ತಪ್ಪಾಯ್ತು ತಿದ್ಕೋತೀವಿ
ಬೆಂಗಳೂರಿನ ನಂದಿನಿ ಬಡಾವಣೆಯಿಂದ ಬಸವರಾಜ ಹುಡೇದಗಡ್ಡಿ ಅವರು ಬರೆಯುತ್ತಾರೆ- 'ಭಾನುವಾರ 'ಕನ್ನಡಪ್ರಭ' ಸಂಚಿಕೆಯೊಂದಿಗೆ 'ಸಾಪ್ತಾಹಿಕ ಪ್ರಭ' ಪುರವಣಿ ನೀಡಲಾಗುತ್ತಿದೆ. ಅದರಲ್ಲಿ ವಿವಿಧ ಬಗೆಯ ಲೇಖನಗಳು, ಗಣ್ಯ ವ್ಯಕ್ತಿಗಳ ಸಂದರ್ಶನ, ಪರಿಚಯ ಹಾಗೂ ಕಾವ್ಯ ವಿಡಂಬನೆಗಳನ್ನು ಪ್ರಕಟಿಸಲಾಗುತ್ತಿದೆ. ಅವುಗಳ ಕುರಿತು ಓದುಗರ ಪ್ರತಿಕ್ರಿಯೆ, ಟೀಕೆ ಟಿಪ್ಪಣೆಗಳನ್ನು 'ಪತ್ರವಿಹಾರ' ಅಂಕಣದ ಮೂಲಕ ಪ್ರಕಟಿಸಲಾಗುತ್ತಿತ್ತು.'
'ಕೆಲವು ವಾರಗಳ ಹಿಂದೆ 'ಸಾಪ್ತಾಹಿಕ ಪ್ರಭ'ದಲ್ಲಿ ಧಾರವಾಡದ ಚೆಂಬಳಕಿನ ಹಿರಿಯ ಕವಿ ಚನ್ನವೀರ ಕಣವಿಯವರ ಸಂದರ್ಶನವನ್ನು ಪ್ರಕಟಿಸಲಾಗಿತ್ತು. ಕತೆಗಾರ್ತಿ ಶಾಂತಕ್ಕನವರೊಂದಿಗೆ ಅವರ ವಿವಾಹದ ಕುರಿತಾದ ಪ್ರಶ್ನೆಗೆ ಉತ್ತರದಲ್ಲಿ 1983ರಲ್ಲಿ ವಿವಾಹವಾಗಿದೆ ಎನ್ನುವ ಉತ್ತರಪ್ರಕಟವಾಗಿತ್ತು.'
'ಅವರ ಹಿರಿಯ ಮಗ ಕ್ರಿಕೆಟ್ ವೀಕ್ಷಣಾ ವರದಿಗಾರ ಚಂದ್ರಮೌಳಿ ಕಣವಿ ನನ್ನ ವರ್ಗಮಿತ್ರ ಹಾಗೂ ಸಮಕಾಲೀನನಾಗಿದ್ದು, ನಾವುಗಳು 1954ರಲ್ಲಿ ಹುಟ್ಟಿದ್ದೇವೆ. ಚನ್ನವೀರ ಕಣವಿಯವರ ಮಕ್ಕಳೆಲ್ಲ 1983ರ ಮೊದಲೇ ಹುಟ್ಟಿ 1983ರಲ್ಲಿ ವಯಸ್ಕರಾಗಿದ್ದಾರೆ.'
'ಸನ್ಮಾನ್ಯ ಚನ್ನವೀರ ಕಣವಿ ಹಾಗೂ ಶಾಂತಕ್ಕನವರ ವಿವಾಹ 1953ರಲ್ಲಿ ಆಗಿದ್ದು, ಸಂದರ್ಶನದಲ್ಲಿ ಪ್ರಕಟವಾದಂತೆ 1983ರಲ್ಲಿ ಅಲ್ಲ' ಎಂದಿದ್ದಾರೆ.
ಬಸವರಾಜ ಹುಡೇದಗಡ್ಡಿ ಅವರೇ ಎಲ್ಲ ವಿವರವನ್ನೂ ನೀಡಿದ್ದಾರೆ. ಲೇಖನಗಳಲ್ಲಿ ಇಂತಹ ಗಂಭೀರ ತಪ್ಪುಗಳಾಗದಂತೆ ಎಚ್ಚರವಹಿಸುವುದು ನಮ್ಮ ಜವಾಬ್ದಾರಿ.
ಮಂಡ್ಯದಿಂದ ರಘು ಅವರು ದೂರವಾಣಿ ಕರೆ ಮಾಡಿದ್ದರು. ಅವರು ನ.9ರ ಪತ್ರಿಕೆಯಲ್ಲಾದ ತಪ್ಪಿನ ಕುರಿತು ಗಮನ ಸೆಳೆದಿದ್ದಾರೆ. 'ಅಂದಿನ 'ಅಚ್ಚರಿ' ಅಂಕಣದಲ್ಲಿ 11-12-13 ನಾಡಿದ್ದು ಎಂದಿದೆ. ನಾಡಿದ್ದು ಅಂದರೆ 11-11-13 ಆಗುತ್ತದೆ. ಡಿಸೆಂಬರ್ 11ರಂದು 11-12-13 ಆಗುತ್ತದೆ.ಆದ್ದರಿಂದ ಡಿ.11ರಂದು ಈ ಅಚ್ಚರಿಯ ದಿನಾಂಕ ಬರಲಿದೆ ಎಂದು ಬರೆಯಬೇಕಿತ್ತು' ಎಂದಿದ್ದಾರೆ.
ಬಾಗಲಕೋಟೆಯಿಂದ ಸಂಗಪ್ಪ ಗಾಣಿಗೇರ ಅವರು ಬರೆಯುತ್ತಾರೆ-'ಅ.29ರ ಪತ್ರಿಕೆಯಲ್ಲಿ (ಪುಟ 6) ಪ್ರಕಟವಾದ 'ಕಾಶ್ಮೀರ ಸಮಸ್ಯೆ ಎಂಬ ಕಟ್ಟು ಕತೆ'ಯಲ್ಲಿ ಚೈತನ್ಯ ಹೆಗಡೆಯವರು ಕಾಶ್ಮೀರ ಸಮಸ್ಯೆ ಬಗ್ಗೆ ವಿಸ್ತಾರವಾಗಿ ಬರೆದಿದ್ದಾರೆ. ಜವಾಹರಲಾಲ ನೆಹರೂರವರು ಕಾಶ್ಮೀರ ವಿಷಯದಲ್ಲಿ ವಲ್ಲಭಭಾಯಿ ಪಟೇಲರಿಗೆ ಸ್ವತಂತ್ರವಾಗಿ ಕೆಲಸಮಾಡಲು ಬಿಡದೇ ಆ ಸಮಸ್ಯೆಯನ್ನು ಯುಕ್ತ ರಾಷ್ಟ್ರಕ್ಕೆ ಒಯ್ದು, ಕಾಯಂ ತಲೆನೋವು ಬಿಟ್ಟುಹೋದರು.'
'ಇನ್ನು ಆ ಲೇಖನದ ಎರಡನೇ ಕಾಲಮ್ಮಿನಲ್ಲಿ 'ಇವತ್ತಿಗೂ ಬೊಬ್ಬೆ ಹಾಕುತ್ತಿರುವುದೇನಂದ್ರೆ ಜಮ್ಮು-ಕಾಶ್ಮೀರವು ಮುಸ್ಲಿಂ ಬಾಹುಳ್ಯದ ರಾಜ್ಯವಾಗಿರುವುದರಿಂದ ಅದು ಭಾರತಕ್ಕೆ ಸೇರಬೇಕಂತೆ' ಎಂಬಲ್ಲಿ 'ಪಾಕಿಸ್ತಾನಕ್ಕೆ' ಅಂತಾಗಬೇಕಿತ್ತಲ್ಲವೇ?' ಎಂದಿದ್ದಾರೆ.
ಸಂಗಪ್ಪ ಗಾಣಿಗೇರ ಅವರ ಅಭಿಪ್ರಾಯ ಸರಿಯಾಗಿದೆ. ಜಮ್ಮು-ಕಾಶ್ಮೀರ ಈಗ ಭಾರತದಲ್ಲೇ ಇದೆ. ಮುಸ್ಲಿಂ ಬಾಹುಳ್ಯ ಇರುವುದರಿಂದ ಅದು ಪಾಕಿಸ್ತಾನಕ್ಕೆ ಸೇರಬೇಕು ಎಂಬ ವಾದವನ್ನು ಪಾಕಿಸ್ತಾನ ಮಂಡಿಸುತ್ತಲೇಬಂದಿದೆ. ಒಂದಷ್ಟು ಜಾಗವನ್ನು ಅತಿಕ್ರಮಿಸಿಕೊಂಡಿದೆ ಕೂಡ.
ವಿಶ್ವೇಶ್ವರ ಭಟ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

