ಸಂಪಾದಕೀಯ

ತಪ್ಪಾಯ್ತು ತಿದ್ಕೋತೀವಿ

Published On :

ಮೈಸೂರು ಜಿಲ್ಲೆ ದೊಡ್ಡಪುರದಿಂದ ಡಿ. ಗುರುಮಲ್ಲಪ್ಪ ಅವರು ಪತ್ರ ಬರೆದಿದ್ದಾರೆ. ಅವರು ಬಹಳ ಗಹನವಾದ ಸಂಗತಿಯ ಬಗ್ಗೆ ಗಮನ ಸೆಳೆದಿದ್ದಾರೆ. ಬಹುತೇಕ ಜನರು ನಂಬಿರುವ ಮತ್ತು ಭಾಷಣ ಮಾಡುವಂತೆ 'ಕಾಯಕವೇ ಕೈಲಾಸ' ಎಂಬ ಮಾತು ಅಥವಾ ನುಡಿಗಟ್ಟು ಬಸವಣ್ಣ ಅವರದ್ದಲ್ಲ ಎಂದಿದ್ದಾರೆ. ಅವರು ಬರೆಯುತ್ತಾರೆ-
'ಅ.3ರಂದು 'ಬೈಟು ಕಾಫಿ'ಯಲ್ಲಿ ಶಿವರಾಮ ಭಟ್ ಅವರು 'ಶ್ರಮಗೌರವ'ದ ಬಗ್ಗೆ ಬರೆಯುತ್ತ, 'ಬಸವೇಶ್ವರರು ತಮ್ಮ ವಚನದಲ್ಲಿ...' ಎಂದು ಬರೆದಿರುವ ವಚನವೂ ಸ್ವಲ್ಪ ತಪ್ಪು. ಜತೆಗೆ ಅದನ್ನು ಬರೆದವರು ಬಸವಣ್ಣನವರೂ ಅಲ್ಲ.'
'ಆ ವಚನವನ್ನು ಹೇಳಿದವರು (ಬರೆದವರು) ಬಸವಣ್ಣನವರ ಅನುಯಾಯಿ ಶರಣ ಅಯ್ದಕ್ನಿ ಮಾರಯ್ಯನವರು. ಆ ವಚನ ಹೀಗಿದೆ...'
'ಕಾಯಕದಲ್ಲಿ ನಿರತನಾದರೆ
ಗುರುಪರುಶನವಾದಡೂ ಮರೆಯಬೇಕು'
ಲಿಂಗಪೂಜೆಯಾದಡೂ ಮರೆಯಬೇಕು
ಜಂಗಮ ಮುಂದಿದ್ದಡೂ ಹಂಗಹರಿಯಬೇಕು
ಕಾಯಕವೇ ಕೈಲಾಸವಾದ ಕಾರಣ
ಅಮರೇಶ್ವರ ಲಿಂಗವಾಯಿತ್ತಾದಡೂ ಕಾಯಕದೊಳಗು' ಎಂದು.'
'ಬಹಳ ಜನ ತಿಳಿದಂತೆ 'ಕಾಯಕವೇ ಕೈಲಾಸ' ನುಡಿಗಟ್ಟು, ಅಣ್ಣನವರದ್ದಲ್ಲ. ಮಾರಯ್ಯನವರದ್ದು' ಎಂದಿದ್ದಾರೆ.
ಮೈಸೂರಿನ ಕುವೆಂಪು ನಗರದಿಂದ ನವಿಲೂರು ಪ್ರಕಾಶ ಅವರು ಬರೆಯುತ್ತಾರೆ- 'ಅ.10ರಂದು ಪುಟ4ರಲ್ಲಿ (ಮೈಸೂರು ಆವೃತ್ತಿ) 'ಜಿಲ್ಲೆಗೆ ಸಮಗ್ರ ಬಹುಮಾನ' ಎಂಬ ಶೀರ್ಷಿಕೆಯಲ್ಲಿ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಜಿಲ್ಲೆಗೆ ಸಮಗ್ರ ಬಹುಮಾನ ಎಂಬುದು ಸರಿಯೇ?'
'ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ವಿವಿಧ ತಾಲೂಕುಗಳ ಕ್ರೀಡಾಳುಗಳು ಭಾಗವಹಿಸುತ್ತಾರೆ. ಯಾರು ಗೆದ್ದರೂ ಜಿಲ್ಲೆಯವರೇ ತಾನೇ? ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಯಾವುದಾದರೊಂದು ತಾಲ್ಲೂಕು ಸಮಗ್ರ ಪ್ರಶಸ್ತಿ ಪಡೆಯಬಹುದೇ ಹೊರತು, ಜಿಲ್ಲೆಗೇ ಸಮಗ್ರ ಪ್ರಶಸ್ತಿ ಎಂದರೆ ಹೇಗೆ? ವಿಭಾಗ/ರಾಜ್ಯ ಮಟ್ಟದಲ್ಲಿ ಮೈಸೂರು ಜಿಲ್ಲೆಗೆ ಸಮಗ್ರ ಪ್ರಶಸ್ತಿ ಎನ್ನುವುದು ಸರಿ ಅಲ್ಲವೇ?' ಎಂದಿದ್ದಾರೆ.
ಶಿವಮೊಗ್ಗದಿಂದ ಕೆ. ಮದನಮೋಹನ ಶೆಣೈ ಅವರು ಬರೆಯುತ್ತಾರೆ- 'ಸೆ.3ರಂದು (ಶಿವಮೊಗ್ಗ ಆವೃತ್ತಿ) ಪುಟ4ರಲ್ಲಿ 'ಧರ್ಮಾಚರಣೆ ಜತೆ ವೈಚಾರಿಕತೆ ಬೆಳೆಸಿಕೊಳ್ಳಿ' ಎಂಬ ಭದ್ರಾವತಿ ಸುದ್ದಿಯಲ್ಲಿ 'ಇತರರಿಗೆ 'ನೋವಾಗುವಂತೆ' ನಡೆದುಕೊಳ್ಳುವುದೇ ಧರ್ಮ ಹೊರತು ಕೇವಲ ದೇವಸ್ಥಾನಗಳಿಗೆ...' ಎಂದು ಮುದ್ರಣವಾಗಿದೆ. 'ನೋವಾಗದಂತೆ' ಎಂದಿರಬೇಕಿತ್ತಲ್ಲವೇ? ಪೂರ್ಣ ವಿರುದ್ಧವಾಗಿರುವ ಶಬ್ದ ಮುದ್ರಣಗೊಂಡಿದೆ.'

-ವಿಶ್ವೇಶ್ವರ ಭಟ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.