ತಪ್ಪಾಯ್ತು ತಿದ್ಕೋತೀವಿ
ಅಥಣಿಯಲ್ಲಿ ವೈದ್ಯರಾಗಿರುವ ಪ್ರಭಾ ಆರ್. ಗುಳ್ಳ ಅವರು ಸೆ.9ರಂದು ಸಂಪಾದಕೀಯದಲ್ಲಿ 'ರಾಹುಲ ಹೆಸರು ಪಕ್ಕಾ' ಎಂಬ ಬರವಣಿಗೆ ಕುರಿತುಪ್ರತಿಕ್ರಿಯಿಸುತ್ತ, 'ನಾಮ ಹಾಕಿರುವ ರಾಹುಲ್ ಗಾಂಧಿ ಫೋಟೋವನ್ನೇ ಯಾಕೆ ಪ್ರಕಟಿಸುತ್ತೀರಿ. ಅವರು ಹಿಂದು ಎಂದು ಬಿಂಬಿಸುವುದು ನಿಮ್ಮ ಉದ್ದೇಶವೇ' ಎಂದು ಪ್ರಶ್ನಿಸಿದ್ದರು.
ಖಂಡಿತ ಅಂತಹ ಯಾವ ಉದ್ದೇಶ ಅಥವಾ ದುರುದ್ದೇಶ ನನಗಿಲ್ಲ. ರಾಹುಲ್ ಗಾಂಧಿ ಹಿಂದುವಾಗಲಿ, ಮುಸ್ಲಿಂ ಆಗಲಿ, ಕ್ರಿಶ್ಚಿಯನ್ ಆಗಲಿ ಅದರಿಂದ ನಮಗೆ ಯಾವುದೇ ವ್ಯತ್ಯಾಸವಾಗುವುದಿಲ್ಲ. ಆದರೆ ಪ್ರಭಾ ಅವರಂತೆ ನಮ್ಮ ಪತ್ರಕರ್ತರು ಅತಿಸೂಕ್ಷ್ಮವಾಗಿ ವಿಚಾರ ಮಾಡದೇ ಇದ್ದಿದ್ದರಿಂದಲೇ ನಾಮ ಹಾಕಿದ ಫೋಟೊ ಪ್ರಕಟಿಸಿದ್ದಾರೆ. ಅವರಂತೆಅದೇ ದೃಷ್ಟಿಕೋನದಿಂದ ನೋಡಿದ್ದರೆ ಅವರು ಖಂಡಿತ ಆ ಫೋಟೋ ಪ್ರಕಟಿಸುತ್ತಿರಲಿಲ್ಲ. ಪುಟ ನಿರ್ಮಿಸುವಾಗ ಇಂತಹ ವಿಚಾರಗಳೆಲ್ಲ ತಲೆಯಲ್ಲಿ ಸುಳಿಯುವುದಿಲ್ಲ.
ಬದಲಾಗಿ ಸಮಯಕ್ಕೆ ಸರಿಯಾಗಿ ಪುಟ ನಿರ್ಮಾಣ ಮುಗಿಸುವುದು, ತಪ್ಪುಗಳನ್ನು ತಿದ್ದುವುದೇ ಆತನ ಗುರಿಯಾಗಿರುತ್ತದೆ. ಹೀಗಿರುವಾಗ ನಾಮ, ಅದರ ಹಿಂದಿನ ಗೂಡಾರ್ಥಗಳನ್ನೆಲ್ಲ ಆತ ಯೋಚಿಸುವುದಿಲ್ಲ. ಆದರೆ ಓದುಗರು ನಮ್ಮ ಪ್ರತಿಯೊಂದು ನಡೆಯನ್ನೂ ಒಂದಲ್ಲ ಒಂದು ಕೊಂಕು, ಗೂಡಾರ್ಥ ಗ್ರಹಿಸಿಬಿಡಬಹುದು. ಆದರೆ ನಾವು ಪ್ರಕಟಿಸುವಾಗ ಅಂತಹದುರಾಲೋಚನೆಗಳಿಲ್ಲದೇ ಪ್ರಕಟಿಸಿರುತ್ತೇವೆ. ಆದರೂ ಇನ್ನು ಮುಂದೆ ಇಂತಹ ಸಂಗತಿಗಳನ್ನೂ ಆದಷ್ಟು ಗಮನದಲ್ಲಿಟ್ಟುಕೊಳ್ಳೋಣ. ಸಾಗರದಿಂದ ಕೆ.ವಿ. ಮಂಜುನಾಥ ಅವರು ಬರೆಯುತ್ತಾರೆ- 'ಅಕ್ಷರಗಳ ಸ್ಥಾನಪಲ್ಲಟ, ಕಾಗುಣಿತ- ಮುದ್ರಣ ದೋಷ ಮಾಧ್ಯಮಗಳಲ್ಲಿ ಸಹಜ ಎಂದುಕೊಂಡಿರುವ ನಾನು ಈ ಕುರಿತು ಬರೆಯಬಾರದು ಎಂದುಕೊಂಡಿದ್ದೆ. ತಮ್ಮ ಪತ್ರಿಕೆಯ ಆ.31ರ ಶಿವಮೊಗ್ಗ ಆವೃತ್ತಿಯ ನಾಲ್ಕನೇ ಪುಟದಲ್ಲಿಯ 'ಚಾಲಕನ ಕೊಲೆ ಮಾಡಿ...' ತಲೆಬರಹದ ವರದಿ ನನ್ನ ನಿರ್ಧಾರವನ್ನು ಬದಲಿಸಿತು.'
'ಎಚ್ಚಮ ನಾಯಕ ನಾಟಕದಲ್ಲಿ ಪುಟಗಟ್ಟಲೆ ಸಂಭಾಷಣೆಯನ್ನು ನಾಯಕ ಹೇಳುವ ದೃಶ್ಯವನ್ನು ಈ ವರದಿ ನೆನಪಿಸಿತು. ವರದಿಯ 2ನೇ ಪ್ಯಾರಾ 'ಆ.23ರಂದು...' ಎಂದು ಪ್ರಾರಂಭವಾಗಿ 'ಕೊಲೆ ಮಾಡಿದ್ದಾರೆ' ಎಂಬಲ್ಲಿಗೆ ಮುಕ್ತಾಯಗೊಳ್ಳುತ್ತದೆ. ಈ ಸಂಕೀರ್ಣ ವಾಕ್ಯದಲ್ಲಿ ಲಾರಿ ಎನ್ನುವ ಪದ ಐದು ಬಾರಿ ಕಾಣಿಸಿಕೊಂಡಿದೆ. 'ಕಡೂರಿಗೆ ಹೋಗುತ್ತಿದ್ದ ಲಾರಿಯನ್ನು ಎನ್.ಎಚ್. 13ರ ಮುಖಾಂತರ ಚನ್ನಗಿರಿ ಮಾರ್ಗವಾಗಿ ಹೊಳೆಹೊನ್ನೂರಿನಿಂದ ಶಿವಮೊಗ್ಗಕ್ಕೆ ಬರುತ್ತಿದ್ದಾಗ ಜಾವಳ್ಳಿ ದಾಟಿ ಮುಂದೆ ಬಂದಿದ್ದಾಗ...' ಎನ್ನುವ ಗೊಂದಲಕಾರಿ ಪದಪುಂಜವೂ ಇದೆ.'
'ಇನ್ನು ಮೂರನೇ ಪ್ಯಾರಾವಂತೂ ಓದುಗನ ಉಸಿರುಕಟ್ಟಿಸುವಷ್ಟು ಉದ್ದವಾಗಿದೆ. ವರದಿಗಾರ ಹೊಸಬರಿರಬಹುದು ಇಲ್ಲವೇ ಅವಸರದಲ್ಲಿ ಬರೆದಿರಬಹುದು. ಆದರೆ ಸುದ್ದಿಮನೆಯಲ್ಲಿ ಕಾಪಿ ತಿದ್ದಲೆಂದೇ ಇರುತ್ತಾರಲ್ಲ ಅವರಾದರೂ ವರದಿಯನ್ನು ಸರಿಪಡಿಸಬಹುದಿತ್ತು. ಹೇಗೂ 'ತಪ್ಪಾಯ್ತು ತಿದ್ಕೋತೀವಿ' ಅಂಕಣ ಇದೆಯಲ್ಲ. ನಂತರ ತಿದ್ಕೊಂಡರಾಯ್ತು ಎಂದು ಸುಮ್ಮನುಳಿದರೇ?' ಎಂದಿದ್ದಾರೆ.
'ತಪ್ಪಾಯ್ತು ತಿದ್ಕೋತೀವಿ' ಅಂಕಣ ಹೇಗೂ ಇದೆಯಲ್ಲ ತಿದ್ದಿಕೊಂಡರಾಯಿತು ಎಂದು ತಪ್ಪು ಮಾಡುವುದು ಮತ್ತು ಹೇಗೂ ಪೊಲೀಸರಿದ್ದಾರಲ್ಲ ಹುಡುಕಿ ಕೊಡ್ತಾರೆ ಎಂದು ಮನೆಗೆ ಬೀಗ ಹಾಕದೇ ಹೋಗುವುದು ಎರಡೂ ಒಂದೇ. ಹೇಗೆ ಪೊಲೀಸರಿದ್ದಾರೆಂದು ನಾವು ಮನೆಗೆ ಬೀಗ ಹಾಕದೇ ಹೋಗುವುದಿಲ್ಲವೋ ಹಾಗೇ ಅಂಕಣ ಇದೆ ಎಂಬ ಕಾರಣಕ್ಕೆ ಯಾರೂ ತಪ್ಪು ಮಾಡುವುದಿಲ್ಲ.
-ಬಾಣಭಟ್ಟ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

