ಸಚಿನ್ ವೈಭವೀಕರಣ: ಅತಿರೇಕ ಸಲ್ಲ
ಸಚಿನ್ ತೆಂಡೂಲ್ಕರ್ ಕ್ರಿಕೆಟ್ ಸಾಧನೆ ಮತ್ತು ಕೊನೆಯ (ಟೆಸ್ಟ್) ಪಂದ್ಯ ಇವು ಇಡೀ ಭಾರತವೇ ಸಂಭ್ರಮಿಸುವಂಥಾದ್ದು, ಸರಿಯೇ. ಆದರೆ, ಆತನ ಬಗ್ಗೆ ನಮ್ಮ ಮಾಧ್ಯಮಗಳ ವೈಭವೀಕರಣ ಮತ್ತು ಪ್ರಚಾರ ಅತಿಯಾಯಿತೆಂದು ನನಗೆ ಅನ್ನಿಸುತ್ತಿದೆ. ಇಷ್ಟಕ್ಕೂ, ಸಚಿನ್ ಆಡಿದ್ದು ವೃತ್ತಿಪರ ಕ್ರಿಕೆಟ್. ಬೇರೊಂದು ಪೂರ್ಣಾವಧಿ ವೃತ್ತಿಯಲ್ಲಿದ್ದು ಹವ್ಯಾಸವಾಗಿ ಇಷ್ಟೆಲ್ಲಾ ಸಾಧನೆ ಮಾಡಿದ್ದೇನಲ್ಲ. ಅರ್ಹನಿಶಿ ಕ್ರಿಕೆಟ್ಟನ್ನೇ ವೃತ್ತಿಯಾಗಿಸಿಕೊಂಡು, ಪ್ರತಿ ಬಾಲಿಗೂ ಹಣ ಕಮಾಯಿಸುತ್ತ, ಆಟ ಆಡದಿದ್ದಾಗಲೂ ಸಂಭಾವನೆ ಕಿಸೆಗಿಳಿಸಿಕೊಳ್ಳುತ್ತಾ, ಈ ಎಲ್ಲ ಆದಾಯ, ನಾನಾ ಬಹುಮಾನಗಳು ಹಾಗೂ ಜಾಹೀರಾತುಗಳಿಂದ ಸಾವಿರಾರು ಕೋಟಿ ಒಟ್ಟು ಹಣ ಮಾಡಿಕೊಂಡಿರುವ ಆಟಗಾರ ಆತ.
ಈ ಹಣದಲ್ಲಿ ನಗಣ್ಯವೆನ್ನುವಷ್ಟನ್ನು ಮಾತ್ರ ಸಾಮಾಜಿಕ ಕಾರ್ಯಗಳಿಗೆ ವಿನಿಯೋಗಿಸಿ ಉಳಿದೆಲ್ಲ ಸಂಪತ್ತನ್ನೂ ವೈಭವೋಪೇತ ಜೀವನಕ್ಕಾಗಿ ಬಳಸುತ್ತಿರುವಾತ. ಕೋಟ್ಯಂತರ ಭಾರತೀಯರು (ಆತನ ಅಭಿಮಾನಿಗಳೂ ಸೇರಿದಂತೆ) ದಾರಿದ್ರ್ಯದ ಜೀವನ ನಡೆಸುತ್ತಿರುವಾಗ ಸಚಿನ್ ಅವರಿಗಾಗಿ ನೀಡಬಲ್ಲಷ್ಟು ಕೊಡುಗೆ ನೀಡಿಲ್ಲ. ಅಂತಾರಾಷ್ಟ್ರೀಯ ಕ್ರೀಡಾಳುಗಳು ಅನೇಕರು ಈ ದೇಶದಲ್ಲಿ ಕೊಳೆಗೇರಿ ಸದೃಶ ಸ್ಥಳಗಳಲ್ಲಿ ವಾಸಿಸುತ್ತ ಕ್ರೀಡಾಸಾಧನೆಗೆ ಬೇಕಾಗುವ ಹಣದ ಕೊರತೆಯಿಂದಾಗಿ ಕೊರಗಿ ಬಾಡುತ್ತಿರುವಾಗ ಅಂಥವರ ನೆರವಿಗೂ ಸಚಿನ್ ನಿರೀಕ್ಷಿತ ಮಟ್ಟದಲ್ಲಿ ಮುಂದಾಗಲಿಲ್ಲ. ಬದಲಾಗಿ, ಹಾನಿಕಾರಕ ತಂಪು ಪಾನೀಯಗಳಂತಹ ಪೇಯಗಳ ಜಾಹೀರಾತಿಗಿಳಿದು ಕೋಟಿಗಟ್ಟಲೆ ಹಣ ಮಾಡಿಕೊಂಡ.
ಈತನ ಕ್ರಿಕೆಟ್ ಸಾಧನೆಯ ಬಗ್ಗೆಯೇ ಹೇಳುವುದಾದರೆ, ಈಗಿನಂತೆ ಟಿ20 ಪಂದ್ಯಗಳು, ಭರ್ಜರಿ ಸಂಖ್ಯೆಯ ಏಕದಿನ ಪಂದ್ಯಗಳು ಮತ್ತು ಟೆಸ್ಟ್ ಪಂದ್ಯಗಳು ಒದಗಿ ಬಂದಿದ್ದಲ್ಲಿ ವಿಶ್ವನಾಥ್, ಗವಾಸ್ಕರ್, ಕಪಿಲ್‌ದೇವ್ ಇವರುಗಳೂ ಸಚಿನ್‌ನಂತೆ ಭರ್ಜರಿ ಸಾಧನೆ ಮಾಡುತ್ತಿರಲಿಲ್ಲವೆಂದು ಹೇಗೆ ಹೇಳುವುದು?
-ಎಚ್. ಆನಂದರಾಮ ಶಾಸ್ತ್ರೀ, ಬೆಂಗಳೂರು
ಪಾಪಭೀತಿ ಇರದಿದ್ದರೆ...
'ಪಾಪ ಭೀತಿ ದೈವ ಪ್ರೀತಿ' ಯಿಂದ ಮಾತ್ರ ಮನುಷ್ಯನ ಮೃಗೀಯ ವರ್ತನೆಗೆ ಕಡಿವಾಣ ಹಾಕಲು ಸಾಧ್ಯ ಎಂದು ಅರಿತ ನಮ್ಮ ಪೂರ್ವಿಕರು ಅದಕ್ಕಾಗಿ ಸಾಕಷ್ಟು ಆಚರಣೆಗಳನ್ನು ಹುಟ್ಟು ಹಾಕಿದರು. ನಮ್ಮಲ್ಲಿರುವ ಸಾಕಷ್ಟು ಆಚರಣೆಗಳಿಗೆ, ನಂಬಿಕೆಗಳಿಗೆ ವೈಜ್ಞಾನಿಕ ಕಾರಣಗಳು ಸಹ ಇದೆ. ಹೀಗಿರುವಾಗ ಹಿಂದೂ ಧರ್ಮದ ಎಲ್ಲ ಆಚರಣೆಗಳನ್ನು ಸಾರಾಸಗಟಾಗಿ ಅವೈಜ್ಞಾನಿಕವೆಂದು ತೀರ್ಮಾನಿಸಿರುವ ಈ ಕರಡು ಪ್ರತಿಗೆ ನನ್ನ ಧಿಕ್ಕಾರವಿದೆ. ಹಾಗಿದ್ದರೆ ಬೇರೆ ಧರ್ಮದ ಆಚರಣೆಗಳೆಲ್ಲ ವೈಜ್ಞಾನಿಕವೆಂದು ಅರ್ಥವೇ?
ಮೂಢನಂಬಿಕೆಗೆ ಬಲಿಪಶುವಾದ ಸವಿತಾಹಾಲಪ್ಪ ಇವರಿಗೆ ನೆನಪಾಗಲಿಲ್ಲವೇ? ಇಷ್ಟವಿಲ್ಲದಿದ್ದರೂ ಶಾಲೆಗೂ ಬುರ್ಖಾ ಹಾಕಿ ಸಂಕಟ ಪಡುತ್ತಿರುವ ನಮ್ಮ ಸ್ನೇಹಿತೆಯರ ಗೋಳು ಇವರಿಗೆ ಕಾಣಿಸುತ್ತಿಲ್ಲವೇ? ಒಂದು ವೇಳೆ ಈ ಮಸೂದೆ ಜಾರಿಗೆ ಬಂದಿದ್ದೇ ಆದರೆ ಪಾಪಭೀತಿ, ದೈವ ಪ್ರೀತಿಯಿಲ್ಲದ ಮಾನವ ಮೃಗನಾದರೆ ಮುಂದಿನ ಪರಿಣಾಮ? ಅಬ್ಬ! ಊಹಿಸುವುದಕ್ಕೂ ಕಷ್ಟವಾಗುತ್ತಿದೆ.
-ಸನಿಹ ಆರ್. ಜೈನ್, ಶಿವಮೊಗ್ಗ
ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

