ತಪ್ಪಾಯ್ತು ತಿದ್ಕೋತೀವಿ
ಮಂಡ್ಯದಿಂದ ಕೊಕ್ಕಡ ವೆಂಕಟ್ರಮಣಭಟ್ ಅವರು ಬರೆಯುತ್ತಾರೆ- 'ಆ.26 'ಕನಸಿನ ತುತ್ತು' ಅಂಕಣದಲ್ಲಿ ಸೋದರಿ ಶಾಲಿನಿಯವರು 'ಪರಿಣಿತ' (7ನೇ ಅನುಚ್ಛೇದದಲ್ಲಿ) ಎಂಬ ಪದವನ್ನು ಬಳಸಿದ್ದಾರೆ. ಪರಿಣಿತ ಎಂಬುದು ಸಾಧುವಲ್ಲದ ಪ್ರಯೋಗ. 'ಪರಿಣಯ' ಎಂದರೆ ಮದುವೆ. 'ಪರಿಣಿತೆ' ಎಂದರೆ ಮದುವೆಯಾದವಳು ಎಂಬ ಅರ್ಥ. ಪರಿಣತ ಎಂದರೆ ನೈಪುಣ್ಯತೆಯುಳ್ಳವ, ನುರಿತವನೆಂದು ಅರ್ಥ. ಪರಿಣತ ಎಂದಾಗಬೇಕು.'
'ಇದೇ ಅಂಕಣದಲ್ಲಿ 'ನೂನ್ಯತೆ' ಎಂಬ ಅಪದ್ಧಪದವನ್ನು ಮತ್ತೆ ಮತ್ತೆ ಬಳಸಿದ್ದಾರೆ. 'ನ್ಯೂನತೆ' ಎಂಬುದು ಸರಿಯಾದ ಪದ. ಬಹುಶಃ 'ಅನ್ಯೋನ್ಯ' ಎಂಬ ಪದದ ಸಾಮ್ಯತೆಯಿಂದ 'ನೂನ್ಯತೆ'ಯನ್ನು ನ್ಯೂನ್ಯತೆ ಎಂದು ಗೊಂದಲದಿಂದ ಜನರು ಬಳಸುತ್ತಿರಬೇಕು. ಶಾಲಿನಿಯವರು ಹಾಗೂ ಭಾಷಾ ಜಿಜ್ಞಾಸುಗಳು ತಿದ್ದಿಕೊಳ್ಳಲೆಂದು ಕಳಕಳಿ' ಎಂದಿದ್ದಾರೆ.
'ನ್ಯೂನತೆ' ಶಬ್ದದ ಕುರಿತು ಕೊಕ್ಕಡ ವೆಂಕಟ್ರಮಣ ಭಟ್ ಅವರೇ ಹಿಂದೊಮ್ಮೆ ಇದೇ ಅಂಕಣಕ್ಕೆ ಪತ್ರ ಬರೆದಿದ್ದರು. ಆದರೂ ತಿದ್ದಿಕೊಳ್ಳದಿರುವುದು ಸ್ವಾಗತಾರ್ಹವಲ್ಲ. ಕೆಲವು ಪದಗಳು ಕೆಲವರಿಗೆ ತಪ್ಪಾಗೇ ರೂಢಿಯಾಗಿರುತ್ತವೆ. ಆದರೆ ನಾವು ಪತ್ರಕರ್ತರಾದವರು ಅವುಗಳನ್ನು ತಿದ್ದಿಪ್ರಕಟಿಸುವ ಜವಾಬ್ದಾರಿ ಹೊಂದಿರುತ್ತೇವೆ.
ಮೈಸೂರಿನ ಹೂಟಗಳ್ಳಿಯಿಂದ ಜಿ.ಎಂ. ಕುಲಕರ್ಣಿ ಅವರು ಬರೆಯುತ್ತಾರೆ- 'ಆ.26ರ 'ಪತ್ರಪ್ರಭ'ದಲ್ಲಿ 'ಫೈಲುಗಳು ಮಾಯ ಮಾಡಿದ ಭ್ರಷ್ಟರು' ಶೀರ್ಷಿಕೆಯಲ್ಲಿ 'ನೀರಿನಲ್ಲಿ ಹುಣಸೇಹಣ್ಣು ತೊಳೆದಂತಾಗಿದೆ' ಎಂದಿದೆ. ಅದು ಹೊಳೆಯಲ್ಲಿ ಹುಣಸೇಹಣ್ಣು ತೊಳೆದಂತಾಗಿದೆ ಎಂದಾಗಬೇಕಿತ್ತು. ನೀರಿನಲ್ಲಿ ಹುಣಸೇಹಣ್ಣು ತೊಳೆಯುವುದು ಸಾಮಾನ್ಯ ಸಂಗತಿ. ತಪ್ಪು ಹೆಕ್ಕುತ್ತಿಲ್ಲ. ಕೇವಲ ವಿವರಿಸುತ್ತಿದ್ದೇನೆ.'
'ತನಿಖಾ ತಂಡಗಳ ಶ್ರಮ ಸಾರ್ಥಕವಾಗಲಿಲ್ಲ ಎನ್ನುವುದಕ್ಕೆ ಈ ಗಾದೆಯ ಹೋಲಿಕೆ ನೀಡಿರುವುದು ಸರಿಯಾದರೂ, ಎಷ್ಟು ನೀರಿಗೆ ಎಷ್ಟು ಹುಣಸೇಹಣ್ಣು ಎಂಬ ಪ್ರಶ್ನೆ ಮೂಡುತ್ತೆ. ಅದಕ್ಕೆ ಅಗಾಧ ಪ್ರಮಾಣದ ನೀರಿನಲ್ಲಿ (ಹೊಳೆ) ಎಷ್ಟಾದರೂ ಹುಣಸೇಹಣ್ಣು ತೊಳೆದರೂ, ನೀರು ಹುಳಿಯಾಗುವ ಸಾಧ್ಯತೆ ಕಡಿಮೆ. ಹೊಳೆಯಲ್ಲಿ ಹುಣಸೇಹಣ್ಣು ತೊಳೆದಂತೆ ಎಂದರೆ ತನಿಖಾ ತಂಡಗಳ ಶ್ರಮ ನಿರರ್ಥಕವಾಯಿತು ಎಂದಾಗುತ್ತೆ' ಎಂದಿದ್ದಾರೆ.
ಜಿ.ಎಂ. ಕುಲಕರ್ಣಿ ಅವರ ವಿವರಣೆ ಅತ್ಯಂತ ಸೂಕ್ತವಾದದ್ದು. ಅದು 'ಹೊಳೆಯಲ್ಲಿ ಹುಣಸೇಹಣ್ಣು ತೊಳೆದಂತೆ' ಎಂದೇ ಆಗಬೇಕು.
ಅಡುಗೆ ಮಾಡುವಾಗ, ವಿಶೇಷವಾಗಿ ಪಾನಿ ಪೂರಿಯ ಪಾನಿ ಮಾಡುವಾಗ ಹುಣಸೇಹಣ್ಣನ್ನು ನೀರಿನಲ್ಲಿಯೇ ತೊಳೆಯುತ್ತಾರೆ. ಅದನ್ನು ವ್ಯರ್ಥ ಎನ್ನಲಾಗದು. ಆದರೆ ಹೊಳೆಯಲ್ಲಿ ಹುಣಸೇಹಣ್ಣು ತೊಳೆದರೆ ಆಗ ನೀರು ಹುಳಿಯಾಗುವುದೇ ಇಲ್ಲ.
-ವಿಶ್ವೇಶ್ವರಭಟ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

