ತಪ್ಪಾಯ್ತು ತಿದ್ಕೋತೀವಿ
ಮೈಸೂರಿನ ಕೃಷ್ಣಮೂರ್ತಿಪುರಂನಿಂದ ಎಸ್. ರಾಘವೇಂದ್ರ ಅವರು ಬರೆಯುತ್ತಾರೆ- 'ನಮ್ಮ ದೇಶದ ಪ್ರಸಿದ್ಧ ಪುಣ್ಯಕ್ಷೇತ್ರಗಳು ಮೆಚ್ಚಿನ 'ಕನ್ನಡಪ್ರಭ'ದಲ್ಲಿ ತಪ್ಪುತಪ್ಪಾಗಿ ಪದೇ ಪದೇ ಬರುತ್ತಿರುವುದನ್ನು ನೋಡಿ ಪ್ರತಿಕ್ರಿಯಿಸುತ್ತಿರುವ ಮಿಂಚಂಚೆ ಇದು.'
'ಭಾರತ ಪ್ರಸಿದ್ಧ ಪುಣ್ಯಕ್ಷೇತ್ರಗಳ ತವರೂರು. ಗಂಗಾ ನದಿಯಂತೂ ನಮ್ಮ ದೇಶದ ಸಂಸ್ಕೃತಿಯಲ್ಲಿ ಹಾಸುಹೊಕ್ಕಿದೆ. ಗಂಗಾ ನದಿಯ ದಡದ ಈ ಕ್ಷೇತ್ರಗಳನ್ನು ನೋಡಲು ದೂರದ ವಿದೇಶದಿಂದ ಆಸ್ತಿಕರು ಬಂದು ಈ ಪವಿತ್ರ ನದಿಯಲ್ಲಿ ಮಿಂದು ಧನ್ಯರಾಗುತ್ತಾರೆ. ಬ್ರಿಟನ್ನಿನ ರಾಜಕುಮಾರ ಪ್ರಿನ್ಸ್ ಚಾರ್ಲ್ಸ್ ಮತ್ತವನ ಮಡದಿ ಕ್ಯಾಮಿಲ ಪಾರ್ಕರ್ ಈ ದೇಶಕ್ಕೆ ಬಂದು, ಉತ್ತರಾಖಂಡ ಪ್ರವಾಹದಲ್ಲಿ ಮೃತರಾದ ಸಂತ್ರಸ್ತರಿಗಾಗಿ ಶಾಂತಿ ಕೋರುತ್ತಿರುವ ಒಂದು ಅಪರೂಪದ ಚಿತ್ರ ನವೆಂಬರ್ 7 ರ ಸಂಚಿಕೆಯಲ್ಲಿ 'ದೇಶ ವಿದೇಶ' ಪುಟದಲ್ಲಿ ವರ್ಣ ಚಿತ್ರದಲ್ಲಿ ಪ್ರಕಟವಾಗಿದೆ. ಪುಣ್ಯ ಕ್ಷೇತ್ರ 'ಹೃಷಿಕೇಶ'ದಲ್ಲಿ ಈ ಸಂದರ್ಭ ಒದಗಿಬಂದಿದೆ.'
'ಆದರೆ ಸಂಬಂಧಪಟ್ಟ ವಾರ್ತಾ ಪ್ರವರ್ತಕರು ಚಿತ್ರ ಬರಹದಲ್ಲಿ 'ಹೃಶಿಕೇಶ' ಎಂದು ತಪ್ಪಾಗಿ ಬರೆದಿದ್ದಾರೆ.'
'ಹಿಮಾಲಯ ಪರ್ವತದಲ್ಲಿ ಹುಟ್ಟಿ ಮುಖಜ ಭೂಮಿಗೆ ಮೊದಲು ಪದಾರ್ಪಣೆ ಮಾಡುವ ಸ್ಥಳವೇ 'ಹೃಷಿಕೇಶ'. ಇಲ್ಲಿ ಗಂಗಾ ಸ್ನಾನ ಮಾಡುವ ಅನುಭವ ವರ್ಣನಾತೀತ. ನೀರಿನ ಹರವಿಗೆ ಇಲ್ಲಿ ರಭಸವಿಲ್ಲ. ಶುಭ್ರ ಬಿಳಿ ಬಣ್ಣದ ಗಂಗೆ ಸ್ನಾನ ಮಾಡಿದವರಿಗೆ ಒಳ್ಳೆಯ ಮುದ ಕೊಡುತ್ತದೆ.'
'ಹೃಷಿಕೇಶ ಎನ್ನುವುದು ಭಗವಾನ್ ವಿಷ್ಣುವಿನ ಮತ್ತೊಂದು ಹೆಸರು. ಇದರ ಉಲ್ಲೇಖ ಶ್ರೀ ಮಹಾಭಾರತದ ವಿಷ್ಣು ಸಹಸ್ರನಾಮದಲ್ಲಿ ಬರುತ್ತದೆ. 'ಅಪ್ರಮೇಯೋ ಹೃಷಿಕೇಶ ಪದ್ಮನಾಭೋ ಅಮರ ಪ್ರಭು...' ಹೃಷಿಕ ಎಂದರೆ ಇಂದ್ರಿಯಗಳು ಎಂದರ್ಥ. ಪ್ರತಿಯೊಬ್ಬ ಜೀವದಲ್ಲಿ ಐದು ಕರ್ಮೇಂದ್ರಿಯಗಳು, ಐದು ಜ್ಞಾನೇಂದ್ರಿಯಗಳು ಮತ್ತು ಮನಸ್ಸು ಇವುಗಳನ್ನು ನಿಯಮನ ಮಾಡುವ ಭಗವಂತನನ್ನು ಹೃಷಿಕೇಶ ಎನ್ನುತ್ತಾರೆ.'
'ಕನ್ನಡದ ಖ್ಯಾತ ಸಾಹಿತಿ ಮತ್ತು ಸಂಸ್ಕೃತ ವಿದ್ವಾಂಸರಾದ ಶ್ರೀ ಬನ್ನಂಜೆ ಗೋವಿಂದಾಚಾರ್ಯರಿಗೆ ತುಂಬಾ ಸ್ಪೂರ್ತಿ ಕೊಟ್ಟ ಪದ. ಅವರ ಬರಹಗಳಲ್ಲಿ ಅನೇಕ ಕಡೆ ಈ ಪದ ಕಾಣ ಸಿಗುತ್ತದೆ. ಗುಜರಾತಿನ ದ್ವಾರಕೆಯಿಂದ ಗೋಪಿಚಂದನ ಗಡ್ಡೆಯಲ್ಲಿ ಸಮುದ್ರ ಮಾರ್ಗದಲ್ಲಿ ಬಂದು ಉಡುಪಿಯಲ್ಲಿ ನಿಂತ ಶ್ರೀ ಕೃಷ್ಣನನ್ನು ತಮ್ಮ 'ಉಡುಪಿಯ ಕಂಡೀರಾ....' ದೇವರ ನಾಮದ ಸಾಲಿನಲ್ಲಿ ಹೀಗೆ ಸಂಬೋಧಿಸುತ್ತಾರೆ...'
'ಸಹೃದಯ ಓದುಗರ ಸಲುವಾಗಿ ಈ ಸಾಲು. 'ದ್ವಾರಕೆಯ ವಾಸ, ಹೃಷಿಕೇಶ ಸಾಕೆನಿಸಿತೇನೋ ಈಶ, ವಾರಿಯಲಿ ಬಂದೆ ದಾರಿಯಲಿ ನಿಂದೆ, ನೀ ದಾಟಿ ದೇಶ ದೇಶ...'
'ಹೃಷಿಕೇಶ ಎಂಬ ಹೆಸರಿನ ಜನಪ್ರಿಯ ಕ್ರಿಕೆಟ್ ಆಟಗಾರರು ಕಾಣ ಸಿಗುತ್ತಾರೆ. ಮಹಾರಾಷ್ಟ್ರದ ಆಲ್ರೌಂಡರ್ ಹೃಷಿಕೇಶ ಕಾನಿಟ್ಕರ್ ಭಾರತವನ್ನು ಕ್ರಿಕೆಟ್ನಲ್ಲಿ ಪ್ರತಿನಿಧಿಸಿದ್ದರು. ಇನ್ನು ಮುಂದೆ ಕ.ಪ್ರ ದಲ್ಲಿ ಹೃಶಿಕೇಶ ಹೃಷಿಕೇಶನಾಗಿಯೇ ವಿಜ್ರಂಭಿಸಲಿ' ಎಂದಿದ್ದಾರೆ.
-ವಿಶ್ವೇಶ್ವರ ಭಟ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

