ತಪ್ಪಾಯ್ತು ತಿದ್ಕೋತೀವಿ
ರಾಮನಗರದಿಂದ ಮಾಗಡಿ ಶ್ರೀನಿವಾಸ್ ಅವರು ಬರೆಯುತ್ತಾರೆ- 'ಮಾ.3ರಂದು 4ನೇ ಪುಟದಲ್ಲಿ 'ಅನಿತಾ ಕುಮಾರಸ್ವಾಮಿ' ಹಾಗೂ 'ಮರಿದೇವರ' ಹೇಳಿಕೆಗಳ ಜತೆ ಚಿತ್ರ ಪ್ರಕಟಿಸಿದ್ದೀರಿ. ಆದರೆ 'ಮರಿದೇವರ' ಭಾವಚಿತ್ರಕ್ಕೆ ಬದಲಾಗಿ ಬೇರೆ ಯಾರದೋ (ರೈತನ ಚಿತ್ರ ಇರಬಹುದು) ಚಿತ್ರ ಪ್ರಕಟಿಸಿದ್ದೀರಿ.'
'5ನೇ ಪುಟದ 'ಜೆಡಿಎಸ್ ಭದ್ರಕೋಟೆಗೆ 'ಕೈ' ಲಗ್ಗೆ' ಶೀರ್ಷಿಕೆಯ 8ನೇ ಸಾಲಿನಲ್ಲಿ 'ಮಕ್ಕಾಡೆ' ಎಂಬ ಪದ ಬಳಕೆಯಾಗಿದೆ. ಅದು 'ಮಕಾಡೆ' ಆಗಬೇಕು. (ಮುಖದ ಆಡು ಭಾಷೆ-ಮಖ-ಮಕ) (ಮುಖ ಕೆಳಗೆ ಮಾಡಿ ಮಲಗುವಿಕೆ) ತಪ್ಪು ಮಾಡೋದು ಸಹಜ. ಆದರೆ ತಪ್ಪನ್ನು ತಿದ್ದಿಕೊಂಡ ಮೇಲೆ ಮತ್ತೆ ಮತ್ತೆ ಕೆಲವೊಮ್ಮೆ ಗಂಭೀರ ತಪ್ಪುಗಳಾಗುತ್ತಿರುವುದೇಕೆ? ಅಂಕಣದ ಆಶಯವೂ ತಪ್ಪಾಗುತ್ತಿದೆಯಲ್ಲ?! (ತಪ್ಪಾಯ್ತು ತಿದ್ಕೋತೀವಿ). ಕೆಲವೊಮ್ಮೆ ಮುದ್ರಾರಾಕ್ಷಸನ ತಪ್ಪೆಂದು ಹೇಳಿ ಸುಮ್ಮನಿರಲಾಗದು. ಅಚ್ಚಾದ ಮುದ್ರಣವನ್ನು ಪರಿಶೀಲಿಸುವ ಅಗತ್ಯವಿರುತ್ತದೆಯಲ್ಲವೇ? ಆದಷ್ಟು ಮಟ್ಟಿಗೆ ಒಮ್ಮೆ ತಿದ್ದಿಕೊಂಡ ತಪ್ಪು ಮರುಕಳಿಸದಿದ್ದರೆ ಚೆನ್ನ ಅಲ್ಲವೇ?'
'ಮಾ.14ರ 10ನೇ ಪುಟದಲ್ಲಿ 'ದಾವುದ್ ಬಂಧನಕ್ಕೆ ಗೃಹ ಸಚಿವರೇ ಅಡ್ಡಿಪಡಿಸಿದ್ದರು' ಶೀರ್ಷಿಕೆಯಲ್ಲಿನ 13ನೇ ಸಾಲಿನಲ್ಲಿ 'ಸಿಂಗ್' ಹೇಳಿಕೆಯನ್ನು 'ಚೌವ್ಹಾಣ್' ಹೇಳಿಕೆಯನ್ನಾಗಿ ಪರಿವರ್ತಿಸಿದ್ದೀರಿ. ಇಡೀ ಶೀರ್ಷಿಕೆಯೇ ಇದರಿಂದ ಅರ್ಥ ಕಳೆದುಕೊಂಡಿದೆ.'
'ಇತ್ತೀಚೆಗೆ ಗೌರವ ಡಾಕ್ಟರೇಟ್ಗೆ ಪರ್ಯಾಯವಾಗಿ 'ಗೌಡಾ' ಎಂದು ಬಳಸುತ್ತಿದ್ದೀರಿ. ಗೌ ಮತ್ತು ಡಾ ಮಧ್ಯೆ ಕನಿಷ್ಟ ಒಂದು ಬಿಂದುವಾದರೂ ಇದ್ದರೆ ಚೆನ್ನ. ಏಕೆಂದರೆ, ಇದೊಂದು (ಗೌಡ) ಸಮುದಾಯದ ಹೆಸರು. ಇನ್ನು 3ನೇ ಪುಟದ 'ಜನಪ್ರಿಯ ವಿಜ್ಞಾನ ಬರವಣಿಗೆ ತರಬೇತಿ ಶಿಬಿರ' ಎಂಬ ಶೀರ್ಷಿಕೆಯಲ್ಲಿನ ಬರ-ವಣಿಗೆ ಬದಲು 'ಬರೆವಣಿಗೆ' ಎಂದಾಗಬೇಕಲ್ಲವೇ? ಕಾರಣ 'ಬರೆ' ಎಂಬ ಧಾತುವಿಗೆ 'ವಣಿಗೆ' ಎಂಬ ಪ್ರತ್ಯಯ ಸೇರಬೇಕು. ಅಲ್ಲಿ 'ಬರ'ವಾಗಿದೆ. ಇದು ಕಣ್ತಪ್ಪಿರಬಹುದು ಇಲ್ಲವೇ ಭಾಷೆಯ ಮೇಲಿನ ಸೂಕ್ಷ್ಮ ಗ್ರಹಿಕೆಯ ಕೊರತೆ ಇರಬಹುದು.'
'ಹಾಗೆಯೇ ಪತ್ರಿಕೆಯಲ್ಲಿನ ತಪ್ಪುಗಳಿಗೆ ಒಪ್ಪುವ ಅಂಕಣ 'ತಪ್ಪಾಯ್ತು...' ಆದರೆ ಅದೇ ಅಂಕಣದಲ್ಲಿ ಮುದ್ರಾರಾಕ್ಷಸ ತಪ್ಪು ಮಾಡುತ್ತಾನೆ. ಉದಾಹರಣೆಗೆ ಬಹಳಷ್ಟು ಬದಲಾಗಿ ಬಹಳುಷ್ಟು' ಹೀಗೆ. ಅದರ ತಪ್ಪುಗಳನ್ನು ಯಾವ ವಿಭಾಗದಿಂದ (ಅಂಕಣ) ಒಪ್ಪಿಕೊಳ್ಳುತ್ತೀರಿ? ಆದರೂ ತಪ್ಪನ್ನು ಒಪ್ಪಿಕೊಳ್ಳುವ ನಿಮ್ಮ ಸಹೃದಯತೆಗೆ ಧನ್ಯವಾದಗಳು' ಎಂದಿದ್ದಾರೆ.
ಗೌಡ ಎಂಬುದು ಜಾತಿ ಹೆಸರು. ನಾವು ಬಳಸುತ್ತಿರುವುದು 'ಗೌಡಾ'. ಆದ್ದರಿಂದ ಯಾವುದೇ ಜಾತಿಗೆ ಹಾನಿಯಾಗುವ, ಬೇಸರವಾಗುವ ಸಂಭವವಿಲ್ಲ. ಅಲ್ಲದೇ ನಾವೇನೂ ಅದನ್ನು ಕೆಟ್ಟ ಅರ್ಥದಲ್ಲಿ ಬಳಸುತ್ತಿಲ್ಲ. ಶೀರ್ಷಿಕೆಗಳಲ್ಲಿ ಸ್ಥಳಾವಕಾಶದ ಕೊರತೆ ಇರುವುದರಿಂದ ಹಾಗೆ ಬಳಸುತ್ತಿದ್ದೇವೆ.
ಒಮ್ಮೆ ಮಾಡಿದ ತಪ್ಪನ್ನೇ ಮತ್ತೆ ಮಾಡಬಾರದು. ಹಾಗೆಯೇ ಪ್ರತಿ ತಪ್ಪನ್ನೂ ನಾವೇ ಮಾಡಿ ತಿದ್ದಿಕೊಳ್ಳುವಬದಲು, ಬೇರೆಯವರು ಮಾಡಿದ ತಪ್ಪಿನಿಂದಲೂ ನಾವು ತಿದ್ದಿಕೊಳ್ಳಬಹುದು. ಓದುಗರು ಗುರುತಿಸಿದ ತಪ್ಪನ್ನು ಪ್ರಕಟಿಸುತ್ತೇವೆ. ಓದಿ ತಿದ್ದಿಕೊಳ್ಳುವುದು ಸಿಬ್ಬಂದಿಗಳ ಕೆಲಸ.
-ವಿಶ್ವೇಶ್ವರಭಟ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

