ಸಂಪಾದಕೀಯ

ತಪ್ಪಾಯ್ತು ತಿದ್ಕೋತೀವಿ

Published On :

ಬೆಂಗಳೂರಿನ ಬಸವನಗುಡಿಯಿಂದ ಬಿ.ಜಿ. ವಿಜಯ್ ಅವರು ಬರೆಯುತ್ತಾರೆ- 'ನಾನು ಬಹಳ ವರ್ಷಗಳಿಂದ 'ಕನ್ನಡಪ್ರಭ'ವನ್ನು ಓದುತ್ತಿದ್ದೇನೆ. ಮಾ.21ರಂದು (ಪುಟ 14) ಒಂದೇ ಸುದ್ದಿಯನ್ನು ಎರಡು ಬಾರಿ ಪ್ರಕಟಿಸಿದ್ದೀರಿ. ಒಂದು ಕಡೆ 'ಕೂಡಂಕುಳಂ ವಿಳಂಬ' ಎಂಬ ಶೀರ್ಷಿಕೆ, ಅದೇ ಸುದ್ದಿಯ ಕೆಳಗೆ  '5 ಶಾಸಕರ ಅಮಾನತು' ಎಂಬ ಶೀರ್ಷಿಕೆಯಿದೆ. ಆದರೆ ಆ ಶೀರ್ಷಿಕೆಯ ಕೆಳಗೆ ಕೂಡಂಕುಳಂ ಸುದ್ದಿಯನ್ನೇ ಪುನಃ ಪ್ರಕಟಿಸಿದ್ದೀರಿ' ಎಂದಿದ್ದಾರೆ.
ಬೆಂಗಳೂರಿನಿಂದ ರಾಜೀವ ಪಟವರ್ಧನ್ ಅವರು ಬರೆಯುತ್ತಾರೆ- 'ಏ.10ರಂದು (ಪುಟ 5) 'ಎಸ್.ಎಂ.ಕೃಷ್ಣ ರಾಜಕೀಯ ಸುವರ್ಣವರ್ಷ' ವರದಿಯಲ್ಲಿ 'ರಾಜಕೀಯ, ಕುಟುಂಬ, ಸುತ್ತಾಟ' ವರದಿಯ ಪ್ರಾರಂಭದಲ್ಲಿ 'ಸೋಮನಹಳ್ಳಿ ಮಾಚಯ್ಯ ಕೃಷ್ಣ' ಎಂದಿದೆ. ಅದು 'ಸೋಮನಹಳ್ಳಿ ಮಲ್ಲಯ್ಯ ಕೃಷ್ಣ' ಎಂದಾಗಬೇಕಿತ್ತು ಅಲ್ಲವೇ?'
'ಏ.10ರಂದು 'ನರೇಗ ಅನುದಾನ ಬಳಕೆಯಲ್ಲಿ ಮಾಯಕೊಂಡ ಮೊದಲು' ವರದಿಯಲ್ಲಿ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ 'ಎನ್. ವಾಂಕಟಾಚಲಯ್ಯ' ಎಂದಿದೆ. ಅವರು 'ಎಂ.ಎನ್. ವೆಂಕಟಾಚಲಯ್ಯ'. ಏಕೆಂದರೆ ಎನ್. ವೆಂಕಟಾಚಲ ನಿವೃತ್ತ ಲೋಕಾಯುಕ್ತರಾಗುತ್ತಾರೆ.' 'ಕನ್ನಡಪ್ರಭ ದಿನಪತ್ರಿಕೆ ಮತ್ತು ಸುವರ್ಣ ನ್ಯೂಸ್ ಎರಡೂ ಮಾಧ್ಯಮ ಕಚೇರಿಗಳು ಒಂದೇ ಸಮುಚ್ಛಯದಲ್ಲಿ ಕೆಲಸ ನಿರ್ವಹಿಸುತ್ತಿರುವ ಸಂದರ್ಭದಲ್ಲಿ ಪತ್ರಿಕೆಯ ಕಚೇರಿ ವಿಳಾಸವನ್ನು 'ಕನ್ನಡಪ್ರಭ, ಎಕ್ಸ್‌ಪ್ರೆಸ್ ಕಟ್ಟಡ, ನಂ.1, ಕ್ವೀನ್ಸ್ ರಸ್ತೆ, ಬೆಂಗಳೂರು-560001', ಎಂದು ಪ್ರಕಟಿಸುತ್ತೀರಿ. ಹೊಸ ವಿಳಾಸ ಪ್ರಕಟಿಸಬೇಕಲ್ಲವೇ?' ಎಂದಿದ್ದಾರೆ.
ಸುವರ್ಣನ್ಯೂಸ್ ಹೊಸ ಕಚೇರಿ ಉದ್ಘಾಟನೆ ಸಂದರ್ಭದಲ್ಲಿ ಎರಡೂ ಮಾಧ್ಯಮ ಕಚೇರಿಗಳು ಒಂದೇ ಕಟ್ಟಡದಲ್ಲಿ ಕೆಲಸ ಮಾಡುತ್ತವೆ ಎಂದು ಹೇಳಲಾಗಿತ್ತು. ನಮ್ಮ ಉದ್ದೇಶ ಕೂಡ ಅದೇ ಆಗಿತ್ತು. ಹೊಸ ಕಟ್ಟಡದಲ್ಲಿ ಕನ್ನಡಪ್ರಭಕ್ಕೆಂದು ಜಾಗ ಕೂಡ ನಿಗದಿ ಮಾಡಲಾಗಿತ್ತು. ಆದರೆ ತಾಂತ್ರಿಕ ಕಾರಣಗಳಿಗಾಗಿ ಕನ್ನಡಪ್ರಭ ಸ್ಥಳಾಂತರ ಇನ್ನೂ ಸಾಧ್ಯವಾಗಿಲ್ಲ. ಆದ್ದರಿಂದ ಕನ್ನಡಪ್ರಭ ಇನ್ನೂ ಇಂಡಿಯನ್ ಎಕ್ಸ್‌ಪ್ರೆಸ್ ಕಟ್ಟಡದಲ್ಲೇ ಇದೆ. ಹೊಸಕಟ್ಟಡಕ್ಕೆ ಹೋಗಿ ಹಳೇ ವಿಳಾಸ ಪ್ರಕಟಿಸುತ್ತಿದ್ದೇವೆ ಎಂದು ಭಾವಿಸುವ ಅಗತ್ಯವಿಲ್ಲ. ಹೊಸ ಕಟ್ಟಡಕ್ಕೆ ಹೋದ ತಕ್ಷಣ ಹೊಸ ವಿಳಾಸ ಪ್ರಕಟಿಸಲಾಗುವುದು. ಸಾಕಷ್ಟು ಜನರಿಗೆ ಈ ರೀತಿ ಗೊಂದಲವಿದೆ. ಈಗಲೂ ಕೆಲವರು 'ಕನ್ನಡಪ್ರಭ' ಕಚೇರಿಗೆಂದು ಹೊಸ ಕಟ್ಟಡಕ್ಕೆ ಹೋಗುವುದಿದೆ.
ಮೈಸೂರಿನಿಂದ ಎಸ್. ರಾಘವೇಂದ್ರ ಅವರು ಬರೆಯುತ್ತಾರೆ- 'ಮಾ.18ರ ಸಂಚಿಕೆಯಲ್ಲಿ ಮಂತ್ರಾಲಯದಲ್ಲಿ ನಡೆದ 'ಶ್ರೀಮನ್ಯಾಯ ಸುಧಾ ಮಂಗಳ ಮಹೋತ್ಸವ ಸಮಾರೋಪ' ವರದಿಯಾಗಿದೆ. ವರದಿ ಸಿದ್ಧಪಡಿಸಿದ ಪತ್ರಕರ್ತರು ಒಂದು ತಪ್ಪನ್ನು ಹರಿಯಬಿಟ್ಟಿದ್ದಾರೆ. ಶ್ರೀ ಆಚಾರ್ಯ ಮಧ್ವರು ರಚಿಸಿದ ಗ್ರಂಥ 'ಶ್ರೀಮನ್ಯಾಯ ಸುಧಾ' ಎಂದಿದ್ದಾರೆ. ಇದು ಸರಿಯಲ್ಲ. 'ಶ್ರೀ ಮಧ್ವಾಚಾರ್ಯರ ಪರಂಪರೆಯಲ್ಲಿ ಶ್ರೀ ಅಕ್ಶೋಭ್ಯತೀರ್ಥರ ನಂತರ ಬಂದವರೇ ಶ್ರೀ ಜಯತೀರ್ಥರು. ಆಚಾರ್ಯ ಮಧ್ವರು ರಚಿಸಿದ ಒಟ್ಟು ಗ್ರಂಥಗಳ ಸಂಖ್ಯೆ 37. ಇದನ್ನು 'ಸರ್ವ ಮೂಲ' ಎಂದು ಒಟ್ಟಾಗಿ ಕರೆಯುತ್ತಾರೆ. ಶ್ರೀ ಜಯತೀರ್ಥರು ಶ್ರೀ ಮಧ್ವಾಚಾರ್ಯರ ಒಟ್ಟು 18 ಗ್ರಂಥಗಳಿಗೆ 'ಟೀಕೆ' (ಕಾಮೆಂಟರಿ)ಯನ್ನು ರಚಿಸಿದ್ದಾರೆ. ಜಯತೀರ್ಥರು ಇದರಿಂದಾಗಿಯೇ 'ಟೀಕಾಚಾರ್ಯ'ರೆಂದೇ ಪ್ರಸಿದ್ಧಿ. ಅದರಲ್ಲಿ 'ಅನುವ್ಯಾಖ್ಯಾನ' ಎಂಬ ಗ್ರಂಥಕ್ಕೆ ಬರೆದ ಟೀಕೆಗೆ 'ಶ್ರೀಮನ್ಯಾಯ ಸುಧಾ' ಎಂದು ಕರೆಯುತ್ತಾರೆ. ಶ್ರೀ ಮಧ್ವ ಸಿದ್ಧಾಂತದಲ್ಲಿ 'ಶ್ರೀಸುಧೆ'ಗೆ ಮೇರು ಗೌರವ' ಎಂದಿದ್ದಾರೆ.

-ವಿಶ್ವೇಶ್ವರಭಟ್


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.