ಸಂಪಾದಕೀಯ

ತಪ್ಪಾಯ್ತು ತಿದ್ಕೋತೀವಿ

Published On :

ಮೈಸೂರು ಜಿಲ್ಲೆ ಬೆಟ್ಟದಪುರದ ಬಿ.ಕೆ. ಶ್ರೀಕಾಂತ್ ಅವರು ಪ್ರಸ್ತಾಪಿಸಿದ (ತಪ್ಪಾಯ್ತು ತಿದ್ಕೋತೀವಿ ಮಾ.18) 'ಅಂತರಾಷ್ಟ್ರೀಯ' ಎಂಬ ಬಳಕೆಯನ್ನು ಒಪ್ಪಲು ಸಾಧ್ಯವಿಲ್ಲ. ಹಲವರ ಅಭಿಪ್ರಾಯಗಳ ನಂತರವೇ 'ಅಂತಾರಾಷ್ಟ್ರೀಯ' ಎಂಬ ಬಳಕೆಯನ್ನು ಜಾರಿ ಮಾಡಿದ್ದು.
ಬೆಂಗಳೂರು ವಿದ್ಯಾರಣ್ಯಪುರದಿಂದ ಎಚ್. ಆನಂದರಾಮ ಶಾಸ್ತ್ರಿ ಅವರು ಬರೆಯುತ್ತಾರೆ- 'ನಿಮ್ಮಿಂದ 'ಕನ್ನಡ ಪಂಡಿತ'ರೆಂದು ಅರ್ಥಗರ್ಭಿತ ಅಭಿಧಾನಕ್ಕೆ (ಅಭಿದಾನ ಅಲ್ಲ) ಪಾತ್ರರಾಗಿರುವ ಎಂ. ಮುಕುಂದ್ ಅವರು 'ಅನಂತರ, ನಂತರ' ಈ ಪದಗಳ ಬಳಕೆ ಕುರಿತು (14 ಮಾರ್ಚ್) ಪ್ರದರ್ಶಿಸುತ್ತಿರುವ 'ಪಾಂಡಿತ್ಯ'ದಲ್ಲೇ ಎಡವಟ್ಟಾಗಿದೆ. ವಾಕ್ಯದ ಪ್ರಾರಂಭದಲ್ಲಾದರೆ 'ಅನಂತರ' ಪದವನ್ನೂ, ವಾಕ್ಯದ ಮಧ್ಯದಲ್ಲಾದರೆ 'ನಂತರ' ಪದವನ್ನು ಬಳಸಬೇಕೆಂದು ಅವರ ಕನ್ನಡ ಪಂಡಿತರು ಹೇಳಿಕೊಟ್ಟ 'ವ್ಯಾಕರಣ' ಅರ್ಥಹೀನವಾದುದು.'
'ಹಾಗೆ ನೋಡಿದರೆ, 'ನಂತರ' ಎಂಬ ಪದವೇ (ವ್ಯಾಕರಣಬದ್ಧವಾಗಿ) ಅಸ್ತಿತ್ವದಲ್ಲಿಲ್ಲ. ಅಂತರ ಎಂಬ ಪದವು ತನ್ನ ಆರಂಭಾಕ್ಷರಕ್ಕೆ 'ಅನ್‌' ಎಂಬ ಉಪಸರ್ಗವನ್ನು ಸೇರಿಸಿಕೊಂಡು, 'ಅನಂತರ' ಎಂಬ ರೂಪಹೊಂದುತ್ತದೆ. 'ಅನಂತ, ಅನತಿ, ಅನನ್ಯ, ಅನಪೇಕ್ಷಿತ' ಮೊದಲಾದ ಶಬ್ದಗಳೂ ಇದೇ ರೀತಿಯವು. 'ಅಂತರ ಹೊಂದಿರುವುದಲ್ಲ' ಅರ್ಥಾತ್ 'ಒಂದು ಆದಮೇಲೆ ಆ ಇನ್ನೊಂದು' ಕುರಿತು 'ಅನಂತರ' ಪದವನ್ನು ಬಳಸಲಾಗುತ್ತದೆ.'
"ನಿರ್‌' ಉಪಸರ್ಗ ಸೇರಿಕೊಂಡು ('ಅಂತರ' ಶಬ್ದವು) 'ನಿರಂತರ' ಆದಾಗ ಅದು 'ಅಂತರವಿಲ್ಲದುದನ್ನು' (ಎಡೆಯಿಲ್ಲದುದನ್ನು) ಕುರಿತು ಹೇಳುತ್ತದೆ. 'ಅಂತರ' ಎಂಬ ನಾಮವಾಚಕ ಪದವು, 'ಅನಂತರ' ಎಂದು ಅವ್ಯಯವಾದರೆ, 'ನಿರಂತರ' ಎಂದು ಅವ್ಯಯವೂ, ಗುಣವಾಚಕವೂ ಆಗಿರುತ್ತದೆ. ಅವ್ಯಯವಾಗಿ 'ನಿರಂತರ' ಪದವು 'ಸದಾ, ಯಾವಾಗಲೂ' ಎಂಬ ಅರ್ಥವನ್ನು ನೀಡಿದರೆ ಗುಣವಾಚಕವಾಗಿ ಅದು 'ಎಡೆಯಿಲ್ಲದ' ಎಂಬ ಅರ್ಥವನ್ನು ನೀಡುತ್ತದೆ. ('ಪರಿ' ಉಪಸರ್ಗವನ್ನು ಸೇರಿಸಿ 'ಪರ್ಯಂತರ' ಎಂಬ ಪದ ಸೃಷ್ಟಿಸಿ ಬಳಸಲಾಗುತ್ತಿದೆಯಾದರೂ ಇದು ತಪ್ಪು ಬಳಕೆ. 'ಪರ್ಯಂತ' ಎಂಬ ಪದವಿದ್ದು, ಅಲ್ಲಿ 'ಅಂತ' (ನಾಮವಾಚಕ) ಬಳಕೆಯಾಗಿದೆಯೇ ಹೊರತು 'ಅಂತರ'ದ ಬಳಕೆಯಾಗಿಲ್ಲ.)'
'ಆಮೇಲೆ, ಆ ಬಳಿಕ, ತರುವಾಯ ಎಂಬರ್ಥದಲ್ಲಿ 'ಅನಂತರ' ಪದದ ಬಳಕೆಯೇ ವಾಕ್ಯದ ಆರಂಭದಲ್ಲೂ ಮಧ್ಯೆಯೂ ಕೊನೆಗೂ ಎಲ್ಲೆಡೆಯೂ ಸೂಕ್ತ. 'ನಂತರ' ಪದದ ಬಳಕೆಯೇ ವ್ಯಾಕರಣ ರೀತ್ಯಾ ಅಸೂಕ್ತ. ಆದರೆ, ಭಾಷೆಯೆಂಬುದು ಬಳಕೆಯಿಂದಾಗಿ ಕಾಲಕ್ರಮದಲ್ಲಿ ರೂಪಾಂತರ ಹೊಂದುವುದು ಸಹಜ ಮತ್ತು ಸ್ವೀಕಾರಾರ್ಹ ಕೂಡ. 'ಅನಂತರ' ಶಬ್ದವು ಹೀಗೆ ಬಳಕೆಯಿಂದಾಗಿ ಕಾಲಕ್ರಮದಲ್ಲಿ 'ನಂತರ' ಎಂಬ ರೂಪವನ್ನು ಹೊಂದಿರುವುದರಿಂದಾಗಿ ಅದೂ ಸ್ವೀಕಾರಾರ್ಹವೇ. ಆದ್ದರಿಂದಲೇ ನಿಘಂಟುಗಳಲ್ಲಿ 'ನಂತರ' ಶಬ್ದವನ್ನೂ ಸೇರಿಸಲಾಗಿದೆ.'
'ವಾಕ್ಯದ ನಡುವೆ ('ಅ'ಎಂಬ) ಸ್ವರದ ಉಚ್ಛಾರ ಅಷ್ಟೊಂದು ಅನುಕೂಲಕರವೆನ್ನಿಸದ ಕಾರಣ 'ನಂತರ' ಪದವು ಬಳಕೆಗೆ ಬಂದಿತು ಅಷ್ಟೇ. ಹಾಗೆ ನಿಯಮವೇನೂ ಇಲ್ಲ. 'ಅನಂತರ' ಶಬ್ದಕ್ಕೆ 'ಅಂತರವಿಲ್ಲದ; ಒಳಭಾಗವಿಲ್ಲದ; ವಿರಾಮವಿಲ್ಲದ; ಎಡೆಬಿಡದ; ವ್ಯತ್ಯಾಸವಿಲ್ಲದ' ಎಂಬ ಅರ್ಥಗಳೂ ಇರುವುದು ಇಲ್ಲಿ ಗಮನಾರ್ಹ ಸಂಗತಿ' ಎಂದಿದ್ದಾರೆ.

-ವಿಶ್ವೇಶ್ವರಭಟ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.