ಸಂಪಾದಕೀಯ

ಸುಧಾರಣೆ ಹಾಗೂ ಭ್ರಷ್ಟಾಚಾರ

Published On :

ನಿಯಂತ್ರಿತ ಆರ್ಥಿಕ ವ್ಯವಸ್ಥೆಯಲ್ಲಿ ವಿಪರೀತ ಭ್ರಷ್ಟಾಚಾರಕ್ಕೆ ಅವಕಾಶವಿರುವುದರಿಂದ ಪ್ರಗತಿಯ ವೇಗ ಕುಗ್ಗುತ್ತದೆ, ಜನರ ಸಾಮರ್ಥ್ಯದ ವಿಜೃಂಭಣೆಗೆ ಅವಕಾಶವೇ ಇಲ್ಲ ಎನ್ನುವ ದೂರು 1960-80ರ ದಶಕದಲ್ಲಿ ವಿಪರೀತವಾಗಿ ಕೇಳಿ ಬಂದಿತ್ತು.
ಲೈಸೆನ್ಸ್ ಪರ್ಮಿಟ್ ರಾಜ್ಯದಲ್ಲಿ, ಪ್ರಭಾವವಿದ್ದವರು, ಲಂಚಕೊಡುವ ಶಕ್ತಿ ಇದ್ದವರು ಉದ್ಯಮ, ವ್ಯಾಪಾರಕ್ಕೆ ಲೈಸೆನ್ಸ್ ಪಡೆದು, ಅದನ್ನೇ ಮಾರಿಕೊಂಡು ಶ್ರೀಮಂತರಾಗುವ ಪರಿಸ್ಥಿತಿಯ ದಿನಗಳವು.  ಆ ವ್ಯವಸ್ಥೆಯನ್ನು ವಿರೋಧಿಸುವವರಲ್ಲಿ ಸಮೂಹ ಸಂಘಟನೆಯ ಶಕ್ತಿ ಇರಲಿಲ್ಲ. ಆದರೂ ಒಂದಲ್ಲ ಒಂದು ಹಂತದಲ್ಲಿ ಭ್ರಷ್ಟ ವ್ಯವಸ್ಥೆಯ ಜತೆ ರಾಜಿಯಾಗಿರುವ ಪ್ರಕರಣಗಳೂ ಇವೆ. ಆದರೆ ಸರ್ಕಾರಿ ಉದ್ಯಮಗಳಲ್ಲಿ, ನಿಸರ್ಗದತ್ತ ಸಂಪತ್ತಿನ ಬಳಕೆಯ ಹಕ್ಕನ್ನು ನೀಡುವ ವಿಚಾರದಲ್ಲಿ ಕಂಡುಬಂದ ಬ್ರಹ್ಮಾಂಡ ಸ್ವರೂಪದ ಭ್ರಷ್ಟಾಚಾರ ಅದರ ಪರಿಣಾಮವಾಗಿ ದಾರಿದ್ರ್ಯವೇ ದೇಶದ ಪ್ರಮುಖ ಲಕ್ಷಣ ಎನ್ನುವ ಸ್ಥಿತಿ ರೂಪಗೊಂಡಾಗ, 1980ರ ದಶಕದ ಎರಡನೇ ಭಾಗದಲ್ಲಿ ರಾಜೀವ ಗಾಂಧಿಯ ಸಲಹೆಗಾರರ ಹಿತವಚನದ ಪರಿಣಾಮವಾಗಿ ಎಲೆಕ್ಟ್ರಾನಿಕ್ ವಲಯದಲ್ಲಿ ಸುಧಾರಣೆಯ ಗಾಳಿ ಬೀಸಿದ್ದು ನಿಜ. ನಿಧಾನವಾಗಿ ಲೈಸೆನ್ಸ್-ಪರ್ಮಿಟ್ ರಾಜ್ಯ ಸಡಿಲವಾದಂತೆ ಹೋದಾಗ, ಸಾರ್ವಜನಿಕ ಜೀವನದಲ್ಲಿ ಕಾರ್ಪೋರೇಟ್ ವಲಯದ ಪ್ರಭಾವವೂ ಹೆಚ್ಚಾಯಿತು.
ಸುಧಾರಣೆ ನೀತಿ ಗಟ್ಟಿಯಾಗಿ ಜನರ ಮುಂದೆ ನಿಂತಿದ್ದು ನರಸಿಂಹರಾಯರ ಕಾಲದಲ್ಲಿ. ಆಗ ಈಗಿನ ಪ್ರಧಾನಿ ಮನಮೋಹನಸಿಂಗ್ ವಿತ್ತಮಂತ್ರಿ. ಐ.ಎ.ಎಸ್. ಅಧಿಕಾರಿಷಾಹಿಯಲ್ಲೂ ಬೇಕಾದಷ್ಟು ಜನ ಸುಧಾರಣೆಯನ್ನು ಬೆಂಬಲಿಸಿದ್ದು ಉಂಟು. ಸುಧಾರಣೆ ನೀತಿ ಜಾರಿಗೆ ಬಂದ ಸಮಯದಲ್ಲಿ ಜಾಗತಿಕ ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆಗೆ ನೆರವು ನೀಡುವುದರಲ್ಲಿ ಕೆಲವು ಷರತ್ತುಗಳೊಡನೆ ವಿಪರೀತ ಆಸಕ್ತಿಯನ್ನು ವಹಿಸಿದ್ದ ಅಂತಾರಾಷ್ಟ್ರೀಯ ವಿತ್ತನಿಧಿ ಹಾಗೂ ವಿಶ್ವಬ್ಯಾಂಕ್‌ಗಳ ಕುಮ್ಮಕ್ಕಿನಿಂದ ದೇಶದಲ್ಲಿ ವಿದೇಶೀ ಹಣ ಧಾರಾಳವಾಗಿ ದೊರೆಯುವಂತಾಯಿತು. ಸುಧಾರಣೆ ಕ್ರಮಗಳಿಂದ ಹಣ ಲಭ್ಯವಾದಾಗ, ಅದರ ಅನಿವಾರ್ಯ ಪರಿಣಾಮವಾಗಿ ಕಾರ್ಪೋರೇಟ್ ಭ್ರಷ್ಟಾಚಾರವೂ ತಲೆ ಎತ್ತಿತ್ತು. ಅದಕ್ಕೆ ಮುಂಚೆ ಇರಲಿಲ್ಲ ಎಂದೇನೂ ಅಲ್ಲ.
ನಮ್ಮ ಆಡಳಿತಗಾರರಿಗೆ ಈ ಸಮಸ್ಯೆಯನ್ನು ಎದುರಿಸುವ ರೀತಿ-ನೀತಿ ವಿಧಾನಗಳ ಪರಿಚಯವಿರಲಿಲ್ಲ. ನಿಯಂತ್ರಣ ಪ್ರಾಧಿಕಾರಗಳನ್ನು ರಚಿಸಿದರೆ ಭ್ರಷ್ಟಾಚಾರ ತಾನೇ ತಾನಾಗಿ ಕಡಿಮೆಯಾಗುವುದೆನ್ನುವ ನಂಬಿಕೆ ಇತ್ತು. ಹಾಗಾಗಲಿಲ್ಲ. ಸಾಕಷ್ಟು ಅಧಿಕಾರ, ಅನುಭವವಿಲ್ಲದೇ ಇದ್ದಿದ್ದರಿಂದ ನಿಯಂತ್ರಣ ಪ್ರಾಧಿಕಾರಗಳು ಭ್ರಷ್ಟಾಚಾರವನ್ನು ತಡೆಯುವುದರಲ್ಲಿ, ಭ್ರಷ್ಟಾಚಾರಿಗಳನ್ನು ಶಿಕ್ಷಿಸುವುದರಲ್ಲಿ ವಿಫಲವಾದವು.
ಈಗಿನ ಸ್ಥಿತಿಯಲ್ಲಿ, ಜಾಗತಿಕ ಆರ್ಥಿಕ ವಲಯದ ಏರಿಳಿತದ ಹಿನ್ನೆಲೆಯಲ್ಲಿ, ಸುಧಾರಣೆ ನೀತಿಯ ಎರಡನೇ ಹಂತದ ಮಜಲುಗಳನ್ನು ಹತ್ತಲು ದೇಶವನ್ನು ಆಳುವವರು ಸಜ್ಜಾಗಿರುವಾಗ, ಹೊಸ ಹೊಸ ಸುಧಾರಣೆ ಕ್ರಮಗಳ ಜತೆಯಲ್ಲೇ ನಿಯಂತ್ರಣ ಪ್ರಾಧಿಕಾರಗಳ ವ್ಯವಸ್ಥೆಯನ್ನೂ ಬಲಪಡಿಸುವುದು ಅಗತ್ಯವಾಗಿ ಆಗಲೇಬೇಕಾದ ಕೆಲಸ.
ಈಗ ಮೋಸಗಾರರ ಅಪರಾಧ ನ್ಯಾಯಾಂಗದ ವೇದಿಕೆಗಳಲ್ಲಿ ಸಾಬೀತಾಗುವುದೇ ಕಷ್ಟ. ಒಂದು ವೇಳೆ ಸಾಬೀತಾದರೂ, ಅಪರಾಧಿಗಳಿಗೆ ವಿಧಿಸುವ ಶಿಕ್ಷೆ ತೀರ ಅಲ್ಪ. ಈ ವ್ಯವಸ್ಥೆಯನ್ನೇ ಮುಂದುವರಿಸಿದರೆ, ನಮ್ಮ ಸುಧಾರಣೆ ನೀತಿ ನಿರೂಪಣೆಯಲ್ಲಿ ಕಾರ್ಪೋರೇಟ್ ಪಾತ್ರವೇ ಹೆಚ್ಚಾಗಿ, ಸರ್ಕಾರದ ನೀತಿಯ ಫಲವಾಗಿ ಸೃಷ್ಟಿಯಾದ ಅಧಿಕ ಸಂಪತ್ತು ಭ್ರಷ್ಟಾಚಾರದ ಮಾರ್ಗದಲ್ಲಿ ಕಾರ್ಪೋರೇಟ್ ವಲಯವನ್ನೇ ಸೇರುವ ಸಂಭವ ನಿಚ್ಚಳವಾಗಿದೆ. ನಿಜ. ಭ್ರಷ್ಟಾಚಾರದ ನಿರ್ಮೂಲನ ಅಸಾಧ್ಯ ಎನ್ನುವುದನ್ನು ಒಪ್ಪಿದರೂ ಕೈಗೆ ಸಿಕ್ಕಿ ಬಿದ್ದ ಅಪರಾಧಿಗಳಿಗೆ ಕಠಿಣ ಶಿಕ್ಷೆ ಖಚಿತ ಎನ್ನುವ ವಾತಾವರಣ ನಿರ್ಮಾಣವಾಗದೇ ಹೋದರೆ, ಸುಧಾರಣೆ ಫಲ ಕಾರ್ಪೋರೇಟ್ ವಲಯಕ್ಕೇ ಸೀಮಿತವಾಗುತ್ತದೆ. ಹಾಗಾಗದಂತೆ ನೋಡಿಕೊಳ್ಳುವುದು ಪ್ರಭುತ್ವದ ಕರ್ತವ್ಯ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.