ಸಂಪಾದಕೀಯ

ಮುಖ್ಯಮಂತ್ರಿ ಹೊರೆ ವಿಪರೀತ

Published On :

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗ ತಮ್ಮ ಮೇಲೆ ತಾವೇ ಹೊರಿಸಿಕೊಂಡಿರುವ ಕೆಲಸ ಹಾಗೂ ಜವಾಬ್ದಾರಿಯ ಹೊರೆ ವಿಪರೀತವಾಯಿತು ಎನಿಸುತ್ತಿದೆ. ಅವರಿಗೆ ಆಡಳಿತದ ಹೊಣೆಯನ್ನು ನಿಭಾಯಿಸಿದ ಅನುಭವವೂ ಇದೆ. ಆದ್ದರಿಂದ ಅವರು ಸರ್ಕಾರದ ಕೆಲಸವನ್ನು ತಮ್ಮ ಸಚಿವ ಸಂಪುಟದ ಸಂಗಾತಿಗಳಿಗೆ ಹಂಚಿರುವ ವ್ಯವಸ್ಥೆ ಆತುರದಲ್ಲಿ ಮಾಡಿದ್ದಲ್ಲ. ಎಲ್ಲವನ್ನೂ ಚೆನ್ನಾಗಿ ವಿಮರ್ಶಿಸಿದ ಅನಂತರವೇ ಮಾಡಿದ್ದು ಎನ್ನುವ ಅನಿಸಿಕೆಯೂ ಸಹಜವೇ.
ಜನತಾಂತ್ರಿಕ ಸಂಸದೀಯ ವ್ಯವಸ್ಥೆಯ ಗರ್ಭದಲ್ಲೇ, ಸರ್ಕಾರದ ಹೊಣೆಗಾರಿಕೆಯನ್ನು ಸಚಿವರ ಸಂಯುಕ್ತ ಜವಾಬ್ದಾರಿ ಎಂದು ಪರಿಗಣಿಸಿ, ಅದನ್ನು ಹಾಗೇ ನಿರ್ವಹಿಸಬೇಕೆನ್ನುವ ಕಲ್ಪನೆ ಅಡಗಿದೆ. ಸಚಿವ ಸಂಪುಟದಲ್ಲಿ ಮುಖ್ಯಮಂತ್ರಿಯಾದವರು ಸಮಾನರಲ್ಲಿ ಮೊದಲಿಗರು. ಸರ್ಕಾರದ ನಿರ್ಧಾರ ಹಾಗೂ ಕಾರ್ಯಾಚರಣೆಯಲ್ಲಿ ಅವರಿಗೆ ಅದಕ್ಕಿಂತ ಹೆಚ್ಚಿನ ಅಧಿಕಾರ- ಸ್ಥಾನಮಾನವಿಲ್ಲ.
ಈಗ ಸಿದ್ದರಾಮಯ್ಯ ಅವರು ಸರ್ಕಾರದ ಖಾತೆಗಳನ್ನು ತಮ್ಮ ಸಂಗಾತಿಗಳಿಗೆ ಹಂಚಿರುವ ರೀತಿ ಹಾಗೂ ಸ್ವರೂಪವನ್ನು ಗಮನಿಸಿ. ಹನ್ನೊಂದು ಖಾತೆಗಳನ್ನು ಅವರೇ ನಿಭಾಯಿಸಬೇಕಾಗಿದೆ. ಅದರಲ್ಲಿ ವಿತ್ತೀಯ ಇಲಾಖೆಯ ಎಲ್ಲ ವಿಭಾಗಗಳೂ ಸೇರಿವೆ.
ಸರ್ಕಾರದ ಉನ್ನತ ಮಟ್ಟದ ಎಲ್ಲ ನಿರ್ಧಾರಗಳ ಹಣಕಾಸು ಅಂದಾಜುಗಳು ವಿತ್ತಮಂತ್ರಾಲಯಕ್ಕೆ ಬಂದು ಅಲ್ಲಿ ಪರಿಶೀಲನೆಯಾದ ಅನಂತರವೇ ಸಚಿವ ಸಂಪುಟಕ್ಕೆ ಹೋಗಬೇಕು. ಮುಖ್ಯಮಂತ್ರಿಯೇ ವಿತ್ತ ಮಂತ್ರಿಯೂ ಆಗಿರುವಾಗ, ಆ ಮೂಲದಿಂದ ಸಚಿವ ಸಂಪುಟಕ್ಕೆ ಬರುವ ಎಲ್ಲ ಸಲಹೆಗಳೂ ಅಧಿಕಾರದ ಮುದ್ರೆಯನ್ನು ಒತ್ತಿಸಿಕೊಂಡೇ ಬಂದಿರುತ್ತವೆ. ಹಾಗಿದ್ರೆ ಇಲ್ಲಿ ಸಂಯುಕ್ತ ಹೊಣೆಗಾರಿಕೆಯ ಕಲ್ಪನೆಯ ಗತಿ ಏನಾಗಬೇಕು. ವಿಧಾನಮಂಡಲದ ಅಧಿವೇಶನದ ಸಮಯದಲ್ಲಿ ಸಿದ್ದರಾಮಯ್ಯ ಅವರೇ ಹಣಕಾಸು, ಸಾಮಾನ್ಯ ಆಡಳಿತ, ಬೆಂಗಳೂರಿನ ಎಲ್ಲ ವ್ಯವಹಾರಗಳು, ಗಣಿಗಾರಿಕೆ, ಔದ್ಯಮಿಕ ವ್ಯವಹಾರ ಹಾಗೂ ನಿರ್ದಿಷ್ಟವಾಗಿ ಪ್ರಸ್ತಾಪಿಸದೇ ಇರುವ ಎಲ್ಲ ಇಲಾಖೆಗಳಿಗೆ ಸಂಬಂಧಿಸಿದ ಪ್ರಶ್ನೆಗಳಿಗೂ ಉಭಯ ಸದನಗಳಲ್ಲೂ ಉತ್ತರ ಕೊಡಬೇಕು. ಇದನ್ನೆಲ್ಲ ಲೆಕ್ಕ ಹಾಕಿದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಸರ್ಕಾರದ ಹೊಣೆಗಾರಿಕೆಯಲ್ಲಿ ಶೇಕಡಾ 70ರಷ್ಟು ಜವಾಬ್ದಾರಿಯನ್ನು ಹೊತ್ತಿದ್ದಾರೆ ಎನ್ನಬಹುದು. ಇದರಲ್ಲಿ ರಾಜಕೀಯ ಸಂಬಂಧದ ವ್ಯವಹಾರಗಳ ಪ್ರಸ್ತಾಪವಿಲ್ಲ. ಮುಖ್ಯಮಂತ್ರಿಯಾಗಿ ಆ ಜವಾಬ್ದಾರಿಯನ್ನೂ ಅವರೇ ಹೊರಬೇಕು.
ನಿಜ. ಸಿದ್ದರಾಮಯ್ಯ ಅವರು ಇನ್ನೂ ಐವರು ಮಂತ್ರಿಗಳನ್ನು ನೇಮಿಸುವ ಅಧಿಕಾರ- ಅವಕಾಶವನ್ನು ಹೊಂದಿದ್ದಾರೆ. ಆಗ ಕೆಲವು ಖಾತೆಗಳನ್ನು ಇತರರಿಗೆ ವಹಿಸಿಕೊಡಲೂಬಹುದು. ಆದರೆ ಈಗ ಅವರ ಖಾತೆಗೆ ಸೇರಿರುವ ಪಟ್ಟಿಯಲ್ಲಿನ ಇಲಾಖೆಗಳನ್ನು ಗಮನಿಸಿದರೆ, ಯಾವ ಪ್ರಮುಖ ಇಲಾಖೆಯನ್ನೂ ಇತರರಿಗೆ ವಹಿಸುವ ಉದ್ದೇಶ ಅವರಿಗೆ ಇದ್ದಂತಿಲ್ಲ. ಎಲ್ಲ ಪ್ರಮುಖ ಕಡತಗಳ ವಿಲೇವಾರಿಯ ಸಮಯದಲ್ಲಿ ಅಧಿಕಾರಿಗಳ ಜತೆ ಸಮಾಲೋಚನೆ ಅಗತ್ಯವಾಗಿರುತ್ತದೆ. ಅದಕ್ಕೆ ಬೇಕಾದ ಸಮಯವನ್ನು ಹೊಂದಿಸುವುದಾದರೂ ಹೇಗೆ?
ಇವೆಲ್ಲವೂ ಅವರಿಗೆ ಗೊತ್ತಿಲ್ಲ ಎಂದೇನೂ ಇಲ್ಲ. ಪ್ರಾಯಶಃ ಕೆಲವು ಸಮಯ ಕಳೆದ ಅನಂತರ ಅವರು ಸರ್ಕಾರದ ಜವಾಬ್ದಾರಿಯನ್ನು ತಮ್ಮ ಹಿರಿಯ- ಕಿರಿಯ, ಆತ್ಮೀಯ ಸಂಗಾತಿ, ಗೆಳೆಯರಿಗೆ ಹಂಚಲೇಬೇಕಾಗಿ ಬರಬಹುದು. ಅದಕ್ಕೆ ಅವರು ಈಗಿನಿಂದಲೇ ಮಾನಸಿಕವಾಗಿ ಸಿದ್ಧರಾಗಿರುವುದು ಒಳಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.