ಸಂಪಾದಕೀಯ

ಏಕೋಪಾಸನೆ, ಅಗ್ಗದ ಪ್ರಚಾರ

Published On :

ಬೆಂಗಳೂರಿನ ದೇವನಹಳ್ಳಿ ಸಮೀಪ ಐಐಟಿ ಮಾದರಿಯಲ್ಲಿ ಶ್ರೀ ರಾಜೀವಗಾಂಧಿ ಪೆಟ್ರೋಲಿಯಂ ಉತ್ಪನ್ನಗಳ ತಂತ್ರಜ್ಞಾನ ಹಾಗೂ ಸಂಶೋಧನಾ ಸಂಸ್ಥೆ ನಿರ್ಮಿಸಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದ್ದು ಸ್ವಾಗತಾರ್ಹ. ಆದರೆ ರಾಜೀವಗಾಂಧಿ ಹೆಸರೇ ಏಕೆ? ಪರ್ಯಾಯವಾಗಿ ಕೈಗಾರಿಕಾ ಕ್ರಾಂತಿಯ ಹರಿಕಾರ, ವಿಶ್ವಮಾನ್ಯ ಪ್ರಾತಃಸ್ಮರಣೀಯ ಸರ್ ಎಂ. ವಿಶ್ವೇಶ್ವರಯ್ಯನವರ ಹೆಸರು ಸೂಕ್ತವಲ್ಲವೆ? ಅವರ ಜನ್ಮಸ್ಥಳವು ಹತ್ತಿರದಲ್ಲಿಯೇ ಇದೆ. ಕಳೆದ 18 ವರ್ಷಗಳಲ್ಲಿ ನೆಹರೂ-ಗಾಂಧಿಗಳ (ಜುಗಲಬಂದಿ) ಸುಮಾರು 450 ಕೇಂದ್ರಿಯ ಹಾಗೂ ರಾಜ್ಯ ಸರ್ಕಾರಗಳ ವಿವಿಧ ಕಾರ್ಯಕ್ರಮಗಳಿಗೆ, ಸಂಸ್ಥೆಗಳಿಗೆ ಹೆಸರಿಸಲಾಗಿದೆ. ಇವರನ್ನು ಬಿಟ್ಟರೆ ನಮ್ಮಲ್ಲಿ ರಾಷ್ಟ್ರ ನಿರ್ಮಾತೃಗಳ ಬರವಿದೆಯೆ? ಅಥವಾ ಇದು ಬ್ರಿಟಿಷರು ಬಿಟ್ಟು ಹೋದ ಗುಲಾಮ ಪದ್ಧತಿಯ ಮುಂದುವರಿದ ಭಾಗವೆ? ನೆಹರೂ-ಗಾಂಧಿ ಕುಟುಂಬದ ಹೆಸರಿನಲ್ಲಿ 12 ಕೇಂದ್ರ ಸರ್ಕಾರದ, 52 ರಾಜ್ಯ ಸರ್ಕಾರಗಳ ಕಾರ್ಯಕ್ರಮಗಳು, 98 ವಿಶ್ವವಿದ್ಯಾಲಯ ಹಾಗೂ ವಿದ್ಯಾಸಂಸ್ಥೆಗಳು, 6 ಬಂದರು ಹಾಗೂ ವಿಮಾನ ನಿಲ್ದಾಣಗಳು, 66 ಪ್ರಶಸ್ತಿ, ವಿದ್ಯಾರ್ಥಿ ವೇತನ ಇತ್ಯಾದಿ, 47 ಕ್ರೀಡಾ ಚಟುವಟಿಕೆ ಪ್ರಶಸ್ತಿ, ಕ್ರೀಡಾಂಗಣ, 15 ರಾಷ್ಟ್ರೀಯ ಉದ್ಯಾನ, 39 ಆಸ್ಪತ್ರೆ ಹಾಗೂ ವೈದ್ಯಕೀಯ ಶಿಕ್ಷಣ ಸಂಸ್ಥೆಗಳು, 37 ರಾಷ್ಟ್ರೀಯ ವೈಜ್ಞಾನಿಕ ಮತ್ತು ಸಂಶೋಧನ ಸಂಸ್ಥೆಗಳು, 74 ರಸ್ತೆ -ಕಟ್ಟಡಗಳು ಇತ್ಯಾದಿ. ಈ ಪ್ರಚಾರ ಕಾರ್ಯದ ತುದಿಯಲ್ಲಿ ಶಿಲಾಂಗ್‌ನಲ್ಲಿ ಸ್ಥಾಪಿಸಿರುವ ಐಐಎಂನ್ನು ರಾಜೀವಗಾಂಧಿ ಐಐಎಂ ಎಂದು ಹೆಸರಿಸಲಾಗಿದೆ. (ಆಧಾರ: All in the name of Nehru-Gandhi by A Surya prakash) ಈ ಅಂಕಿ ಅಂಶಗಳಿಗೆ ಇತ್ತೀಚಿನ ದಿನಗಳಲ್ಲಿ ಹೊಸ ಸೇರ್ಪಡೆಗಳೂ ಆಗಿರಬಹುದು. ಇದಕ್ಕೆ ಕೊನೆ ಮೊದಲೇ ಇಲ್ಲ. ಮೇಧಾವಿ ಸರ್ ಎಂ. ವಿಶ್ವೇಶ್ವರಯ್ಯನವರ ಹೆಸರಿನ ಜೊತೆಗೆ ಸುಭಾಷ್‌ಚಂದ್ರ ಬೋಸ್, ಲಾಲಾಲಜಪತ್‌ರಾಯ್, ಬಾಲಗಂಗಾಧರ ತಿಲಕ್, ಗೋಖಲೆ, ಸಾವರ್ಕರ್, ಕರ್ನಾಟಕದ ಪರಂಪರೆ ಸಾರಿದ ಜಯಚಾಮರಾಜ ಒಡೆಯರ್, ಕನ್ನಡದ ಶ್ರೇಷ್ಠ ಸಾಮ್ರಾಜ್ಯ ಸ್ಥಾಪಿಸಿದ ವಿದ್ಯಾರಣ್ಯ-ಕೃಷ್ಣದೇವರಾಯ, ದಾಸಪುಂಗವರಾದ ಕನಕ, ಪುರಂದರ, ಬಸವಣ್ಣ, ಆಚಾರ್ಯತ್ರಯರು, ದಕ್ಷಿಣ ಭಾರತದ ಪ್ರಖ್ಯಾತ ದೊರೆಗಳಾದ ಇಮ್ಮಡಿ ಪುಲಿಕೇಶಿ, ಹೊಯ್ಸಳ, ಹಿಂದೂ ಧರ್ಮದ ಹಿತಚಿಂತಕ ವಿವೇಕಾನಂದರು ಇತ್ಯಾದಿ ನಾಮಗಳನ್ನು ಯಾವುದೇ ಪೂರ್ವಗ್ರಹವಿಲ್ಲದೆ ಪರಿಗಣಿಸಬಹುದು. ಇದೇ ರೀತಿಯ ಅಗ್ಗದ ಏಕಸ್ವಾಮಿತ್ವ, ಭಜನೆ, ಪ್ರಚಾರ, ಪರಾಕು ಮುಂದುವರೆದರೆ, ರಷ್ಯಾ ದೇಶದಲ್ಲಿ ಅವಜ್ಞೆಗೆ ಒಳಗಾದ ಲೆನಿನ್, ಸ್ಟಾಲಿನ್‌ರಿಗಾದ ಪರಿಸ್ಥಿತಿ ಇಲ್ಲೂ ಉಂಟಾಗುವುದರಲ್ಲಿ ಯಾವುದೇ ಸಂಶಯವಿಲ್ಲ.
-ಪ್ರಕಾಶ ವಾಟವೆ, ಬೆಂಗಳೂರು

ವಿದ್ಯುತ್ ಕಂಪನ

ಕೆಲವೊಂದು ಸಂಸ್ಥೆಗಳ ಹೆಸರಿನಲ್ಲಿ ಸಂಬಂಧಪಟ್ಟ ಇಲಾಖೆಗಳ ಗಮನಕ್ಕೆ ಅರಿವಿದ್ದೋ ಇಲ್ಲದೆಯೋ ಅನೇಕ ಸುಲಿಗೆ/ವಂಚನೆ ಪ್ರಸಂಗಗಳು ಬಯಲಾಗುತ್ತಿರುವುದು ನಾಗರಿಕ ಸಮಾಜದ ದುರದೃಷ್ಟ. ಇಂತಹ ಸಾಲಿಗೆ ಕರ್ನಾಟಕ ವಿದ್ಯುಚ್ಛಕ್ತಿ ಸರಬರಾಜು ಮಂಡಳಿಯೂ ಸೇರ್ಪಡೆಗೊಳ್ಳುತ್ತಿರುವುದು ಬೇಸರದ ಸಂಗತಿ. ಕ.ವಿ. ಮಂಡಳಿಯು ಇತ್ತೀಚಿನ ದಿನಗಳಲ್ಲಿ ಪ್ರತಿ ಮನೆಗಳಿಗೂ ನೂತನ ವಿದ್ಯುಚ್ಛಕ್ತಿ ಮೀಟರ್‌ಗಳನ್ನು ಅಳವಡಿಸಿ ಎಲ್ಲಾ ಗ್ರಾಹಕರುಳಿಗೆ ಮಾಸಿಕ ಬಿಲ್‌ಗಳಲ್ಲಿ ಕೊಂಚ ಮಟ್ಟದ ಕಂಪನವನ್ನೇ ಸೃಷ್ಟಿಸಿರುವುದನ್ನು ಒಂದು ವಿಧದಲ್ಲಿ ಸಮರ್ಥಿಸಿಕೊಳ್ಳೋಣ. ವಿದ್ಯುಚ್ಛಕ್ತಿಯ ಸೋರಿಕೆ ಮತ್ತು ಕಳ್ಳತನವನ್ನು ತಡೆಗಟ್ಟುವಲ್ಲಿ ಈ ಹೊಸ ಮೀಟರ್‌ಗಳು ಸಹಕಾರಿಯಾಗಬಲ್ಲವು ಎಂಬ ಇಲಾಖೆಯ ಸಮರ್ಥನೆಯನ್ನು ಒಪ್ಪಿಕೊಳ್ಳುವುದು ಗ್ರಾಹಕರಿಗೆ ಅನಿವಾರ್ಯ. ಇಷ್ಟರ ಹೊರತಾಗಿಯೂ ಅನೇಕ ಸಂದರ್ಭಗಳಲ್ಲಿ ವಾಸದ ಮನೆಯ ವಿದ್ಯುತ್ ಬಿಲ್‌ನ ಪ್ರಮಾಣ ತಿಂಗಳಿಗೆ ಸಾವಿರಾರು/ಲಕ್ಷ ರೂಪಾಯಿಗಳಿಗೂ ತಲುಪಿರುವ ಅನೇಕ ಪ್ರಸಂಗಗಳು ದೃಶ್ಯ ಮಾಧ್ಯಮಗಳಲ್ಲಿ ಪ್ರಸಾರಗೊಂಡಿರುವುದನ್ನು ನೋಡಿರುತ್ತೇವೆ. ಬಿಲ್ಲಿಂಗ್‌ನಲ್ಲಿ ಆದ ಪ್ರಮಾದಕ್ಕೆ ಇಲಾಖೆ ವತಿಯಿಂದ ದೊರೆತ ಸಮಜಾಯಿಷಿಗಳು ಗ್ರಾಹಕರ ಪಾಲಿಗೆ 'ಗಾಯದ ಮೇಲೆ ಬರೆ ಎಳೆದಂತೆ' ಭಾಸವಾಗುತ್ತಿರುವುದು ವಿಪರ್ಯಾಸವೇ ಸರಿ. ಇತ್ತೀಚಿನ ದಿನಗಳಲ್ಲಿ ಕೆ.ಜಿ.ಎಫ್. ಪ್ರದೇಶದ ಬಡಾವಣೆಗಳ ಮನೆಗಳಿಗೆ ಕ.ವಿ. ಮಂಡಳಿಯ ಹೆಸರಲ್ಲಿ, ವ್ಯಕ್ತಿಗಳು ಭೇಟಿ ನೀಡಿ 2ಳ6 ಇಂಚು ಅಳತೆವುಳ್ಳ ಸಣ್ಣ ಗಾತ್ರದ ರಟ್ಟಿನ ಸ್ಟಿಕ್ಕರ್‌ಗಳ ಮೇಲೆ ಮೀಟರ್ ನಂಬರ್‌ಗಳನ್ನು ನಮೂದಿಸಿ ಅವುಗಳನ್ನು ಗೋಡೆಗೆ ಅಂಟಿಸಿ ಪ್ರತಿ ಸ್ಟಿಕ್ಕರ್‌ಗಳಿಗೆ ರು. 20/-ರಂತೆ ಶುಲ್ಕ ವಸೂಲಿ ಮಾಡುತ್ತಿರುವುದು ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿಸಿದೆ. ಇವುಗಳ ಅಳವಡಿಕೆ ಕಡ್ಡಾಯ ಎಂಬ ಸಮಜಾಯಿಷಿಯೊಂದಿಗೆ ಯಾವುದೋ ಒಂದು ವೃತ್ತಪತ್ರಿಕೆ (?) ಯ ಸುದ್ದಿಯ ಝೆರಾಕ್ಸ್ ಪ್ರತಿಯನ್ನು ಹೊಂದಿರುವ ವ್ಯಕ್ತಿ ಹಣ ವಸೂಲಿ ಮಾಡುತ್ತಿರುವುದು ಸಂಶಯಕ್ಕೆ ಎಡೆ ಮಾಡಿದೆ. ಪತ್ರಿಕಾ ಸುದ್ದಿಯ ಝೆರಾಕ್ಸ್ ಪ್ರತಿಯಲ್ಲಿ ಕ್ಷೇತ್ರವಾರು ಕೆಲವೊಂದು ದೂರವಾಣಿ ಸಂಖ್ಯೆಗಳೂ ಲಭ್ಯವಿವೆ. ನಿಯಮದಂತೆ ಇಂತಹ ಪತ್ರಿಕಾ ಸುದ್ದಿ ಪ್ರಕಟಗೊಂಡಿರುವ ಕುರಿತಂತೆ ಹಾಗೂ ಶುಲ್ಕ ವಸೂಲಿ ಮತ್ತು ದೂರವಾಣಿ ಸಂಖ್ಯೆಗಳ ಸತ್ಯಾಸತ್ಯತೆ ಕುರಿತಂತೆ ಮಾಹಿತಿಯನ್ನು ಕರಪತ್ರಗಳ ಮೂಲಕವೋ ಪತ್ರಿಕಾ ಪ್ರಕಟಣೆಗಳ ಮೂಲಕವೋ ಕ.ವಿ. ಮಂಡಳಿಯಿಂದ ಪ್ರಕಟಿಸಿದಲ್ಲಿ ಸಾರ್ವಜನಿಕರಿಗೆ ಗೊಂದಲದಿಂದ ಮುಕ್ತಿ ದೊರಕೀತು.
-ಟಿ. ಯಶವಂತ ಪೈ., ಕೆ.ಜಿ.ಎಫ್

ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.