ಸಂಪಾದಕೀಯ

ಕಲ್ಲಿದ್ದಲ ಕಡತದ ಪ್ರಗಾಥ

Published On :

1993 ರಿಂದಲೂ ಕಲ್ಲಿದ್ದಲ ಗಣಿಗಳ ಗುತ್ತಿಗೆಯ ಹಂಚಿಕೆ ಪ್ರಕ್ರಿಯೆ ಸಂಬಂಧದ ವ್ಯವಹಾರದ ವಿಚಾರಣೆ ನಡೆಸುತ್ತಿರುವ ಸುಪ್ರೀಮ್ ಕೋರ್ಟ್ ಕಲ್ಲಿದ್ದಲ ಮಂತ್ರಾಲಯಕ್ಕೆ ಸಿಬಿಐ ಕೇಳಿದ ಕಡತಗಳನ್ನೆಲ್ಲ ಕೊಡಬೇಕೆಂದು ಆದೇಶ ನೀಡಿತ್ತು.
ಅದರಂತೆ ಸಿಬಿಐ ಸುಮಾರು 450 ಕಡತಗಳನ್ನು ಕೇಳಿದಾಗ ಮಂತ್ರಾಲಯದ ಪರವಾಗಿ ಒದಗಿಸಿದ್ದು ಬೇಕಾದಷ್ಟು ಕಡತಗಳು. ಆದರೆ ಸಿಬಿಐ ಬಹುಮುಖ್ಯವಾದ ದಾಖಲೆ ಎಂದು ಪರಿಗಣಿಸಿರುವ 76 ಕಡತಗಳು ಲಭ್ಯವಿಲ್ಲ ಎಂದು ತಿಳಿಸಲಾಗಿದೆ. ಕಡತಗಳು ಸಿಗದೇ ಹೋದರೆ, ಅವು "ಕಳುವಾಗಿವೆ" ಎಂದೇ ಭಾವಿಸಿ, ಪೊಲೀಸ್ ದೂರು ದಾಖಲಿಸುವುದಾಗಿ ಪ್ರಧಾನಿ ಮನಮೋಹನ ಸಿಂಗ್ ಅವರೇ ಲೋಕಸಭೆಯಲ್ಲಿ ತಿಳಿಸಿದ್ದರೂ, ಇನ್ನೂ ದೂರು ಸಲ್ಲಿಸಿಲ್ಲ. ಮಂಗಳವಾರ ಸುಪ್ರೀಮ್ ಕೋರ್ಟಿನಲ್ಲಿ ಈ ವಿಚಾರ ಪ್ರಸ್ತಾಪವಾದಾಗ, ತ್ರಿಸದಸ್ಯ ನ್ಯಾಯಪೀಠ ಕೇಳಿದ ಒಂದು ಪ್ರಶ್ನೆಗೂ ಅಟಾರ್ನಿ ಜನರಲ್ ಜಿ.ಇ. ವಾಹನ್ವತಿ ಅವರಲ್ಲಿ ತೃಪ್ತಿಕರವಾದ ಉತ್ತರವಿರಲಿಲ್ಲ. ಕಲ್ಲಿದ್ದಲ ಗಣಿಗಳ ಗುತ್ತಿಗೆಗೆ ಅರ್ಜಿ ಸಲ್ಲಿಸಿದ್ದ ಸಂಸ್ಥೆಗಳ ಅರ್ಹತೆಯನ್ನು ಪರಿಶೀಲಿಸಲು ನೇಮಕಗೊಂಡಿದ್ದ "ಸ್ಕ್ರೀನಿಂಗ್ ಕಮಿಟಿಯ" ನಡವಳಿಕೆಗಳಿಗೆ ಸಂಬಂಧಿಸಿದ ಕಡತಗಳು ಸದ್ಯಕ್ಕಂತೂ ನಾಪತ್ತೆಯಾಗಿವೆ.
ಅನಿಲ್ ಅಂಬಾನಿಯವರ ರಿಲೈಯನ್ಸ್ ಪವರ್, ಟಾಟಾ ಸ್ಪಾಂಜ್ ಐರನ್, ರತಿ ಸ್ಟೀಲ್ ನಂತಹ ಪ್ರಮುಖ ಕಂಪೆನಿಗಳ ಸಂಬಂಧದ ಕಡತಗಳೇ ನಾಪತ್ತೆಯಾಗಿರುವುದು ನ್ಯಾಯಪೀಠವನ್ನೇ ಚಕಿತಗೊಳಿಸಿತ್ತು. ಈ ಕಡತಗಳನ್ನು ಹುಡುಕಲು ಮಂತ್ರಾಲಯ ಅತಿ ಹಿರಿಯ ಅಧಿಕಾರಿಗಳ ಶೋಧನಾ ಸಮಿತಿಯೇ ಇದೆ. ಆದರೆ ಸಿಕ್ಕಿಲ್ಲ.
ವಾಸ್ತವದಲ್ಲಿ ಈಗಿನ ಕಾಯಿದೆಯಂತೆ, ಕಲ್ಲಿದ್ದಲು ಗಣಿಗಳ ಗುತ್ತಿಗೆಯನ್ನು ಹಂಚುವ ಅಧಿಕಾರವೇ ಕೇಂದ್ರ ಸರ್ಕಾರಕ್ಕಿಲ್ಲ. ಗುತ್ತಿಗೆಯ ವಿತರಣೆ ರಾಜ್ಯ ಸರ್ಕಾರದ ಅಧಿಕಾರದ ವ್ಯಾಪ್ತಿಗೆ ಸೇರಿದ್ದು. ರಾಜ್ಯ ಸರ್ಕಾರದ ಶಿಫಾರ್ಸನ್ನು ಒಪ್ಪುವ ಅಥವಾ ತಿರಸ್ಕರಿಸುವ ಅಧಿಕಾರ ಕೇಂದ್ರಕ್ಕಿದೆ ಅಷ್ಟೇ. ಆದರೂ ವಿಶೇಷ ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ತುರ್ತಾಗಿ ಹಣ ಬೇಕಾಗಿದ್ದ ಸನ್ನಿವೇಶದಲ್ಲಿ (1993) ಕಲ್ಲಿದ್ದಲ ಗಣಿಗಳ ಗುತ್ತಿಗೆ ಹಕ್ಕಿನ ವಿತರಣೆಯನ್ನು ಕೇಂದ್ರವೇ ವಹಿಸಿಕೊಂಡು ಸುಮಾರು 25000 ಕೋಟಿ ರುಪಾಯಿಗಳನ್ನು ಸಂಗ್ರಹಿಸಿತ್ತು. ಕಲ್ಲಿದ್ದಲ ಗಣಿಗಳ ಹಂಚಿಕೆಯ ವ್ಯವಹಾರದ ಸ್ವರೂಪ ಮನಮೋಹನ ಸಿಂಗ್ ಅವರಿಗೆ ಅಪರಿಚಿತವೇನೂ ಅಲ್ಲ. ನರಸಿಂಹರಾಯರು ಪ್ರಧಾನಿಯಾಗಿದ್ದಾಗ ವಿತ್ತಮಂತ್ರಿಯಾಗಿದ್ದ ಸಿಂಗ್, ಗಣಿಗಳ ಹಂಚಿಕೆಯ ನಿರ್ಧಾರದಲ್ಲಿ ಪಾಲುದಾರರು. ಅನಂತರದ ದಿನಗಳಲ್ಲಿ ಗುತ್ತಿಗೆಗೆ "ಬಿಡ್ಡಿಂಗ್‌" (ಹರಾಜು) ಮಾರ್ಗವನ್ನು ಅನುಸರಿಸುವುದು ಸೂಕ್ತವೆಂದೂ ಅವರು ಹೇಳಿದ್ದರು.
ಇದೆಲ್ಲವನ್ನೂ ಗಮನಿಸಿದರೆ, ಕಲ್ಲಿದ್ದಲ ಗಣಿಗಳ ಹಂಚಿಕೆಯ ವ್ಯವಹಾರದಲ್ಲಿ ಮೇಲ್ನೋಟಕ್ಕೆ ಕಂಡುಬರುವುದಕ್ಕಿಂತಲೂ ಹೆಚ್ಚಿನ ರಹಸ್ಯ ಅಡಗಿರುವುದು ಶತಸಿದ್ಧ ಎನಿಸುತ್ತಿದೆ. ಇದುವರೆಗೂ, ಈ ಹಗರಣಗಳು ಸಾರ್ವಜನಿಕ ವಲಯಗಳಲ್ಲಿ ಚರ್ಚೆಯಾಗಿದ್ದು ಕಡಿಮೆ. ಕಲ್ಲಿದ್ದಲ ಗಣಿಗಳ ರಾಷ್ಟ್ರೀಕರಣ ಹಾಗೂ ಅನಂತರದ ಅನೇಕ ಗಣಿಗಳ ಖಾಸಗಿಕರಣದ ಚರ್ಚೆ ನಡೆದಾಗ, ಅದು ಸಾರ್ವಜನಿಕ (ಸರ್ಕಾರಿ) ಹಾಗೂ ಖಾಸಗಿ ವಲಯದ ಮಾಲಿಕತ್ವ ಕುರಿತಂತೆ ಸೈದ್ಧಾಂತಿಕ ವಿವಾದವಾಗಿ ಪರಿವರ್ತನೆಯಾಗಿತ್ತು. ಆಗ ಖಾಸಗಿಕರಣವನ್ನು ವಿರೋಧಿಸಿದ್ದವರು, ಹೆಚ್ಚು ವಿವರಗಳನ್ನು ಪಡೆಯಲು ಪ್ರಯತ್ನಿಸಲಿಲ್ಲ.
ಆಗ ದೇಶದಲ್ಲಿ ತೀವ್ರ ಆರ್ಥಿಕ ಬಿಕ್ಕಟ್ಟು ಕಾಡಿತ್ತು. ವಿದ್ಯುತ್ ಉತ್ಪಾದನಾ ಸ್ಥಾವರಗಳಿಗೆ ತುರ್ತಾಗಿ ಇಂಧನವನ್ನು ಪೂರೈಸುವ ವ್ಯವಸ್ಥೆ ಆಗಲೇಬೇಕಾಗಿತ್ತು. ಅದಕ್ಕಾಗಿ ಕೆಲವು ತುರ್ತು ನಿರ್ಧಾರಗಳು ಅಗತ್ಯವಾಗಿತ್ತು ಎನ್ನುವುದು ಅನೇಕರ ವಾದ. ಆದರೆ ಆಗ ಗುತ್ತಿಗೆಯ ಹಕ್ಕನ್ನು ಪಡೆದಿದ್ದವರಲ್ಲಿ ಎಷ್ಟು ಮಂದಿ ಉದ್ಯಮಿಗಳು ಅಥವಾ ಕಂಪೆನಿಗಳು ಗಣಿಗಾರಿಕೆಯನ್ನು ನಡೆಸಿದ್ದಾರೆ? ಯಾವ ಪ್ರಮಾಣದಲ್ಲಿ ವಿದ್ಯುತ್ ಸ್ಥಾವರಗಳಿಗೆ ಕಲ್ಲಿದ್ದಲನ್ನು ಪೂರೈಸಲಾಗಿದೆ ಎನ್ನುವ ವಿವರಗಳನ್ನು ಒದಗಿಸುವ ಕಡತಗಳಲ್ಲಿ ಈಗ ಕೆಲವು ಕಾಣೆಯಾಗಿವೆ. ಸುಪ್ರೀಮ್ ಕೋರ್ಟಿನಲ್ಲಿ ಈಗ ವಿಚಾರಣೆ ನಡೆಯುತ್ತಿರುವ ಪ್ರಕರಣದ ವಿವರಗಳೆಲ್ಲ ಪೂರ್ತಿಯಾಗಿ ಬಹಿರಂಗವಾದರೆ, ದೇಶದ ಅತಿದೊಡ್ಡ ಹಗರಣದ ವಿಶ್ವರೂಪದರ್ಶನವಾಗಬಹುದು. ಅದಕ್ಕೆ ಆಸಕ್ತರು ಇನ್ನೂ ಕಾಯಬೇಕು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.