ಹೇಳಿ ಮಾಡಿಸುವ ಕಡತಗಳು
ಜನತಾಂತ್ರಿಕ ವ್ಯವಸ್ಥೆಯಲ್ಲಿ ಸರ್ಕಾರದ ನಿರ್ಧಾರಗಳನ್ನು ರೂಪಿಸುವುದರಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಮನ ಒಲಿಸುವ ಪ್ರಯತ್ನ ನಿಷಿದ್ಧವಲ್ಲ. ಅಂತಹ ಪ್ರಯತ್ನ ಸಫಲವಾಗುವುದೋ ಇಲ್ಲವೋ ಎನ್ನುವುದು ಬೇರೆ ಮಾತು.
ವೈಯಕ್ತಿಕ ಹಿತಕ್ಕೆ ಸಂಬಂಧಿಸಿದ ವಿಚಾರವೇ ಆಗಿರಲಿ, ನಿರ್ದಿಷ್ಟ ಜನವರ್ಗಕ್ಕೆ ಅನ್ವಯವಾಗುವ ವಿಚಾರವೇ ಆಗಲಿ, ಸರ್ಕಾರದ ನಿರ್ಧಾರ ರೂಪುಗೊಳ್ಳುವುದರಲ್ಲಿ ಕಡತಗಳ ಪಾತ್ರ ಪ್ರಮುಖವಾದದ್ದು.
ಸಾಮಾನ್ಯವಾಗಿ, ಸರ್ಕಾರದ ನೀತಿ ಅಥವಾ ಉದ್ದೇಶ ಪ್ರಕಟವಾಗುವುದು ಮೇಲ್ಮಟ್ಟದಿಂದಲೇ. ಆ ನೀತಿಯನ್ನು ಜಾರಿಗೆ ತರುವ ವಿಧಿ-ವಿಧಾನಗಳು ತಮ್ಮ ಸ್ವರೂಪವನ್ನು ಪಡೆಯುವುದು ಅಧಿಕಾರಿಗಳ ಮಟ್ಟದಲ್ಲೇ. ಈಗಿನ ವ್ಯವಸ್ಥೆಯಲ್ಲಿ ಇಂತಹ ಕಡತಗಳನ್ನು ರೂಪಿಸುವುದರಲ್ಲಿ ಅಧೀನ ಕಾರ್ಯದರ್ಶಿಯ ಪಾತ್ರ ಪ್ರಮುಖವಾದದ್ದು. ಆ ಹಂತದಲ್ಲೇ ಕಡತದ ಮೂಲ ರೂಪದ ಅರಿವಾಗುವುದು.
ಉನ್ನತ ಮಟ್ಟದಲ್ಲಿನ ನಿರ್ಧಾರದ ಮೇಲೆ ಪ್ರಭಾವ ಬೀರುವ ಪ್ರಯತ್ನ ನಡೆಯುವುದು ಆಡಳಿತ ವ್ಯವಸ್ಥೆಯ ರಾಜಮಾರ್ಗದಲ್ಲೇ. ಸಂಬಂಧಪಟ್ಟವರು, ಹಿರಿಯ ಅಧಿಕಾರಿಗಳನ್ನೋ, ಮಂತ್ರಿಗಳನ್ನೋ ಭೇಟಿ ಮಾಡಿ ತಮ್ಮ ನಿಲವನ್ನು ಪ್ರತಿಪಾದಿಸಿ, ಸರ್ಕಾರದ ನಿಲವು ಅದಕ್ಕೆ ಹೊಂದಿಕೊಂಡಿರುವಂತಿರಬೇಕೆಂದು ಕೇಳಿಕೊಳ್ಳುವುದು ಇಂತಹ ರಾಜಮಾರ್ಗಗಳಲ್ಲಿ ಒಂದು.
ಇನ್ನುಳಿದಂತೆ, ಸಾರ್ವಜನಿಕ ಕ್ಷೇತ್ರದಲ್ಲಿ ಕೆಲಸ ಮಾಡುವ ವ್ಯಕ್ತಿಗಳು, ಪತ್ರಗಳ ಮೂಲಕ ಅಥವಾ ಹೇಳಿಕೆಗಳ ಮೂಲಕ ತಮ್ಮ ಉದ್ದೇಶ ಸಾಧನೆಗೆ ಪ್ರಯತ್ನಿಸಬಹುದು. ಆದರೆ ಇಲ್ಲಿ ಎಲ್ಲವೂ ಪಾರದರ್ಶಕವಾಗಿಯೇ ಇರುತ್ತದೆ. ಅಂತಿಮ ನಿರ್ಧಾರವನ್ನು ಕೈಗೊಳ್ಳುವವರು ಎಲ್ಲ ಪ್ರಕಟಿತ ಅಭಿಪ್ರಾಯಗಳನ್ನು ಗಮನಿಸಿ, ಕಡತಗಳಲ್ಲಿ ಕಂಡುಬರುವ ವಿಷಯಗಳನ್ನು ಗಮನಿಸಿ ಮಾಡಬೇಕಾದ ಕೆಲಸವನ್ನು ಮಾಡಬೇಕು.
ಇಂತಹ ಪ್ರವೃತ್ತಿ ಸಾರ್ವಜನಿಕ ನೀತಿಗೇ ಸೀಮಿತ ಎಂದೇನೂ ಅಲ್ಲ. ವೈಯಕ್ತಿಕ ಮನವಿಗಳಿಗೆ ಸಂಬಂಧಿಸಿದ ವಿಚಾರಗಳಲ್ಲೂ ಇದು ಸಲ್ಲುವ ಪ್ರವೃತ್ತಿ. ಆದರೆ ಇತ್ತೀಚಿನ ದಿನಗಳಲ್ಲಿ ಅನೇಕ ವಿಷಯಗಳಲ್ಲಿ ಒತ್ತಡ ಬೀರುವ ತಂತ್ರಗಾರಿಕೆ ಕಡತದ ತಯಾರಿಯ ಆರಂಭದ ಮಟ್ಟದಲ್ಲೇ ಪ್ರಯೋಗವಾಗುವ ಪ್ರವೃತ್ತಿ ಹೆಚ್ಚುತ್ತಿರುವಂತಿದೆ. ಇಂತಹ ಒತ್ತಡ ಸಫಲವಾಗಿರುವ ಉದಾಹರಣೆಗಳೂ ಇದೆಯಂತೆ.
ಇಂತಹ ತಂತ್ರಗಳ ಬಳಕೆಯಲ್ಲಿ ಸಾರ್ವಜನಿಕರ ಪ್ರತಿನಿಧಿಗಳಲ್ಲದೇ ಸರ್ಕಾರದ ಅಧಿಕಾರಿಗಳೂ ತಮ್ಮ ಪಾತ್ರವನ್ನು ನಿರ್ವಹಿಸುವುದೂ ಹೆಚ್ಚಾಗುತ್ತಿದೆ ಎನ್ನುವ ದೂರುಗಳಿವೆ. ಇಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ಅಥವಾ ನೌಕರರಿಗೆ ಬೆದರಿಕೆ ಹಾಕುವುದೂ ಉಂಟು.
ಈ ರೀತಿಯಲ್ಲಿ ಸಿದ್ಧವಾದ ಕಡತಗಳ ಆಧಾರದ ಮೇಲೆ ಉನ್ನತ ಮಟ್ಟದಲ್ಲಿ ಹೊರಬೀಳುವ ನಿರ್ಧಾರಗಳಲ್ಲಿ ಏರುಪೇರು ಕಂಡುಬರಲೂಬಹುದು. ಇಂತಹ ಕಡತಗಳಿಗೆ ಕೆಲವರು ಹೇಳಿ ಮಾಡಿಸಿದ ಕಡತಗಳೆಂದು ನಾಮಕರಣ ಮಾಡಿದ್ದಾರಂತೆ.
ಈಗ ಸರ್ಕಾರದ ಆಡಳಿತ ಸುಧಾರಣೆಯ ವಿಭಾಗ, ಕಡತಗಳ ತಯಾರಿಯ ಹಂತದಲ್ಲೇ ಸಂಬಂಧಪಡದೇ ಇರುವ ಅಧಿಕಾರಿಗಳ "ವಶೀಲಿ ಬಾಜೀ ಅಪರಾಧವೆಂದು ಪರಿಗಣಿಸುವುದು ಸೂಕ್ತ ಎನ್ನುವ ತೀರ್ಮಾನಕ್ಕೆ ಬಂದಿದೆ. ಆದಷ್ಟು ಬೇಗ ಈ ನಿಯಮ ರೂಪಗೊಂಡು ಜಾರಿಗೆ ಬರಬೇಕು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

