ಹುಂಡಿಯಲ್ಲಿ ಕಂಡ ಆತಂಕ
ಸಿದ್ದರಾಮಯ್ಯನವರೇನೋ ಹುಂಡಿ ತೆರೆದರು (ಕ.ಪ್ರ. 14/5). ಚುನಾವಣಾ ಪೂರ್ವ ಪ್ರಣಾಳಿಕೆಯಲ್ಲಿ ಘೋಷಿಸಿದ ಹಲವು ಅಂಕಗಳನ್ನು ಮುಖ್ಯಮಂತ್ರಿ ಗದ್ದುಗೆ ಏರಿದ ದಿನವೇ ಪುಷ್ಟಿಗೊಳಿಸಿದರು. ಅವುಗಳಲ್ಲಿ ಮುಖ್ಯವಾಗಿ ಬಿಪಿಎಲ್ ಕಾರ್ಡ್ ಹೊಂದಿರುವ ಪ್ರತೀ ಕುಟುಂಬಕ್ಕೆ ರೂಪಾಯಿ ಒಂದರಂತೆ, ಮೂವತ್ತು ಕಿಲೋ ಅಕ್ಕಿ ವಿತರಿಸುವ ತೀರ್ಮಾನವನ್ನು ದೃಢಪಡಿಸಿದರು. ಅದೂ ಬರುವ ಜೂನ್ನಿಂದಲೇ ಜಾರಿ.
ಆರ್ಥಿಕವಾಗಿ ಹಿಂದುಳಿದವರಿಗೆ ಸರ್ಕಾರದ ಸಹಾಯಹಸ್ತದ ಅವಶ್ಯಕತೆಯನ್ನು ಒಪ್ಪಿಕೊಳ್ಳುವುದಾದರೂ ಎಲ್ಲಿ ಈ ರೀತಿಯ ಅತಿಯಾದ ಸೌಲಭ್ಯ ಜನರನ್ನು ಆಲಸಿಗಳನ್ನಾಗಿಸುವುದೋ ಎಂಬ ಭಯವೂ ಕಾಡದೇ ಇರದು. ಮೈ-ಕೈ ಗಟ್ಟಿ ಇದ್ದವರು ಕೂಲಿ ನಾಲಿ ಮಾಡಿ ಕೆಲವಷ್ಟು ಗಳಿಸಿ, ಆರೋಗ್ಯಯುತ ಸಮಾಧಾನಕರ ಜೀವನ ಸಾಗಿಸುತ್ತಿದ್ದರು. ಇದರಿಂದ ಗಳಿಕೆಯ ಮಹತ್ವ ಮತ್ತು ಮೌಲ್ಯದ ಅರಿವಾಗಿ ಅನಾವಶ್ಯಕ ಹಾಗೂ ದುಂದು ವೆಚ್ಚಗಳಿಗೆ ತೊಡಗುತ್ತಿರಲಿಲ್ಲ. ಆದರೆ ಈಗ ಅಂಥ ದುಡಿಮೆಯ ಅವಶ್ಯಕತೆಯೇ ಇರದು. ಇದೇ ರೀತಿ ಮುಂದುವರಿದರೆ ಇದಕ್ಕೆ ಕೊನೆ ಎಲ್ಲಿ? ಹಾಗಂತ ಪರಿಹಾರದಿಂದ ಬಂದ ಅಕ್ಕಿ ಸೀದಾ ಮನೆ ತಲುಪುತ್ತದೆಂಬ ಭರವಸೆಯೂ ಇಲ್ಲ. ದಾರಿಯಲ್ಲೇ ಸೋರಿ ಹೋಗುತ್ತದೆ. ಹೊಸ ಹೊಸ ಚಟಗಳಿಗೆ ಬಲಿಯಾಗಿ ಇದ್ದ ಆರೋಗ್ಯ, ನೆಮ್ಮದಿಯನ್ನು ಕಳೆದುಕೊಳ್ಳುವ ಎಲ್ಲ ಸಾಧ್ಯತೆಗಳೂ ಹೆಚ್ಚು. ಸರ್ಕಾರವೇನೋ ಒಳ್ಳೆಯ ಉದ್ದೇಶದಿಂದ ಇಂತಹ ಜನಾನುಕೂಲಿ-ಜನಪರ ಯೋಜನೆಗಳನ್ನು ಅಮಲಿನಲ್ಲಿ ತರಲು ಸದಾ ಪ್ರಯತ್ನಿಸುತ್ತಿರುತ್ತದೆ. ಆದರೆ ಅದರ ಜತೆ ಆಗಬಹುದಾದ ದುಷ್ಪರಿಣಾಮಗಳ ಬಗ್ಗೆಯೂ ಕಾಳಜಿ ವಹಿಸುವುದು ಅತ್ಯವಶ್ಯ. ಕೇವಲ ಹೊಗಳಿಕೆಗೆ, ಕೆಲ ಜನಾಂಗದವರನ್ನು ಓಲೈಸುತ್ತಲೋ, ಬಡವರ ಏಳಿಗೆ ಹಂಬಲಿಸುವವರು ಎಂದು ತೋರಿಸಿಕೊಳ್ಳಲು ಇಂತಹ ಯೋಜನೆಗಳನ್ನು ಜಾರಿಗೊಳಿಸಿದ್ದಲ್ಲಿ ಅದರಿಂದಾಗ ಬಹುದಾದ ಅನಾಹುತಗಳೇ ಹೆಚ್ಚಾದರೂ ಆಶ್ಚರ್ಯವಿಲ್ಲ.
ಇಷ್ಟೇ ಸಾಲದು ಎಂಬಂತೆ ಜಾತಿಯ ಆಧಾರದ ಮೇಲೆ ಇದುವರೆಗೆ ನೀಡಿದ್ದ ಎಲ್ಲ ಸಾಲ, ಬಡ್ಡಿ ಸಮೇತ ಮನ್ನಾ ಮಾಡುವುದು, ಭಾಗ್ಯಜ್ಯೋತಿ ಯೋಜನೆಯ ಫಲಾನುಭವಿಗಳ ಬಾಕಿ ಇದ್ದ ಕೋಟಿ-ಕೋಟಿ ಮನ್ನಾ ಮಾಡುವುದು ಇತ್ಯಾದಿ ಜನಪ್ರಿಯತೆಯನ್ನು ಗಿಟ್ಟಿಸುವ ಹಾದಿ ಒಂದೆಡೆಯಾದರೆ, ಜನರಲ್ಲಿರುವ ಆತ್ಮವಿಶ್ವಾಸ, ಕಷ್ಟಸಹಿಷ್ಣುತೆ, ಸ್ವಾವಲಂಬಿ ಜೀವನ ನಡೆಸುವ ಮನೋಬಲಗಳನ್ನು ಕಸಿದುಕೊಂಡಂತೆ. ಇನ್ನೊಂದೆಡೆ ಗುಣಾತ್ಮಕ ಯೋಜನೆ ಸ್ತುತ್ಯಾರ್ಹ. ಈ ದಿಶೆಯಲ್ಲಿ ಪ್ರಾಮಾಣಿಕ, ದಕ್ಷ ಅಧಿಕಾರಿಗಳಿಂದ ಮಾಹಿತಿ ಪಡೆದು ವ್ಯವಹರಿಸಿದರೆ ಚೆನ್ನ. ಇಲ್ಲದಿದ್ದರೆ ಕೊಡುವವ ಕೋಡಂಗಿ, ಪಡೆಯುವವ ವೀರಭದ್ರನಾಗಿಯೇ ಉಳಿಯಬೇಕಾದೀತು. ಹುಂಡಿ ಖಾಲಿಯಾದರೂ ಆದೀತು. ಮತ್ತೆ ಹುಂಡಿ ಭರಿಸಲು ಮಧ್ಯಮವರ್ಗದವರನ್ನೊಳಗೊಂಡು ಕರಭಾರ ಹೊರಿಸಬೇಕಾದೀತು. ಈ ರೀತಿಯ ವ್ಯವಸ್ಥೆಯಲ್ಲಿ ನಿಜವಾಗಿ ಬಳಲುವವರು ಮಧ್ಯಮ ವರ್ಗದವರು.
ಇತ್ತ ಮೂರಕ್ಕೆ ಇಳಿಯಲಾರ ಅತ್ತ ಆರಕ್ಕೆ ಏರಲಾರ. ಉಳ್ಳವರು ತಲೆ ಕೆಡಿಸಿಕೊಳ್ಳಬೇಕಾದ ಪ್ರಮೇಯವಿಲ್ಲ, ಏನೂ ಇಲ್ಲದವರತ್ತ ಚಿಂತೆಗೊಳಗಾಗ ಬೇಕಿಲ್ಲ (ಸರ್ಕಾರ ಅವರ ಸಹಾಯಕ್ಕೆ ಸದಾ ಸಿದ್ಧ). ಹೀಗಾಗಿ ನಿಜವಾದ ಪರಿಣಾಮ ಬೀರುವುದು ಮಧ್ಯಮ ವರ್ಗದವರ ಮೇಲೆಯೇ.
ಸರ್ಕಾರದ ಯೋಜನೆಗಳು ಮಧ್ಯಮ ಹಾಗೂ ಕಡು ಬಡವರ ಸ್ನೇಹಿಯಾಗಿರಬೇಕು. ಅದರಿಂದ ಸಾಮಾಜಿಕ ಸಮತೋಲನದ ಜತೆ, ಸಮಾಧಾನ ಹಾಗೂ ಹಿತಕರ ವಾತಾವರಣ ಮೂಡಿ, ಶಾಂತಿ ನೆಮ್ಮದಿ ನೆಲೆಸುವಂತಾದೀತು. ಈ ಎಲ್ಲ ಮಜಲುಗಳ ಸ್ಪಷ್ಟ ಅರಿವಿರಿರುವ ನಮ್ಮ ಇಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಾಮಾಜಿಕ-ಆರ್ಥಿಕ-ಶೈಕ್ಷಣಿಕ ಸಮತೋಲನವನ್ನು ಕಾಪಾಡುವುದರಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಾರೆಂದು ಆಶಿಸೋಣವೇ?
-ಶಂಕರನಾರಾಯಣ ಭಟ್, ಹೊನ್ನಾವರ
ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

