ತಪ್ಪಾಯ್ತು ತಿದ್ಕೋತೀವಿ
ಧಾರವಾಡದಿಂದ ಡಾ.ಎ.ಎಸ್. ಕಬ್ಬೂರ ಅವರು ಬರೆಯುತ್ತಾರೆ- 'ನ.7ರಂದು ಗುರುವಾರದ 'ಕನ್ನಡಪ್ರಭ'ದಲ್ಲಿ 'ಇದೇನು ವಿಧೇಯಕವೋ, ಹಿಂದು ನಂಬಿಕೆಗಳನ್ನು ಒಡೆವ ಕುತಂತ್ರವೋ?' ಎಂಬ ಶೀರ್ಷಿಕೆಯಲ್ಲಿ 'ಒಡೆವ' ಶಬ್ದವು ತಪ್ಪಾಗಿದೆ. ಇದು 'ಒಡೆಯುವ' ಆಗಬೇಕು. ಅದರಂತೆ ಪುಟ 7ರಲ್ಲಿ ಇದೇ ಶಬ್ದವು (ಒಡೆಯುವ) ಸರಿ ಇದೆ.'
'ಇದೇ ಮುಖಪುಟದಲ್ಲಿ ಸರ್ಕಾರದಿಂದ ಕಾಗದ ಪೂರೈಕೆ ಎಂಬಲ್ಲಿ 'ಸರಕಾರ' ಸಮಂಜಸ ಶಬ್ದವಾಗುತ್ತದೆ ವಿನಃ 'ಸರ್ಕಾರ' ಅಲ್ಲ. ಪುಟ 2ರಲ್ಲಿ 'ತಾಕತ್ತಿದ್ದರೆ ಸಮಾವೇಶ ತಡೆದು ತೋರಿಸಿ ಎಂಬಲ್ಲಿ 'ತಾಕತ್ತಿದ್ದರೆ' ಎಂಬ ಶಬ್ದವು ಗ್ರಾಂಥಿಕವಾಗುವುದಿಲ್ಲ. ಇದು 'ಸಾಮರ್ಥ್ಯವಿದ್ದರೆ' ಆಗಬೇಕು. ಅದರಂತೆ ಪುಟ 5ರಲ್ಲಿ 'ಕನ್ನಡ ಶಾಲೆಗಳ ಹಣೆಬರೆಹ' ಎಂಬುದು ತಪ್ಪು. ಅದು 'ಹಣೆಬರಹ' ಆಗಬೇಕು.'
"ಬೈಟು ಕಾಫಿ' 2ನೇ ಪುಟದಲ್ಲಿ ವಿಶ್ವೇಶ್ವರ ಭಟ್ 'ಪ್ರದಕ್ಷಿಣ ಆಫ್ರಿಕಾ' ಎಂಬಲ್ಲಿ 'ಪ್ರದಕ್ಷಿಣ' ತಪ್ಪಾಗಿದೆ. ಇದು 'ಪ್ರದಕ್ಷಿಣೆ' ಆಗಬೇಕು' ಎಂದಿದ್ದಾರೆ.
ಕೇವಲ ನಮ್ಮ ಮೂಗಿನ ನೇರಕ್ಕೆ ಅಥವಾ ಭಾಷೆಯ ದೃಷ್ಟಿಯಿಂದ ಮಾತ್ರ ಪತ್ರಿಕೆಯನ್ನು ನೋಡಿದಾಗ ಅಥವಾ ಸುದ್ದಿಗಳನ್ನು ಓದಿದಾಗ ಕಬ್ಬೂರ ಅವರಂತೆ ಭಾವಿಸಬೇಕಾಗುತ್ತದೆ. ಡಾ. ಎ.ಎಸ್. ಕಬ್ಬೂರ ಅವರು ಪ್ರಸ್ತಾಪಿಸಿದ ಬಹುತೇಕ ಬಳಕೆಗಳು ತಪ್ಪಾಗಿಲ್ಲ.
'ಒಡೆವ' ಮತ್ತು 'ಒಡೆಯುವ' ಎಂಬುದರಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಗ್ರಾಂಥಿಕ ಬಳಕೆ ಹಾಗಿರಬಹುದು. ಆದರೆ 'ಒಡೆವ' ಎಂಬ ಶಬ್ದ ತಪ್ಪಂತೂ ಅಲ್ಲ. ಶೀರ್ಷಿಕೆಯಲ್ಲಿ ಮಾತ್ರ ಆ ಶಬ್ದ ಬಳಸಲಾಗಿದೆ. ಶೀರ್ಷಿಕೆಯಲ್ಲಿ ಒಂದೊಂದು ಅಕ್ಷರ ಕಡಿಮೆಯಾದಷ್ಟೂ ಸಹಾಯವಾಗುತ್ತದೆ. ಆ ಕಾರಣಕ್ಕೆ ಹಾಗೆ ಮಾಡಲಾಗಿದೆ.
ಹಾಗೆಯೇ 'ಸರಕಾರ' ಮತ್ತು 'ಸರ್ಕಾರ'ಕ್ಕೆ ಯಾವುದೇ ವ್ಯತ್ಯಾಸವಿಲ್ಲ. ಬರೆಯುವಲ್ಲಿ ಮಾತ್ರ ವ್ಯತ್ಯಾಸ. ಕೆಲವು ಪತ್ರಿಕೆಗಳು 'ಸರಕಾರ' ಎಂದು ಬಳಸುತ್ತವೆ. ನಾವು ಎಲ್ಲ ಕಡೆ 'ಸರ್ಕಾರ' ಎಂದೇ ಬಳಸುತ್ತೇವೆ. ಆದ್ದರಿಂದ ಇದು ತಪ್ಪಲ್ಲ. ನಾವು ಬಳಸುವುದೇ ಹಾಗೆ.
ಇನ್ನು ನನ್ನ ಅಂಕಣ 'ಪ್ರದಕ್ಷಿಣ ಆಫ್ರಿಕಾ' ಬಗ್ಗೆ ಹೇಳಿದ್ದಾರೆ. 'ಪ್ರದಕ್ಷಿಣೆ' ಎಂಬ ಶಬ್ದಗೊತ್ತಿಲ್ಲದೇ ಪತ್ರಿಕೆ ನಡೆಸುತ್ತಿದ್ದಾರೆ ಅಥವಾ ಪತ್ರಿಕೆಗಳಿಗೆ ಬರೆಯುತ್ತಾರೆ ಎಂದು ಓದುಗರು ಭಾವಿಸಬಾರದು. 'ಪ್ರದಕ್ಷಿಣ ಆಫ್ರಿಕಾ' ಎಂದು ಬರೆದಿರುವುದಕ್ಕೆ ಅರ್ಥವಿದೆ. 'ದಕ್ಷಿಣ ಆಫ್ರಿಕಾ' ಕುರಿತಾದ ಲೇಖನ ಮಾಲಿಕೆ ಆಗಿರುವುದರಿಂದ 'ಪ್ರದಕ್ಷಿಣ ಆಫ್ರಿಕಾ' ಎಂದು ಬಳಸಲಾಗಿದೆ. ಶಬ್ದದ ಜತೆಗಿನ ಇಷ್ಟು ಚಿಕ್ಕ ಆಟ, ಅದರ ಒಳಾರ್ಥ ಅರ್ಥವಾಗಿಲ್ಲ ಎಂದರೆ ಅಚ್ಚರಿಯಾಗುತ್ತದೆ. ಅರ್ಥವಾಗದೇ ಪ್ರಶ್ನಿಸುತ್ತಿದ್ದಾರೋ ಅರ್ಥವಾದರೂ ಪ್ರಶ್ನಿಸುತ್ತಿದ್ದಾರೋ ಎಂಬುದು ಅರ್ಥವಾಗುತ್ತಿಲ್ಲ. ಇಷ್ಟು ಸರಳವಾಗಿದೆ ಎಂದು ನಾವು ಭಾವಿಸಿದ್ದು ಕೆಲ ಓದುಗರಿಗೆ ಅರ್ಥವಾಗಿಲ್ಲ ಎಂಬುದು ಅಚ್ಚರಿಯ ಸಂಗತಿ.
-ವಿಶ್ವೇಶ್ವರ ಭಟ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

