ಸಂಪಾದಕೀಯ

ಸ್ಪೀಕರ್ ಸ್ಥಾನ ಬೇಡವಂತೆ

Published On :

ಕರ್ನಾಟಕ ವಿಧಾನ ಸಭೆಯಲ್ಲಿ ಸ್ಪಷ್ಟ ಬಹುಮತ ಪಡೆದಿರುವ ಕಾಂಗ್ರೆಸ್ ಸಿದ್ದರಾಮಯ್ಯ ಅವರನ್ನೇ ಮುಖ್ಯಮಂತ್ರಿಯನ್ನಾಗಿ ಆರಿಸಿಕೊಂಡ ಅನಂತರ, ಸಹಜವಾಗಿಯೇ ಮುಂದಿನ ರಾಜಕೀಯ ಬೆಳವಣಿಗೆ ಎಂದರೆ ಮಂತ್ರಿಮಂಡಲದ ರಚನೆ.
ನಾವು ಒಪ್ಪಿರುವ ಜನತಾಂತ್ರಿಕ ವ್ಯವಸ್ಥೆಯಲ್ಲಿ ಈಗ ಯಾರು ಬೇಕಾದರೂ ಮಂತ್ರಿಯ ಕೆಲಸ ಮಾಡಬಹುದೆನ್ನುವ ನಂಬಿಕೆ ಮೂಡಿರುವುದರಿಂದ ಮಂತ್ರಿಗಳಾಗಲು ಹೊಸ ಶಾಸಕರಲ್ಲಿ ನೂಕು ನುಗ್ಗಲಿನಂತಹ ವ್ಯಾಪಾರವೇ ನಡೆದಿದೆ. ಅದು ರಾಜಕೀಯ ವ್ಯಾಪಾರ. ಭ್ರಷ್ಟಾಚಾರದ ಲೇಪವಿಲ್ಲದ ವ್ಯವಹಾರ ಅದು. ಆದರೆ ವಿಧಾನಸಭೆಯ ಆಡಳಿತಾತ್ಮಕವಾದ ಜವಾಬ್ದಾರಿಯನ್ನು ಹೊತ್ತು, ಸದನದ ಕಾರ್ಯಕಲಾಪವನ್ನು ಸಂವಿಧಾನ ಬದ್ಧವಾಗಿ, ನ್ಯಾಯವಾಗಿ ನಡೆಸಿಕೊಂಡು ಹೋಗಬೇಕಾದ ಸ್ಪೀಕರ್ ಸ್ಥಾನಕ್ಕೆ ಸದ್ಯಕ್ಕೆ ಸ್ಪರ್ಧೆ ಇದ್ದಂತಿಲ್ಲ. ಈ ಸ್ಥಾನಕ್ಕೆ ಬರುವವರಿಗೆ ಕಾಯಿದೆ ಜ್ಞಾನ, ಸಂಸದೀಯ ವ್ಯವಹಾರಗಳ ಪರಿಚಯ ಹಾಗೂ ಆಡಳಿತದ ಸೂಕ್ಷ್ಮಗಳು ಗೊತ್ತಿರಬೇಕು. ಅನುಭವ ಇದ್ದರೆ ಒಳಿತು. ಅಂತಹ ವ್ಯಕ್ತಿಗಳು ಆಳುವ ಪಕ್ಷದಿಂದಲೇ ಹಲವಾರು ವ್ಯಕ್ತಿಗಳು ಈ ಬಾರಿ ಆರಿಸಿ ಬಂದಿದ್ದಾರೆ. ಆದರೆ ಈಗಿನ ಪ್ರಕಟಿತ ವರದಿಗಳನ್ನು ನಂಬಬಹುದಾದರೆ, ಯಾರೂ ಸ್ವಯಂಪ್ರೇರಣೆಯಿಂದ ಸ್ಪೀಕರ್ ಸ್ಥಾನವನ್ನು ಕೇಳಿರುವಂತಿಲ್ಲ. ಆದರೆ ಈ ಪ್ರಕರಣ ಇಲ್ಲಿಗೇ ಮುಗಿಯುವುದಿಲ್ಲ. ಮಂತ್ರಿಗಳ ಆಯ್ಕೆಯಾದ ಅನಂತರ, ವಿಧಾನ ಸಭೆಯಲ್ಲಿ ಉಳಿಯುವ ಏಕೈಕ ಜವಾಬ್ದಾರಿಯುತ ಹಾಗೂ ಗೌರವಾನ್ವಿತ ಸ್ಥಾನಕ್ಕೆ ಸ್ಪರ್ಧೆ ಕಂಡುಬಂದರೂ ಬರಬಹುದು. ಸ್ಪೀಕರ್ ಕೆಲಸಕ್ಕೂ ಅರ್ಜಿ ಹಾಕುವ ಸ್ಥಿತಿ ನಿರ್ಮಾಣವಾದರೆ ಅದರಿಂದ ಜನತಾಂತ್ರಿಕ ವ್ಯವಸ್ಥೆಯೇ ಮುಪ್ಪಾದಂತೆ ಆದೀತು. ಅದಕ್ಕೆ ಅವಕಾಶ ಮಾಡಿಕೊಡಬಾರದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.