಿಷ್ಠೆಯ ಪ್ರದರ್ಶನಕ್ಕಾಗಿ, ಇತರ ಪಕ್ಷಗಳ ವಕ್ತಾರರ ಜತೆ ಜಗಳವಾಡಬೇಕಾದ ಅವಶ್ಯಕತೆ ಇಲ್ಲ. ಸಂಯಮದಿಂದಲೇ ಪಕ್ಷದ ನಿಲವನ್ನು ಸಮರ್ಥವಾಗಿ ಪ್ರತಿಪಾದಿಸಿ, ತೀರ್ಮಾನವನ್ನು ಜನರಿಗೇ ಬಿಡುವುದು ಸೂಕ್ತ.
ಈ ವಿಚಾರದಲ್ಲಿ ಈಗ ಗೊಂದಲಕ್ಕೆ ಸಿಕ್ಕಿಬಿದ್ದಿರುವ ಅಂಶ ಎಂದರೆ ಫೇಸ್ಬುಕ್ನಂತಹ ಸಾಮಾಜಿಕ ತಾಣಗಳನ್ನು ಬಳಸುವವರು, ಸಾರ್ವಜನಿಕ ವಿಷಯಗಳಲ್ಲಿ ಪಕ್ಷದ ಅಂಗೀಕೃತ ನೀತಿಗೇ ಬದ್ಧವಾಗಿರಬೇಕೆ ಎನ್ನುವುದು. ಆ ವಿಚಾರದಲ್ಲಿ ರಾಹುಲ್ ನಿಲವು ಸ್ಪಷ್ಟ. ಪಕ್ಷದ ನಿಲವಿಗೆ ಬದ್ಧತೆ ಇರಲೇಬೇಕು.
ರಾಹುಲ ಗಾಂಧಿ ಅವರ ಪ್ರಕಾರ, ಟಿ.ವಿ. ವಾಹಿನಿಗಳ ಚರ್ಚೆಗಳಲ್ಲಿ ವಿಪರೀತಾರ್ಥದ ವಾದವನ್ನು ಮಂಡಿಸುವುದು, ಎದುರಾಳಿಗಳನ್ನು ಹಳಿಯುವುದು ಅಥವಾ ಆರೋಪಕ್ಕೆ ಉತ್ತರ ರೂಪದಲ್ಲಿ ಪ್ರತ್ಯಾರೋಪವನ್ನು ಮಾಡುವುದು ವಕ್ತಾರರ ಪ್ರತಿಷ್ಠೆಯನ್ನು ಹೆಚ್ಚಿಸುವುದಿಲ್ಲ ಹಾಗೂ ಅದರಿಂದ ಪಕ್ಷಕ್ಕೂ ಅನುಕೂಲವಾಗುವುದಿಲ್ಲ. ಅವರ ಈ ಮಾತುಗಳನ್ನು ಅಲ್ಲಗಳೆಯುವುದು ಕಷ್ಟ. ಅದರ ಅಗತ್ಯವೂ ಇಲ್ಲ.
ಸಾಮಾನ್ಯವಾಗಿ, ರಾಹುಲ ಗಾಂಧಿ ಮಾತನಾಡುವುದು ಕಡಿಮೆ. ಈಗ ಅದು ಇನ್ನೂ ಕಡಿಮೆಯಾಗಿದೆ. ಹೆಚ್ಚಿನ ಸಮಯವನ್ನು ಅವರು ಬೇರೆ ಬೇರೆ ರಾಜ್ಯಗಳಿಂದ ದೆಹಲಿಗೆ ಬರುವ ಕಾರ್ಯಕರ್ತರ ಗುಂಪುಗಳ ಜತೆ ನೇರವಾಗಿ ಸಂವಾದ ನಡೆಸುತ್ತಿದ್ದಾರೆ. ಈ ತಂತ್ರ ಯಶಸ್ವಿಯಾದರೆ ಅದು ನಿಜವಾದ ಅರ್ಥದಲ್ಲಿ ಪಕ್ಷದ ಸಂಘಟನೆಯನ್ನು ಬಲಪಡಿಸಿದಂತೆಯೇ ಆಗುತ್ತದೆ.
ಈಗ ಪ್ರಕಟವಾಗುತ್ತಿರುವ ಚುನಾವಣೆ ಪೂರ್ವ ಸಮೀಕ್ಷೆಗಳಲ್ಲಿ ಕಾಂಗ್ರೆಸ್ಸಿಗೆ ಅನುಕೂಲವಾಗುವಂತಹ ಚಿತ್ರವನ್ನು ಬಿಡಿಸಿರುವುದು ಕಡಿಮೆ. ಅದನ್ನು ಗಮನಿಸಿಯೇ ರಾಹುಲ ಗಾಂಧಿ ತಮ್ಮ ವೈಯಕ್ತಿಕ ಸಂವಾದ ಕಾರ್ಯಕ್ರಮವನ್ನು ಆರಂಭಿಸಿರಬಹುದು. ಇದೊಂದು ಒಳ್ಳೆಯ ಪ್ರಯತ್ನವೇ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

