ಸಂಪಾದಕೀಯ

ತಪ್ಪಾಯ್ತು ತಿದ್ಕೋತೀವಿ

Published On :

ಮೈಸೂರಿನ ಕೃಷ್ಣಮೂರ್ತಿಪುರಂನಿಂದ ಎಸ್. ರಾಘವೇಂದ್ರ ಅವರು ಬರೆಯುತ್ತಾರೆ- 'ಸೆ.15 ಸಂಚಿಕೆಯ  'ಸಾಪ್ತಾಹಿಕ ಪ್ರಭ' ಪುರವಣಿಯಲ್ಲಿ ಬಿ.ಆರ್. ಲಕ್ಷ್ಮಣರಾವ್ ಅವರ 'ಕವಿತೆಯ ಕಥೆ' ಮಾಲಿಕೆಯಲ್ಲಿ ಪ್ರಕಟವಾದ 'ಗುಂಡಪ್ಪ ವಿಶ್ವನಾಥ್‌' ಲೇಖನದಲ್ಲಿ ಮೂಡಿರುವ ಕಲಾವಿದರ ಚಿತ್ರಗಳಲ್ಲಿ ತಪ್ಪು ಸಂಗತಿಗಳಿರುವ ಬಗ್ಗೆ ಈ ಪತ್ರ.'
'ವಿಶ್ವನಾಥ್, ಲಾರ, ಸಚಿನ್, ದ್ರಾವಿಡ್ ಮುಂತಾದ ಕ್ರಿಕೆಟ್ ಕಲಿಗಳು ಬ್ಯಾಟಿಂಗ್ ಮಾಡುವಾಗ ಅವರ ಕಲಾತ್ಮಕತೆಗೆ ಮನ ಸೋತು ಬ್ಯಾಟಿಂಗನ್ನು ಕಾವ್ಯಕ್ಕೆ ಹೋಲಿಸುವುದನ್ನು ಕೇಳಿದ್ದೇವೆ. ಕನ್ನಡದ ಕವಿ ಪುಂಗವರಲ್ಲಿ ಒಬ್ಬರಾದ ಬಿ.ಆರ್. ಲಕ್ಷ್ಮಣರಾಯರು ಜಿ.ಆರ್. ವಿಶ್ವನಾಥ್ ಅವರ ಬ್ಯಾಟಿಂಗ್‌ಗೆ ಮನಸೋತು ರಚಿಸಿದ ಕವಿತೆ ನೋಡಿ ಮೋಡಿಯಾದೆ. ರಾಯರು ತಮ್ಮ ಕವನದಲ್ಲಿ  ಬರೆದಿರುವುದಾದರು ಏನು ಎಂಬುದನ್ನು ಅರ್ಥೈಸದಿದ್ದರೆ ಏನೊಂದೂ ಅರ್ಥವಾಗುತ್ತಿರಲಿಲ್ಲ ಎನ್ನುವುದು ವಾಸ್ತವ.'
'ಜಿ.ಆರ್. ವಿಶ್ವನಾಥ್ (ಗುಂಡಪ್ಪ ರಂಗನಾಥ ವಿಶ್ವನಾಥ್) ಕರ್ನಾಟಕದ ಅಪ್ಪಟ ಕ್ರಿಕೆಟ್ ಕಣ್ಮಣಿಯಾಗಿದ್ದರು.  ಟೆಸ್ಟ್ ಕ್ರಿಕೆಟ್ ಆಡುವಾಗ ತಂಡದಲ್ಲಿ ಯಾರೆಲ್ಲ ಔಟಾಗಿದ್ದರೂ ವಿಶ್ವನಾಥ್ ಇದ್ದಾರೆಂದರೆ ಭಾರತ ತಂಡವನ್ನು ಕಾಪಾಡುತ್ತಾರೆ ಎನ್ನುವ ವಿಶ್ವಾಸ ಕ್ರೀಡಾಭಿಮಾನಿಗಳದ್ದಾಗಿತ್ತು. ವಿಶ್ವನಾಥ್ ಆ ನಂಬಿಕೆಯನ್ನು ಎಂದೂ ಸುಳ್ಳು ಮಾಡಲಿಲ್ಲ. ಒಂದು ರೀತಿ ಆಪದ್ಭಾಂಧವ. ಯಾವುದೇ ದೇಶದ, ಯಾವುದೇ ವೇಗದ ಬೌಲರ್‌ಗಳಿಗೆ ಸೊಪ್ಪು ಹಾಕುತ್ತಿರಲಿಲ್ಲ. ಅವರಿಗೆ ಎಂದೂ  ಹೆದರಲಿಲ್ಲ ಮತ್ತು ಹೊಡೆತವನ್ನುತಿನ್ನಲಿಲ್ಲ. ಆ್ಯಂಡಿ ರಾಬರ್ಟ್. ಮೈಕಲ್ ಹೋಲ್ಡಿಂಗ್, ವ್ಯಾನ್‌ಬರ್ನ್ ಹೋಲ್ಡರ್ ಮುಂತಾದ ಘಟಾನುಘಟಿ ವೇಗದ ಬೌಲರ್‌ಗಳಿಗೆ ವಿಶ್ವನಾಥ್ ಮೈದಾನದಲ್ಲಿ ಔಟ್ ಆಗದೆ ನೀರು ಕುಡಿಸಿರುತ್ತಾರೆ. 'ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು' ಇವರ ಬಗ್ಗೆ ಹೆಗ್ಗಳಿಕೆಯ ಮಾತು.
'ಯಾವುದೇ ಲೇಖನ ಪತ್ರಿಕೆಯಲ್ಲಿ ಪ್ರಕಟವಾದಾಗ, ಅದಕ್ಕೆ ಹೆಚ್ಚಿನ ಮೆರಗು ಕೊಡುವುದು, ಲೇಖನಕ್ಕೆ ಪೂರಕವಾದ ಕ್ಯಾಮರಾ ಕಣ್ಣಿನಿಂದ ತೆಗೆದ ಚಿತ್ರಗಳು, ಇಲ್ಲವೇ ಕಲಾವಿದರು ಬರೆದ ಚಿತ್ರಗಳು. ಈ ಲೇಖನದಲ್ಲೂ ಕಲಾವಿದ ಪುಂಡಲೀಕ ಅವರು ವಿಶ್ವನಾಥ್ ಅವರ ಚಿತ್ರಗಳನ್ನು ಚೆನ್ನಾಗಿ, ಯಥಾವತ್ತಾಗಿ ಬಿಡಿಸಿರುತ್ತಾರೆ. ಆದರೆ ಕೆಲವು ಎಡವಟ್ಟುಗಳು ಆಗಿವೆ. ವಿಶ್ವನಾಥ್ ಅವರನ್ನು ಎಡಗೈ ಬ್ಯಾಟ್ಸಮನ್ ಆಗಿ ತೋರಿಸಲಾಗಿದೆ. ಸಾಲದ್ದಕ್ಕೆ ಅವರಿಗೆ ಹೆಲ್ಮೆಟ್ ತೊಡಿಸಲಾಗಿದೆ.'
'ಚಿತ್ರ ಬಿಡಿಸಿದ ಕಲಾವಿದರು ಇತ್ತೀಚಿನ ಹೊಸ ಯುವ ಪೀಳಿಗೆಯವರೆಂದು ಕಾಣುತ್ತೆ. ಬಹುಷಃ ಅವರು ವಿಶಿ  ಬ್ಯಾಟಿಂಗ್ ನೋಡಿರಲಿಕ್ಕಿಲ್ಲ. ಜೋಡಿಯಾಕ್ ಮೀಸೆ ಹೊತ್ತ ವಿಶ್ವನಾಥ್ ಅವರ ಭಾವ ಚಿತ್ರದ ಆಧಾರದ ಮೇಲೆ ಚಿತ್ರ ಬಿಡಿಸಿದ್ದಾರೆ. ವಿಶ್ವನಾಥ್ ಆಡುತ್ತಿದ್ದ ಸಮಯದಲ್ಲಿ ಅಂದರೆ ಎಪ್ಪತ್ತರ, ಎಂಭತ್ತರ ದಶಕದಲ್ಲಿ ಕ್ರಿಕೆಟ್ ಆಟದಲ್ಲಿ ಹೆಲ್ಮೆಟ್ (ಶಿರಸ್ತ್ರಾಣ) ಬಳಕೆಗೆ ಬಂದಿರಲಿಲ್ಲ.  ವಿಶ್ವನಾಥ್ ಬಲಗೈ ಬ್ಯಾಟ್ಸಮನ್ ಆಗಿದ್ದರು.
'ಲಕ್ಷ್ಮಣರಾಯರ ಈ ಕವಿತೆ ವಿಶ್ವನಾಥ್ ಮೇಲೆ ಗಾಢ  ಪ್ರಭಾವ ಬೀರಿರಲಿಕ್ಕೂ ಸಾಕು. ವಿಶ್ವನಾಥ್ ಅವರು ಮುಂದೆ  ಕೈ ಹಿಡಿದಿದ್ದು  ಕವಿತಾಅವರನ್ನು. ಕವಿತಾ ಸುನಿಲ್ ಗವಾಸ್ಕರ್ ಅವರ ಸೋದರಿಯೂ ಹೌದು' ಎಂದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.