ತೆಲಂಗಾಣದ ಪ್ರಸವ ವೇದನೆ
ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿರುವ ಬಲ್ಲ ಮೂಲಗಳ ಆಧರಿತ ವರದಿ ವಿಶ್ಲೇಷಣೆಗಳನ್ನು ಗಮನಿಸಿದರೆ, ಆಗಸ್ಟ್ ಐದರಿಂದ ಆರಂಭವಾಗುವ ಸಂಸತ್ತಿನ ಮುಂಗಾರು ಅಧಿವೇಶನದ ವೇಳೆಗೆ ತೆಲಂಗಾಣ ರಾಜ್ಯ ನಿರ್ಮಾಣ ಕುರಿತಂತೆ ಸರ್ಕಾರ ಅಂತಿಮ ನಿರ್ಧಾರದ ಪ್ರಕಟಣೆಗೆ ಎಲ್ಲವೂ ಸಜ್ಜಾಗಿರುವಂತೆ ಕಂಡು ಬರುತ್ತಿದೆ.
ಕಳೆದ ವಾರಾಂತ್ಯದಲ್ಲಿ ಕಾಂಗ್ರೆಸ್ಸಿನ ಅಗ್ರಗಣ್ಯ ಮುಖಂಡರು ಈ ವಿಚಾರದಲ್ಲಿ ಹಲವಾರು ಸಭೆಗಳನ್ನು ನಡೆಸಿ, ಆಂಧ್ರಪ್ರದೇಶದ ಮುಖಂಡರ ಜತೆಯಲ್ಲೂ ವಿಚಾರ ವಿನಿಮಯ ನಡೆಸಿ, ಪ್ರತ್ಯೇಕ ತೆಲಂಗಾಣ ರಾಜ್ಯದ ನಿರ್ಮಾಣ ಅನಿವಾರ್ಯ ಎನ್ನುವ ತೀರ್ಮಾನಕ್ಕೆ ಬಂದಿದ್ದರೂ, ಅದನ್ನು ಪ್ರಕಟಿಸಲು ಸಮಯ ಬೇಕು. ಅದರ ಸಂಬಂಧದ ಪ್ರಕ್ರಿಯೆ ಈಗಷ್ಟೇ ಆರಂಭವಾಗಿರುವುದು. ನಿಜ. ಇದಕ್ಕೆ ಮುಂಚೆ, ಉತ್ತರ ಪ್ರದೇಶದಿಂದ ಉತ್ತರಾಖಂಡ, ಮಧ್ಯಪ್ರದೇಶದಿಂದ ಚತ್ತೀಸಗಡ, ಬಿಹಾರದಿಂದ ಜಾರ್ಖಂಡ ರಾಜ್ಯಗಳು - ಪ್ರತ್ಯೇಕ ರಾಜ್ಯದ ಸ್ಥಾನಮಾನ ಪಡೆದ ಉದಾಹರಣೆ ಇದೆ. ಆದರೆ ಆ ರಾಜ್ಯಗಳಲ್ಲಿನ ಸಮಸ್ಯೆಗೂ, ಆಂಧ್ರಪ್ರದೇಶದ ಸಮಸ್ಯೆಗೂ ವ್ಯತ್ಯಾಸವಿದೆ. ಅದು ಒಂದು ರೀತಿಯಲ್ಲಿ ಇತಿಹಾಸಕ್ಕೆ ಸಂಬಂಧಿಸಿದಂತಿರುವ ವ್ಯತ್ಯಾಸ.
ಆಂಧ್ರ ರಾಜ್ಯದ ನಿರ್ಮಾಣವಾದಾಗ, ತೆಲುಗು ಮಾತನಾಡುವ ತೆಲಂಗಾಣ ಸೀಮೆಯನ್ನು ಅಂದಿನ ಕೇಂದ್ರ ಸರ್ಕಾರ ಹೈದರಾಬಾದ್ ಸಂಸ್ಥಾನದಲ್ಲೇ ಉಳಿಸಿತ್ತು. ಹಿಂದಿನ ಮದರಾಸ್ ಪ್ರಾಂತದ ಆಡಳಿತ ವ್ಯವಸ್ಥೆ, ಆರ್ಥಿಕ - ಸಾಮಾಜಿಕ ಪರಿಸ್ಥಿತಿಗೂ, ಹೈದರಾಬಾದ್ನ "ಮೂಲ್ಕಿ" ಸಂಸ್ಕೃತಿ, ಅಲ್ಲಿನ ಜನರಿಗಿದ್ದ ಸೌಲಭ್ಯಗಳಿಗೂ ವ್ಯತ್ಯಾಸವಿತ್ತು.
ರಾಜ್ಯಗಳ ಪುನಾರಚನೆಯಾದಾಗ, ಹೈದರಾಬಾದ್ ಸಂಸ್ಥಾನವೇ ಭಾರತದ ಭೂಪಟದಿಂದ ಅಳಿಸಿ ಹೋಗಿ, ಮಹಾರಾಷ್ಟ್ರ, ಆಂಧ್ರಪ್ರದೇಶ, ಕರ್ನಾಟಕಗಳಲ್ಲಿ ಹಂಚಿ ಹೋದಾಗಲೇ ತೆಲಂಗಾಣದಲ್ಲಿ ಅನೇಕ ಜನವರ್ಗಗಳಲ್ಲಿ ಬೇಸರವಿತ್ತು.
ಆ ಬೇಸರ ಹಲವಾರು ಬಾರಿ ಸಂಘರ್ಷದ ಸ್ವರೂಪವನ್ನು ಪಡೆದು, ಈಗಲೂ ತೆಲಂಗಾಣದ ನಿರ್ಮಾಣವಾಗದಿದ್ದರೆ ಅಲ್ಲಿನ ಜನಜೀವನದ ವ್ಯವಸ್ಥೆಯೇ ಹದಗೆಟ್ಟೀತು ಎನ್ನುವ ಎಚ್ಚರಿಕೆಯನ್ನು ನೀಡಲಾಗಿದೆ. ಅದೇ ರೀತಿ ಆಂಧ್ರ ಪ್ರದೇಶದ ರಾಯಲ ಸೀಮೆ, ಕರಾವಳಿ ಹಾಗೂ ಸರ್ಕಾರ್ ಸೀಮೆಯ ಜನರೂ ಆಂಧ್ರ ವಿಭಜನೆಯಾದರೆ ಕ್ಷೋಭೆ ಎದುರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗುವುದಾಗಿ ಎಚ್ಚರಿಕೆ ನೀಡಿದ್ದಾರೆ. ಆಂಧ್ರ ಪ್ರದೇಶದ ಮುಖ್ಯಮಂತ್ರಿ ಕಿರಣ ಕುಮಾರ್ ರೆಡ್ಡಿ ಅವರೂ ಸೇರಿದಂತೆ ಮಂತ್ರಿಗಳು, ಕಾಂಗ್ರೆಸ್ ಶಾಸಕರು ರಾಜಿನಾಮೆ ನೀಡುವ ಬೆದರಿಕೆಯನ್ನು ಹಾಕುವುದರಲ್ಲಿ ಹಿಂದೆ ಬಿದ್ದಿಲ್ಲ. ತೆಲಂಗಾಣ ರಾಷ್ಟ್ರ ಸಮಿತಿಯ ಮುಖಂಡರು ಈಗ ಆಕ್ರಮಣಶೀಲತೆಯ ಪ್ರದರ್ಶನಕ್ಕೆ ಇಳಿದಿಲ್ಲ. ಅವರಿಗೆ ಗಾಳಿ ತಮ್ಮ ಪರವಾಗಿ ಬೀಸುತ್ತಿದೆ ಎನ್ನುವ ಅರಿವಿರುವಂತಿದೆ. ಪ್ರಕಟಿತ ವರದಿಗಳಂತೆ, ರಾಯಲಸೀಮೆ-ಕರಾವಳಿ ಆಂಧ್ರ ನಾಯಕರ ಅನಿಸಿಕೆಯನ್ನು ಸಚಿವ ಸಂಪುಟದ ಮುಂದೆ ಮಂಡಿಸುವ ಭರವಸೆ ಪ್ರಧಾನಿ ಮನಮೋಹನ ಸಿಂಗ್ ಅವರೇ ನೀಡಿದ್ದಾರೆ. ಆದರೆ ವಿಷಯ ಸಚಿವ ಸಂಪುಟದ ಮುಂದೆ ಹೋಗುವುದಕ್ಕೆ ಇನ್ನೂ ಸಮಯವಿದೆ. ಕಾಂಗ್ರೆಸ್ ಕಾರ್ಯ ಸಮಿತಿಯ ನಿರ್ಣಯವೇ ಇನ್ನೂ ಆಗಿಲ್ಲ. ಕಾಂಗ್ರೆಸ್ಸಿನಲ್ಲಿ ಆಂಧ್ರಪ್ರದೇಶದ ವ್ಯವಹಾರಗಳನ್ನು ನೋಡಿಕೊಳ್ಳುತ್ತಿರುವ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ ಸಿಂಗ್ ಅವರು ಚರ್ಚೆ, ವಿಚಾರ ವಿನಿಮಯದ ಕಾಲ ಮುಗಿದಿದೆ. ಇನ್ನು ನಿರ್ಧಾರದ ಸಮಯ ಎಂದು ಹೇಳಿದ್ದೂ ಆಗಿದೆ, ಅಷ್ಟೇ.
ಪ್ರತ್ಯೇಕ ತೆಲಂಗಾಣದ ರಚನೆಯ ನಿರ್ಧಾರ ಕಾಂಗ್ರೆಸ್ಸಿಗೆ ಮಾತ್ರ ಸಂಬಂಧಿಸಿದ್ದಲ್ಲ. ಆಳುವ ಸಂಯುಕ್ತ ಪ್ರಗತಿ ಪರ ಕೂಟದ ಇತರ ಪಕ್ಷಗಳನ್ನು ಕೇಳಬೇಕು. ಸಾಧ್ಯವಾದರೆ ದೇಶದಲ್ಲಿನ ಇತರ ಪ್ರಮುಖ ರಾಜಕೀಯ ಪಕ್ಷಗಳ ಅಭಿಪ್ರಾಯವನ್ನೂ ಪರಿಗಣಿಸಲೇಬೇಕು. ಸಂಸತ್ತಿನಲ್ಲಿ ಚರ್ಚೆಯಾದ ಅನಂತರವೇ ಅಂತಿಮ ನಿರ್ಧಾರ ಪ್ರಕಟವಾಗುವುದು. ಹೈದರಾಬಾದ್ ಮಹಾನಗರದ ಸ್ಥಾನಮಾನದ ಪ್ರಶ್ನೆ ಇನ್ನೂ ಜಟಿಲವಾಗಿಯೇ ಇದೆ. ಆ ವಿಚಾರದಲ್ಲಿ ಕೇಂದ್ರ ಕಾಂಗ್ರೆಸ್ ನಾಯಕರಲ್ಲಿ ಯಾರೂ, ಅಂದರೆ ಸೋನಿಯಾ ಗಾಂಧಿ, ರಾಹುಲ ಗಾಂಧಿ, ಎ.ಕೆ. ಆಂಟನಿ, ಪಿ. ಚಿದಂಬರಮ್, ಸುಶೀಲ ಕುಮಾರ ಶಿಂಧೆ ಅವರಂತಹವರು ಮಾತನ್ನೇ ಆಡುತ್ತಿಲ್ಲ. ಹಿಂದಿನ "ರಾಜ್ಯಗಳ ವಿಭಜನೆಗಳಲ್ಲಿ" ಕಂಡುಬಂದಿದ್ದ ಒಮ್ಮತ ಅಭಿಪ್ರಾಯ ತೆಲಂಗಾಣದ ವಿಚಾರದಲ್ಲಿ ಕಂಡು ಬರುವುದಿಲ್ಲ ಎನ್ನುವುದು ನಿಜ. ಆ ಸಮಸ್ಯೆಯನ್ನು ಪ್ರಾದೇಶಿಕತೆಯ ನೆಲೆಯಲ್ಲಿ ನಿಂತ ರಾಷ್ಟ್ರೀಯ ನಾಯಕರು ಬಗೆಹರಿಸಬೇಕು. ಇದು ದಕ್ಷಿಣದ ಅತಿದೊಡ್ಡ ರಾಜ್ಯದ ವಿಭಜನೆಯ ಪ್ರಶ್ನೆ. ಇದನ್ನು ರಾಷ್ಟ್ರೀಯ ಸಮಸ್ಯೆ ಎಂದೇ ಭಾವಿಸಿ, ಅದರ ಪರಿಹಾರಕ್ಕೆ ಒಂದು ರಾಷ್ಟ್ರೀಯ ಪರಿಹಾರ ಸೂತ್ರವನ್ನೇ ಕಂಡುಕೊಳ್ಳಬೇಕು.
ಇಂತಹ ಸಂಕೀರ್ಣ ಸಮಸ್ಯೆಯ ಪರಿಹಾರಕ್ಕೆ ಸಂಕುಚಿತ ರಾಜಕೀಯದ ಚಿಂತನೆಯಾಗಲಿ, ಚುನಾವಣೆಯಲ್ಲಿ ಮತ ಬ್ಯಾಂಕ್ಗಳ ನಿರ್ಮಾಣದ ತಂತ್ರಗಾರಿಕೆಯಾಗಲಿ ಪ್ರಮುಖವಾದ ಪರಿಗಣನೆಯಾಗಬಾರದು.
ಅರ್ಧ ಶತಮಾನಕ್ಕಿಂತಲೂ ಹೆಚ್ಚಿನ ಅವಧಿಯ ಕಾಲ ಕೊತ ಕೊತನೆ ಕುದಿಯುತ್ತಲೇ ಇರುವ ಸಮಸ್ಯೆಗೆ ಪ್ರಾಂಜಲ ಮನಸ್ಸಿನ ಜನತಾಂತ್ರಿಕ ಚಿಂತನೆಯೇ ಪರಿಹಾರ ಸೂತ್ರವನ್ನು ಒದಗಿಸಬೇಕು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

