ವೃಥಾ ವ್ಯರ್ಥ ಪ್ರಯತ್ನ ಭಗ್ನ
2008ರ ಜುಲೈ 22 ರಂದು, ಪ್ರಧಾನಿ ಮನಮೋಹನ ಸಿಂಗ್ ಅವರು ತಮ್ಮ ಸರ್ಕಾರದ ಪರವಾಗಿ ಮಂಡಿಸಿದ್ದ ವಿಶ್ವಾಸ ಸೂಚಕ ನಿರ್ಣಯದ ಪರವಾಗಿ ಅನ್ಯ ಪಕ್ಷಗಳ ಸದಸ್ಯರಿಂದ ಮತಗಳನ್ನು "ಕೊಳ್ಳಲು" ಕಾಂಗ್ರೆಸ್ ಪ್ರಯತ್ನಿಸಿತ್ತು ಎನ್ನುವ ಆರೋಪ ಜನತಾಂತ್ರಿಕ ವ್ಯವಸ್ಥೆಗೇ ಕಳಂಕದ ರೂಪದಲ್ಲಿತ್ತು.
ಆ ವಿಶ್ವಾಸ ಮತವನ್ನು ಕಾಂಗ್ರೆಸ್ ಲೋಕಸಭೆಯಲ್ಲಿ ಗೆದ್ದು ಸರ್ಕಾರವನ್ನು ಉಳಿಸಿಕೊಂಡಿತ್ತು. ಆ ಸಂದರ್ಭದಲ್ಲಿ ಬಿಜೆಪಿಯ ಮೂವರು ಸದಸ್ಯರು ಕಾಂಗ್ರೆಸ್ ಲಂಚ ಕೊಡುತ್ತಿದೆ ಎಂದು ಆರೋಪಿಸಿ, ಸುಮಾರು ಒಂದು ಕೋಟಿ ರುಪಾಯಿಗಳ ಮೌಲ್ಯದ ನೋಟುಗಳನ್ನು ಲೋಕಸಭೆಯಲ್ಲೇ ಪ್ರದರ್ಶಿಸಿ, ದೊಡ್ಡ ಕೋಲಾಹಲವನ್ನೇ ಎಬ್ಬಿಸಿದ್ದರು. ಬಿಜೆಪಿ ಸದಸ್ಯರು, ತಾವು ಘೋರ ಅಪರಾಧದ ಎಚ್ಚರಿಕೆಯ ಗಂಟೆಯನ್ನು ಬಾರಿಸಿದ್ದರೆಂದು ವಿವರಿಸಿದರೂ, ಪ್ರಭುತ್ವದ ಪ್ರಕಾರ ಆಗ ಬಿಜೆಪಿಯ ಉದ್ದೇಶ ಸಂಯುಕ್ತ ಪ್ರಗತಿಪರ ಕೂಟದ ಸರ್ಕಾರವನ್ನು ಉರುಳಿಸುವುದೇ.
ಈ ಸಂಬಂಧದಲ್ಲಿ ಸಿಎನ್ಎನ್- ಐಬಿಎನ್ ನಡೆಸಿದ ಒಂದು ಕುಟುಕು ಕಾರ್ಯಾಚರಣೆಯ ಚಿತ್ರೀಕರಣದ ಭಾಗಗಳನ್ನು ಪ್ರದರ್ಶಿಸಲಾಗಿತ್ತು. ಈ ವ್ಯವಹಾರದ ಸಮಗ್ರ ಸ್ವರೂಪದ ತನಿಖೆ ನಡೆಸುವ ಹೊಣೆಯನ್ನು ಸಿಬಿಐಗೇ ವಹಿಸಲಾಗಿತ್ತು.
2009 ರ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್ ನೇತೃತ್ವದ ಸಂಯುಕ್ತ ಪ್ರಗತಿ ಪರ ಕೂಟದ ಸರ್ಕಾರವೇ ಅಧಿಕಾರಕ್ಕೆ ಬಂದ ಅನಂತರ ಎಲ್ಲರೂ ಸಿಬಿಐ ತನಿಖೆ, ಅನಂತರದ ನ್ಯಾಯಾಲಯದ ವಿಚಾರಣೆಯ ವಿವರಗಳಲ್ಲಿ ಹೆಚ್ಚು ಆಸಕ್ತಿ ತೋರಿಸಲಿಲ್ಲ. ಆದರೂ ತನಿಖೆ, ನಡೆದು, ವಿಚಾರಣೆಯೂ ಮುಗಿದ ಅನಂತರ ನ್ಯಾಯಾಲಯ ಮೂವರು ಮಾಜಿ ಬಿಜೆಪಿ ಸಂಸದರು, ಬಿಜೆಪಿ ನಾಯಕ ಆಡ್ವಾಣಿಯವರ ಆತ್ಮೀಯ ಸುಧೀಂದ್ರ ಕುಲಕರ್ಣಿ ಅವರನ್ನು ನಿರ್ದೋಷಿಗಳೆಂದು ಸಾರಿತ್ತು.
ಈಚೆಗೆ ಆಗಿನ ಸಮಾಜವಾದಿ ಪಕ್ಷದ ನಾಯಕ ಅಮರ್ ಸಿಂಗ್ ಅವರನ್ನು ನಿರ್ದೋಷಿ ಎಂದು ಸಾರಲಾಗಿದೆ. ಅಲ್ಲಿಗೆ ಈ ಪ್ರಕರಣದಲ್ಲಿ ಹೆಸರಿಸಲಾಗದ್ದವರಲ್ಲಿ ಅಮರ ಸಿಂಗ್ ಆತ್ಮೀಯ ಸಕ್ಸೇನಾ ಅವರನ್ನು ಬಿಟ್ಟು ಉಳಿದವರೆಲ್ಲ ದೋಷದಿಂದ ಮುಕ್ತರಾಗಿದ್ದಾರೆ.
ಇಡೀ ಪ್ರಕರಣದ ವಿಶಿಷ್ಟವಾದ ಅಂಶ ಎಂದರೆ ಸಿಬಿಐ ಪೊಲೀಸರು ಲೋಕಸಭೆಯಲ್ಲಿ ಪ್ರದರ್ಶನವಾದ ಒಂದು ಕೋಟಿ ರುಪಾಯಗಳ ಮೌಲ್ಯದ ನೋಟುಗಳು ಎಲ್ಲಿಂದ ಬಂದವು, ಅದರ ಮೂಲ ಯಾವುದು ಎನ್ನುವುದನ್ನು ಪತ್ತೆ ಹಚ್ಚುವುದರಲ್ಲಿ ವಿಫಲವಾಗಿದ್ದು.
ಅಲ್ಲಿಗೆ ಈ ಪ್ರಕರಣವನ್ನು ಇಲ್ಲಿಗೇ ಬಿಟ್ಟು ಬಿಡುವುದೇ ಅಥವಾ ಇನ್ನೂ ಏನಾದರೂ ವಿಶೇಷ ತನಿಖೆಯ ಅಗತ್ಯವೇನಾದರೂ ಇದೆಯೇ ಎನ್ನುವ ಪ್ರಶ್ನೆ ಮುಖ್ಯವಾಗುತ್ತದೆ. ಮತ್ತೊಂದು ತನಿಖೆಯೂ ವಿಫಲ ಪ್ರಯತ್ನವೇ ಆಗಬಹುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

