ಸಂಪಾದಕೀಯ

ನರೇಂದ್ರ ಮೋದಿ - ನೆರೆ ಪರಿಹಾರ

Published On :

ಉತ್ತರಾ ಖಂಡದ ಘರವಾಲ ಸೀಮೆಯಲ್ಲಿ ಪ್ರವಾಹ, ಪರ್ವತಗಳ ಕುಸಿತ, ರಸ್ತೆಗಳೇ ನಾಪತ್ತೆಯಾದ ಭೀಕರ ಅನಾಹುತದ ಸಮಯದಲ್ಲಿ ಗುಜರಾತ್‌ನ ಬಿಜೆಪಿ ಮುಖ್ಯಮಂತ್ರಿ ನರೇಂದ್ರ ಮೋದಿ ಅಲ್ಲಿಗೆ ಹೋಗಿ ಹದಿನೈದು ಸಹಸ್ರ ಗುಜರಾತಿಗಳನ್ನು ರಕ್ಷಿಸಿದರೆನ್ನುವ ಅನೇಕ ವರದಿಗಳು ಪ್ರಕಟವಾಗಿವೆ. ಹದಿನೈದು ಸಹಸ್ರ ಜನರನ್ನು ಒಂದೇ ದಿನದಲ್ಲಿ ಸ್ಥಳಾಂತರಿಸುವ ಪವಾಡ ನಡೆದಿದ್ದಾರೂ ಹೇಗೆ? ಆ ಪ್ರಶ್ನೆ ವರದಿಗಳ ಪ್ರಕಟಣೆ-ಪ್ರಚಾರಕ್ಕೆ ಮುಂಚೆ ಯಾರ ಮನಸ್ಸಿಗೂ ಹೊಳೆದಂತಿಲ್ಲ. ಆದರೆ ಈಗ ಕೆಲವು ರಾಜಕೀಯ ಪಕ್ಷಗಳು, ಪ್ರಧಾನವಾಗಿ ಕಾಂಗ್ರೆಸ್ಸಿನ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ ಸಿಂಗ್ ಅವರು ನರೇಂದ್ರ ಮೋದಿ ಸುಳ್ಳು ಹೇಳುತ್ತಿದ್ದಾರೆಂದು ಹೇಳಿದಾಗ, ಹಿಂದೆ ಸುದ್ದಿಯನ್ನು ಪ್ರಕಟಿಸಿದ, ಟಿ.ವಿ. ವಾಹಿನಿಗಳಲ್ಲಿ ಬಿತ್ತರಿಸಿದವರು ಯಾರೂ ಯಾವ ಪ್ರಶ್ನೆ ಕೇಳದೇ ಇದ್ದ ತಮ್ಮ ವರ್ತನೆಯನ್ನು ಮರೆತು ನರೇಂದ್ರ ಮೋದಿ ಅವರನ್ನು ತೆಗಳುತ್ತಿರುವುದರ ಹಿನ್ನೆಲೆ ಏನು?
 ಅಸಲಿಗೆ, ನರೇಂದ್ರ ಮೋದಿ ಅಂತಹ ಕೆಲಸ ಮಾಡಿದ್ದಾರೆನ್ನುವ ವರದಿಯ ಮೂಲ ಯಾವುದು? ಸ್ವತಃ ಮೋದಿ ಅವರು ಏನನ್ನೂ ಹೇಳಿಲ್ಲ. ಅವರ ಸಂಪರ್ಕ ಮಂತ್ರಾಲಯದ ಅಧಿಕೃತ ಹೇಳಿಕೆಯೂ ಇಲ್ಲ. ಭಾರತೀಯ ಜನತಾ ಪಕ್ಷದ ಪರವಾಗಿಯೂ ಯಾವ ಹೇಳಿಕೆಯೂ ಪ್ರಕಟವಾಗಿಲ್ಲ. ಹಾಗಿದ್ರೆ ಇಂತಹ ಸುದ್ದಿಯನ್ನು ಬಿತ್ತರಿಸಿದ ಸಂಸ್ಥೆಗೆ ಸುದ್ದಿ ಸಿಕ್ಕಿದ್ದಾದರೂ ಹೇಗೆ. ಅದರ ಮೂಲ ಯಾವುದು? ಯಾವುದಾದರೂ ಟಿ.ವಿ. ವಾಹಿನಿಯಲ್ಲಿ ಸುದ್ದಿಯನ್ನು ಕುರಿತ ಸಾಕ್ಷ್ಯ - ಆಧಾರ ಇದೆಯೇನು?
ಇದು ಈಗ ಮಾಧ್ಯಮ ಪ್ರಪಂಚದ ವಿಶ್ವಾಸಾರ್ಹತೆಯ ಪ್ರಶ್ನೆಯಾಗಿ ಪರಿವರ್ತನೆಯಾಗುವ ಮುನ್ನವೇ, ಆ ಪ್ರಪಂಚದಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿರುವವರು ಸೂಕ್ತ ರೀತಿಯ ವಿವರಣೆಯನ್ನು ನೀಡಬೇಕು. ಇಷ್ಟೆಲ್ಲಾ ಆದಮೇಲೆ, ಬಿಜೆಪಿಯ ಅಧ್ಯಕ್ಷ ರಾಜನಾಥ ಸಿಂಗ್ ಅವರು ನರೇಂದ್ರ ಮೋದಿ ಉತ್ತರಾ ಖಂಡಕ್ಕೆ ಹೋಗಿದ್ದು ಅಲ್ಲಿನ ಸಂತ್ರಸ್ತರ ನೋವಿಗೆ ಸ್ಪಂದಿಸಲು ಮಾತ್ರ ಎನ್ನುವ ಅಧಿಕೃತ ಹೇಳಿಕೆಯನ್ನು ನೀಡಿದ್ದಾರೆ. ಇವೆಲ್ಲದರ ಮಧ್ಯೆ, ರಾಹುಲ ಗಾಂಧಿ ಉತ್ತರಾಖಂಡಕ್ಕೆ ಸಾಮಾನ್ಯ ನಾಗರಿಕರಾಗಿ ಹೋಗಿದ್ದರೆಂದು ಕಾಂಗ್ರೆಸ್ಸಿನ ಅಧಿಕೃತ ಹೇಳಿಕೆಯೂ ಪ್ರಕಟವಾಗಿದೆ. ಒಂದು ರಾಷ್ಟ್ರೀಯ ವಿಪತ್ತಿನ ಸನ್ನಿವೇಶದಲ್ಲಿ ಇವೆಲ್ಲವೂ ನಿಜವಾಗಿಯೂ ಪ್ರಹಸನಗಳೇ. ನಾವು ಇನ್ನಷ್ಟು ಜವಾಬ್ದಾರಿಯುತವಾಗಿ ನಡೆದುಕೊಳ್ಳುವುದನ್ನು ಕಲಿಯಬೇಕು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.