ತಪ್ಪಾಯ್ತು ತಿದ್ಕೋತೀವಿ
ಭೀಮಗುಳಿ ಶ್ಯಾಮ್ ಅವರು ಮಿಂಚಂಚೆ ಕಳುಹಿಸಿದ್ದಾರೆ. 'ಜು.16ರ ಸಂಚಿಕೆಯಲ್ಲಿ 'ರಾವಣ ಸತ್ತಿದ್ದು ರಾಮಬಾಣದಿಂದಲ್ಲ! ಶ್ರೀಲಂಕಾ ವಿದ್ವಾಂಸನ ಸಂಶೋಧನಾ ಕೃತಿಯಿಂದ ಬಹಿರಂಗ' ಎಂಬ ಶೀರ್ಷಿಕೆಯಲ್ಲಿ ಸುದ್ದಿ ಪ್ರಕಟವಾಗಿದೆ. ಇಲ್ಲಿ 'ಬಹಿರಂಗ' ಪದ ಪ್ರಯೋಗ ಎಷ್ಟು ಸರಿ?'
'ಇಲ್ಲಿಯವರೆಗೆ ಈ ವಿಷಯ ಮುಚ್ಚಿಡಲಾಗಿತ್ತು ಅಥವಾ ಆ ವಿಷಯದ ಬಗ್ಗೆ ಯಾರಿಗೂ ಮಾಹಿತಿ ಇಲ್ಲದೆ ಜನರು ವಿಷಯ ತಿಳಿಯಲು ಕಾದುಕೊಂಡಿದ್ದರೆ 'ಬಹಿರಂಗ' ಪದ ಪ್ರಯೋಗ ಸರಿ. ಆದರೆ ಇಲ್ಲಿ ರಾಮನ ಬಾಣದಿಂದ ರಾವಣ ಸತ್ತಿಲ್ಲ ಎನ್ನುವುದು ವಿದ್ವಾಂಸರ ಸಂಶೋಧನೆಯ ಅಭಿಪ್ರಾಯವಷ್ಟೆ. ಅದು ಬಹಿರಂಗವಾಗಲು ಕಾಯುತ್ತಿದ್ದ ಸುದ್ದಿ ಅಥವಾ ಗುಟ್ಟು ಅಲ್ಲ. 'ಶ್ರೀಲಂಕಾ ವಿದ್ವಾಂಸನ ಸಂಶೋಧನಾ ಕೃತಿಯಲ್ಲಿ ಪ್ರತಿಪಾದನೆ' ಎಂದು ಬರೆದಿದ್ದರೆ ಸಮಂಜಸವಾಗಿತ್ತು' ಎಂದಿದ್ದಾರೆ.
ಮೈಸೂರಿನಿಂದ ಎಸ್.ರಾಘವೇಂದ್ರ ಮಿಂಚಂಚೆ ಮಾಡಿದ್ದಾರೆ. 'ಜು.24ರ ಸಂಚಿಕೆಯ 'ದೇಶ-ವಿದೇಶ' ಪುಟದಲ್ಲಿ ಬ್ರಿಟನ್ ರಾಜಮನೆತನದಲ್ಲಿ ಮಗು ಹುಟ್ಟಿದ ಸಂಭ್ರಮಕ್ಕೆ ಸಂಬಂಧಿಸಿ 'ಕೇಟ್ಗೆ ಕಿಶೋರ ಸಂಭ್ರಮ' ಸುದ್ದಿ ಶೀರ್ಷಿಕೆಗೆ ನನ್ನ ಆಕ್ಷೇಪ. ಕ.ಪ್ರ. ಶೀರ್ಷಿಕೆಗಳು ಆಕರ್ಷಕವಾಗಿರುವುದರಲ್ಲಿ ಸಂಶಯವೇ ಇಲ್ಲ. ಆದರೆ ಆಗೊಮ್ಮೆ ಈಗೊಮ್ಮೆ ಸ್ವಲ್ಪ ಎಡವಟ್ಟುಗಳು ಆಗುತ್ತಿವೆ. ಶೀರ್ಷಿಕೆಯಲ್ಲಿ 'ಕಿಶೋರ' ಎಂಬ ಸಂಸ್ಕೃತದ ಪದ ಅನುಚಿತವಾಗಿ ಬಳಕೆಯಾಗಿದೆ. ಪ್ರಸವದ ಸುದ್ದಿಗೆ ಪ್ರಾಸ ಜೋಡಿಸಲು ಹೋಗಿ ತ್ರಾಸವಾಗಿದೆ. ಆಗ ತಾನೆ ಹುಟ್ಟಿದ ಮಗುವನ್ನು ಕಿಶೋರ ಎಂದು ಕರೆಯುವುದು ತಪ್ಪು ಪ್ರಯೋಗ. ಮಗುವಿನ ಬೆಳವಣಿಗೆಯಲ್ಲಿ ಬಾಲ್ಯಾವಸ್ಥೆ ನಂತರದ್ದು ಕಿಶೋರಾವಸ್ಥೆ. ಕಿಶೋರಾವಸ್ಥೆ ಸಾಮಾನ್ಯವಾಗಿ ಐದನೇ ವಯಸ್ಸಿನಿಂದ ಹನ್ನೆರಡನೆ ವಯಸ್ಸಿನವರೆಗೆ ಇರುತ್ತದೆ. ಮಗುವಿನ ಕಾಲುಗಳು ಬಲಗೊಂಡ ಬಳಿಕ ಈ ಅವಸ್ಥೆ ಪ್ರಾರಂಭವಾಗುತ್ತದೆ. ಗಂಡು ಮಕ್ಕಳಿಗೆ ಚಿಗುರು ಮೀಸೆ ಮೂಡುವುದರೊಂದಿಗೆ ಮತ್ತು ಗಂಟಲು ಒಡೆಯುವುದರೊಂದಿಗೆ ಕೊನೆಗೊಂಡು ಯೌವನಾವಸ್ಥೆ ಪ್ರಾರಂಭವಾಗುತ್ತದೆ. ಸಂಸ್ಕೃತ ಭಾಷೆಯ ಸಂಪತ್ತಿನ ಆಗರವೆನಿಸಿದ 'ಶ್ರೀಮದ್ ಭಾಗವತ'ದಲ್ಲಿ ದೇವಕಿಗೆ ಸೆರೆಯಲ್ಲಿ ಆಗ ತಾನೆ ಹುಟ್ಟಿದ ಶ್ರೀಕೃಷ್ಣನನ್ನು 'ತಮದ್ಭುತಂ ಬಾಲಕಂ ಅಂಬುಜೇಕ್ಷಣಂ' ಎಂದು ಸಂಬೋಧಿಸಲಾಗಿದೆ. 'ಮುಕುಂದಮಾಲಾ' ಸ್ತೋತ್ರದಲ್ಲಿ 'ಬಾಲಂ ಮುಕುಂದಂ....' ಎಂದು ಕರೆಯಲಾಗಿದೆ. ಬಾಲ, ಶಿಶು, ಅರ್ಭಕ... ಇವೆಲ್ಲವೂ ಸಮನಾರ್ಥಕ ಶಬ್ದಗಳು. ಮೇಲ್ಕಂಡ ಶೀರ್ಷಿಕೆ ಬದಲಾಗಿ 'ಬ್ರಿಟನ್ನಲ್ಲಿ ಬಾಲ ಸಂಭ್ರಮ' ಅಥವಾ ಶುದ್ಧ ಕನ್ನಡದಲ್ಲಿ 'ಕೇಟ್ಗೆ ಹುಟ್ಟಿದ ಕಂದ' ಎಂದೆಲ್ಲ ಕೊಡಬಹುದಿತ್ತು. ವಿದೇಶದಲ್ಲಿ ಮಕ್ಕಳ ಬೆಳವಣಿಗೆ ತುಂಬಾ 'ಫಾಸ್ಟ್' ಅಂತೆ! ಬಹುಷಃ ಅದಕ್ಕೆ 'ಕಿಶೋರ' ಎಂದು ಕರೆದಿರಬೇಕು!' ಎಂದು ಹೇಳಿದ್ದಾರೆ.
-ವಿಶ್ವೇಶ್ವರಭಟ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

